೩-೧-೧೮೮೪ ಕನ್ನಡದ ಕಣ್ವ ಬಿ.ಎಂ.ಶ್ರೀಯವರು ಹುಟ್ಟಿದ್ದು ತುಮಕೂರಿನ ಸಂಪಿಗೆ ಗ್ರಾಮ. ತಂದೆ ಮೈಲಾರಯ್ಯ, ತಾಯಿ ಭಾಗೀರಥಮ್ಮ. ಮಾಧ್ಯಮಿಕ ಶಾಲೆಯವರೆಗೆ ಶ್ರೀರಂಗಪಟ್ಟಣ. ಹೆಚ್ಚಿನ ವ್ಯಾಸಂಗ ಮೈಸೂರು, ಬೆಂಗಳೂರು. ಮದ್ರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎಲ್. ಮತ್ತು ಎಂ.ಎ. ಮೊದಲು ಕಲಿತದ್ದು ಭೌತಶಾಸ್ತ್ರ ನಂತರ ಇಂಗ್ಲಿಷ್. ಆಂಗ್ಲ ವಿದ್ವಾಂಸರಿಗೂ ಮೀರಿದ ಇಂಗ್ಲಿಷ್ ವಿದ್ವತ್ತು. ಪ್ರೊ. ಮ್ಯಾಕಿಂಟಿಷ್ ಸಾಹೇಬರಿಂದ ಹೊಗಳಿಕೆ. ಕನ್ನಡಕ್ಕೆ ದುಡಿಯಲು ನಿರ್ಧಾರ. ಪರಿವ್ರಾಜಕರಂತೆ ನಾಡಿನ ಉದ್ದಗಲಕ್ಕೂ ಸಂಚಾರ. ನಾಡಿಗರನ್ನು ಬಡಿದೆಬ್ಬಿಸಿ ಬೆಳೆಸಿದ ಕನ್ನಡತನ. ಸಾಹಿತ್ಯಪ್ರಿಯ, ನಾಟಕಕಾರ, ಭಾಷಣಕಾರ, ಸಂಘಟನಾ ಚತುರ, ಎಲ್ಲವೂ ಮೇಳೈಸಿದ ಶಕ್ತಿ. ೧೮೯೦ ಜುಲೈ ೨೦ರಂದು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ. ಮೈಸೂರು ಪ್ರತಿನಿಯಾಗಿ ಬಿ.ಎಂ.ಶ್ರೀ. ೧೧.೩.೧೯೦೦ರ ಸಭೆಗೆ ಆಗಮನ, ಆವೇಶಭರಿತ ಪ್ರಚಂಡ ಭಾಷಣ. ನಿಲ್ಲದ ಕರತಾಡನ, ೧೯೧೧ರಲ್ಲಿ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಯುಗ ಪ್ರವರ್ತಕ ಭಾಷಣ, ಕನ್ನಡದೊಲವು, ಸಾಹಿತ್ಯದ ಬೆಳವಣಿಗೆ ಗಾಢಚಿಂತನೆ. ಅನುಷ್ಠಾನ. ನೆಚ್ಚಿನ ಮಡದಿಯು ಇಬ್ಬರು ಹೆಣ್ಣುಮಕ್ಕಳು, ಕುರುಡು ಮಗನನ್ನು ಬಿಟ್ಟು ತೆರಳಿದ ಎದೆಯೊಳಗಿನ ನೋವು. ‘ಧನುಷ್ಕೋಟಿ’ ಹೊಮ್ಮಿದ ಕವನ. ೧೯೨೬ರಲ್ಲಿ ಇಂಗ್ಲಿಷ್ ಗೀತೆಗಳು ಪ್ರಕಟಣೆ. ಮುಂದೆ ಗದಾಯುದ್ಧ ನಾಟಕಂ, ಅಶ್ವತ್ಥಾಮನ್, ಪಾರಸಿಕರು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡದ ಬಾವುಟ (ಸಂಪಾದಿತ), ಹೊಂಗನಸು (ಬಿಡಿ ಕವನಗಳು) ಪ್ರಕಟಿತ. ಬರೆದದ್ದು ಕಡಿಮೆ-ಅನರ್ಘ್ಯ ರತ್ನಗಳೇ ! ೧೯೨೮ರಲ್ಲಿ ಕಲುಬುರ್ಗಿ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ. ಮೈಸೂರು ಮಹಾರಾಜರಿಂದ ‘ರಾಜ ಸೇವಾಸಕ್ತ’ ಬಿರುದು. ಕರ್ನಾಟಕದುದ್ದಕ್ಕೂ ಗಳಿಸಿದ ಜನರ ಪ್ರೀತ್ಯಾದರ. ಗೌರವ ಸಂಕೇತವಾಗಿ ‘ಸಂಭಾವನೆ’ ಗ್ರಂಥ ಸಮರ್ಪಣೆ. ಅಭಿನಂದನ ಗ್ರಂಥ ಸಮರ್ಪಣೆ ಪರಂಪರೆಯ ಮೊದಲ ಗ್ರಂಥ. ಶತಮಾನೋತ್ಸವ ಸಂಸ್ಮರಣ ಗ್ರಂಥ ಶ್ರೀನಿಧಿ, ಶ್ರೀ ಉತ್ಸವ, ಶ್ರೀಗಂಧ ಸಮರ್ಪಣೆ. ನಿಧನರಾದದ್ದು ೫-೧-೧೯೪೬ರಲ್ಲಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ. ವರದರಾಜರಾವ್ – ೧೯೧೮-೧೩.೧೧.೮೭ ಶರಣಪ್ಪ ಕಂಚ್ಯಾಣಿ – ೧೯೩೦ ಇಂದೂ ಮೈಸೂರು – ೧೯೫೪

