Loading Events

« All Events

  • This event has passed.

ಪ್ರೊ. ಬರಗೂರು ರಾಮಚಂದ್ರಪ್ಪ

October 18, 2023

೧೮.೧೦.೧೯೪೭  ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ ಮುಂತಾದವುಗಳ ಅಂತರ್ ಶಿಸ್ತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತರಾಗಿದ್ದು, ನಮ್ದ ಶ್ರೇಣೀಕೃತ ಸಮಾಜದ ಒಳಸುಳಿಗಳನ್ನು ಅಭಿವ್ಯಕ್ತ ಪಡಿಸುತ್ತಾ ಬಂದಿರುವ ರಾಮಚಂದ್ರಪ್ಪನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರಿನಲ್ಲಿ ೧೯೪೭ರ ಅಕ್ಟೋಬರ್ ೧೮ರಂದು. ತಂದೆ ಬಿ. ರಂಗದಾಸಪ್ಪ, ತಾಯಿ ಕೆಂಚಮ್ಮ. ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದುದ್ದು ಬರಗೂರಿನಲ್ಲಿ. ತುಮಕೂರಿನಲ್ಲಿ ಬಿ.ಎ. ಪದವಿ ಪಡೆದ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರಾಗಿ, ಕೇಂದ್ರದ ಬೆಳವಣಿಗೆಗೆ ಕಾರಣಕರ್ತರಾಗಿ, ಸುಮಾರು ವರ್ಷಗಳ ಕಾಲ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದು ಸ್ವಯಂ ನಿವೃತ್ತರು. ಬಾಲ್ಯದಲ್ಲಿ ಹಳ್ಳಿಯಲ್ಲಿದ್ದಾಗ, ಬಸ್ ಕಂಡಕ್ಟರನಾಗಬೇಕೆಂದು ಆಸೆಪಟ್ಟ ತಂದೆಯ ಆಸೆಗಿಂತ, ಬಸ್ ಡ್ರೈವರ್ ಆಗಬೇಕೆಂದು ಬಯಸಿದ್ದ ಬರಗೂರರು ಕಾಲೇಜು ಶಿಕ್ಷಣದ ನಂತರ ಸೇರಿದ್ದು ಅಧ್ಯಾಪಕ ವೃತ್ತಿಗೆ. ಇವರು ತುಳಿದ ಹಾದಿಯೇನು ಸುಗಮವಾಗಿರಲಿಲ್ಲ. ಬಡತನ, ಸಂಪ್ರದಾಯ, ಕಂದಾಚಾರ, ಶೋಷಣೆ, ಕ್ರೌರ್ಯ ಇವುಗಳನ್ನೆದುರಿಸಲು ಹೃದಯದ ತುಂಬಾ ತುಂಬಿಕೊಂಡಿದ್ದ ಛಲದಿಂದಲೇ ಸಾಧಿಸಹೊರಟವರು. ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ರಾಜ್ಯ ಸಂಚಾಲಕರಾಗಿ ಬಂಡಾಯದ ಮುಂಚೂಣಿ ಲೇಖಕರು. ಕಾವ್ಯ, ಕತೆ, ಕಾದಂಬರಿ ಕ್ಷೇತ್ರಗಳಲ್ಲಿ ಸಾಕಷ್ಟು ಕೃಷಿ ಮಾಡಿರುವಂತೆ ಸ್ವತಂತ್ರ ಚಿಂತನೆಯ ವಿಮರ್ಶಕರು. ಚಲನಚಿತ್ರ  ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಅಂತಾರಾಷ್ಟ್ರೀಯ ಮನ್ನಣೆಗೂ ಪಾತ್ರರಾಗಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಪಸಂಸ್ಕೃತಿಯ ಅಧ್ಯಯನ ಮಾಲೆ, ಅಂತರ್ ಶಿಸ್ತೀಯ ಅಧ್ಯಯನಮಾಲೆ, ಸಾಮಾಜಿಕ ಚಿಂತನಮಾಲೆ, ಕನ್ನಡ ಸಾಹಿತ್ಯ ಪುನರ್ ಮೌಲ್ಯೀಕರಣ ಮುಂತಾದ ಮಾಲೆಯಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿ ಜನಮನ್ನಣೆಗಳಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ೧೦ನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಎಂಜಿನಿಯರಿಂಗ್, ವೈದ್ಯಕೀಯ, ಉದ್ಯೋಗ ಮುಂತಾದವುಗಳಲ್ಲಿ ಶೇ. ೫ರಷ್ಟು ಮೀಸಲಾತಿ, ಶಿಕ್ಷಣ ಮಾಧ್ಯಮವನ್ನು ಕುರಿತು ವರದಿ, ಗಡಿನಾಡು ಸ್ಥಿತಿ ಗತಿಗಳ ಬಗ್ಗೆ ೪೦೦ ಪುಟಗಳ ವರದಿ, ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೊಳಿಸಲು ಆಡಳಿತಾತ್ಮಕ ಕ್ರಮಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಕನ್ನಡ ಭಾಷೆ ಮತ್ತು ಕನ್ನಡದ ಏಳಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಕವಿಯಾಗಿ ಇವರು ಪ್ರಕಟಿಸಿದ ಮೊದಲ ಕವನ ಸಂಕಲನ ‘ಕನಸಿನ ಕನ್ನಿಕೆ’ (೧೯೬೮) ಪ್ರಕಟಗೊಂಡ ನಂತರ ಮರಕುಟಿಗ, ನೆತ್ತರಲ್ಲಿ ನೆಂದ ಹೂ, ಗುಲಾಮ ಗೀತೆ, ಮಗುವಿನ ಹಾಡು, ಕಾಂಟೆಸ್ಸಾದಲ್ಲಿ ಕಾವ್ಯ (ಸಮಗ್ರ) ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ. ಸಣ್ಣ ಕತೆಗಳನ್ನು ಆಗಾಗ್ಗೆ ಪತ್ರಿಕೆಗಳಿಗೆ ಬರೆದಿದ್ದು ಮೊದಲ ಕಥಾ ಸಂಕಲನ ‘ಸುಂಟರಗಾಳಿ’ ಪ್ರಕಟವಾದುದು ೧೯೭೫ರಲ್ಲಿ, ನಂತರ ‘ಕಪ್ಪು ನೆಲದ ಕೆಂಪು ಕಾಲು’, ‘ಒಂದು ಊರಿನ ಕಥೆಗಳು’ ಮತ್ತು ‘ಬಯಲಾಟದ ಭೀಮಣ್ಣ’ ಎಂಬ ಎರಡು ಆಯ್ದ ಕಥಾಸಂಕಲನಗಳು ಪ್ರಕಟಗೊಂಡಿವೆ. ೧೯೭೪ರಲ್ಲಿ ಪ್ರಕಟವಾದ ಮೊದಲ ಕಾದಂಬರಿ ‘ಸೂತ್ರ’. ನಂತರ ಉಕ್ಕಿನ ಕೋಟೆ, ಒಂದು ಊರಿನ ಕಥೆ, ಬೆಂಕಿ, ಸೂರ್ಯ ಮೊದಲ್ಗೊಂಡು ಶಬರಿಯವರೆಗೆ ೧೧ ಕಾದಂಬರಿಗಳನ್ನು ರಚಿಸಿದ್ದು, ಇವುಗಳಲ್ಲಿ ಒಂದು ಊರಿನ ಕತೆ, ಬೆಂಕಿ, ಸೂರ್ಯ,  ಮುಂತಾದವುಗಳು ಚಲನಚಿತ್ರಗಳಾಗಿಯೂ ಪ್ರಖ್ಯಾತಿಯನ್ನು ಪಡೆದಿವೆ. ವಿಚಾರ – ವಿಮರ್ಶೆ ಕೃತಿಗಳಾದ ‘ಸಾಹಿತ್ಯ ಮತ್ತು ರಾಜ ಕಾರಣ’, ‘ಸಂಸ್ಕೃತಿ ಮತ್ತು ಸೃಜನ ಶೀಲತೆ’, ‘ಬಂಡಾಯ ಮತ್ತು ಸಾಹಿತ್ಯ ಮೀಮಾಂಸೆ’, ‘ಇಣುಕು ನೋಟ’ ಮತ್ತು ‘ಸಂಸ್ಕೃತಿ – ಉಪ ಸಂಸ್ಕೃತಿ’ ಮುಂತಾದ ೧೩ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವವಿದ್ಯಾಲಯದ ತ್ರೈಮಾಸಿಕ ಪತ್ರಿಕೆಯಾದ ‘ಸಾಧನೆ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಚಂದನ’,  ರಂಗಭೂಮಿ ತಂಡದ ಮಾಸ ಪತ್ರಿಕೆಯಾದ ‘ಸಮುದಾಯ ವಾರ್ತಾ ಪತ್ರ’ ಮುಂತಾದವುಗಳ ಸಂಪಾದಕರಾಗಿ, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯಾದ ‘ಕರ್ನಾಟಕ ಸಂಗಾತಿ’, ಕನ್ನಡ ಭಾಷಾ ಕಲಿಕೆಯ ಪುಸ್ತಕಗಳು, ಕಂಪ್ಯೂಟರ್ ಪದವಿವರಣ, ಸಮೂಹ ಮಾಧ್ಯಮ ಪದ ವಿವರಣ, ವಿಶ್ವವಿದ್ಯಾಲಯದ ಪದ ವಿವರಣ ಕೋಶ, ಬಂಡಾಯ ಕಾವ್ಯ, ಜಾನಪದ ವೈಜ್ಞಾನಿಕ ವಿಧಾನಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪ್ರಿಯ ಪುಸ್ತಕ ಮಾಲೆ ಮುಂತಾದವುಗಳ ಸಂಪಾದಕರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಪ್ರಕಟವಾದ ಉಪ ಸಂಸ್ಕೃತಿಯ ಅಧ್ಯಯನ,  ಕನ್ನಡ ಸಾಹಿತ್ಯ ಪುನರ್ ಮೌಲ್ಯೀಕರಣ ಮುಂತಾದ ೨೫೦ ಪುಸ್ತಕಗಳ ಪ್ರಧಾನ ಸಂಪಾದಕರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ, ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್, ದೂರ ದರ್ಶನ ಮತ್ತು ಆಕಾಶವಾಣಿಯ ಸಲಹಾ ಮಂಡಳಿ ಮತ್ತು ಆಯ್ಕೆ ಸಮಿತಿ,  ಕರ್ನಾಟಕ ಸರ್ಕಾರದ ಚಲನ ಚಿತ್ರ ಭಂಡಾರ, ಕರ್ನಾಟಕ ಸರ್ಕಾರದ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಮುಂತಾದವುಗಳ ಸದಸ್ಯರಾಗಿದ್ದುದಲ್ಲದೆ ತುಮಕೂರಿನ ಸ್ನಾತಕೋತ್ತರ ಕೇಂದ್ರ (ನಿರ್ದೇಶಕ), ಕರ್ನಾಟಕ ಸಾಹಿತ್ಯ ಅಕಾಡಮಿ (೧೯೯೦-೯೫) ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (೨೦೦೦-೦೩) ಮುಂತಾದವುಗಳ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಬರಗೂರರ ಪ್ರತಿಭೆಯನ್ನು ದುಡಿಸಿಕೊಂಡ ಮತ್ತೊಂದು ಕ್ಷೇತ್ರವೆಂದರೆ ಚಲನ ಚಿತ್ರರಂಗ. ಅಕ್ಷರದಲ್ಲಿ ಹೇಳಲಾಗದ್ದನ್ನು ದೃಶ್ಯ ಮಾಧ್ಯಮದಲ್ಲಿ ಅಭಿವ್ಯಕ್ತಗೊಳಿಸಲು ಆಯ್ದುಕೊಂಡ ಪ್ರಕಾರವಾಗಿದ್ದು, ತಮ್ಮದೇ ಕಾದಂಬರಿ ‘ಒಂದು ಊರಿನ ಕತೆ, ಬೆಂಕಿ, ಸೂರ್ಯ, ಮುಂತಾದವುಗಳ ಜೊತೆಗೆ ಇತರ ಕಾದಂಬರಿಗಳನ್ನೂ ಚಲನ ಚಿತ್ರ ಮಾಧ್ಯಮಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ. ನಪುಂಸಕ ಗಂಡನನ್ನು ಕಟ್ಟಿಕೊಂಡು ತನ್ನ ಒಡಲಾಳದ ಬೆಂಕಿಗೆ ಶಾಶ್ವತ ಪರಿಹಾರ ಕಾಣದ ‘ಬೆಂಕಿ’, ವಿಶ್ವಸಂಸ್ಥೆಯ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಚಿತ್ರ ರಚಿಸಲು ಗಿರಿಧಾಮಕ್ಕೆ ತೆರಳಿ ಶಾಂತಿಯನ್ನು ಹುಡುಕಿಕೊಂಡು ಹೊರಡುವ ನಾಯಕಿ ‘ಶಾಂತಿ’ (ಏಕ ಪಾತ್ರಾಭಿನಯದ ಚಲನ ಚಿತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿ ಗಿನ್ನೆಸ್ ದಾಖಲೆಗೆ ಸೇರಿದ ಚಿತ್ರ – ಈ ರೀತಿ ಪ್ರಯೋಗ ಮಾಡಿದ ವಿಶ್ವದ ಮೂರನೆಯ ನಿರ್ದೇಶಕರೆಂಬ ಖ್ಯಾತಿಗೂ ಪಾತ್ರರಾಗಿದ್ದಾರೆ), ಹೆಣ್ಣಿನ ಹೋರಾಟದ ಸಂಕೇತವಾಗಿ  ಮೂಡಿಬಂದ ಚಿತ್ರ ‘ತಾಯಿ’ (ಮಾಕ್ಸಿಂ ಗಾರ್ಕಿ ಕಾದಂಬರಿ ಆಧಾರಿತ), ಬುಡಕಟ್ಟು ಜನಾಂಗದ ಬಾಲಕನೊಬ್ಬ ಕ್ರೀಡಾಪಟುವಾಗಲು ಪಡುವ ಪಡಿಪಾಟಲಿನ ‘ಏಕಲವ್ಯ’, ಜನಪದ, ಉಗ್ರಗಾಮಿ, ಶಬರಿ, ಭೂಮಿತಾಯಿ ಮುಂತಾದ ಚಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ಚಿತ್ರಗಳ ನಿರ್ದೇಶನದಿಂದ ಮನ್ನಣೆಗಳಿಸಿದ ಬರಗೂರರ ‘ಶಾಂತಿ’ ಚಿತ್ರಕ್ಕಾಗಿ ಗಿನ್ನಿಸ್ ದಾಖಲೆ, ‘ತಾಯಿ’ ಚಿತ್ರಕ್ಕಾಗಿ ರಾಷ್ಟ್ರಮಟ್ಟದ ಶ್ರೇಷ್ಠ ಪ್ರಾದೇಶಿಕ ಚಿತ್ರ, ನಿರ್ದೇಶನ, ಶ್ರೇಷ್ಠ ಗೀತ ರಚನೆ ಹೀಗೆ ಮೂರು ಪ್ರಶಸ್ತಿಗಳು, ಸೂರ್ಯ, ಕರಡಿಪುರ ಚಲನಚಿತ್ರಗಳು ಅಂತಾರಾಷ್ಟ್ರೀಯ ಮನ್ನಣೆಗಳಿಸಿದ್ದರೆ ಒಂದು ಊರಿನ ಕತೆ, ಬೆಂಕಿ, ಸೂರ್ಯ, ಕೋಟೆ, ಜನುಮದ ಜೋಡಿ, ಮುಂತಾದವುಗಳಿಗೆ ಶ್ರೇಷ್ಠ ಕಥಾ ಲೇಖಕ, ಶ್ರೇಷ್ಠ ಸಂಭಾಷಣಕಾರ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ಗೀತರಚನೆಕಾರ ಪಶಸ್ತಿಗಳಲ್ಲದೆ ಸೂರ್ಯ ಚಲನಚಿತ್ರವು ರಷ್ಯಾದ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಕರಡಿಪುರ ಚಲನ ಚಿತ್ರವು ಬ್ರಿಟನ್ನಿನ ಲೀಡ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿವೆ. ಚಲನಚಿತ್ರ ರಂಗದಿಂದಲ್ಲದೆ ಸಾಹಿತ್ಯ ರಂಗದಿಂದಲೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಕಥಾ ಸಂಕಲನ ಪುಸ್ತಕ ಪ್ರಶಸ್ತಿ (ಸುಂಟರಗಾಳಿ – ೧೯೭೫), ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (೧೯೯೮), ಅಂಬೇಡ್ಕರ್ ಪ್ರಶಸ್ತಿ, ಡಾ. ಸಾ.ಶಿ. ಮರುಳಯ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,  ಆಳ್ವಾರ್ ನುಡಿ ಸಿರಿಯ ಅಧ್ಯಕ್ಷತೆ, ಕುವೆಂಪು ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

Details

Date:
October 18, 2023
Event Category: