೧೦-೨-೧೮೭೨ ತುಮಕೂರು ಬಳಿಯ ಬೆಳ್ಳಾವೆಯಲ್ಲಿ ವೆಂಕಟ ನಾರಣಪ್ಪನವರು ಜನಿಸಿದರು. ತಂದೆ ವೆಂಕಟ ಕೃಷ್ಣಯ್ಯ, ತಾಯಿ ಲಕ್ಷ್ಮೀದೇವಿ. ವಿದ್ಯಾಭ್ಯಾಸ ಪ್ರಾರಂಭವಾದುದು ಕೂಲಿ ಮಠದಲ್ಲಿ. ಪ್ರೌಢಶಾಲೆಗೆ ಸೇರಿದ್ದು ತುಮಕೂರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದರು. ಪ್ರಿನ್ಸಿಪಾಲರಾಗಿದ್ದ ಜಾನ್ ಕುಕ್ ಇವರ ಪ್ರತಿಭೆಯನ್ನು ಗುರುತಿಸಿ ಅಧ್ಯಾಪಕರಾಗಿ ಆಯ್ಕೆ ಮಾಡಿಕೊಂಡರು. ಮೊದಲು ಮಾನವ ಶಾಸ್ತ್ರ ಬೋಸುತ್ತಿದ್ದವರು ನಂತರ ಭೌತಶಾಸ್ತ್ರದ ಅಧ್ಯಾಪಕರಾದರು. ತರಗತಿಯಲ್ಲಿ ಕಟ್ಟುನಿಟ್ಟಿನ ಅಧ್ಯಾಪಕರೆಂದು ಹೆಸರಾಗಿದ್ದರೂ ಅಷ್ಟೇ ಹೃದಯವಂತರು. ಶಿಸ್ತು, ಪ್ರಾಮಾಣಿಕತೆ, ನಿಷ್ಪಕ್ಷಪಾತ, ಸಜ್ಜನಿಕೆ ಇವರ ಗುಣಗಳಾಗಿದ್ದುವು. ಕರ್ನಾಟಕ ವಿಜ್ಞಾನ ಸಮಿತಿಯನ್ನು ಹುಟ್ಟು ಹಾಕಿದರು. ಉಪನ್ಯಾಸಗಳನ್ನು ನೀಡಿದರು. ವಿಜ್ಞಾನ ಪತ್ರಿಕೆಯನ್ನು ಹೊರತಂದರು. ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಕಾರಿಯಾಗಿ, ಅಹರ್ನಿಶಿ ದುಡಿದರು. ಪ್ರಾಧ್ಯಾಪಕ ವೃತ್ತಿಯಿಂದ ಉಂಟಾದ ಮನಃಕ್ಲೇಶದಿಂದ ರಾಜೀನಾಮೆ ನೀಡಿ ವ್ಯವಸಾಯ ವೃತ್ತಿ ಹಿಡಿದರು. ಬೇಸರವಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಗುಡಿಯ ಜೀರ್ಣೋದ್ಧಾರ, ದೊಡ್ಡ ಬಸವಣ್ಣ, ದೊಡ್ಡ ಗಣಪತಿ, ಚಾಮರಾಜಪೇಟೆಯ ರಾಮೇಶ್ವರನ ಗುಡಿ, ಗವಿಗಂಗಾಧರೇಶ್ವರನ ದೇವಸ್ಥಾನಗಳ ಧರ್ಮದರ್ಶಿಯಾಗಿದ್ದರು. ಬಸವನ ಗುಡಿಯಲ್ಲಿ ಬಸವನಗುಡಿ ಯೂನಿಯನ್ ಕ್ಲಬ್ ಪ್ರಾರಂಭಿಸಿದರು. ಅದು ಈಗ ಬಸವನಗುಡಿ ಯೂನಿಯನ್ ಅಂಡ್ ಸರ್ವೀಸ್ ಕ್ಲಬ್ ಎಂದಾಗಿದೆ. ಇದಲ್ಲದೆ ಮುಲಕನಾಡು ಸಂಘದ ಅಧ್ಯಕ್ಷರಾಗಿ, ಅಗ್ರಿಕಲ್ಚರ್ ಅಂಡ್ ಎಕ್ಟಿವ್ಮೆಂಟ್ ಯೂನಿಯನ್ ಸದಸ್ಯರಾಗಿ, ಮೈಸೂರು-ತಮಿಳುನಾಡಿನ ಕಾವೇರಿ ನೀರಿನ ಹಂಚಿಕೆಯ ನಿಷ್ಪಕ್ಷಪಾತ ತೀರ್ಪು ಕೊಡಲು ನೇಮಿಸಿದ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕನ್ನಡ ಐದನೆಯ ಪುಸ್ತಕ, ಗುಣಸಾಗರ, ಜೀವವಿಜ್ಞಾನ, ಸ್ವತಂತ್ರ ಕೃತಿಗಳು. ಶಬ್ದಮಣಿ ದರ್ಪಣ, ಪಂಪ ರಾಮಾಯಣ, ಸೋಮೇಶ್ವರ ಶತಕ, ಪಂಪ ಭಾರತ ಮುಂತಾದವುಗಳು ಸಂಪಾದಿತ ಕೃತಿಗಳು. ೧೯೩೭ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಮೈಸೂರು ಮಹಾರಾಜರಿಂದ ೧೯೪೦ರಲ್ಲಿ ದೊರೆತ ರಾಜಸೇವಾಸಕ್ತ ಬಿರುದು-ಮುಂತಾದ ಗೌರವಗಳು ಸಂದುವು. ನಿಧನರಾದದ್ದು ೩.೮.೧೯೪೩ರಲ್ಲಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಕೆಳದಿ ಗಣಪತಿಭಟ್ – ೧೯೨೪ ತೊ. ನಂಜುಂಡಸ್ವಾಮಿ – ೧೯೪೭ ಗುರುಪಾದ ಕುಲಗೋಡ – ೧೯೪೭ ಹೇಮಾ ಪಟ್ಟಣಶೆಟ್ಟಿ – ೧೯೫೪ ಗೀತಾ ಸೀತಾರಾಂ – ೧೯೫೨ ವೈ.ಬಿ.ಎಚ್. ಜಯದೇವ್ – ೧೯೬೪

