ಬಾಗಲೋಡಿ ದೇವರಾಯರು

Home/Birthday/ಬಾಗಲೋಡಿ ದೇವರಾಯರು
Loading Events
This event has passed.

೨೮..೧೯೨೭ ೨೫..೧೯೮೫ ಭಾಷಾಧ್ಯಾಯಿ, ಅದರಲ್ಲೂ ಇಂಗ್ಲಿಷ್‌ ಭಾಷೆಯ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದ ದೇವರಾಯರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮಾಡಿಯಲ್ಲಿ. ಫೆಬ್ರವರಿ ೨೮ ರ ೧೯೨೭ರಲ್ಲಿ. ತಂದೆ ಬಾಗಲೋಡಿ ಕೃಷ್ಣರಾಯರು. ಪ್ರೌಢಶಾಲೆಗೆ ಸೇರಿದ್ದು ಮಂಗಳೂರಿನ ಗಣಪತಿ ಹೈಸ್ಕೂಲು. ಆಟದಲ್ಲಿ  ಹಿಂದಿದ್ದರೂ ಸಾಹಿತ್ಯ ಚಟುವಟಿಕೆಯ ಬಹುಮಾನಗಳೆಲ್ಲವೂ ಇವರಿಗೆ. ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌. ಇಂಟರ್ ಮೀಡಿಯೆಟ್‌ನಲ್ಲಿ ಓದುತ್ತಿದ್ದಾಗಲೇ ಇಂಗ್ಲಿಷ್‌ನಲ್ಲಿ ಪ್ರೌಢ ಪ್ರಬಂಧ ಬರೆದು, ಅಧ್ಯಾಪಕರಾಗಿದ್ದ ಫಾದರ್ ಸಿಕ್ವೇರಾ ಎನ್ನುವವರಿಂದ ಶಹಭಾಶ್‌ ಗಿರಿ ಪಡೆದ ವಿದ್ಯಾರ್ಥಿ. ಇವರ ಅತಿ ಸಲುಗೆಯ ಸ್ನೇಹಿತರೆಂದರೆ ಸಾಹಿತಿ ಕು.ಶಿ. ಹರಿದಾಸಭಟ್ಟರು ಮತ್ತು ವೈಜ್ಞಾನಿಕ ಕೃತಿಗಳ ಕರ್ತೃ, ಗಣಿತೋಪಾನ್ಯಾಸಕರಾಗಿದ್ದ ಜಿ.ಟಿ. ನಾರಾಯಣ ರಾವ್‌ ಮತ್ತು ಸೇವನಮಿರಾಜಮಲ್ಲ. ಇಂಗ್ಲಿಷ್‌ ಆನರ್ಸ್‌ಗೆ ಸೇರಿದ್ದು ಮದರಾಸಿನ ಕ್ರಿಶ್ಚಿಯನ್‌ ಕಾಲೇಜು. ಮದರಾಸು ಸೇರಿದ ನಂತರ ವಿಶ್ವವಿದ್ಯಾಲಯ ನಡೆಸುತ್ತಿದ್ದ ಫ್ರೆಂಚ್‌, ಜರ್ಮನ್‌ ಮುಂತಾದ ಭಾಷೆಗಳ ಬಗ್ಗೆಯೂ ಆಸಕ್ತಿಯ ಕಲಿಕೆ. ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಬಿ.ಎ. (ಆನರ್ಸ್). ಇಡೀ ಮದರಾಸು ವಿಶ್ವವಿದ್ಯಾಲಯಕ್ಕೆ ಮೊದಲ ರ್ಯಾಂಕನಿಂದ ಪದವಿ ಪಡೆದ ನಂತರ ಅದೇ ಕಾಲೇಜಿನಲ್ಲಿ ಟ್ಯೂಟರ್ ಆಗಿ, ಕಾರೈಕುಡಿಯ ಅಲಗಪ್ಪ ಕಾಲೇಜು ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ತಮ್ಮ ಪಾಂಡಿತ್ಯ, ವಾಗ್ಮಿತೆಗಳಿಂದ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕರು. ಈ ಸಂದರ್ಭದಲ್ಲಿ ಭಾರತ ಸರಕಾರ ನಡೆಸುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯಾದ ಐ.ಎಫ್‌.ಎಸ್‌ (INDIAN FOREIGN SERVICE) ನಲ್ಲಿ ಎಂಟನೆಯ ರ್ಯಾಂಕ್‌ ಪಡೆದು ಆಯ್ಕೆಯಾಗಿ ಸೇರಿದ್ದು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರ ಇಲಾಖೆ, ತಮ್ಮ ಮೂವತ್ತು ನಾಲ್ಕೂ ವರ್ಷಗಳ ಸೇವೆಯ ರಾಜತಾಂತ್ರಿಕ ಜೀವನದಲ್ಲಿ (೧೯೪೯-೧೯೮೪) ರಷ್ಯ, ಇಟಲಿ, ನೈಜೀರಿಯಾ, ನೇಪಾಳ, ಫಿಲಿಫೈನ್ಸ್‌, ಲಾವೋಸ್‌, ನ್ಯೂಜಿಲೆಂಡ್‌, ಬಲ್ಗೇರಿಯಾ ಮುಂತಾದ ದೇಶಗಳನ್ನು ಸುತ್ತಿ ಹೋದೆಡೆಯಲ್ಲೆಲ್ಲಾ ತಮ್ಮ ನಯ, ವಿನಯ, ಭಾಷಾಜ್ಞಾನ, ಹಾಗೂ ಮಾತುಗಾರಿಕೆಯಿಂದ ವಿದೇಶಿಯರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ರಾಜ ತಾಂತ್ರಿಕ ಹುದ್ದೆ ದೊರೆತಾಗಲೇ ಮಾಸ್ತಿಯವರು ‘ಭಾರತ ಸರ್ಕಾರದ ಉನ್ನತ ಹುದ್ದೆಗೆ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರೆ, ಇದು ಕನ್ನಡಕ್ಕೆ ದೊರೆತ ಸಂತಸ’ ಎಂದು ಹಾರೈಸಿದರು. ದೇವರಾಯರು ಮದರಾಸಿನ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಮಾಸ್ತಿಯವರೊಮ್ಮೆ ಒಂದು ಸಮಾರಂಭದ ಪ್ರಯುಕ್ತ ಅದೇ ಕಾಲೇಜಿಗೆ ಹೋಗಿದ್ದಾಗ ದೇವರಾಯರನ್ನೂ ಭೇಟಿಮಾಡಿ, ತಮ್ಮ ‘ಜೀವನ’ ಪತ್ರಿಕೆಗೂ ಕಥೆಗಳನ್ನು ಬರೆಯುವಂತೆ ಆಹ್ವಾನಿಸಿದರು. ಮಾಸ್ತಿಯವರ ಅಪೇಕ್ಷೆಯಂತೆ ದೇವರಾಯರು ಬರೆದು ಕಳುಹಿಸಿದ ಕಥೆ ‘ಶುದ್ಧ ಫಟಿಂಗ’. ಇದನ್ನು ಮೆಚ್ಚಿ ಜೀವನ ಪತ್ರಿಕೆಯಲ್ಲಿ ಪ್ರಕಟಿಸಿದರು. ನಂತರವೂ ಹಲವಾರು ಕಥೆಗಳು ಜೀವನ ಪತ್ರಿಕೆಯಲ್ಲಿ ಪ್ರಕಟಗೊಂಡವು. ಸೊಗಸಾದ ಕಥೆಗಳನ್ನು ಗಮನಿಸಿದ ಮಾಸ್ತಿಯವರು ಸಂಕಲನವೊಂದರ ಅಗತ್ಯವನ್ನು ಮನಗಂಡು ಅಷ್ಟರಲ್ಲಿ ಪ್ರಕಟವಾಗಿದ್ದ ಏಳು ಕಥೆಗಳನ್ನೂ ಸೇರಿಸಿ ‘ಹುಚ್ಚು ಮುನಸೀಫ’ ಎಂಬ ಸಂಕಲನವನ್ನು ಹೊರತಂದರು (ಜೀವನ ಕಾರ್ಯಾಲಯ, ಬೆಂಗಳೂರು-೧೯೪೯. ಅಷ್ಟ ಕಿರೀಟಾಕಾರದ ನೂರೊಂದು ಪುಟಗಳು) ನಾಲ್ಕು ವರುಷಗಳ ನಂತರ ೧೯೫೩ರಲ್ಲಿ ಇನ್ನೂ ಏಳು ಕಥೆಗಳು ಸೇರಿ ‘ಆರಾಧನಾ’ ಎಂಬ ಸಂಕಲನವು ಪ್ರಕಟವಾಯಿತು. (ವಸಂತ ಪ್ರೇಮ ಮಂಡಲಿ, ಮಂಗಳೂರು-೧೯ ೫೩, ಅಷ್ಟ ಕಿರೀಟಾಕಾರದ ೯೬ ಪುಟಗಳು). ಮೂರನೆಯ ಸಂಕಲನ ರುದ್ರಪ್ಪನ ರೌದ್ರ ಮತ್ತು ಇತರ ಕಥೆಗಳು. ಕನ್ನಡ ಪುಸ್ತಕ ಪ್ರಾಧಿಕಾರವು ‘ಬಾಗಲೋಡಿದೇವರಾಯರ ಆಯ್ದ ಕಥೆಗಳು’ ಎಂಬ ಸಂಕಲನವನ್ನು ೧೯೯೪ರಲ್ಲಿ ಹೊರತಂದಿದೆ. ನಂತರ ‘ಬಾಗಲೋಡಿ ದೇವರಾಯರ ಸಮಗ್ರ ಕಥೆಗಳು’ ಪ್ರಿಸಂ ಬುಕ್ಸ್‌ ಪ್ರೈ.ಲಿ., ೨೦೦೦ದಲ್ಲಿ ಪ್ರಕಟಿಸಿದ್ದಾರೆ. ದೇವರಾಯರ ಕಥೆಗಳ ಬಗ್ಗೆ ವಿಶ್ಲೇಷಿಸುತ್ತಾ ಕಥನ ಪದ್ಧತಿ, ಉಚಿತ ಶೈಲಿ, ರಸಸಿದ್ಧಿಗಳಲಿಂದ ನಿರಾಯಾಸವಾಗಿ ಓದಿಸಿಕೊಂಡು ಹೋಗುವ ಕಥೆಗಳೆಂದಿದ್ದಾರೆ ಮಾಸ್ತಿಯವರು. ಆದರೆ ದೇವರಾಯರು ನನ್ನ ಕಥೆಗಳೆಲ್ಲವೂ ದೇವರು, ಧರ್ಮ, ಮನುಷ್ಯ, ಜೀವನ ಮತ್ತು ಮರಣ ಎಂಬ ಐದು ಪರಮ ತತ್ತ್ವದ ಮೇಲೆ ನಿಂತಿದೆ ಎಂದಿದ್ದಾರೆ. ವಿದೇಶಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ಆರೋಗ್ಯ ಕುಸಿದು ಮಾನಸಿಕವಾಗಿ ಜರ್ಝರಿತರಾದಾಗ “ಧರ್ಮ-ಭಕ್ತಿ-ನಂಬಿಕೆಗಳ ಬಗ್ಗೆ ಮೃದು ಭರ್ತ್ಸನೆ ಮಾಡಿದ್ದೆ. ಆ ಕಾಲದಲ್ಲಿ ಆನಾತೊಲ್‌ ಫ್ರಾಂಸ್‌ ನಂತೆ ನಿರೀಶ್ವರವಾದಿ ಎಂಬ ಒಣ ಜಂಭದಿಂದ ನಟಿಸುತ್ತಿದ್ದೆ. ಭಗವಂತನ ಮುನಿಸಿನ ಪೆಟ್ಟು ತಿಂದು ಹಣ್ಣಾಗಿದ್ದೇನೆ. ದೇವರ ಭಯವುಂಟಾಗಿದೆ-ಜ್ಞಾನದ ಆರಂಭ ಆಗಿದೆಯೋ ಏನೋ? “ನ್ಯಾಯಬೇಡ; ಕರುಣೆ ಇರಲಿ” ಎಂಬ ಅನಾತೊಲ್‌ ಫ್ರಾಂಸ್‌ನ ಮಾತುಗಳು ದೇವರಾಯರಿಗೆ ಪ್ರಿಯವಾಗಿತ್ತು (ಹಾ.ಮಾ.ನಾ. ರವರ ಪುಸ್ತಕದ ಸಾಲುಗಳು). ಪವಾಡ ಸದೃಶ ರೀತಿಯಲ್ಲಿ ಗುಣವಾಗಿ ಪುನಃ ವಿದೇಶಾಂಗ ಇಲಾಖೆ ಸೇರಿದರು. ಇವರ ನಿವೃತ್ತಿಯ ಜೀವನದಲ್ಲಿ ಮತ್ತಷ್ಟು ಒಳ್ಳೆಯ ಕಥೆಗಳನ್ನು ಅವರೇ ಹೇಳಿಕೊಂಡಂತೆ ಐತಿಹಾಸಿಕ ಕಾದಂಬರಿಯೊಂದನ್ನು ನಿರೀಕ್ಷಿಸುತ್ತಿದ್ದವರಿಗೆ ನಿರಾಸೆಯನ್ನುಂಟುಮಾಡಿ ಕಾಲನ ಕರೆಗೆ ಓಗೊಟ್ಟಿದ್ದು ತಾ. ೨೫.೭.೧೯೮೫ರಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top