೨೭-೬-೧೯೫೦ ೧೧-೧-೨೦೦೬ ನಾಟಕ ಕಲೆಯ ಮೂಲಕ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದ ಸಿ.ಜಿ.ಕೆ.ರವರು ಹುಟ್ಟಿದ್ದು ಮಂಡ್ಯದಲ್ಲಿ. ತಂದೆ ಗೋವಿಂದನಾಯ್ಕ, ತಾಯಿ ತಿಮ್ಮಾಜಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಮಂಡ್ಯ, ಕಾಲೇಜಿನ ವಿದ್ಯಾಭ್ಯಾಸ ನ್ಯಾಷನಲ್ ಕಾಲೇಜು, ಸೆಂಟ್ರಲ್ ಕಾಲೇಜಿನಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ. ಅರ್ಥಶಾಸ್ತ್ರ. ಉದ್ಯೋಗಕ್ಕಾಗಿ ಸೇರಿದ್ದು ಟೆಕ್ನಿಕಲ್ ಅಸಿಸ್ಟೆಂಟ್ ಐಸೆಕ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ. ಹಲವಾರು ಸವಾಲುಗಳ ನಡುವೆಯೂ ರೂಪಿಸಿಕೊಂಡ ಬದುಕು. ಪೋಲಿಯೋ ಪೀಡಿತರಾದ ಸಿ.ಜಿ.ಕೆ.ಯವರನ್ನು ಪ್ರಾರಂಭದಲ್ಲಿ ರಂಗಭೂಮಿಯ ಕಲಾವಿದರು ನಿಕೃಷ್ಟವಾಗಿ ಕಂಡರೂ ಛಲಬಿಡದೆ ದೈಹಿಕ ನ್ಯೂನತೆಯನ್ನು ಎಂದೂ ಮನಸ್ಸಿಗೆ ಹಚ್ಚಿಕೊಳ್ಳದೆ ರಂಗತಜ್ಞರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಮಹಾನ್ ಸಂಘಟಕರಾಗಿ, ಇದು ಅಸಾಧ್ಯವೆಂಬುದನ್ನು ಸಾಧ್ಯವಾಗಿಸ ಹೊರಟವರು. ವಿದ್ಯಾರ್ಥಿ ದೆಸೆಯಿಂದಲೇ ವಹಿಸುತ್ತಿದ್ದ ಮುಂದಾಳತ್ವ. ಎಲ್ಲಕ್ಕೂ ಮುನ್ನುಗ್ಗುವ ಛಾತಿ. ಮೊದಲ ನಾಟಕ ೧೯೭೪ರಲ್ಲಿ ನೋಡಿದ್ದು ‘ಹುತ್ತವ ಬಡಿದರೆ.’ ನಂತರ ಮೂರು ದಶಕಗಳ ಕಾಲ ನಾಟಕರಂಗದ ಅಸಾಧ್ಯಗಳನ್ನೆಲ್ಲಾ ಸಾಧ್ಯವಾಗಿಸಿ ಲಕ್ಷಾಂತರ ನಾಟಕ ಪ್ರೇಕ್ಷಕರನ್ನು ರಂಗಭೂಮಿ ಕಡೆಗೆ ಸೆಳೆದ ಅಸಾಮಾನ್ಯ ರಂಗಕರ್ಮಿ. ತಾವೇ ಬರೆದು ನಿರ್ದೇಶಿಸಿದ ನಾಟಕಗಳು ಹಲವಾರು. ಬೆಲ್ಚಿ, ಭಾರತದರ್ಶನ, ಸೈಕ್ಲೋನ್, ಪಂಚತಾರ, ಮೇಡೇ, ಅಲ್ಲೇ ಇದ್ದೋರು, ದೌಡ್ಗಾಂ, ದೇವರ ಮುಂದೆ ಕಾದು ಕುಂತ ಬಸವ, ಹಲವಾರು ಬೀದಿ ನಾಟಕಗಳು. ಒಡಲಾಳ (ದೇವನೂರು ಮಹಾದೇವರ ನೀಳ್ಗತೆ ಆಧಾರಿತ), ಅಬೋಲಿನ (ಯಶವಂತ ಚಿತ್ತಾಲರ ಕಥೆಯಾಧಾರ), ಕಳ್ಳಿಯಲ್ಲಿ ಕೆಂಪು ಹೂವು (ಕೇಶವರೆಡ್ಡಿ ಹಂದ್ರಾಳರ ಸಣ್ಣಕಥೆಯಾಧಾರ) ಮುಂತಾದುವುಗಳಿಗೆ ನಾಟಕರೂಪ ನೀಡಿ ರಂಗದ ಮೇಲೇರಿಸಿದರು. ನಿರ್ದೇಶಿಸಿದ ನಾಟಕಗಳು-ಒಡಲಾಳ, ಮಹಾಚೈತ್ರ, ಸುಲ್ತಾನ ಟಿಪ್ಪು, ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಅಂಬೇಡ್ಕರ್, ಯಯಾತಿ, ಶೇಕ್ಸ್ಪಿಯರನ ಸ್ವಪ್ನನೌಕೆ, ಜ್ಯೂಲಿಯಸ್ ಸೀಸರ್, ತುಘಲಕ್, ಕುಸುಮಬಾಲೆ, ವೈಶಂಪಾಯನ ತೀರ, ರುಡಾಲಿ, ಚಕೋರಿ, ಒಥೆಲೋ, ಶೋಕಚಕ್ರ, ದಂಡೆ, ಇಗೋ ಮುಗಿಲು ಅಗೋಪಂಜರದವರೆಗೆ ಹರಿದಿದೆ. ಶರೀಫರನ್ನು ಕುರಿತು ‘ನಡಿಯೋ ದೇವರ ಚಾಕರಿಗೆ’, ಅಲ್ಲಮನನ್ನು ಕುರಿತು ‘ಅಲ್ಲಮನಿಗೆ ನಮಸ್ಕಾರ’ ರಂಗಕ್ಕೇರಿಸಲು ಸಿದ್ಧತೆ ನಡೆಸಿದ್ದರು. ಲಿಂಗೈಕ್ಯ ಮರುಳು ಸಿದ್ಧರ ಸಾಕ್ಷ್ಯಚಿತ್ರ ತಯಾರಿಸಲು ನಾಗತಿಹಳ್ಳಿ ಚಂದ್ರಶೇಖರರೊಡನೆ ಸಿರಿಗೆರೆಗೆ ಆಗಮಿಸಿದ್ದ ಸಿ.ಜಿ.ಕೆ. ತೀವ್ರ ಹೃದಯಾಘಾತಕ್ಕೊಳಗಾಗಿ ಎಲ್ಲವನ್ನೂ ಇದ್ದಲ್ಲಿ ಇದ್ದಂತೆ ಬಿಟ್ಟು ನಡೆದೇ ಬಿಟ್ಟರು. ಸಂದ ಗೌರವ ಪ್ರಶಸ್ತಿಗಳು ಹಲವಾರು-ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರ ಜವಾಬ್ದಾರಿ, ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಮುಖವಾದುವು. ಆತ್ಮವೃತ್ತಾಂತ ‘ಕತ್ತಾಲೆ ಬೆಳದಿಂಗಳೊಳಗೆ’ ಪ್ರಕಟಿತ. ಇದೇ ದಿನ ಹುಟ್ಟಿದ ಸಾಹಿತಿಗಳು : ಸುನೀತಾ ಎಂ. ಶೆಟ್ಟಿ – ೧೯೩೨ ವಿದ್ವಾನ್ ಎಂ. ಶಿವಕುಮಾರಸ್ವಾಮಿ – ೧೯೪೯ ಕೆ.ಎಸ್. ಚೈತ್ರ – ೧೯೭೪

