ಬಿದರಹಳ್ಳಿ ನರಸಿಂಹಮೂರ್ತಿ

Home/Birthday/ಬಿದರಹಳ್ಳಿ ನರಸಿಂಹಮೂರ್ತಿ
Loading Events
This event has passed.

೦೫..೧೯೫೦ ನವ್ಯ ಕಥೆಗಳ ಮೂಲಕ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಬಿದರಹಳ್ಳಿ ನರಸಿಂಹಮೂರ್ತಿಯವರು ಕಥೆಗಾರರಾಗಿ ಅಷ್ಟೇ ಅಲ್ಲದೆ ವಿಮರ್ಶಾ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ನರಸಿಂಹಮೂರ್ತಿಯವರು ಹುಟ್ಟಿದ್ದು ಹೊಳೆಹೊನ್ನೂರಿನಲ್ಲಿ ೧೯೫೦ರ ಫೆಬ್ರವರಿ ೫ ರಂದು. ತಂದೆ ಟಿ. ರಘುಪತಿ ಆಚಾರ್, ತಾಯಿ ಫಲ್ಗೂಬಾಯಿ (ಬಿ. ಸೀತಾಬಾಯಿ). ಬಿದರಹಳ್ಳಿ-ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿರುವ ಹಳ್ಳಿ, ಇವರ ವಂಶಸ್ಥರ ಮೂಲ ಸ್ಥಳ. ಪ್ರಾರಂಭಿಕ ಶಿಕ್ಷಣ ಹೊನ್ನಾಳಿ, ಶಿಕಾರಿಪುರ ಮತ್ತು ಸಾಗರ. ಶಿವಮೊಗ್ಗ ಕಾಲೇಜಿನಿಂದ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಬೋಧಕ ವೃತ್ತಿಗೆ ಸೇರಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದುದು ಶಿವಮೊಗ್ಗ, ಶಿಕಾರಿಪುರ, ಮೇಗರವಳ್ಳಿ, ಕಲ್ಲೀಹಾಳ್‌, ಭದ್ರಾವತಿ ಮತ್ತು ನ್ಯಾಮತಿ-ಕಾಲೇಜುಗಳಲ್ಲಿ. ಪ್ರಾಂಶುಪಾಲರಾಗಿ ಕುಂದೂರು, ಕೂಲಂಬಿ, ಹಾಗೂ ಹೊನ್ನಾಳಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು. ಕಾಲೇಜು ದಿನಗಳಿಂದಲೇ ಕಾವ್ಯಾಭ್ಯಾಸಿಯಾಗಿದ್ದು ಬರೆದ ಹಲವಾರು ಕವನಗಳು ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಮೊದಲ ಕವನ ಸಂಕಲನ ‘ಕಾಡಿನೊಳಗಿದೆ ಜೀವ’ (೧೯೭೯) ಪ್ರಕಟಿತ. ನಂತರ ‘ಸೂರ್ಯದಂಡೆ’ (೧೯೯೬), ಅಕ್ಕೀಕಾಳು ನಕ್ಕಿತಮ್ಮಾ (೨೦೦೧), ಭಾವಕ್ಷೀರ (೨೦೦೬) ಮುಂತಾದವುಗಳು ಪ್ರಕಟಗೊಂಡಿವೆ. ಕವನ ಕಟ್ಟುವ ಕಲೆಯಂತೆ ಸಣ್ಣ ಕಥಾ ಕ್ಷೇತ್ರದಲ್ಲೂ ಬರೆದದ್ದು ಹಲವಾರು ವಿಶಿಷ್ಟ ಕಥೆಗಳು. ಶಿಶುಕಂಡ ಕನಸು (೧೯೯೫, ೨೦೦೫), ಹಂಸೆ ಹಾರಿತ್ತು (೨೦೦೦, ೨೦೧೦) ಎಂಬ ಎರಡು ಸಂಕಲನಗಳು ಮರು ಮುದ್ರಣಗೊಂಡಿವೆ. ‘ಹೊಳೆ ಮಕ್ಕಳು’ ೨೦೧೧ರಲ್ಲಿ ಪ್ರಕಟಗೊಂಡ ಕಾದಂಬರಿ. ಇದಲ್ಲದೆ ಮಹಾಗಾರುಡಿ (೨೦೦೯) ನಾಟಕ; ಕಡಲಂತೆ ಕಾರಂತ (೧೯೯೭,೨೦೧೧), ಅರಿವಲಗು (೨೦೦೨), ಶಿವಶಕ್ತಿ ಸಂಪುಟ (೨೦೧೧), ವಿಸ್ತರಿಸುವ ವರ್ತುಲ (೨೦೧೧) ಮುಂತಾದ ವಿಮರ್ಶಾ ಕೃತಿಗಳು ಸಾಹಿತ್ಯಾಸಕ್ತರ ಗಮನ ಸೆಳೆದಿವೆ. ಇವರ ಪ್ರವಾಸಾನುಭವ ಕೃತಿ ಹೇಮಕುಂಡ ಮತ್ತು ಹಿಮಲಿಂಗ (೨೦೧೧), ಗಾಲಿಬ್‌ ವ್ಯಕ್ತಿತ್ವ ಮತ್ತು ಯುಗಾಂತ ಕೃತಿಗಳು ಇಂಗ್ಲಿಷ್‌ನಿಂದ ಅನುವಾದಗೊಂಡಿವೆ. ಇವಲ್ಲದೆ ಮಾರ್ಕ್ವಿಸ್‌ ವಾಚಿಕೆ (ನೊಬೆಲ್‌ ಮಾಲಿಕೆ) (೧೯೯೭); ಬಾಲಮಹಾಂತ (ತತ್ತ್ವಪದಗಳು), ಅನುಭವಾಮೃತ (ಮಹಲಿಂಗರಂಗ), ನ್ಯಾಮತಿ ಪಂಡಿತ ಪ್ರಭಣ್ಣನವರ ನಿಘಂಟು ಮುಂತಾದವು ಸಂಪಾದಿತ ಕೃತಿಗಳು. ಶಿಶುಕಂಡ ಕನಸು ಮತ್ತು ಹಂಸೆ ಹಾರಿತ್ತು ಕಥಾ ಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ (೧೯೯೩, ೨೦೦೦) ಎರಡು ಬಾರಿ ಸಂದಿದೆ. ಶಿವಾನಂದ ಪಾಟೀಲ್‌ ಪ್ರಶಸ್ತಿ, ಮಹಲಿಂಗರಂಗ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top