ಬಿ. ದಾಮೋದರ ಬಾಳಿಗ

Home/Birthday/ಬಿ. ದಾಮೋದರ ಬಾಳಿಗ
Loading Events
This event has passed.

೭-೯-೧೯೦೮ ೨೧-೫-೧೯೮೫ ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಸೇವಾಕರ್ತ, ಸಾಹಿತಿ ದಾಮೋದರ ಬಾಳಿಗರವರು ಹುಟ್ಟಿದ್ದು ಪುತ್ತೂರಿನಲ್ಲಿ. ಇವರ ವಂಶಸ್ಥರು ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ‘ರಾಯಿ’ ಗ್ರಾಮದವರು. ತಂದೆ ಅಣ್ಣಪ್ಪ ಬಾಳಿಗ, ತಾಯಿ ರಾಧಾಬಾಯಿ. ಬಡತನದಲ್ಲಿ ಹುಟ್ಟಿ ಬೆಳೆದ ಬದುಕು. ಪ್ರಾರಂಭಿಕ ಶಿಕ್ಷಣ ಪುತ್ತೂರಿನಲ್ಲಿ. ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ಹಿಂದಿ, ಇಂಗ್ಲಿಷ್, ಕನ್ನಡ, ಕೊಂಕಣಿ ಭಾಷೆಗಳಲ್ಲಿ ಪಡೆದ ಪ್ರಾವೀಣ್ಯತೆ. ಮಂಗಳೂರಿನ ಗೌರ‍್ನಮೆಂಟ್ ಮತ್ತು ಸೇಂಟ್ ಅಲೋಷಿಯಸ್ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ದೇಶದ ತುಂಬೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಕಾಲ. ಗಾಂಜಿಯವರ ಅಸಹಕಾರ ಚಳವಳಿಯಿಂದ ಪ್ರೇರಿತರಾಗಿ ಹಲವಾರು ಸಾಮಾಜಿಕ ಕಾರ‍್ಯಕ್ರಮಗಳಲ್ಲಿ ಭಾಗಿ. ಟೆಕ್ಸ್‌ಟೈಲ್ ಇನ್‌ಸ್ಟಿಟ್ಯೂಟಿನಲ್ಲಿ ತರಬೇತು ಪಡೆದು ಕೆನರಾ ಡೈಯಿಂಗ್ ಅಂಡ್ ಪ್ರಿಂಟಿಂಗ್ ಎಂಬ ಹೆಸರಿನ ಸ್ವ-ಉದ್ಯೋಗ ಪ್ರಾರಂಭ. ಅಡಿಕೆ ಕೊಳೆ ರೋಗ ನಿವಾರಣೆಗೆ ಗುಡಿ ಕೈಗಾರಿಕೆ ಸ್ಥಾಪನೆ. ಪ್ರವಾಹ ಬಂದು ಭಾರಿ ನಷ್ಟ ಉಂಟಾದಾಗ ಸ್ಥಾಪಿಸಿದ ಫ್ಲಡ್ ರಿಲೀಫ್ ಕಮಿಟಿ. ಹೀಗೆ ಹಲವಾರು ಸಾಮಾಜಿಕ ಕಾರ‍್ಯಕ್ರಮಗಳಲ್ಲಿ ಭಾಗಿ. ಎಳೆವೆಯಿಂದಲೇ ಬೆಳೆದ ಸಾಹಿತ್ಯಾಸಕ್ತಿ. ಮೊಳಹಳ್ಳಿ ಶಿವರಾಯರಿಂದ ಸಾಹಿತ್ಯ ಪ್ರೇರಣೆ. ವಯಸ್ಕರ ಶಿಕ್ಷಣಕ್ಕಾಗಿ ಮಾಡಿದ ಸೇವೆ. ಪುತ್ತೂರಿನ ಶಾರದಾ ವಾಚನಾಲಯದ ಲೈಬ್ರರಿಯನ್ ಆಗಿ ಕೆಲಕಾಲ. ಮಂಗಳೂರು ರಥ ಬೀದಿಯಲ್ಲಿ ತೆರೆದ ಪುಸ್ತಕ ಮಳಿಗೆ. ಅಲೈಡ್ ಪಬ್ಲಿಷಿಂಗ್ ಹೌಸ್ ಹೆಸರಿನಿಂದ ಪುಸ್ತಕ ಪ್ರಕಾಶನದ ಉದ್ಯಮ. ೧೯೩೮ರಲ್ಲಿ ತೆರೆದ ಬಾಳಿಗ ಅಂಡ್ ಸನ್ಸ್, ೧೯೪೨ರಲ್ಲಿ ತೆರೆದ ‘ನವನಿ’ ಪ್ರಕಾಶನದಿಂದ ಹಲವಾರು ಪುಸ್ತಕ ಪ್ರಕಟಣೆ. ಸುಬ್ರಾಯ ಉಪಾಧ್ಯಾಯರ ‘ಗಿಲಿಗಿಟಿ’ (ಶಿಶುಗೀತೆ ಸಂಕಲನ) ಮೊದಲ ಪುಸ್ತಕ ಪ್ರಕಟಣೆ,. ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖ, ಹೆಬ್ಬೆರಳು, ಚಿತ್ರಭಾನು ಪ್ರಕಟಿಸಿದ ಕೀರ್ತಿ. ಪೈಗಳ ಗೋಲ್ಗೊಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಹೆಮ್ಮೆ. ಅಳಿಲುಸೇವೆ, ಅಜ್ಜಿ ಕತೆ, ಅತ್ತೆಯ ಕರಾರು ಮತ್ತು ಇತರ ಕಥೆಗಳು, ಇಲಿಮನೆ ಗಲಿಬಿಲಿ, ಉಂಡಾಡಿ ತೋಳ, ಗೋವಿನ ಕತೆ, ಚಾಡಿ ಮತ್ತು ಇತರ ಕಥೆಗಳು, ನೂಲುವತಕಲಿ, ಬೆಲ್ಲದ ಮಲ್ಲ ಮತ್ತು ಇತರ ಕಥೆಗಳು, ಸೀನಿನ ಸೀನ, ಮಾತಾಳಿ ಆಮೆ ಮತ್ತು ಇತರ ಕಥೆಗಳು ಇವರ ರಸವತ್ತಾದ ಮಕ್ಕಳ ಸಾಹಿತ್ಯರಚನೆಗಳು. ಮಕ್ಕಳ ಬೌದ್ಧಿಕ ಮನೋಧರ್ಮ ಅರಿತು ಬಾಸೆಲ್ ಮಿಷನ್‌ರವರೊಡನೆ ರಚಿಸಿದ ಹಲವಾರು ಪಠ್ಯ ಪುಸ್ತಕಗಳು. ವಿಜ್ಞಾನವನ್ನು ವಿವರಿಸುವ ‘ನಮ್ಮ ಭೂಮಿ’, ಬಹುಮಾನಿತ ಕೃತಿ ಚರಕ-ತಕಲಿ. ಕರಕುಶಲ ಹೊತ್ತಗೆಗಳು, ಗಡಿಗಡಿಗೆ ತುಪ್ಪದ ದೋಸೆ, ಕಟ್ಟುಕತೆಗಳು ಉತ್ತಮ ಚಿಕ್ಕ ಜನಪ್ರಿಯ ಹೊತ್ತಗೆಗಳು. ‘ಭಾರತ ಜ್ಯೋತಿ ಮಹಾತ್ಮ’ ಉತ್ತಮ ಕೃತಿ. ಕನ್ನಡ ಹಾಗೂ ಇಂಗ್ಲಿಷ್‌ನಲ್ಲೂ ಹಲವಾರು ರಾಷ್ಟ್ರ ಭಕ್ತಿಗೀತೆಗಳ ರಚನೆ. ಇವರು ಕೊಂಕಣಿಯಲ್ಲಿ ರಚಿಸಿದ್ದ ಗೀತೆಗಳನ್ನು ಕನ್ನಡ ಭಾಷಾಂತರದೊಡನೆ ಪ್ರಕಟಿಸಿ ಷಷ್ಟಬ್ದಿ ಸಮಾರಂಭದಲ್ಲಿ ಅರ್ಪಿಸಿದ್ದು ‘ಶಾಂತಿ ಸಾಧನ್’ ಕೃತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಚನ್ನಬಸಪ್ಪ ಎಲ್ಲಪ್ಪ ಕವಲಿ – ೧೯೦೦-೧೯೮೫ ಡಾ. ಶ್ರೀನಿವಾಸಮೂರ್ತಿ. ಕಾ. ವೆಂ. – ೧೯೬೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top