ಬಿ.ಜಿ. ಸತ್ಯಮೂರ್ತಿ

Home/Birthday/ಬಿ.ಜಿ. ಸತ್ಯಮೂರ್ತಿ
Loading Events

೧೦..೧೯೩೭ ಸಾಹಿತಿ, ಮಾಹಿತಿ ಸಂಗ್ರಾಹಕ, ಬಿ.ಜಿ. ಸತ್ಯಮೂರ್ತಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ  ೧೯೩೭ರ ಸೆಪ್ಟಂಬರ್ ೧೦ರಂದು. ತಂದೆ ಬಿ.ಕೆ. ಗುರುರಾವ್‌, ತಾಯಿ ಕೃಷ್ಣವೇಣಿ ಬಾಯಿ. ಪ್ರಾಥಮಿಕ ಶಿಕ್ಷಣ ಚಿನ್ನದಗಣಿಶಾಲೆ, ಮಾಧ್ಯಮಿಕ ಶಾಲೆ ವೇಮಗಲ್‌, ಮತ್ತು ಕೋಲಾರದಲ್ಲಿ ಪ್ರೌಢಶಾಲೆಯ ನಂತರ ಮೈಸೂರು ಮುಕ್ತವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಜಾನಪದ ಐಚ್ಛಿಕ) ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದಲ್ಲಿ ೧೯೫೯ ರಲ್ಲಿ ಕೃಷಿ ಇಲಾಖೆಗೆ.  ನಂತರ ಉಡುಪಿ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ. ಸಾಹಿತ್ಯ ಚಟುವಟಿಕೆಗಳು ಉಡುಪಿಯಲ್ಲಿದ್ದಾಗಲೇ ಪ್ರಾರಂಭವಾಗಿದ್ದು ಕೊಳಲು ವಾದನ ಪಟು ರಮೇಶ್‌, ಸಾಹಿತಿ ನಾರಾಯಣಬಲ್ಲಾಳ ಮತ್ತು ‘ಪ್ರಕಾಶ’ ಪತ್ರಿಕೆಯ ಸಂಪಾದಕರಾದ ವ್ಯಾಸರಾಯರು ಮುಂತಾದವರಿಂದ ದೊರೆತ ಪ್ರೋತ್ಸಾಹದಿಂದ ಬರೆಯತೊಡಗಿದ ಕಥೆಗಳು ಅಂದಿನ ಪತ್ರಿಕೆಗಳಾದ ಪ್ರಕಾಶ, ರಾಯಭಾರಿ, ನವಯುಗ, ತಾಯಿನಾಡು, ಗೋಕುಲ ಮುಂತಾದ ಪತ್ರಿಕೆಗಳಲ್ಲದೆ ತರಂಗ, ತುಷಾರ, ಮಯೂರ, ಸುಧಾ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಹಲವಾರು ತೆಲುಗು ಕತೆಗಳನ್ನೂ ಅನುವಾದಿಸಿದ್ದಾರೆ. ಹೀಗೆ ಬರೆದ ಕಥೆಗಳು ಆಕಾಶವಾಣಿ, ದೂರದರ್ಶನ ಜಾಲಗಳಲ್ಲಿಯೂ ಪ್ರಸಾರವಾಗಿವೆ. ಪುಸ್ತಕಗಳ ಪ್ರಕಟಣೆಗಾಗಿ ಸ್ವತಂತ್ರವಾಗಿ ಪ್ರಾರಂಭಿಸಿದ್ದು ಮಯೂರ ಪ್ರಕಾಶನ (೧೯೭೩). ನಂತರ ಸಮಾನ ಮನಸ್ಕರೊಡನೆ ಸೇರಿ ಪ್ರಾರಂಭಿಸಿದ್ದು ಕಲಾಮಯೂರಿ ಪ್ರಕಾಶನ.  ಈ ಪ್ರಕಾಶನದಡಿಯಲ್ಲಿ ಉದಯೋನ್ಮುಖರ ಹಲವಾರು ಕೃತಿಗಳು ಪ್ರಕಟಗೊಂಡಿವೆ. ಟಿವಿ ಮಾಧ್ಯಮವಿಲ್ಲದಿದ್ದ ಸಂದರ್ಭದಲ್ಲಿ ಇವರು ಬರೆದ ಕಾದಂಬರಿಗಳಿಗೆ ಬಹುಬೇಡಿಕೆಯಿದ್ದು ಹಲವಾರು ಕಾದಂಬರಿಗಳು ಜನಮೆಚ್ಚುಗೆ ಗಳಿಸಿದ್ದುವು. ಅವುಗಳಲ್ಲಿ ಪ್ರೇಮದ ಬಾಳು, ಒಲವಿನ ಒಸರು, ಹೃದಯವೀಣೆ, ದೇವರಿಲ್ಲದ ಗುಡಿ, ವಸಂತ ದಹನ, ನಿಯತ್ತಿನ ನೇಣು, ಶರಶಯ್ಯೆ, ಪ್ರೇಮಪತಂಗ, ಸೀಮಂತ, ತಾಳಮೇಳ, ಕಥಾನಾಯಕಿ, ಗುಮ್ಮನ ಕರೆಯದಿರೆ ಮುಂತಾದವುಗಳು ಅಪಾರ ಖ್ಯಾತಿ ತಂದುಕೊಟ್ಟ ಕಾದಂಬರಿಗಳು. ಕಥಾಸಂಕಲನಗಳು-ಲವ್‌ ಇನ್‌ ನಂದಿ, ಬುದ್ಧನದೇ ಚಿಂತೆ, ಶೈಲಾ ಟೀಚರ್, ಮುನಿಯನ ಮನವಿ, ಭೂಕಂಪ ಮುಂತಾದವುಗಳು. ನಾಟಕಗಳು-ಯಜ್ಞಪಶು, ಆಹುತಿ, ಮುಗಿಯದ ನಾಟಕ, ಅಪಹೃತ, ಹೆಳವನ ಹೆಗಲೇರಿದ ಕುರುಡ ಮುಂತಾದವುಗಳು. ಭಕ್ತಿಪ್ರತೀಕವಾಗಿ ಶ್ರೀ ಸಾಮಾನ್ಯರಿಗಾಗಿ ರಚಿಸಿದ ಕೃತಿ ಶ್ರೀರಾಘವೇಂದ್ರ ಸ್ವಾಮಿಗಳನ್ನೂ ಕುರಿತು ಬರೆದ ‘ಗುರುದಕ್ಷಿಣೆ’ ಮತ್ತು ಮಹಾಭಾರತದ ವಸ್ತುನಿಷ್ಠ ಅಧ್ಯಯನದ ಕೃತಿ ‘ಸರಳಭಾರತ’. ಇದೀಗ ಕನ್ನಡ ಸಾಹಿತಿಗಳ ಎಲ್ಲ ವಿವರಗಳನ್ನೊಳಗೊಂಡ ಮಾಹಿತಿಕೋಶದ ಪ್ರಕಟಣೆಯಲ್ಲಿ ಮುಂದಾಗಿದ್ದು ಎಂಟು ಸಂಪುಟಗಳಲ್ಲಿ ಕನ್ನಡ ಸಾಹಿತಿಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಇವರ ಅವಿಶ್ರಾಂತ ಕನ್ನಡ ಸಾಹಿತ್ಯದ ದುಡಿಮೆಗೆ ರತ್ನಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಅತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ರಾಜಕುಮಾರ್ ಅಭಿಮಾನಿಗಳ ಸಂಘ, ಅಂಬರೀಶ್‌ ಅಭಿಮಾನಿಗಳ ಸಂಘ, ಕೃಷಿ ಇಲಾಖೆ ಮುಂತಾದವುಗಳಿಂದ ಸನ್ಮಾನಿತರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top