ಬಳ್ಕೂರು ಸುಬ್ರಾಯ ಅಡಿಗ

Home/Birthday/ಬಳ್ಕೂರು ಸುಬ್ರಾಯ ಅಡಿಗ
Loading Events
This event has passed.

೧೭..೧೯೨೬ ಯಾವುದೇ ಪತ್ರಿಕೆಯನ್ನು ತೆರೆದರೂ ಹಿಂದಿಯ ಅನುವಾದ ಎಂಬುದನ್ನು ಕಂಡ ಕೂಡಲೇ ಲೇಖನದ ತಲೆಬರಹದ ಕೆಳಗೆ ಕಾಣುವ ಲೇಖಕರ ಹೆಸರು ‘ಬಳ್ಕೂರು ಸುಬ್ರಾಯ ಅಡಿಗ’ ಎಂಬುದು. ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಹಿಂದಿ ಭಾಷೆಯ ಸೊಗಡನ್ನು ಕನ್ನಡಿಗರಿಗೆ ಪರಿಚಯಿಸಿದ ಪ್ರಮುಖರಲ್ಲಿ ಒಬ್ಬರಾದ ಇವರು ಅನುವಾದಿಸಿದ ಲೇಖನಗಳ ಸಂಖ್ಯೆಯೂ ಅಪಾರ. ಮೂಲ ಲೇಖಕರ ಅನುಮತಿ ಪತ್ರೆಗಳೇ ಒಂದು ಪುಸ್ತಕ ಪ್ರಕಟಿಸುವಷ್ಟಿದೆ. ಇವರು ಅನುವಾದಿಸಿದ ಹಾಗೂ ಸ್ವತಂತ್ರ ಲೇಖನಗಳನ್ನು ಸವ್ಯಸಾಚಿ, ಲಲಿತಾಗ್ರಜ, ಕಮಲಾಸುತ, ಸನಾತನ, ಅನಾಮಿಕ, ಅನಂತ, ಅಜ್ಞಾತ ಮುಂತಾದ ಕಾವ್ಯಾನಾಮಗಳಿಂದ ನೂರಕ್ಕೂ ಹೆಚ್ಚು ಪತ್ರಿಕೆಗಳಿಗೆ ಬರೆದ ಲೇಖನಗಳು ಸಂಖ್ಯೆಯೇ ಹದಿನೈದು ಸಾವಿರದಷ್ಟಿದ್ದು ದಾಖಲೆಯನ್ನೇ ನಿರ್ಮಿಸಿದ್ದಾರೆ. ಆದರೆ ಎಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವ ಅದೃಷ್ಟ ಕಂಡಿಲ್ಲ. ಸುಬ್ರಾಯ ಅಡಿಗರು ಹುಟ್ಟಿದ್ದು ಬಳ್ಕೂರು ಎಂಬ ಸಣ್ಣ ಹಳ್ಳಿಯ ಆಲ್ಕೆರೆ ಎಂಬ ಮನೆಯಲ್ಲಿ ೧೯೨೬ರ ಮಾರ್ಚ್‌೧೭ರಂದು. ತಂದೆ ಲಕ್ಷ್ಮೀನಾರಾಯಣ ಅಡಿಗರು, ತಾಯಿ ಕಮಲಮ್ಮ. ಓದಿದ್ದು ಎಂಟನೆಯ ತರಗತಿಯ ವರೆಗೆ ಮಾತ್ರ. ಉಡುಪಿಯ ಸಂಸ್ಕೃತ ಕಾಲೇಜಿನಿಂದ ಎಂಟ್ರೆನ್ಸ್ ಪರೀಕ್ಷೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಾಣ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯವರು ನಡೆಸುವ ಪ್ರವೀಣ ಹಾಗೂ ಪ್ರಚಾರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಪಡೆದದ್ದು ಗುಲಬರ್ಗಾದಲ್ಲಿ ಒಂದು ವರ್ಷದ ಶಿಕ್ಷಕರ ತರಬೇತಿ. ಕುಂದಾಪುರದ ಗಂಗೊಳ್ಳಿ ಸರಸ್ವತಿ ವಿದ್ಯಾಮಂದಿರದಲ್ಲಿ ಹಿಂದಿ ಶಿಕ್ಷಕರಾಗಿ ೧೯೪೯ ರಿಂದ ೧೯೬೦ ರವರೆಗೆ ಸಲ್ಲಿಸಿದ ಸೇವೆ. ನಂತರ ೧೯೬೦ ರಲ್ಲಿ ಸೇರಿದ್ದು ಸೊಂಡೂರಿನ ಘೋರ್ಪಡೆಯವರು ನಡೆಸುತ್ತಿದ್ದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಪ್ರೌಢಶಾಲೆ. ೧೯೮೧ ರಲ್ಲಿ ನಿವೃತ್ತರಾದ ನಂತರ ಬಾಲಕಿಯರ ಪ್ರೌಢಶಾಲೆ ಪ್ರಾರಂಭವಾಗಿದ್ದು ಅದರಲ್ಲಿ ಅರೆಕಾಲಿಕ ಅಧ್ಯಾಪಕರಾಗಿ ಮತ್ತು ಘೋರ್ಪಡೆಯವರದೇ ಆದ ರೆಸಿಡೆನ್ಷಿಯಲ್ ಶಾಲೆಯಲ್ಲಿಯೂ ಅರೆಕಾಲಿಕ ಅಧ್ಯಾಪಕ ವೃತ್ತಿ. ಇಲ್ಲಿ ಬೋಧಿಸಿದ್ದು ಹಿಂದಿ, ಸಂಸ್ಕೃತ ಹಾಗೂ ಕನ್ನಡ. ಹದಿನೆಂಟರ ಹರೆಯದಿಂದಲೇ ಇವರು ಬರೆದ ಕೆಲ ಸಣ್ಣಕಥೆಗಳು, ಲೇಖನಗಳು ಪ್ರಕಟವಾಗ ತೊಡಗಿದವು. ಹಿಂದಿ ಭಾಷೆಯನ್ನು ಕಲಿತ ನಂತರ ಆ ಭಾಷೆಯ ಸೊಗಸಿಗೆ ಮಾರು ಹೋಗಿ ಅನುವಾದವನ್ನು ಪ್ರಾರಂಭಿಸಿದರು. ಇವರು ಬರೆದ ಲೇಖನಗಳು ೧೯೫೦-೬೦ ರ ದಶಕದಲ್ಲೇ ಪ್ರಾರಂಭವಾಗಿದ್ದ ಬಾಲಚಂದ್ರ, ಅಂತರಂಗ, ಧುರೀಣ, ಭವ್ಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದರೂ ಬಹುಪಾಲು ಲೇಖನಗಳು ಪ್ರಕಟಗೊಂಡಿದ್ದು ಪ್ರಜಾಮತ, ಪಂಚಾಮೃತ, ಯುಗಪುರುಷ, ವಿನೋದ, ಕರ್ಮವೀರ, ಕಸ್ತೂರಿ, ಸುಧಾ, ತರಂಗ, ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ. ಮೊಟ್ಟಮೊದಲು ಪ್ರಕಟವಾದ ಕೃತಿಗಳು – ಮಂಗಳೂರಿನ ಒಂದಾಣೆ ಮಾಲೆಯಲ್ಲಿ. ಆಭರಣದ ಪೆಟ್ಟಿಗೆ ಮತ್ತು ಇತರ ಕಥೆಗಳು, ಗೃಹ ವೈದ್ಯ, ಪರಿವರ್ತನೆ ಮತ್ತು ಇತರ ಕಥೆಗಳು, ಕೆಲವು ಉಪಯುಕ್ತ ಸಲಹೆಗಳು, ಕರುಣೆ ಮತ್ತು ಇತರ ಕಥೆಗಳು, ಅಕ್ಬರ್ ಬೀರಬಲ್‌ ಪ್ರಶ್ನೋತ್ತರ, ಶರಾಬಿನ ಪೀಪಾಯಿಗಳು, ಅರಳಿದ ನಗು ಮುಂತಾದವುಗಳು. ಬಸ್ರೂರಿನಿಂದ ಇವರು ಪ್ರಕಟಿಸಿದ ಸ್ವತಂತ್ರ ಕಥೆಗಳ ಸಂಗ್ರಹ ‘ಕಣ್ಣರಿತ ಭಾವ’, ‘ಜೀವನಕಲೆ’, ‘ಜೀವನದರ್ಶನ’, ‘ಮಧುರನೀತಿ ಕಥೆಗಳು’ ಮುಂತಾದವುಗಳು. ಇದರಲ್ಲಿ ಮಧುರ ನೀತಿಕಥೆಗಳು ಅನುವಾದಿತ ಕಿರುಗತೆಗಳ ಸಂಗ್ರಹ. ಇನ್ನೂ ಹಲವಾರು ಪುಸ್ತಕಗಳು ಪ್ರಕಟಗೊಂಡಿದ್ದರೂ ಪ್ರತಿಗಳು ದೊರೆಯದೆ ವಯಸ್ಸಿನ ಕಾರಣದಿಂದಾಗಿ ಪುಸ್ತಕದ ಹೆಸರುಗಳು ‘ಮರೆವೆ’ಯಲ್ಲಿ ಸೇರಿ ಹೋಗಿವೆ. ಹೀಗೆ ಬರವಣಿಗೆಯ ಕ್ರಿಯಾಶೀಲತೆಯಲ್ಲಿಯೇ ತೊಡಗಿಸಿಕೊಂಡಿದ್ದ ಸುಬ್ರಾಯ ಅಡಿಗರಿಗೆ ಸಂಡೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಬೆಂಗಳೂರಿನ ವಿನೋದ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಸನ್ಮಾನ, ೧೯೯೮ ರಲ್ಲಿ ಬಸ್ರೂರಿನಲ್ಲಿ ನಡೆದ ಕುಂದಾಪುರ ತಾಲ್ಲೂಕು ೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೨೦೦೪ ರಲ್ಲಿ ನಡೆದ ಸೊಂಡೂರು ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಕಿನ್ನಿಗೋಳಿಯ ‘ಯುಗಪುರುಷ’ ಮಾಸಪತ್ರಿಕೆಯ ಕೊ. ಆ. ಉಡುಪ ಪ್ರಶಸ್ತಿ, ೨೦೦೯ ರಲ್ಲಿ ಪೇಜಾವರ ಶ್ರೀಗಳಿಂದ ‘ರಾಮವಿಠಲ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top