Loading Events

« All Events

  • This event has passed.

ಬಿ. ತಿಪ್ಪೇರುದ್ರಪ್ಪ

October 20, 2023

೨೦.೧೦.೧೯೪೨ ೨೭.೦೨.೨೦೧೧ ವ್ಯಂಗ್ಯ, ವಿನೋದ, ವಿಡಂಬನೆಗಳ ಲೇಖನಗಳ ಜೊತೆಗೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿ, ಮಕ್ಕಳ ಮುಗ್ಧ ಮನಸ್ಸುಗಳು ವಿಕಸಿಸುವಂತೆ ನಾಟಕ, ಪದ್ಯ, ಸಣ್ಣ ಕಥೆಗಳನ್ನು ಬರೆದಿರುವ ತಿಪ್ಪೇರುದ್ರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಅದೇ ತಾಲ್ಲೂಕಿನ ಮೂಡನಾಯಕನ ಹಳ್ಳಿಯಲ್ಲಿ. ತಂದೆ ಬಸಪ್ಪ, ತಾಯಿ ಗೌರಮ್ಮ. ಪ್ರಾರಂಭಿಕ ಶಿಕ್ಷಣ ಮಾಡನಾಯಕನಹಳ್ಳಿಯಲ್ಲಿ. ಚಿತ್ರದುರ್ಗದಲ್ಲಿ ಎಸ್.ಎಸ್.ಎಲ್.ಸಿ. ನಂತರ ತುಮಕೂರಿನ ಕಾಲೇಜಿನಿಂದ ಪಡೆದ ಬಿ.ಎ., ಮತ್ತು ಎಂ.ಎ. ಪದವಿಗಳು. ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಬಸವಾ ಪಟ್ಟಣ, ರಾಣಿ ಬೆನ್ನೂರು, ಚಿಕ್ಕಮಗಳೂರು, ಹೊಳಲ್ಕೆರೆಗಳಲ್ಲಿ ಕಾರ್ಯನಿರ್ವಹಿಸಿ ೨೦೦೧ರಲ್ಲಿ ನಿವೃತ್ತಿ. ಇವರ ಬಿಡಿ ಹಾಸ್ಯ, ವಿಡಂಬನ ಬರಹಗಳು ಸುಮಾರು ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಲ್ಲದೆ ಹುಬ್ಬಳ್ಳಿಯ ಪುಂಡಲೀಕ ಪತ್ರಿಕೆಯಲ್ಲಿ ೩ ವರ್ಷಗಳ ಕಾಲ ಅಂಕಣ ಬರಹಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸುಧಾ, ಮಯೂರ, ತರಂಗ, ಮುಂತಾದ ರಾಜ್ಯದ ಪ್ರಸಿದ್ದ ಪತ್ರಿಕೆಗಳಲ್ಲಿಯೂ ಇವರ ಲಘು ಪ್ರಬಂಧಗಳು ಪ್ರಕಟಗೊಂಡಿವೆ. ಸುಮಾರು ೧೫ಕ್ಕೂ ಹೆಚ್ಚು ಕೃತಿ ರಚಿಸಿದ್ದು ಅವುಗಳಲ್ಲಿ ‘ಮೂವತ್ತು ವಿಡಂಬನೆಗಳು’, ‘ನಿಂಬಣ್ಣನ ಎಲೆಕ್ಷನ್ ಡ್ಯೂಟಿ’, ಹಾಸ್ಯ ರಸಾಯನ’, ‘ವೀ ವಾಂಟ್ ಡೇಟಿಂಗ್ ಪವರ್’ ಮುಂತಾದ ಸಂಕಲನಗಳು ಪ್ರಕಟಗೊಂಡಿವೆ. ಹಳ್ಳಿಗಳು, ಪುಟ್ಟನ ಕಾನ್ವೆಂಟ್, ಕಾಡಿನಲ್ಲಿ ಕ್ರಿಕೆಟ್, ಮಕ್ಕಳ ಪಿಕ್ನಿಕ್, ಮಂಗಗಳ ಪ್ರವಾಸ, ಸುನಾಮಿ ಸುಳಿಯಲ್ಲಿ ಇವು ಮಕ್ಕಳ ಪದ್ಯಗಳು ಹಾಗೂ ಮಕ್ಕಳ ಕಥಾ ಸಂಕಲನಗಳು. ಸರಕಾರ ವ್ಯವಸ್ಥೆಗೊಳಿಸಿರುವ ಬಿಸಿಯೂಟದ ಬಗ್ಗೆ ಇವರು ಬರೆದ ಪದ್ಯದಲ್ಲಿ ಪಾಠದ ಶಾಲೆಗಳು ಹೇಗೆ ಪಾಕದ ಶಾಲೆಗಳಾಗುತ್ತಿವೆ ಎಂಬುದನ್ನು ವಿಡಂಬಿಸಿ ಆಹಾ ಘಮಘಮ ಒಗ್ಗರಣೆ ಪಾಠದ ಶಾಲೆ ಪಾಕದ ಶಾಲೆ ಬಿಸಿಬಿಸಿಯೂಟ ಹೊಡೆಯುವೆವು ಹಗಲೆ ನಿದ್ದೆಗೆ ಹೊರಳುವೆವು ಬಿಸಿ ಊಟ ಉಂಡ ವಿದ್ಯಾರ್ಥಿಗಳ ಪಾಡು ಏನಾದೀತೆಂದು ತಮ್ಮ ಪದ್ಯದ ಮುಖಾಂತರ ವಿವರಿಸಿದ್ದಾರೆ. ಕಾಡಿನಲ್ಲಿ ಕ್ರಿಕೆಟ್ ಇವರ ಪ್ರಸಿದ್ದ ನಾಟಕಗಳಲ್ಲೊಂದು. ಇದರಲ್ಲಿ ಬರುವ ಪಾತ್ರಧಾರಿಗಳು ಪ್ರಾಣಿ ಪಕ್ಷಿಗಳೇ. ಆಟದ ಮೈದಾನದ ಹೆಸರಿನಲ್ಲಿ, ಆಟದ ವಸ್ತುಗಳ ತಯಾರಿಕೆಯಲ್ಲಿ ಹೇಗೆ ಕಾಡು ನಾಶವಾಗುತ್ತಿದೆ ಎಂಬುದನ್ನು ವಸ್ತುವನ್ನಾಗಸಿಕೊಂಡು ಹಾಸ್ಯ, ಪರಿಸರ ಪ್ರಜ್ಞೆ, ನರಿಯ ತಂತ್ರ, ಸಿಂಹದ ಹುಂಬತನ, ಮಾನವೀಯ ಪ್ರಜ್ಞೆ ಮುಂತಾದವುಗಳನ್ನು ವಿಡಂಬನೆಯ ಮೂಲಕ ತಿಳಿಸುತ್ತ, ಆಟದ ಹುಚ್ಚು ಅಗತ್ಯಕ್ಕಿಂತ ಹೆಚ್ಚಾದಾಗ ಆಗುವ ಘೋರ ಅನಾಹುತವನ್ನು ಬಿಂಬಿಸುವ ನಾಟಕ. ಇದನ್ನು ಮಕ್ಕಳಿಗೆಂದೇ ಬರೆದಿದ್ದರೂ ಪರಿಸರದ ಬಗ್ಗೆ ಹೇಗೆ ಎಚ್ಚರವಾಗಿರಬೇಕೆಂಬುದನ್ನು ತೋರಿಸಿದ್ದಾರೆ. ಮಕ್ಕಳ ಪದ್ಯಗಳು, ಕಥೆಗಳು, ನಾಟಕಗಳಂತೆಯೇ ಮಾರ್ಮಿಕವಾಗಿ ಬರೆಯುತ್ತಿರುವ ಮತ್ತೊಂದು ಪ್ರಕಾರವೆಂದರೆ ಹಾಸ್ಯ ಹಾಗೂ ಲಘು ಪ್ರಬಂಧಗಳು. ಇವರ ಪ್ರಸಿದ್ದ ಹಾಸ್ಯ ಲೇಖನ ಬಯಲು ಆಲಯದೊಳಗೆ…. ಎಂಬುದರಲ್ಲಿ ಸ್ವಂತಕ್ಕಾಗಿ ಮನೆಕಟ್ಟಿಸಿ, ಎದುರಿಗೆ ಸಾರ್ವಜನಿಕ ಕಚೇರಿಯೊಂದು ಸ್ಥಾಪನೆಯಾಗಿ, ಅಲ್ಲಿಗೆ ಬರುವವರು ವಿಶ್ರಾಂತಿಗಾಗಿ ಆಶ್ರಯಿಸುವುದು ಇವರ ಕಾಂಪೌಂಡಿನೊಳಗಿದ್ದ ಹೊಂಗೆ ಮರದಡಿ. ಇದರಿಂದಾಗುವ ಪರಿಪಾಟಲಿನ ವಿವರಣೆಯನ್ನು ಬಹು ಸೊಗಸಾಗಿ ಚಿತ್ರಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದ ತಿಪ್ಪೇರುದ್ರಪ್ಪನವರು ಮುಲ್ಕಿ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಸಾಹಿತ್ಯ ರಚನಾ ಶಿಬಿರ, ಚನ್ನಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವಲ್ಲದೆ ಭೂಪಾಲ್‌ನ ಭಾರತ ಭವನದ ಆಹ್ವಾನದ ಮೇರೆಗೆ ಕರ್ನಾಟಕದ ಪ್ರತಿನಿಧಿಯಾಗಿ ಮಕ್ಕಳ ಸಾಹಿತ್ಯ ರಚನಾ ಕಮ್ಮಟದಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಸರಕಾರದ ೩ನೆಯ ತರಗತಿಯ ಪಠ್ಯಪುಸ್ತಕದಲ್ಲಿ ‘ಕಾಡು’ ಪದ್ಯವು ಸೇರ‍್ಪಡೆಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ವಿನೋದ – ೯೯ (೧೯೯೯ನೇ ಸಾಲಿನ) ವಿನೋದ ಸಾಹಿತ್ಯ ಸಂಪಾದಕರಾಗಿ, ತರಳ ಬಾಳು ಹುಣ್ಣಿಮೆಯ ವಿಶೇಷ ಸಂಚಿಕೆಯ ಪ್ರಧಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಇಂಗ್ಲಿಷ್ ಇಂಜೆಕ್ಷನ್ ಹಾಸ್ಯ ಸಂಕಲನ ಕೃತಿಗೆ ‘ವಿನೋದ ಸಾಹಿತ್ಯ’ ಪ್ರಶಸ್ತಿ ಮತ್ತು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಮಹಾದೇವಪ್ಪ ಕರಲಟ್ಟಿ ಪ್ರಶಸ್ತಿಯು ‘ಕಿಟ್ಟ ಮತ್ತು ಗೀಳಿ’ ಕೃತಿಗೆ ಸಂದಿದೆ.

Details

Date:
October 20, 2023
Event Category: