ಪ್ರೊ. ಲಲಿತಾಂಬ ಚಂದ್ರಶೇಖರ್

Home/Birthday/ಪ್ರೊ. ಲಲಿತಾಂಬ ಚಂದ್ರಶೇಖರ್
Loading Events
This event has passed.

೧೫.೦೨.೧೯೨೯ ಬಹುಭಾಷಾ ಕೋವಿದೆ, ಶಿಕ್ಷಣ ತಜ್ಞೆ, ಸಾಹಿತಿ ಲಲಿತಾಂಬ ಚಂದ್ರಶೇಖರ್ ರವರು ಹುಟ್ಟಿದ್ದು ದಾವಣಗೆರೆಯಲ್ಲಿ. ತಂದೆ ಶಿಕ್ಷಕರಾಗಿದ್ದ  ವೆಂಕಟಕೃಷ್ಣಯ್ಯ, ತಾಯಿ ಪಾರ್ವತಮ್ಮ. ಶಿಕ್ಷಕರಾಗಿದ್ದ ತಂದೆಯವರಿಗೆ ಹಲವಾರು ಹಳ್ಳಿಗಳಿಗೆ ವರ್ಗವಾಗುತ್ತಿದ್ದುದರಿಂದ ಇವರ ಪ್ರಾರಂಭಿಕ ಶಿಕ್ಷಣವು ಹಳ್ಳಿಯ ಶಾಲೆಗಳಲ್ಲಿ. ಪ್ರೌಢಶಾಲಾಭ್ಯಾಸ ಬೆಂಗಳೂರಿನ ವಾಣಿವಿಲಾಸ ಇನಸ್ಟಿಟ್ಯೂಟ್‌ನಲ್ಲಿ. ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ. ಪದವಿ ಪಡೆದ ನಂತರ ಓದಿದ ಪ್ರೌಢಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಕಾಲ. ಮದುವೆಯ ನಂತರ ಹೈದರಾಬಾದಿಗೆ ತೆರಳಿ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎಸ್‌ಸಿ., ಎಂ.ಎ (ಇಂಗ್ಲಿಷ್), ಎಂ.ಎಡ್., ಪಿಜಿಡಿಟಿಇ, ಮುಂತಾದ ಅನೇಕ ಸ್ನಾತಕೋತ್ತರ ಪದವಿಗಳು. ಅಲ್ಲಿನ ಹೈಸ್ಕೂಲು, ಜೂನಿಯರ್ ಕಾಲೇಜು, ಟೀಚರ್ಸ್ ಟ್ರೈನಿಂಗ್ ಇನಿಸ್ಟಿಟ್ಯೂಟ್, ಕಾಲೇಜ್ ಆಫ್ ಎಜುಕೇಷನ್ ಮುಂತಾದ ಕಡೆ ಕಾರ‍್ಯನಿರ್ವಹಿಸಿ ಟೀಚರ್ಸ್ ಟ್ರೈನಿಂಗ್ ಇನಸ್ಟಿಟ್ಯೂಟ್‌ನ ಪ್ರಾಂಶುಪಾಲರಾಗಿ ನಿವೃತ್ತಿ. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಸಣ್ಣಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದು, ಇವರ ಸಾಹಿತ್ಯ ಪ್ರಯೋಗಕ್ಕೆ ಅವಿಭಕ್ತ ಕುಟುಂಬದ ಮನೆಯವರೆಲ್ಲರೂ ಸಾಕ್ಷಿಯಾಗಿ, ಓದಿಸಿ ಕೇಳಿ ಆನಂದಪಡುತ್ತಿದ್ದುದಲ್ಲದೆ ಚರ್ಚಾಕೂಟ, ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದರು. ಹೀಗೆ ಬರೆದ ಕತೆಗಳು ಅಂದಿನ ಪತ್ರಿಕೆಗಳಾದ ಯುಗಪುರುಷ, ಕತೆಗಾರ ಮುಂತಾದ ಮಾಸಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿತು. ಹದಿನೇಳರ ಹರೆಯದಲ್ಲಿಯೆ ಇವರು ಬರೆದ ಭಾಷಣ, ಕಿರುಗತೆ, ಹಾಸ್ಯ ನಾಟಕಗಳು ಮೈಸೂರಿನ ಆಕಾಶವಾಣಿ, ಮದರಾಸು ಮತ್ತು ಮುಂಬಯಿ ಕೇಂದ್ರಗಳಿಂದಲೂ ಪ್ರಸಾರವಾದವು. ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ನೋಬೆಲ್ ಪ್ರಶಸ್ತಿ ವಿಜೇತೆ ಪರ್ಲ್ ಎಸ್ ಬಕ್ ರವರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಮುನ್ನುಡಿ ಬರೆಯಲು ಮಾಸ್ತಿಯವರನ್ನು ಕೇಳಿದಾಗ, ಇವರ ಅನುವಾದವನ್ನು ಪ್ರಶಂಸಿಸಿ ತಮ್ಮ ಜೀವನ ಮುದ್ರಣಾಲಯದಿಂದಲೇ ‘ಚೀಣಾದ ಸಣ್ಣ ಕಥೆಗಳು’ ಎಂಬ ಹೆಸರಿನಿಂದ ಪ್ರಕಟಿಸಿದರು. ವಾಣಿವಿಲಾಸ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗಿನಿಂದಲೂ ಕನ್ನಡದ ಬಗ್ಗೆ ಬೆಳೆಸಿದ ಒಲವಿನಿಂದ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ಕನ್ನಡದ ಮಾಧ್ಯಮದ ವಿದ್ಯಾರ್ಥಿಗಳಿಗೆ ಬೋಧಕರಿಲ್ಲದ ಸಂದರ್ಭದಲ್ಲಿ ತಾವೇ ಬೋಧಿಸಲು ಮುಂದಾಗಿ ವಿಜ್ಞಾನ ಮತ್ತು ಗಣಿತದ ವಿಷಯಗಳ ಟೀಕೆ, ಟಿಪ್ಪಣೆ ತಯಾರಿಸಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಕನ್ನಡದಲ್ಲಿ ಬೋಧಿಸತೊಡಗಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲಿಯುವಿಕೆ ಮತ್ತು ತರಬೇತಿಗಳ ಬಗ್ಗೆ ಪ್ರೌಢ ಪ್ರಬಂಧಗಳನ್ನು ಬರೆದಿರುವುದಲ್ಲದೆ ಆಲ್ ಇಂಡಿಯಾ ಸಿಲಿಬಸ್, ಆಂಧ್ರ ಪ್ರದೇಶದ ಸಿಲಿಬಸ್ ಕಮಿಟಿ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಪ್ರಾಯೋಗಿಕ ಯೋಜನೆಗಳು, ಕಾರ್ಯಾಗಾರಗಳು, ವಿಜ್ಞಾನ ಪ್ರಯೋಗಗಳ ಸಲಕರಣೆ ಸಮಿತಿ, ಬೋರ್ಡ್ ಆಫ್ ಸೆಕೆಂಡರಿ ಮತ್ತು ಇಂಟರ್ ಮೀಡಿಯಟ್ ಮುಂತಾದವುಗಳ ಸದಸ್ಯೆಯಾಗಿ, ಸಂಯೋಜಕರಾಗಿ, ಭಾಷಣಕಾರರಾಗಿ, ಮೌಲ್ಯ ಮಾಪಕರಾಗಿ, ಹಲವಾರು ವಿದ್ಯಾ ಸಂಸ್ಥೆಗಳ ಸಂರ್ದಶಕ ಪ್ರಾಧ್ಯಾಪಕರಾಗಿ, ಸಲಹೆಗಾರರಾಗಿ – ಹೀಗೆ ಹಲವಾರು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಕಾರ‍್ಯಗಳಲ್ಲಿ ತೊಡಗಿಸಿಕೊಂಡಿದ್ದು ಆಂಧ್ರ ಸರಕಾರದ ಶಿಕ್ಷಣ ಇಲಾಖೆಯಿಂದ ಗೌರವ ಪಡೆದಿದ್ದಾರೆ. ಸಾಂಸ್ಕೃತಿಕವಾಗಿಯೂ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಹೈದರಾಬಾದ್ ಕನ್ನಡ ಸಾಹಿತ್ಯ ಮಂದಿರ, ಕನ್ನಡ ನಾಟ್ಯರಂಗ ಮುಂತಾದವುಗಳ ಕಾರ‍್ಯದರ್ಶಿಯಾಗಿದ್ದಲ್ಲದೆ ಹೊರನಾಡಿನಲ್ಲಿರುವ ಕನ್ನಡದ ಮಕ್ಕಳಿಗಾಗಿ ಬೋಧನೆಯ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಹೊರನಾಡ ಕನ್ನಡಿಗರಿಗಾಗಿ ದುಡಿದಿದ್ದಾರೆ. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು, ಬೆಂಗಳೂರು ಆಕಾಶವಾಣಿಯಲ್ಲಿ ಚಿಂತನ ಕಾರ‍್ಯಕ್ರಮಗಳು, ಭಾಷಣಗಳು, ನಾಟಕಗಳು, ದೂರದರ್ಶನದಲ್ಲಿ ಮಕ್ಕಳ ಮನೋವಿಕಾಸ ಶಿಕ್ಷಣಕ್ಕೆ ಸಂಬಂಧಿಸಿದಂತಹ ಕಾರ‍್ಯಕ್ರಮಗಳು – ಮಕ್ಕಳ ಮನಸ್ಸಿನಲ್ಲಿ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಲು ಸ್ವಾತಂತ್ರ‍್ಯ ವೀರರ ಬಗ್ಗೆ ಬರೆದ ನಾಟಕಗಳು ಮುಂತಾದವುಗಳು ದೂರದರ್ಶನದಲ್ಲಿ ಪ್ರಸಾರಗೊಂಡಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ‍್ಯಕ್ರಮಗಳು; ಸಂಘ – ಸಂಸ್ಥೆಗಳಲ್ಲಿ ಅಧ್ಯಾತ್ಮಿಕ ಪ್ರವಚನಗಳು. ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸತೊಡಗಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ, ತೆಲಗು, ತಮಿಳು, ಉರ್ದು ಭಾಷೆಗಳ ಮೇಲೆ ಸಾಧಿಸಿದ ಪರಿಣತಿಯಿಂದ ಹಲವಾರು ಸಾಹಿತ್ಯ ಕಾರ‍್ಯಕ್ರಮಗಳಲ್ಲಿ ಭಾಗಿಯಾದಂತೆ ಸಾಹಿತ್ಯ ಕೃತಿಗಳ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದು ಬರೆದದ್ದು ಹಲವಾರು ಕಾದಂಬರಿಗಳು, ಹಾಸ್ಯ ಕತೆಗಳು ಹಾಗೂ ಹಾಸ್ಯ ನಾಟಕಗಳು. ಆಗಾಗ್ಗೆ ಪತ್ರಿಕೆಗಳಿಗೆ ಬರೆದ ಕತೆಗಳ ಸಂಗ್ರಹ ‘ವಿಮೋಚನೆ’,  ಮೈಸೂರಿನ ಉಷಾ ಸಾಹಿತ್ಯ ಮಾಲೆಯಿಂದ ಪ್ರಕಟವಾಧ ಕಾದಂಬರಿ ‘ರೇಖಾ’ ಭಾಗ ೧-೨.  ದಲಿತ ವರ್ಗದವರ ಹಿರಿಮೆಯನ್ನು ಸಾರುವ ‘ಮುಕುಂದ ಚಂದ್ರ’ ಕಾದಂಬರಿಯು ಪಿ.ಯು. ತರಗತಿಗಳಿಗೆ ಪಠ್ಯವಾಗಿದ್ದಲ್ಲದೆ ಚಲನಚಿತ್ರವಾಗಿಯೂ ಜನಪ್ರಿಯವಾಯಿತು. ಚಲನಚಿತ್ರವಾದ ಇವರ ಮತ್ತೊಂದು ಕಾದಂಬರಿ ಎಂದರೆ ‘ಪುನರ್ದತ್ತಾ’. ವಿಡಂಬನ ಕಾದಂಬರಿ ‘ಸರಸ್ವತಿ ಸಂಹಾರವೆ ?’ (ಈ ಕಾದಂಬರಿಯಲ್ಲಿ ಸರಸ್ವತಿ ಸಂಹಾರ ಹೇಗಾಗುತ್ತದೆ ಎಂದು ಪರೀಕ್ಷಿಸಿಲು ಭೂಲೋಕಕ್ಕೆ ಬರುವ ಗಣಪತಿ, ಷಣ್ಮುಕ, ಬೃಹಸ್ಪತಿ, ನಾರದ, ಇಂದ್ರ ಮುಂತಾದವರುಗಳು ಕಾಣುವ ಶಿಕ್ಷಣ ದುರವಸ್ಥೆಯ ವಿಡಂಬನೆ). ವೇಶ್ಯಾ ಸಮಸ್ಯೆಯ ಬಗ್ಗೆ ಬರೆದ ಕಾದಂಬರಿ ‘ಸುಕನ್ಯೆಯರು’. ಇದಲ್ಲದೆ ಸ್ವೀಕಾರ, ನಾದದ ಹಾದಿಯಲ್ಲಿ, ಬಿಡಿ ಹೂಗಳು, ಪರಿಸ್ಥಿತಿ, ವಿಮೋಚನೆ ಮುಂತಾದ ಕಾದಂಬರಿಗಳು. ಹಲವಾರು ಹಾಸ್ಯ ನಾಟಕಗಳನ್ನು ರಚಿಸಿದ್ದು ಭಾಮನೆ ಸತ್ಯಭಾಮನೆ, ಮನೆ ಪಾಠ, ತಾತ ಕಂಡ ವಿಶ್ವನಾಥ, ಅತಿಥಿ ಸತ್ಕಾರ, ಪುರಾಣ ಶ್ರವಣ, ವರಾನ್ವೇಷಣೆಯ ಸಹಾಯಕ ಸಂಸ್ಥೆ, ಜ್ಯೋತಿಷಾಲಯ, ಹೆಣ್ಣಿಗೊಂದು ಕಾಲ – ಗಂಡಿಗೊಂದು ಕಾಲ, ಯಾವ ನಾಟಕ ? ಮುಂತಾದ ನಾಟಕಗಳು ರೇಡಿಯೋ ಹಾಗೂ ದೂರದರ್ಶನ ವಾಹಿನಿಗಳಲ್ಲಿ ಹಲವಾರು ಬಾರಿ ಪ್ರಸಾರಗೊಂಡಿವೆ. ಹಾಸ್ಯ ನಾಟಕಗಳನ್ನು ಬರೆದಂತೆ ಹಲವಾರು ಹಾಸ್ಯ ಲೇಖನಗಳನ್ನೂ ಬರೆದಿದ್ದು ವಿವಾಹ ಮಹೋತ್ಸವದ ಅವಾಂತರಗಳು ಎಂಬ ಸಂಕಲನದಲ್ಲಿ ಸೇರಿವೆ. ರಜೆ ಚೀಟಿ, ಅಜ್ಜಿಯ ಬಾಣಂತನ, ಕುಟುಂಬ ನಿಯಂತ್ರಣ, (ಮೆಮರೆ ಇ ಆದಾಬ್ ಎಂಬ ಉರ್ದು ಭಾಷಾ ಸಂಚಿಕೆಯಲ್ಲಿ ಪ್ರಕಟವಾಗಿದೆ). ಪ್ರವಾಸವೊ ಪ್ರಯಾಸವೊ, ಒಮ್ಮೆ ಎಡವಿದರೆ ಮೊದಲಾದ ಹಾಸ್ಯ ಕತೆಗಳು ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಲ್ಲಿ ನಾಟಕ ರೂಪಾಂತರವಾಗಿ ಪ್ರಸಾರಗೊಂಡಿವೆ. ಇವುಗಳಲ್ಲದೆ ಕತೆ ಸಣ್ಣದು – ಸಂದೇಶ ದೊಡ್ಡದು (ಭಾಗ ೧-೪), ಸನಾತನ ಧರ್ಮ ಸಂಪ್ರದಾಯಗಳು: ಸಂದೇಹ – ಸಮಾಧಾನ (ಭಾಗ ೧-೩) ಮುಂತಾದ ಹಲವಾರು ಕೃತಿಗಳನ್ನು ರಚಿಸಿರುವರಲ್ಲದೆ ಹಲವಾರು ಧ್ವನಿ ಸುರಳಿಗಳನ್ನೂ ಹೊರತಂದಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಭರತೀಯ ವಿದ್ಯಾಭವನ (ಮುಂಬಯಿ) ದಿಂದ ಅತ್ಯುತ್ತಮ ಕಥಾ ಪ್ರಶಸ್ತಿ, ಆಂಧ್ರ ಸರಕಾರದ ಅತ್ಯುತ್ತಮ ಬೋಧಕ ಪ್ರಶಸ್ತಿ (ಎರಡು ಬಾರಿ),ಮೆಮರೆ ಇ ಆದಾಬ್ ಉರ್ದು ಸಂಸ್ಥೆಯಿಂದ ಅತ್ಯುತ್ತಮ ಕಥಾ ಪ್ರಶಸ್ತಿ; ಹೈದರಾಬಾದಿನ ಕನ್ನಡ ಸಾಹಿತ್ಯ ಮಂದಿರದಿಂದ ಶ್ರೇಷ್ಠ ಸಾಹಿತಿ ಪುರಸ್ಕಾರ; ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅತ್ಯುತ್ತಮ ಕಾದಂಬರಿ ಪ್ರಶಸ್ತಿ; ಭಾರತ ಸರಕಾರದಿಂದ ಅತ್ಯುತ್ತಮ ಬೋಧಕ ಪ್ರಶಸ್ತಿಗಳಲ್ಲದೆ ಅಂತಾರಾಷ್ಟ್ರೀಯ ವಿಜಯಶ್ರೀ, ಅತ್ತಿಮಬ್ಬೆ ಪ್ರತಿಷ್ಠಾನ, ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ, ಸ್ವರಲಿಪಿ ಸಂಸ್ಥೆ ಮುಂತಾದವುಗಳ ಹಲವಾರು ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top