ಫರ್ಡಿನೆಂಡ್ ಕಿಟೆಲ್

Home/Birthday/ಫರ್ಡಿನೆಂಡ್ ಕಿಟೆಲ್
Loading Events
This event has passed.

೦೭.೦೪.೧೮೩೨ ೧೯.೧೨.೧೯೦೩ ಕನ್ನಡನಾಡು-ನುಡಿ ಸಾಹಿತ್ಯ ಇರುವವರೆವಿಗೂ ನಿಘಂಟಿನ ಅನಿವಾರ್ಯ. ನಿಘಂಟು ಇರುವವರೆವಿಗೂ ಕಿಟೆಲ್ ಹೆಸರೂ ಚಿರಸ್ಥಾಯಿ. ಮತ ಪ್ರಚಾರಕ್ಕಾಗಿ ಜರ್ಮನಿಯಿಂದ ಭಾರತಕ್ಕೆ ಬಂದ ಕಿಟೆಲ್ ಹುಟ್ಟಿದ್ದು ಜರ್ಮನಿಯ ರೋಸ್ಟರ್ ಹಾಫೆ ಎಂಬಲ್ಲಿ ೧೮೩೨ರ ಏಪ್ರಿಲ್ ೭ರಂದು. ತಂದೆ ಕ್ರೈಸ್ತ ಮತದ ಪ್ರಾಟಿಸ್ಟೆಂಟ್ ಪಂಗಡಕ್ಕೆ ಸೇರಿದ ಚರ್ಚಿನ ಧರ್ಮಾಧಿಕಾರಿಯಾಗಿದ್ದ ಗ್ಯಾಟ್ ಫ್ರೀಡ್, ತಾಯಿ ಹೆಲೆನ್. ಪ್ರಾರಂಭಿಕ ಶಿಕ್ಷಣವನ್ನು ಜೌರಿಕ್‌ನಲ್ಲಿ ಪಡೆದ ಕಿಟಲ್ ಕಾಲೇಜಿಗೆ ಸೇರಿದ್ದು ಬಾಸೆಲ್ ನಗರದ ಮಿಷನ್ ಕಾಲೇಜು. ಮೂರು ವರ್ಷಗಳ ವ್ಯಾಸಂಗದ ಬಳಿಕ ಪಾದ್ರಿಯಾಗಿ ನೇಮಕಗೊಂಡು ೧೮೫೩ರಲ್ಲಿ  ಭಾರತಕ್ಕೆ ಬಂದು ಕಾರ್ಯಸ್ಥಾನವನ್ನಾಗಿ ಆಯ್ದುಕೊಂಡದ್ದು ಮಂಗಳೂರನ್ನು. ಇಪ್ಪತ್ತೊಂದರ ಹರೆಯದ ಕಿಟೆಲ್ ಸಭಾಕಾರ್ಯಕಲಾಪಗಳಿಗೆ ಮೋಗ್ಲಿಂಗ್‌ಗೆ ಸಹಾಯ ಮಾಡುತ್ತಿದ್ದುದನ್ನು ಗಮನಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಕಳುಹಿಸಿದರು. ಆಡುನುಡಿಯನ್ನೇ ಬಳಸಿದರೆ ಮತ ಪ್ರಚಾರಕ್ಕೆ ಸುಲಭವಾದೀತೆಂದು ಭಾವಿಸಿದ ಕಿಟೆಲ್ ಕ್ರೈಸ್ತ ಮತದ ವಿಚಾರಗಳನ್ನು ಜನರಿಗೆ ತಿಳಿಸಲು ೧೮೬೨ರಲ್ಲಿ  ‘ಕಥಾಮಾಲೆ’ ಎಂಬ ಪುಸ್ತಕವನ್ನು ಪ್ರಕಟಿಸಿದರು. ಹೀಗೆ ಏಸುವಿನ ವಿಚಾರಗಳಿಗೆ ದೇಸಿ ಪದ್ಧತಿಯಲ್ಲಿ ಮುಂದೆ ರಚಿಸಿದ ಕೃತಿಗಳು ‘ಏಸುಕ್ರಿಸ್ತನ ಶ್ರಮೇ ಚರಿತ್ರೆ’ ಮತ್ತು ‘ಪರಮಾತ್ಮನ ಜ್ಞಾನ’ ಮುಂತಾದವುಗಳನ್ನು ಪ್ರಕಟಿಸಿ ಪ್ರಚುರಪಡಿಸಿದರು. ಕನ್ನಡ ಭಾಷೆಯ ಮೇಲಿನ ಪಾಂಡಿತ್ಯವನ್ನು ಗಮನಿಸಿದ ಬಾಸೆಲ್ ಮಿಷನ್ನಿನ ಡಾ. ಮೋಗ್ಲಿಂಗ್‌ ಮತ್ತು ಬ್ರಿಟಿಷ್ ಸರಕಾರವು ಕನ್ನಡ-ಇಂಗ್ಲಿಷ್ ನಿಘಂಟನ್ನು  ರಚಿಸುವ ಜವಾಬ್ದಾರಿಯನ್ನು ವಹಿಸಿತು. ನಿಘಂಟು ರಚನೆಗೆ ಮುಂಚೆ ಪ್ರಕಟವಾಗಿದ್ದ ರೆವರೆಂಡ್ ರೀವ್ ಸಿದ್ಧಪಡಿಸಿದ್ದ ನಿಘಂಟನ್ನು ಗಮನಿಸಿ ಅದರಲ್ಲಿದ್ದ ಲೋಪದೋಷಗಳನ್ನು ಪಟ್ಟಿ ಮಾಡಿಕೊಂಡು, ನ್ಯೂನತೆಗಳನ್ನು ಹೋಗಲಾಡಿಸುವ ದೃಷ್ಟಿಯಿಂದ ೨೫ ವರ್ಷಗಳ ಕಾಲ ನಿಘಂಟಿಗಾಗಿ ದುಡಿದರು. ನಿಘಂಟು ರಚನೆಯ ಕಾರ್ಯ ಪ್ರಾರಂಭಿಸಿದಾಗ ಪಂಡಿತರ ನೆರವು ಪಡೆಯುವುದರ ಜೊತೆಗೆ ಅವಿದ್ಯಾವಂತ, ಗ್ರಾಮೀಣ ಜನರ ನೆರವನ್ನು ಧಾರಳವಾಗಿ ಉಪಯೋಗಿಸಿಕೊಂಡರು. ಕನ್ನಡದ ಪ್ರಸಿದ್ಧ ಗ್ರಂಥಗಳಲ್ಲಿ, ಗಾದೆ ಮಾತುಗಳಲ್ಲಿ ಬರುವ ಪದಗಳನ್ನು ಅವುಗಳ ಅರ್ಥಗಳನ್ನು ಸಂಗ್ರಹಿಸಿ, ಪ್ರತಿ ಶಬ್ದದ ಉಚ್ಛಾರಣೆಯನ್ನು ಇಂಗ್ಲಿಷ್‌ನಲ್ಲಿ ನಮೂದಿಸಿದರು. ಅನಾರೋಗ್ಯದ ನಿಮಿತ್ತ ಜರ್ಮನಿಗೆ ತೆರಳಿದರೂ ನಿಘಂಟು ರಚನೆಯನ್ನು ಎಡೆಬಿಡದೆ ಮುಂದುವರೆಸಿ ೧೮೮೩ರಲ್ಲಿ ಭಾರತಕ್ಕೆ ಬಂದು ಪುನಃ ವಿದ್ವಾಂಸರೊಡನೆ ವಿಚಾರ ವಿನಿಮಯ ಮಾಡಿ ಕರಡು ಪ್ರತಿಯನ್ನು ಮಂಗಳೂರಿನ ಬಾಸೆಲ್ ಮಿಷನ್‌ಗೆ ಒಪ್ಪಿಸಿದರು. ೧೮೯೪ರಲ್ಲಿ ಎಪ್ಪತ್ತು ಸಾವಿರ ಪದಗಳ ಬೃಹತ್ ನಿಘಂಟು ಮುದ್ರಣಗೊಂಡು ಬಿಡುಗಡೆಯಾದಾಗ ಕಿಟೆಲ್‌ಗಾದ ಸಂತಸ ಅಷ್ಟಿಷ್ಟಲ್ಲ. ಇವರ ಅತಿ ಸಾಹಸದ ಈ ಮಹತ್ಕಾರ್ಯವನ್ನು ಗುರುತಿಸಿ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿ ಗೌರವಿಸಿತು. ಇದಲ್ಲದೆ ಕಿಟೆಲ್ಲರು ಸಂಪಾದಿಸಿದ ಇತರ ಕೃತಿಗಳೆಂದರೆ ಕರ್ನಾಟಕ ಕಾವ್ಯಮಾಲೆ, ಶಬ್ದಮಣಿ ದರ್ಪಣ, ಛಂದೋಂಬುಧಿ, ಹತ್ತನೆಯ ಶತಮಾನದಿಂದ ತಮ್ಮ ಕಾಲದವರೆಗೆ ಸಂಗ್ರಹಿಸಿ ರೂಪಿಸಿದ ಕನ್ನಡ ಸಾಹಿತ್ಯ ಚರಿತ್ರೆ, ಕಥಾಮಾಲೆ, ಕ್ರೈಸ್ತ ಸಭಾ ಚರಿತ್ರೆ ಮತ್ತು ಕನ್ನಡದ ಪ್ರೌಢವ್ಯಾಕರಣ ಮುಂತಾದವುಗಳು. ಕೆಲವು ದಶಕಗಳ ಬಳಿಕ ಕಿಟೆಲ್‌ರ ನಿಘಂಟು ದೊರೆಯುವುದು ದುರ್ಲಭ ಎನಿಸಿದಾಗ ಮದರಾಸು ವಿ.ವಿ.ದ ಕನ್ನಡ ವಿಭಾಗವು ಕನ್ನಡ ಆವೃತ್ತಿಯನ್ನು ೧೯೬೮ರಿಂದ ೧೯೭೧ರ ಅವಧಿಯಲ್ಲಿ ೪ ಸಂಪುಟಗಳಲ್ಲಿ ಪ್ರಕಟಿಸಿತು. ಇದನ್ನು ಏಷ್ಯನ್ ಎಜುಕೇಷನಲ್ ಸರ್ವೀಸಸ್ ಪ್ರಕಾಶಕರಿಂದ ೧೯೮೨ರಲ್ಲಿ ನಾಲ್ಕು ಸಂಪುಟಗಳನ್ನು ಸೇರಿಸಿ ಒಂದೇ ಬೃಹತ್ ಸಂಪುಟವಾಗಿ ಪ್ರಕಟವಾಯಿತು. ಈ ನಿಘಂಟಿನ ಇನ್ನೊಂದು ವಿಶೇಷವೆಂದರೆ ಕನ್ನಡ ಪದಗಳಿಗೆ ಸಂವಾದಿಯಾಗಿ ಇತರ ದ್ರಾವಿಡ ಭಾಷೆಗಳ ಪದಗಳನ್ನೂ ಸೂಚಿಸಿರುವುದಲ್ಲದೆ ಸಂಸ್ಕೃತ ಮತ್ತು ತದ್ಭವ ಪದಗಳಿಗೆ ಅರ್ಥವನ್ನೂ ಕೊಟ್ಟಿದೆ. ಇದು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ವಿದ್ವಾಂಸರಿಗೂ ಮಾರ್ಗದರ್ಶಿಯಾಗಿದೆ. ಹೀಗೆ ಕನ್ನಡಕ್ಕಾಗಿ ಜೀವಮಾನದುದ್ದಕ್ಕೂ ಶ್ರಮಿಸಿದ ಕಿಟೆಲ್‌ರವರ ಕೊನೆಯ ಕೃತಿ, ಇಂಗ್ಲಿಷಿನಲ್ಲಿ ಬರೆದಿರುವ ಕನ್ನಡ ವ್ಯಾಕರಣ (Grammer of the Kannada Language) ಪ್ರಕಟವಾದಾಗ (ಡಿಸೆಂಬರ ೧೮, ೧೯೦೩) ಅದನ್ನು ಕಣ್ಣಾರೆ ಕಂಡು ಮುಟ್ಟಿ ನೋಡಿ ಆನಂದಪರವಶವಾದರಂತೆ. ಸಾರ್ಥಕ ಜೀವನ ನಡೆಸಿದ ಕಿಟಲ್‌ರು ಮಾರನೆಯ ದಿನ ಡಿಸೆಂಬರ್ ೧೯ರಂದು ಜರ್ಮನಿಯಲ್ಲಿ ಕೊನೆಯುಸಿರೆಳೆದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top