೧-೨-೧೯೪೦ ರಾಮದಾಸರು ಹುಟ್ಟಿದ್ದು ಉಡುಪಿ ತಾಲ್ಲೂಕಿನ ಉಚ್ಚಲಗ್ರಾಮ. ತಂದೆ ಗುರುರಾಜ ಕುಂಡಂತಾಯ, ತಾಯಿ ಸತ್ಯಭಾಮ. ತಂದೆಗೆ ಹೊಟೇಲು ಉದ್ಯೋಗ. ಗುಂಡ್ಲು ಪೇಟೆ, ಟಿ.ನರಸೀಪುರ, ಮೈಸೂರು ಮುಂತಾದ ಕಡೆಗಳಲ್ಲಿ ವ್ಯಾಪಾರ. ತಂದೆಯ ಅಕಾಲಮರಣ, ನಾಲ್ವರು ತಮ್ಮಂದಿರು ಒಬ್ಬಳು ತಂಗಿ ತಾಯಿಯನ್ನೊಳಗೊಂಡ ಸಂಸಾರದ ಹೊಣೆ. ಎಸ್.ಎಸ್.ಎಲ್.ಸಿ. ಮುಗಿಸಿ ಓದಿಗೆ ಶರಣು. ಇಡ್ಲಿವಡೆ ತಟ್ಟೆ ಹೊತ್ತು ಮಾರಾಟ. ಆದಾಯ ಕಡಿಮೆ, ಖರ್ಚು ಜಾಸ್ತಿ. ಕಡೆಗೆ ಸೇರಿದ್ದು ಮೈಸೂರು ಇಂದ್ರಭವನ ಹೋಟೇಲಿನಲ್ಲಿ ಸಪ್ಲೈಯರ್ ಕೆಲಸ. ನಂತರ ಇಂದ್ರ ಕೆಫೆಗೆ ವರ್ಗಾವಣೆ. ಮಾಲೀಕರ ಔದಾರ್ಯದಿಂದ ಓದಿಗೆ ಅವಕಾಶ. ಪೂರ್ಣಾವ ಕೆಲಸ, ಅರೆಕಾಲಿಕ ವಿದ್ಯಾರ್ಥಿ. ೧೯೬೪ರಲ್ಲಿ ಬಿ.ಎ. ಪದವಿ. ಪ್ರಥಮ ಸ್ಥಾನ. ೧೯೬೬ರಲ್ಲಿ ಎಂ.ಎ. ಉಪಕುಲಪತಿಗಳ ಚಿನ್ನದ ಪದಕ. ೧೯೬೬ರಿಂದ ೬೯ರವರೆಗೆ ಮೂಲ್ಕಿ ವಿಜಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭ. ೧೯೬೯ರಿಂದ ನಿವೃತ್ತಿಯವರೆಗೂ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ. ಬಾಲ್ಯದಿಂದಲೂ ಹಳ್ಳಿ ನಾಟಕದಲ್ಲಿ ಆಸಕ್ತಿ. ನಾಟಕ ನೋಡಿದರು, ಆಡಿಸಿದರು. ನಟನಾಗಿ, ನಿರ್ದೇಶಕರಾಗಿ ಬೆಳೆದರು. ಕಾರ್ನಾಡರ ತುಘಲಕ್ ನಾಟಕದ-ತುಘಲಕನಾಗಿ, ಈಡಪಸ್ ನಾಟಕದ-ಈಡಿಪಸ್ ಆಗಿ, ಅಂಧಯುಗದಲ್ಲಿ ಅಶ್ವತ್ಥಾಮನಾಗಿ, ಗೋವಿಂದ ಪೈಗಳ ಹೆಬ್ಬೆರಳು ನಾಟಕದಲ್ಲಿ ಹಿರಣ್ಯಧನುವಾಗಿ ನಟಿಸಿದರು. ಆಕಾಶವಾಣಿಯಲ್ಲಿ ನೂರಾರು ನಾಟಕ ಪ್ರಯೋಗಗಳನ್ನು ಮಾಡಿದರು. ‘ಸಮೂಹ’, ‘ರಂಗಭೂಮಿ’ ಸಂಪರ್ಕಕ್ಕೆ ಬಂದರು. ಕುಮಾರರಾಮ, ಬಂಜೆ, ಸಂಕ್ರಾಂತಿ, ಹರಕೆಯ ಕುರಿ, ತಲೆದಂಡ ನಾಟಕದಲ್ಲಿ ನಟ. ನಾಯಿಕತೆ, ತಲೆದಂಡ, ಜೋಕುಮಾರ ಸ್ವಾಮಿ ನಿರ್ದೇಶನ. ಹಲವಾರು ಸಾಹಿತ್ಯಕೃತಿ ರಚನೆ. ಭಸ್ಮಾಸುರ, ಹಾಡು-ಪಾಡು, ಋತಗೀತಾಮೃತ ಮೊದಲಾದ ಏಳು ಕವನ ಸಂಕಲನಗಳು ; ಇವಳು, ಕರ್ತಾರನ ಕಮ್ಮಟ, ಮುಕ್ತಪ್ರೇಮ-ಕಾದಂಬರಿಗಳು ; ಸೇಡು, ಹತ್ತು ಕಥೆಗಳು-ಕಥಾಸಂಕಲನ ; ಗುಂಡಾಭಟ್ಟನ ಖಂಡೀ ಅಂಗಡಿ, ಕಾಲಲಬ್ಧಿ ಮುಂತಾದ ೧೫ ಏಕಾಂಕ ನಾಟಕಗಳು ; ಥಾಮಸ್ನ ಗಾಸ್ಪೆಲ್ಸ್, ಜೆ.ಕೆ. ಉಪನ್ಯಾಸಗಳು, ಸಖಾರಾಂ ಬೈಂಡರ್-ಅನುವಾದಗಳು ; ಭೂಮಿಗೀತ ಕಾವ್ಯಪ್ರವೇಶ, ಅಧ್ಯಯನ, ರಂಗ-ಅಂತರಂಗ, ಚಿಂತನ ಮೊದಲಾದ ವಿಮರ್ಶಾ ಗ್ರಂಥಗಳು ಸೇರಿ ೪೦ಕ್ಕೂ ಹೆಚ್ಚು ಕೃತಿ ಪ್ರಕಟ. ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಉಡುಪಿ ರಂಗಭೂಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಎಚ್. ನಾಯಕಬಾಡ – ೧೯೪೪ ಡಿ.ಎಸ್. ನಾಗಭೂಷಣ – ೧೯೫೨ ರಾಮ ವೆಂಕಟನಾಯಕ – ೧೯೫೩ ಭಾಸ್ಕರ ಆಚಾರ್ಯ – ೧೯೫೪ ವಿಜಯ ಶ್ರೀ ಸಬರದ – ೧೯೫೭

