ಬಸವಪ್ಪ ಶಾಸ್ತ್ರೀ

Home/Birthday/ಬಸವಪ್ಪ ಶಾಸ್ತ್ರೀ
Loading Events
This event has passed.

೦೨.೦.೧೮೪೩ ೧೮೯೧ ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ‘ಅಭಿನವ ಕಾಳಿದಾಸ’ ಎಂಬ ಬಿರುದು ಪಡೆದ ಬಸವಪ್ಪ ಶಾಸ್ತ್ರಿಗಳು ಹುಟ್ಟಿದ್ದು ೧೮೪೩ರ ಮೇ ೨ರಂದು. ತಂದೆ ಮಹದೇವ ಶಾಸ್ತ್ರಿಗಳು, ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಪುರೋಹಿತರಾಗಿದ್ದವರು. ತಾಯಿ ಬಸವಂಬಿಕೆ. ತಾತನವರು (ತಂದೆಯ ತಂದೆ) ಇಂದಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನರಸಂದ್ರ (ನಾರುಸಂದ್ರ) ಗ್ರಾಮದ ರುದ್ರಾಕ್ಷಿ ಮಠಾಧ್ಯಕ್ಷರಾಗಿದ್ದ ಮುರುಡು ಬಸವಸ್ವಾಮಿಗಳು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದು, ಮತ್ತೊಬ್ಬ ಆಸ್ಥಾನ ವಿದ್ವಾಂಸರಾಗಿದ್ದ ಗರಳಪುರಿ ಶಾಸ್ತ್ರಿಗಳಲ್ಲಿ ವ್ಯಾಸಂಗ ಮಾಡಲು ಅನುಕೂಲ ದೊರೆಯಿತು. ಸಂಸ್ಕೃತ, ಕನ್ನಡ ಭಾಷೆಗಳಲ್ಲಿದೆ ಸಂಗೀತ, ವೇದಾಂತ ಮುಂತಾದ ದರ್ಶನ ಶಾಸ್ತ್ರಗಳಲ್ಲಿಯೂ ಪರಿಣತರಾದರು. ತಮ್ಮ ೧೮ ನೆಯ ವಯಸ್ಸಿನಲ್ಲಿಯೇ ‘ಕೃಷ್ಣಾಭ್ಯುದಯ’ ಎಂಬ ಕಾವ್ಯ ಮತ್ತು ‘ಬಿಲ್ವವೃಕ್ಷ ಪೂಜಾವಿಧಿ’ಯನ್ನೂ ಸಂಸ್ಕೃತದಲ್ಲಿ ರಚಿಸಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅರ್ಪಿಸಿದಾಗ, ಇದರಿಂದ ಸಂತೋಷಭರಿತರಾದ ಅರಸರು ಆಸ್ಥಾನ ಪುರೋಹಿತರಾಗಿ ನೇಮಕಮಾಡಿದರು. ಇವರಲ್ಲಿದ್ದ ಆಶುಕವಿತ್ವ, ಕಾವ್ಯವಾಚನಗಳಿಂದ ಆಸ್ಥಾನ ಕವಿ ಗೋಷ್ಠಿಗಳಲ್ಲಿಯೂ ಸ್ಥಾನ ಪಡೆದುಕೊಂಡರು. ಹಳೆಗನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯ ಅದರಲ್ಲೂ ಸಂಸ್ಕೃತ ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿ, ಅನೇಕ ಸಂಸ್ಕೃತ ನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದರು. ಅವುಗಳಲ್ಲಿ ಶಾಕುಂತಲ, ವಿಕ್ರಮೋರ್ವಶೀಯ, ಉತ್ತರ ರಾಮಚರಿತ, ಮಾಲತೀಮಾಧವ, ರತ್ನಾವಳಿ ಮತ್ತು ಭರ್ತೃಹರಿಯ ಶತಕತ್ರಯ ಮುಂತಾದವುಗಳು, ಸಂಸ್ಕೃತದ ಭಾಷಾಂತರಗಳಿಗೆ ದಿವಾನ್‌ ರಂಗಾಚಾರ್ಲು ಮತ್ತು ಅಂಬಿಲ್‌ ನರಸಿಂಹಯ್ಯಂಗಾರ್ಯರು ಪ್ರೋತ್ಸಾಹ ನೀಡಿದರೆ, ಸಿ. ಸುಬ್ಬರಾಯರ ಸಹಾಯದಿಂದ ಶೇಕ್ಸಪಿಯರನ ಒಥೆಲೊ ನಾಟಕವನ್ನು ‘ಶೂರಸೇನಚರಿತ’ ಎಂಬ ಹೆಸರಿನಿಂದ ಭಾಷಾಂತರಿಸಿದರು. ಚಂಡ ಕೌಶಿಕ ಎಂಬ ನಾಟಕದ ಅನುವಾದವನ್ನು ಪ್ರಾರಂಭಿಸಿದರಾದರೂ ಪೂರ್ಣಗೊಳ್ಳುವ ಮೊದಲೇ ನಿಧನರಾದ್ದರಿಂದ ಈ ನಾಟಕವನ್ನು ದೇವಶಿಖಾಮಣಿ ಅಳಸಿಂಗಾಚಾರ್ಯರು (ಶ್ರೀಮದ್ರಾಮಾಯಣ, ಮಹಾಭಾರತ, ಭಾಗವತಗಳನ್ನು ಗದ್ಯ ರೂಪದಲ್ಲಿ ಭಾಷಾಂತರಿಸಿದವರು, ೧೮೭೭-೧೯೪೦) ಪೂರ್ಣಗೊಳಿಸಿದರು. ಬಸವಪ್ಪ ಶಾಸ್ತ್ರಿಗಳು ಕನ್ನಡದಲ್ಲಿ ರಚಿಸಿರುವ ಸ್ವತಂತ್ರ ಕೃತಿಗಳೆಂದರೆ ಸಾವಿತ್ರಿ ಚರಿತ್ರೆ (ಭಾಮಿನೀ ಷಟ್ಪದಿ), ದಮಯಂತಿ ಸ್ವಯಂವರ (ಚಂಪೂ), ನೀತಿಸಾರಸಂಗ್ರಹ (ಕಂದ) ಮುಂತಾದವುಗಳಾದರೆ ಆರ್ಯಶತಕಮ್‌, ಶಿವಭಕ್ತಿಸುಧಾ ತರಂಗಿಣೀ, ಶಿವಾಷ್ಟಕಮ್‌, ಶಾರದಾ ದಂಡಕಮ್‌ ಮತ್ತು ತ್ರಿಷಷ್ಠಿ ಪುರಾತನಸ್ತವ ಮುಂತಾದ ಸಂಸ್ಕೃತ ಗ್ರಂಥಗಳು. ಸಂಸ್ಕೃತದ ಮೂಲ ಸೌಂದರ್ಯ, ಲಾಲಿತ್ಯ, ಕಾವ್ಯಗುಣಗಳ ಸೊಗಡನ್ನೂ ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸಿ ರಚಿಸಿದ ‘ಶಾಕುಂತಲ’ ನಾಟಕವು (೧೮೮೩) ಶಾಸ್ತ್ರಿಗಳಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ನಾಟಕ. ಆಸ್ಥಾನ ಪಂಡಿತರಿಂದ ಕೃತಿಗೆ ಮನ್ನಣೆ ದೊರೆತದ್ದಲ್ಲದೆ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ‘ಅಭಿನವ ಕಾಳಿದಾಸ’ ಎಂಬ ಬಿರುದನ್ನು ಪಡೆದರು. ಇವರು ಬರೆದ ಅನೇಕ ನಾಟಕಗಳು ‘ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ’ ಎಂಬ ನಾಟಕ ಕಂಪನಿಯು ರಂಗದ ಮೇಲೂ ಯಶಸ್ವಿಯಾಗಿ ಪ್ರದರ್ಶನಕಂಡವು. ಇವರು ಆಸ್ಥಾನ ಪುರೋಹಿತರಾಗಿದ್ದಾಗ ಚಾಮರಾಜ ಒಡೆಯರಿಗೆ ವಿದ್ಯಾಗುರುಗಳಾಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ ಖಾಸಾ ಊಳಿಗದವರಾಗಿದ್ದ ಜಟ್ಟಿ ದಾಸಪ್ಪನವರ ಪುತ್ರಿ ಭರತನಾಟ್ಯ ಪ್ರವೀಣೆ, ಸಂಗೀತ ವಿದುಷಿ ಜಟ್ಟಿ ತಾಯಮ್ಮನವರಿಗೂ ಗುರುಗಳಾಗಿದ್ದರು. ಒಮ್ಮೆ ವಾಯುವಿಹಾರಕ್ಕೆಂದು ಕುದುರೆಗಾಡಿಯಲ್ಲಿ ಹೊರಟ ಬಸವಪ್ಪ ಶಾಸ್ತ್ರಿಗಳು ಅಪಘಾತಕ್ಕೀಡಾಗಿ ೧೮೯೧ರ ಫೆಬ್ರವರಿಯಲ್ಲಿ ತೀರಿಕೊಂಡರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top