Loading Events

« All Events

ಪ್ರೊ. ಮರಿಯಪ್ಪಭಟ್ಟ

July 27

೨೭-೭-೧೯೦೬ ೨೧-೩-೧೯೮೦ ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿದ್ದ ಮರಿಯಪ್ಪಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ. ತಂದೆ ಗೋವಿಂದಭಟ್, ತಾಯಿ ಕಾವೇರಿ ಅಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಪುತ್ತೂರು ಸಮೀಪದ ಪೊಳ್ಯದಲ್ಲಿ. ಹೈಸ್ಕೂಲಿಗೆ ಸೇರಿದ್ದು ಪುತ್ತೂರಿನಲ್ಲಿ. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಿಂದ ಬಿ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು ಮದರಾಸಿನ ಪ್ರಾಚ್ಯ ಹಸ್ತ ಪ್ರತಿ ಸಂಶೋಧನ ಗ್ರಂಥ ಭಂಡಾರದಲ್ಲಿ ಜ್ಯೂ. ಅಸಿಸ್ಟೆಂಟ್‌ರಾಗಿ. ನಂತರ ಗಣಿತ ಶಾಸ್ತ್ರದ ಉಪಾಧ್ಯಾಯರಾಗಿ ಮದರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ವೃತ್ತಿ. ಸ್ವಂತ ಪರಿಶ್ರಮದಿಂದ ಕನ್ನಡ ಎಂ.ಎ. ಪದವಿ, ಎಲ್.ಟಿ. ಪದವಿ ಸಂಪಾದಿಸಿದ್ದಲ್ಲದೆ ಪಡೆದ ಕನ್ನಡ ವಿದ್ವಾನ್ ಪದವಿ. ೧೯೪೦ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕ, ರೀಡರ್, ಪ್ರೊಫೆಸರ್ ಆಗಿ ಬಡ್ತಿ, ಅದೇ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೧೯೭೨ರಲ್ಲಿ ನಿವೃತ್ತಿ. ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ವಿಭಾಗದ ಏಳಿಗೆಗಾಗಿ ಪಟ್ಟ ಪರಿಶ್ರಮ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕೇಂದ್ರ ಫಿಲಂ ಸೆನ್ಸಾರ್ ಮಂಡಳಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಮಂಡಲಿ, ನಿಘಂಟು ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನಾ ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಕನ್ನಡ, ಇಂಗ್ಲಿಷ್, ತುಳು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಹೊಂದಿದ್ದ ವಿಶೇಷ ಜ್ಞಾನ. ಹಲವಾರು ಹಳೆಗನ್ನಡ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿ ಪ್ರಕಟಣೆ. ಸ್ವತಂತ್ರ ಕೃತಿಗಳು-ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶಿರಾಜ. ಅನುವಾದ-ಸಂತರ ಚರಿತ್ರೆ. ಸಂಪಾದಿತ ಕೃತಿಗಳು-ಗುಣಚಂದ್ರನ ಛಂದಸ್ಸಾರ, ಸಂಗೀತ ರತ್ನಾಕರ, ಗುರುಬಸವ ಸದ್ಗುರು ರಹಸ್ಯ, ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್‌ಸ್ಕ್ರಿಪ್ಷನ್ಸ್, ಆಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ‍್ಯರ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ, ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ-ನಾಣ್ಣುಡಿ, ಸರ್ವಜ್ಞನ ವಚನ ಸಂಗ್ರಹ. ನಿಘಂಟುಗಳು-ದ್ರಾವಿಡಿಯನ್ ಕಂಪ್ಯಾರಿಟಿವ್ ವಕ್ಯಾಬುಲರಿ, ಹವ್ಯಕ-ಇಂಗ್ಲಿಷ್ ನಿಘಂಟು, ತುಳು-ಇಂಗ್ಲಿಷ ನಿಘಂಟು, ರೆ| ಎಫ್. ಕಿಟೆಲರ ಕನ್ನಡ-ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ, ವಿಸ್ತಾರಗೊಳಿಸಿ, ನಿಘಂಟು ರಚಿಸಿ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಮಹತ್ಕೃತಿ. ಸಂದ ಪ್ರಶಸ್ತಿಗಳಲ್ಲಿ ಮುಖ್ಯವಾದುವು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಫೆಲೋಷಿಪ್, ಶ್ರೀನಗರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ. ಅಭಿಮಾನಿಗಳು ಅರ್ಪಿಸಿದ ಸಂಸ್ಮರಣ ಗ್ರಂಥ ‘ಸಾರ್ಥಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀನಿವಾಸ ಕುಲಕರ್ಣಿ – ೧೯೨೮ ಜೋಳದರಾಶಿ ದೊಡ್ಡನಗೌಡ – ೧೯೧೦

Details

Date:
July 27
Event Category: