೯-೩-೧೯೪೧ ಕಥೆಗಾರ, ಕಾದಂಬರಿಕಾರ ಬಿಳುಮನೆ ರಾಮದಾಸರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿಳುಮನೆ ಎಂಬ ಗ್ರಾಮದಲ್ಲಿ. ತಂದೆ ಚಿನ್ನಪ್ಪಗೌಡರು, ತಾಯಿ ಗಂಗಮ್ಮ. ಚಿನ್ನಪ್ಪಗೌಡರು ತೀರ್ಥಹಳ್ಳಿ, ಆಗುಂಬೆಯ ನಡುವಿನ ಹೆದ್ದಾರಿಯಲ್ಲಿ ಸಿಗುವ ಮೇಗರವಳ್ಳಿಯಲ್ಲಿ ಜವಳಿ ವ್ಯಾಪಾರಿಗಳು. ಬಾಲಕ ರಾಮದಾಸರಿಗೆ ಸ್ವಾಭಾವಿಕವಾಗಿ ತಂದೆಯ ಕಣ್ಣಳತೆಯಲ್ಲೇ ಮೇಗರವಳ್ಳಿ ಶಾಲೆಯಲ್ಲಿ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ವಿದ್ಯಾಭ್ಯಾಸ. ನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಓದು. ಆರ್ಥಿಕ ಸಂಕಷ್ಟಕ್ಕೊಳಗಾದ್ದರಿಂದ ರಾಮದಾಸರ ವಿದ್ಯಾಭ್ಯಾಸ ಸ್ಥಗಿತ. ಬಿಡುವಿನ ವೇಳೆಯಲ್ಲಿ ತಂದೆಗಂಟಿದ್ದ ಓದಿನ ಚಟ ಮಗನಿಗೂ. ಓದಿದ್ದು ಅನಕೃ, ತರಾಸು, ಕಟ್ಟೀಮನಿ, ನಿರಂಜನ ಮುಂತಾದವರ ಬರಹಗಳು. ಕುವೆಂಪುರವರ ಬಾಲ್ಯದ ಗೆಳೆಯ ರಾಮಪ್ಪ ಗೌಡರು ಕಾನೂರು ಹೆಗ್ಗಡತಿ ಕಾದಂಬರಿ ಕೊಟ್ಟು ಓದಲು ಪ್ರಚೋದನೆ. ಬೆಳೆದ ಸಾಹಿತ್ಯಾಸಕ್ತಿಯಿಂದ ಬರೆದ ಕತೆಗಳು. ಜನಪ್ರಗತಿ, ಪ್ರಜಾಮತ, ಸುಧಾ, ಪ್ರಜಾವಾಣಿ ಪತ್ರಿಕೆಗಳಿಗೆ ಬರೆದ ಕತೆ ಪ್ರಕಟ. ಜನಪ್ರಗತಿ ದೀಪಾವಳಿ ಸಂಚಿಕೆಗಾಗಿ ಬರೆದ ಕಿರು ಕಾದಂಬರಿ ಮರಳಿನ ಮನೆ ಪ್ರಕಟಿತ. ಉದ್ಯೋಗದ ಬೇಟೆ ಪ್ರಾರಂಭ. ಸೇರಿದ್ದು ವಾಣಿಜ್ಯ ತೆರಿಗೆ ಇಲಾಖೆಯ ಗುಮಾಸ್ತರ ಹುದ್ದೆಗಾಗಿ. ಶೂದ್ರ ಶ್ರೀನಿವಾಸರ ಒತ್ತಾಯದ ಮೇರೆಗೆ ಮಲೆನಾಡಿನ ಅನುಭವದಿಂದ ಮೂಡಿ ಬಂದ ಕಾದಂಬರಿ ಕುಂಜ. ಸರ್ಕಾರಿ ಸೇವೆಯ ಅಂತಿಮ ದಿನಗಳಲ್ಲಿ ಬರೆದ ಕಾದಂಬರಿ ವ್ಯಾಮೋಹ. ಇವರು ಬರೆದ ಮತ್ತೊಂದು ಕಾದಂಬರಿ ‘ತಲೆಮಾರು’ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಪ್ರೇಮ ಪ್ರೇಮ ಪ್ರೇಮ ಎಂಬ ಚಲನಚಿತ್ರವಾಗಿ ಬಂತು. ನಂಬಿ ಕೆಟ್ಟವರಿಲ್ಲವೋ, ಕರಾವಳಿಯ ಹುಡುಗಿ ಮತ್ತೆರಡು ಕಾದಂಬರಿಗಳು. ನಾಟಕ-ಮುಖ್ಯಮಂತ್ರಿಯ ಆಯ್ಕೆ. ಕಥಾಸಂಕಲನ-ದೂರ ಸರಿದು ಹತ್ತಿರ ಬಂದರು. ಪ್ರಬಂಧ-ಹುಲಿ ಮಾಡಿಸಿದ ಮದುವೆ ಮತ್ತು ಇತರ ಪ್ರಬಂಧಗಳು ಪ್ರಕಟಿತ. ಹೊಸತು, ಸಂಕ್ರಮಣ ಪತ್ರಿಕೆಗಳಿಗಾಗಿ ವಾಣಿಜ್ಯ ತೆರಿಗೆ ಇಲಾಖೆಯ ಸ್ವಾರಸ್ಯ ಘಟನೆ ನಿರೂಪಣೆ. ಸಂದ ಪ್ರಶಸ್ತಿ ಗೌರವ-ಕರಾವಳಿ ಹುಡುಗಿ ಕಾದಂಬರಿಗೆ ಹಾವನೂರ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ರಾಜ್ಯೋತ್ಸವ ಸನ್ಮಾನ ಮುಂತಾದ ಗೌರವಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಸಂಗಮೇಶ ಬಾಗಲಕೋಟೆ – ೧೯೩೭ ಸರಿತಾ ಕುಸುಮಾಕರ ದೇಸಾಯಿ – ೧೯೪೧ ಮಿತ್ರವಿಂದ ಪಾಟೀಲ – ೧೯೬೫

