ಪ್ರೊ. ವಿ.ಬಿ. ಮೊಳೆಯಾರ

Home/Birthday/ಪ್ರೊ. ವಿ.ಬಿ. ಮೊಳೆಯಾರ
Loading Events
This event has passed.

೨೬-೬-೧೯೩೬ ಸಾಹಿತ್ಯ ಲೋಕದಲ್ಲಿ ವಿ.ಬಿ. ಮೊಳೆಯಾರರೆಂದೇ ಪ್ರಸಿದ್ಧಿ ಪಡೆದ ವೆಂಕಟರಮಣಭಟ್ಟರು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರು ಮನೆತನದಲ್ಲಿ. ತಂದೆ ಶಂಕರನಾರಾಯಣ ಭಟ್ಟರು, ತಾಯಿ ಪರಮೇಶ್ವರಿ. ಶಂಕರನಾರಾಯಣಭಟ್ಟರು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಘನ ವಿದ್ವಾಂಸರು. ಮೊಳೆಯಾರರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅತ್ತಾವರ ಶಾಲೆಯಲ್ಲಿ ಕಲಿತು ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಸೇರಿದ್ದು ಮಂಗಳೂರಿನ ಗಣಪತಿ ಹೈಸ್ಕೂಲು. ಮಂಗಳೂರು ಪ್ರಥಮ ದರ್ಜೆ ಕಾಲೇಜಿನಿಂದ ಇಂಟರ್ ಮೀಡಿಯೆಟ್ ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ. (ಆನರ್ಸ್‌) ಎಂ.ಎ., ಚಿನ್ನದ ಪದಕದೊಂದಿಗೆ ಗಳಿಸಿದ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ. ಆದರೆ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ, ತರಗತಿ ನಡೆಯದಾದಾಗ, ಉದ್ಯೋಗ ಬಿಟ್ಟು ಸೇರಿದ್ದು ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜು, ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಭಾರ ಪ್ರಿನ್ಸಿಪಾಲರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ತಂದೆಯವರಲ್ಲಿದ್ದ ಸಾಹಿತ್ಯಾಭಿಲಾಷೆ, ಸಾಹಿತ್ಯ ರಚನೆಯ ಗುಣಗಳು ಮೊಳೆಯಾರರಲ್ಲಿಯೂ ಬಾಲ್ಯದಿಂದಲೇ ಮೊಳೆಯತೊಡಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಛಂದೋಬದ್ಧವಾದ ಹಲವಾರು ಕವಿತೆಗಳ ರಚನೆ. ROBERT SOUTHEY ಅವರ SCHOLAR ಕವಿತೆಯನ್ನು ‘ಹರಕೆಯ ಪೂರ್ಣತೆ’ ಎಂಬ ಭಾವಾನುವಾದದೊಡನೆ ಕವಿತೆ ಬರೆಯಲು ಪ್ರಾರಂಭ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನಗಳು ಪ್ರಕಟಿತ. ಹಲವಾರು ಕೃತಿಗಳ ರಚನೆ. ಚಿಂತನ ಬರಹಗಳು-ಸಮುಚ್ಚಯ, ಸಂಚಿತ, ಸಮುಚಿತ, ಸಂಕುಲ, ಸಮಂಜಸ ಕೃತಿ ಪ್ರಕಟಿತ. ನಗೆ ಬರಹಗಳ ಸಂಕಲನ-ನಗು-ಇಷ್ಟು ಸಾಕು, ನಕ್ಕುಬಿಡಿ-ಸಾಕು, ನಕ್ಕುಬಿಡಿ, ಚಟಾಕಿ ಮುಂತಾದುವು. ನಾಟಕ-ಪರಿವರ್ತನೆ. ವ್ಯಕ್ತಿಚಿತ್ರ-ಪ್ರಬಂಧ-ಫರ್ಡಿನೆಂಡ್ ಕಿಟ್ಟೆಲ್, ಮದರ್ ಥೆರೇಸಾ. ಕಾರಂತ ಚಿಂತನ-ಕಾರಂತ ಕೃತಿಗಳ ಆಯ್ದ ವಾಕ್ಯಗಳ ಸಂಕಲನ. ಪಠ್ಯಪುಸ್ತಕ-ಮೂಲ ಅರ್ಥಶಾಸ್ತ್ರ ಚರಿತ್ರೆ, ನೀತಿಪಾಠ ಮಾಲೆ (೯ನೇ ತರಗತಿಗೆ). ಸಾಹಿತ್ಯ ಪ್ರಕಟಣೆ, ಪ್ರಚಾರ ಸಾಹಿತ್ಯ, ಸಂಘಟನೆ, ಸಾಹಿತ್ಯ ಚಟುವಟಿಕೆ ಹೀಗೆ ಒಂದಿಲ್ಲೊಂದು ಕಾರ‍್ಯದಲ್ಲಿ ಸದಾಮಗ್ನರು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟದ ಬದುಕು. ಪುತ್ತೂರು ಕನ್ನಡ ಸಂಘ, ಸಂತ ಫಿಲೋಮಿನ ಕಾಲೇಜು ಸಂಘ, ಲಯನ್ಸ್ ಕ್ಲಬ್, ‘ದೃಶ್ಯ’ ಪುತ್ತೂರು ನಾಟಕ ಸಂಸ್ಥೆ, ದಸರಾ ನಾಡಹಬ್ಬದ ಕಾರ‍್ಯಕ್ರಮಗಳು ಮುಂತಾದುವುಗಳಲ್ಲಿ ಮುಖಂಡತ್ವ. ಹಲವಾರು ಸಂಘ ಸಂಸ್ಥೆಗಳಿಂದ ಗೌರವ. ಕ.ಸಾ.ಪ. ವತಿಯಿಂದ ಮೂಡಬಿದಿರೆಯ ೪ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರಕಾಶನದ ಗೌರವ ಪ್ರಶಸ್ತಿ, ಪುತ್ತೂರು ತಾಲ್ಲೂಕಿನ ೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೧೯೯೪ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಸಮರಸ.’   ಇದೇ ದಿನ ಹುಟ್ಟಿದ ಸಾಹಿತಿಗಳು : ನಾಗಲಕ್ಷ್ಮೀ ಹರಿಹರೇಶ್ವರ – ೧೯೪೬ ಈಚನೂರು ಶಾಂತಾ – ೧೯೫೩ ಸುಹಾಸ. ಬಿ.ಆರ್. – ೧೯೭೬ ಬಿ. ವೆಂಕಟಾಚಾರ‍್ಯ – ೧೮೪೫-೨೬.೬.೧೯೧೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top