Loading Events

« All Events

  • This event has passed.

ಪ್ರೊ. ವೇಣುಗೋಪಾಲ ಕಾಸರಗೋಡು

November 10, 2023

೧೦.೧೧.೧೯೪೮ ೨೦..೨೦೦೫ ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಜೀವಂತವಾಗಿರುವಂತೆ ಮಾಡಲು ಪಣತೊಟ್ಟಿದ್ದ, ಸಾಹಿತ್ಯ, ರಂಗಭೂಮಿ  ಮುಂತಾದ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ ಬಹುಮುಖ ಪ್ರತಿಭೆಯ ವೇಣುಗೋಪಾಲರು ಹುಟ್ಟಿದ್ದು ಕಾಸರಗೋಡಿನ ಕಾರಡ್ಕದಲ್ಲಿ ೧೦.೧೧.೧೯೪೮ ರಲ್ಲಿ. ತಂದೆ ಪೊನ್ನೆಪ್ಪಲ ನಾರಾಯಣ ಭಟ್, ತಾಯಿ ಅದಿತಿ. ಎಂ.ಎ. (ಕನ್ನಡ) ಮತ್ತು ಎಂ.ಫಿಲ್. ಪದವಿಯ ನಂತರ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೯೭೨ ರಲ್ಲಿ ವೃತ್ತಿಯನ್ನರಂಭಿಸಿ ೨೦೦೪ ರಲ್ಲಿ ನಿವೃತ್ತರಾಗುವವರೆವಿಗೂ ಅದೇ ಕಾಲೇಜಿನಲ್ಲಿದ್ದರು. ಆದರೆ ಕಡೆಯ ನಾಲ್ಕು ವರ್ಷಗಳು ಅನಾರೋಗ್ಯದ ನಿಮಿತ್ತ ರಜೆ ತೆಗೆದುಕೊಳ್ಳಬೇಕಾಯಿತು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಛಂದಸ್ಸು, ಜಾನಪದ ಮುಂತಾದ ಪಠ್ಯವನ್ನು ಬೋಧಿಸಿದ್ದಕ್ಕಿಂತ ಕವಿಯಾಗಿ, ನಾಟಕಕಾರರಾಗಿ, ನಟರಾಗಿ ಕನ್ನಡದ ಹೋರಾಟಗಾರರಾಗಿ ವಿದ್ಯಾರ್ಥಿಗಳ ಮಧ್ಯೆ ಕಳದದ್ದೇ ಹೆಚ್ಚು. ಅವರ ಬಹುಪಾಲ ಸಮಯವು ಸಾಹಿತ್ಯ ಕೃತಿ ರಚನೆಗಿಂತ ಸಾಹತ್ಯೇಕರ ಚಟುವಟಿಕೆಗಳಿಗೇ ಮೀಸಲಾಗಿತ್ತು. ಆದರೂ ಇವರು ರಚಿಸಿದ್ದು ಕೆಲವೇ ಕೃತಿಳಾದರೂ ಮೌಲ್ಯಯುತ ವಾದ ಸಾಹಿತ್ಯವಾಗಿದೆ. ಗರಿಮುರಿದ ಹಕ್ಕಿಗಳು, ಗೆರಿಲ್ಲಾ, ಬೊಗಸೆ ಮೀರಿದ ಬದುಕು ಮುಂತಾದ ಕಾವ್ಯಕೃತಿಗಳು; ಆಹುತಿ, ಬಯಲಾಟ ಮುಂತಾದ ಕಾದಂಬರಿಗಳು; ಯರ್ಮುಂಜ ರಾಮಚಂದ್ರ; ಬದುಕು ಬರೆಹ ಸಂಶೋಧನಾ ಕೃತಿ; ಮರೆಯಬಾರದ ಬರಹಗಾರ ಯರ್ಮುಂಜ, ಕವಿತೆ ಓದುವ ವಿಧಾನ ಮೊದಲಾದ ಸಂಪಾದಿತ ಕರತಿಗಳು; ರಂಗ ಪಂಚಮ (೫ ನಾಟಕಗಳು), ಕಾಸರಗೋಡು ಕವಿತೆಗಳು, ಸಾಹಿತ್ಯಧ್ವನಿ, ಉಪಸಂಸ್ಕೃತಿಯ ಮಾಲೆಯ ೪೫ ಪುಸ್ತಕಗಳು (ಇತರರೊಡನೆ) ಇವು ಸಂಪಾದಿತ ಕೃತಿಗಳು. ಬಂಜೆನೆಲ, ಈಜಿನ ಮಲಿಯಾಳಂ ಕವಿತೆಗಳು ಮೊದಲಾದ ಅನುವಾದಗಳು ಮತ್ತು ಮಣ್ಣಿನ ಬೊಂಬೆ, ರಾಮಾಯಣ, ಮಹಾಭಾರತ, ಡ್ಯೂಟಿ ಅಂದ್ರೆ ಡ್ಯೂಟಿ, ಬಂಗಾರಾಂ (ಕುಸಿತ), ಹೀಗೂ ಆಗುತ್ತೆ, ನೀನಲ್ಲಾಂದ್ರೆ ನಿನ್ನಪ್ಪ, ಹುಲಿಬಂತು ಹುಲಿ, ಎಂ.ಡಿ.ಸಾಹೇಬರ ನಾಯಿ, ಶಿಲುಬೆ, ಯಜ್ಷಪಶು, ಬದುಕು ಜಟಕಾಬಂಡಿ, ಜಿಯಾ, ದೃಷ್ಟಿ, ಪ್ರಶ್ನೆ, ಮತ್ತು ನಾಟಕಗಳು ಮುಂತಾದ ನಾಟಕಗಳು. ಸಂಕಲನ – ಹಾಲು ಕುಡಿದ ಗಣಪ. ಹೀಗೆ ನಾನಾ ಕ್ಷೇತ್ರದಲ್ಲಿ ಎಡೆಬಿಡದೆ ದುಡಿಯುತ್ತಿದ್ದ ವೇಣುಗೋಪಾಲನ ಸೇವೆಯನ್ನರಸಿ ಬಂದ ಸಂಸ್ಥೆಗಳಿಗೇನು ಕಡಿಮೆಯಿರಲ್ಲಿಲ್ಲ. ನವ್ಯ ಸಾಹಿತ್ಯ ಸಂಘ, ಹೊರನಾಡ ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟ, ತಪಸ್ಯಾ, ಯವನಿಕಾ ಕಾಸರಗೋಡು, ಗೀತವಿಹಾರ, ನೃತ್ಯ ನಿಕೇತನ, ಕಾಸರಗೋಡು ಕನ್ನಡ ಬಳಗ, ಕಾಸರಗೋಡು ಕರ್ನಾಟಕ ಸಮಿತಿ, ಕನ್ನಡ ಸಂರಕ್ಷಣಾ ಸಮಿತಿ-ಕಾಸರಗೋಡು, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮುಂತಾದವುಗಳಲ್ಲಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ದುಡಿದುದಲ್ಲದೆ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿ ಎರಡು ಬಾರಿ (೧೯೮೧-೮೪ ಮತ್ತು ೧೯೮೭-೯೦), ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ (೧೯೯೧-೯೪), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ (೧೯೯೬-೯೯) ಮತ್ತು ಕೇರಳ ಸಂಗೀತ ನಾಟಕ ಅಕಾಡಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು, ಮಂಗಳೂರು, ಧಾರವಾಡ, ಮುಂಬಯಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಂಗುಲಿಮಾಲ, ಬದುಕು ಜಟಕಾಬಂಡಿ, ಯಜ್ಞಪಶು, ಬಹದ್ದೂರ್ ಗಂಡು, ಪೋಲಿ ಕಿಟ್ಟಿ, ಕೆಥಾರ್ಸಿಸ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವು, ರೊಟ್ಟಿ, ಮಹಾಭಾರತ, ಬಂದಾ ಬಂದಾ ಸರದಾರ ಮುಂತಾದ ನಾಟಕಗಳಲ್ಲಿ ನಟರಾಗಿ ಅಭಿನಯಿಸಿದ್ದಲ್ಲದೆ; ಅಂಗುಲಿಮಾಲ, ಬದುಕು ಜಟಕಾಬಂಡಿ, ಪೋಲಿಕಿಟ್ಟಿ, ಹುಚ್ಚು ಹೊಳೆ, ಕೆಥಾರ್ಸಿಸ್, ಮಹಾಭಾರತ, ಹೇಡಿಗಳು, ದೊರೆ ಈಡಿಪಸ್, ಮಣ್ಣಿನ ಬೊಂಬೆ ಮುಂತಾದ ನಾಟಕಗಳನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದರು. ಇವಲ್ಲದೆ ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿ, ಕರ್ನಾಟಕ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ವಿಶ್ವವಿದ್ಯಾಲಯಗಳು ಆಯೋಜಿಸಿದ ಕಮ್ಮಟ, ಕವಿಗೋಷ್ಠಿಗಳಲ್ಲೂ ಭಾಗಿ. ಕೇರಳದ ತ್ರಿಚೂರಿನ ‘ಸ್ಕೂಲ್ ಆಫ್ ಡ್ರಾಮ’ದಲ್ಲಿ ತರಬೇತಿ ಪಡೆದ ಇವರು ‘ಯವನಿಕಾ ಕಾಸರಗೋಡು’ ಮತ್ತು ‘ಅಪೂರ್ವ ಕಲಾವಿದರು’ ರಂಗ ಸಂಸ್ಥೆಗಳನ್ನು ಸ್ಥಾಪಿಸಿ ಕರ್ನಾಟಕದಲ್ಲಷ್ಟೇ ಅಲ್ಲದೆ ಗೋವಾ, ಮುಂಬೈ, ಸೊಲ್ಲಾಪುರ, ಸೇಲಂ, ನವದೆಹಲಿ ಮುಂತಾದ ಕಡೆಗಳಲ್ಲೂ ನಾಟಕಗಳ ಪ್ರದರ್ಶನವನ್ನು ನೀಡಿದರು. ಇವರನ್ನರಸಿ ಬಂದ ಪ್ರಶಸ್ತಿಗಳಿಗೂ ಲೆಕ್ಕವಿಲ್ಲ. ಗರಿಮುರಿದ ಹಕ್ಕಿಗಳು ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೭೪), ಬೊಗಸೆ ಮಾರಿದ ಬದುಕು ಸಂಕಲನಕ್ಕೆ ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ (೧೯೮೪), ತಪ್ತಚೇತನ ಖಂಡಕಾವ್ಯಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸುವರ್ಣ ಪದಕ (೧೯೬೯), ಯರ್ಮುಂಜ ರಾಮಚಂದ್ರ ವಿಮರ್ಶಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಕರವರ್ಣಿ ಮುದ್ದಣ ಸ್ಮಾರಕ ಅನಾಮಿಕ ದತ್ತಿನಿಧಿ ಪ್ರಶಸ್ತಿ (೧೯೯೪), ಸಾಹಿತ್ಯ ಮತ್ತು ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ (೧೯೯೧) ಮುಂತಾದುವುಗಳು. ಇವುಗಳ ಜೊತೆಗೆ ಇವರು ನಿರ್ದೇಶಿಸಿದ ‘ಹುಚ್ಚು ಹೊಳೆ’ ನಾಟಕಕ್ಕೆ ಕಣ್ಣಾನೂರು ನೆಹರು ಯುವಕ ಕೇಂದ್ರದ ಪ್ರಥಮ ಬಹುಮಾನ ಮತ್ತು ‘ಹೇಡಿಗಳು’ ನಾಟಕಕ್ಕೆ ಲಲಿತ ಕಲಾ ಸದನ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (೧೯೮೦)ಗಳೂ ಸಂದಿವೆ. ಇದಲ್ಲದೆ ಶ್ರೇಷ್ಠ ಪ್ರತಿಭಾವಂತ ಯುವ ರಂಗ ಕರ್ಮಿ ಜೇಸಿ ಪ್ರಶಸ್ತಿ (೧೯೮೭) ಮತ್ತು ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿಗಳೂ (೧೯೯೫-೯೬) ಹುಡುಕಿಕೊಂಡು ಬಂದಿವೆ. ಸಾಹಿತ್ಯ, ನಾಟಕ, ಕವಿಗೋಷ್ಠಿ, ಕಮ್ಮಟ ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ ಗಡಿನಾಡಿನಲ್ಲಿ ಕನ್ನಡವನ್ನು ಜೀವಂತವಾಗಿಡುವುದರಲ್ಲಿ ಸದಾ ತೊಡಗಿಸಿಕೊಂಡಿದ್ದು, ಬದುಕಿನುದ್ದಕ್ಕೂ ಕನ್ನಡಪರ ಕಾಳಜಿಯನ್ನೇ ರಕ್ತದಲ್ಲಿ ತುಂಬಿಕೊಂಡಿದ್ದ ವೇಣುಗೋಪಾಲ ಕಾಸರಗೋಡು ರವರು ಅನಾರೋಗ್ಯಕ್ಕೆ ತುತ್ತಾಗಿ ೨೫.೫.೨೦೦೫ ರಂದು ಸಾಹಿತ್ಯ ಲೋಕದಿಂದ ಕಣ್ಮರೆಯಾದರು.

Details

Date:
November 10, 2023
Event Category: