Loading Events

« All Events

  • This event has passed.

ಬುರ್ಲಿ ಬಿಂದುಮಾಧವ ಆಚಾರ್ಯ

August 18, 2023

೧೮..೧೮೯೯ ೨೭.೧೦.೧೯೮೧ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ, ಸಾಹಿತಿ, ಪ್ರಕಾಶಕ ಬುರ್ಲಿ ಬಿಂದುಮಾಧವರು ಹುಟ್ಟಿದ್ದು ಬಾಗಲಕೋಟೆಯಲ್ಲಿ ೧೮೯೯ರ ಆಗಸ್ಟ್‌ ೧೮ ರಂದು ಸಂಪ್ರದಾಯಸ್ಥ ವೈದಿಕ ಕುಟುಂಬದಲ್ಲಿ. ಧಾರವಾಡಕ್ಕೆ ಬಂದುದು ೧೩ ರ ಹರೆಯದಲ್ಲಿ. ಪ್ರಾರಂಭಿಕ ಶಿಕ್ಷಣ ಮುಗಿಸಿ ಮೂರುವರ್ಷ ಶಿಕ್ಷಕರ ತರಬೇತಿಯನ್ನು ಪಡೆದು ವಿಜಾಪುರ ಜಿಲ್ಲೆಯ ಗಲಗಲಿಗೆ ಶಿಕ್ಷಕರಾಗಿ ತೆರಳಿದರಾದರೂ ಅಲ್ಲಿ ಶಿಕ್ಷಕರಾಗಿ ಮುಂದುವರೆಯಲಾಗದೆ ಪುನಃ ಬಂದುದು ಧಾರವಾಡಕ್ಕೆ. ಕರ್ನಾಟಕದ ಗಂಡುಗಲಿ ಎನಿಸಿದ್ದ ಮುದವೀಡು ಕೃಷ್ಣರಾಯರು ‘ಕರ್ನಾಟಕ ವೃತ್ತ’ ಪತ್ರಿಕೆಯನ್ನು ನಡೆಸುತ್ತಿದ್ದು, ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಸೆರೆಮನೆ ಸೇರಿದ್ದರಿಂದ ಬುರ್ಲಿಯವರು ಪತ್ರಿಕಾ ವ್ಯವಸಾಯಕ್ಕೆ ಬಂದು ಕರ್ನಾಟಕ ವೃತ್ತದ ಸಂಪಾದಕತ್ವವನ್ನು ವಹಿಸಿಕೊಂಡರು. ೧೯೨೧ ರಲ್ಲಿ ಧಾರವಾಡದಲ್ಲಿ ಸ್ಥಾಪಿತವಾಗಿದ್ದ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಕೆಲವರ್ಷ ಕಾರ್ಯ ನಿರ್ವಹಿಸಿದರು. ರಾಷ್ಟ್ರೀಯ ಶಾಲೆಯಲ್ಲಿ ಪ್ರಾಥಮಿಕದಿಂದ ಹಿಡಿದು ಕಾಲೇಜಿನವರೆಗೂ ಶಿಕ್ಷಣದ ವ್ಯವಸ್ಥೆಯಿದ್ದು, ವಿದ್ಯಾರ್ಥಿಗಳಿಗೆ ಊಟ, ವಸತಿಯ ಏರ್ಪಾಡನ್ನೂ ಮಾಡಲಾಗಿತ್ತು. ವಸತಿ ನಿಲಯದ ಮೇಲ್ವಿಚಾರಣೆಯೂ ಬುರ್ಲಿಯವರದ್ದೇ. ವಿದ್ಯಾರ್ಥಿಗಳಿಗೇನಾದರೂ ತೊಂದರೆಯಾದರೆ ಇವರಿಗೇ ತೊಂದರೆಯಾದಷ್ಟೇ ಭಾವುಕರಾಗಿ ದುಃಖಿಸುತ್ತಿದ್ದರು. ಒಮ್ಮೆ ಹುಡುಗನೊಬ್ಬ ತೊಂದರೆಗೆ ಸಿಲುಕಿದಾಗ ಅವನ ಕತೆ ಕೇಳಿ ಇವರೇ ಮೂರ್ಛಿತ ರಾದರಂತೆ. ಅಂತಹಭಾವಪರವಶತೆಯ, ಹೆಂಗರುಳಿನ ಸ್ವಭಾವದವರು. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವಂತೆ ಗಾಂಧೀಜಿಯವರ ಕರೆ ನೀಡಿದಾಗ ಜನಸಾಮಾನ್ಯರೂ ವೀರ ಅಭಿಮನ್ಯುಗಳಂತೆ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದಾಗ ಬುರ್ಲಿಯವರೂ ೧೯೨೦ ರ ಅಸಹಕಾರ ಚಳವಳಿ, ೧೯೩೦ ರ ಉಪ್ಪಿನ ಸತ್ಯಾಗ್ರಹ, ಸೈಮನ್‌ ಸಮಿತಿಯ ಬಹಿಷ್ಕಾರ, ೧೯೩೪ ರ ಸತ್ಯಾಗ್ರಹ, ೧೯೩೯ ರ ಯುದ್ಧ ವಿರೋಧಿ ಚಳುವಳಿ, ೧೯೪೨ ಕ್ವಿಟ್‌ ಇಂಡಿಯಾ ಚಳವಳಿ – ಹೀಗೇ ನಾನಾ ಚಳವಳಿಗಳಲ್ಲಿ ಭಾಗವಹಿಸಿದರು. ತಾವೊಬ್ಬರೇ ಭಾಗಿಯಾಗದೆ ತಮ್ಮ ಪತ್ನಿಯನ್ನೂ ದೇಶ ಸೇವೆಯ ಕಾರ್ಯದಲ್ಲಿ ತೊಡಗುವಂತೆ ಪ್ರಚೋದಿಸಿ, ಈರ್ವರೂ ಚಳವಳಿಯಲ್ಲಿ ಭಾಗಿಯಾಗಿ ಹಲವಾರು ಬಾರಿ ಸೆರೆವಾಸ ಅನುಭವಿಸಿದರು. ೧೯೩೦ ರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಅಂಕೋಲೆಗೆ ಹೋಗುವ ಹಾದಿಯಲ್ಲಿ ಜನಜಾಗೃತಿಯ ಕಾರ್ಯದಲ್ಲಿ ತೊಡಗಿ, ಜನತೆಯನ್ನೆಚ್ಚರಿಸಲು ಭಾಷಣಗಳನ್ನೂ ಮಾಡಿದರು. ವಾಗ್ಮಿಯಾಗಿದ್ದ ಬುರ್ಲಿಯವರ ಮಾತಿನ ಮೋಡಿಗೆ ಜನ ಬೆರಗಾದರು. ಶಿಗ್ಗಾವಿಯಲ್ಲಿ ಭಾಷಣ ಮಾಡಿದ ಜಾಗವನ್ನು ಇಂದಿಗೂ ಜನ ಬುರ್ಲಿ ಬೈಲು ಎಂದೇ ಗುರುತಿಸುತ್ತಾರೆ. ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನವು ಲಂಡನ್‌ನಲ್ಲಿ ೧೯೩೧ ರ ಸೆಪ್ಟಂಬರ್ ನಲ್ಲಿ ನಡೆದು ಯಾವುದೇ ರೀತಿಯ ಒಪ್ಪಂದವಾಗದೆ ಗಾಂಧೀಜಿಯವರು ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂದಿರುಗಿ ಕಾಯ್ದೆಭಂಗ ಚಳುವಳಿ, ಬ್ರಿಟಿಷ್‌ ಸರಕಾರದ ಸರಕುಗಳ ಬಹಿಷ್ಕಾರಕ್ಕೆ ಕರೆಕೊಟ್ಟಾಗ ಚಳವಳಿಯಲ್ಲಿ ಪಾಲ್ಗೊಂಡವರ ಸಂಖ್ಯೆ ೧,೨೦,೦೦೦ ಕ್ಕೂ ಹೆಚ್ಚಾಗಿ ಬಂಧಿತರಾದರು. ಬುರ್ಲಿಯವರ ಬಂಧನವೂ ಇದೇ ಸಂದರ್ಭದಲ್ಲಾಗಿ ಜೈಲು ಸೇರಿದರು. ೧೯೩೨ ರಲ್ಲಿ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಹಿಂದಿಯಲ್ಲಿ ‘ಸಸ್ತಾ ಸಾಹಿತ್ಯಮಾಲೆ’ಯನ್ನೂ ಸ್ಥಾಪಿಸಲು ಪ್ರೋತ್ಸಾಹಿಸಿದ ಸುದ್ಧಿಯನ್ನೂ ಕೇಳಿದರು. ಸಸ್ತಾ ಸಾಹಿತ್ಯ ಮಾಲೆಯ ಉದ್ದೇಶ ಹಿಂದಿ ಬಾಷೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಶ್ರೀಮಂತಗೊಳಿಸಿ ವಿಚಾರ ಸಾಹಿತ್ಯವನ್ನು ಬೆಳೆಸಿ, ಜ್ಞಾನ-ವಿಜ್ಞಾನಗಳ ಬಗ್ಗೆ ಪುಸ್ತಕಗಳನ್ನೂ ಪ್ರಕಟಿಸಿ ಜಗತ್ತಿನ ಯಾವುದೇ ಭಾಷೆಯ ಜೊತೆ ನಿಲ್ಲುವಂತಾಗಲು ಪ್ರಾರಂಭಿಸಿದ್ದೇ ‘ಸಸ್ತಾ’ ಮಾಲೆ. ಇದನ್ನರಿತ ಬುರ್ಲಿಯವರು ಕನ್ನಡದಲ್ಲೂ ವಿಚಾರ ಸಾಹಿತ್ಯವು ಬೆಳೆದರೆ ಮಾತ್ರ ಕನ್ನಡ ಬೆಳೆದಂತೆ ಎಂದು ಯೋಚಿಸಿ ವಿಚಾರ ಜಾಗೃತಿಯನ್ನೂ ಪ್ರಮುಖ ಉದ್ದೇಶ ಹಾಗೂ ವೈಶಿಷ್ಟ್ಯವಾಗಿಟ್ಟುಕೊಂಡು ಜೈಲಿನಿಂದ ಹೊರಬಂದ ನಂತರ ಕನ್ನಡದ ಬೆಳವಣಿಗೆಗಾಗಿ ಆಯ್ದುಕೊಂಡದ್ದು ಸುಲಭ ಬೆಲೆಯ ವೈಚಾರಿಕ ಪುಸ್ತಕಗಳ ಪ್ರಕಟಣೆ. ಶಂಬಾ ಜೋಶಿ, ಬೆಟಗೇರಿ ಕೃಷ್ಣಶರ್ಮ ಇವರೊಡನೆ ಚರ್ಚಿಸಿದರು. ಇಷ್ಟರಲ್ಲಾಗಲೇ ಆಲೂರು ವೆಂಕಟರಾಯರು ವೈಚಾರಿಕತೆ ಮೂಡಿಬಂದಾಗಲೇ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ, ಜಾಗೃತಿಗೆ ಅನುಕೂಲವಾದೀತೆಂದು ‘ನವಜೀವನ ಗ್ರಂಥಮಾಲೆ’ಯನ್ನೂ ಪ್ರಾರಂಭಿಸಿ ೧೯೩೧ ರಲ್ಲಿ ಪ್ರೊ. ಟಿ.ಎಂ. ಪಾಟೀಲರ ‘ಆಕಾಶದ ಅದ್ಭುತ ಚಮತ್ಕಾರಗಳು’, ಪಂಡಿತ ತಾರಾನಾಥರ ‘ಧರ್ಮಸಂಭವ’, ೧೯೦೩೩ ರಲ್ಲಿ ಎಂ.ಎ. ದೊರೆಸ್ವಾಮಿ ಅಯ್ಯಂಗಾರ್ಯರ ‘ಏಷ್ಯಾಖಂಡದ ಜಾಗೃತಿ’ ಶ್ರೀರಂಗರ ಭಾಷಾಶಾಸ್ತ್ರ ಕುರಿತ ‘ಶಾರದೆಯ ಸಂಸಾರ’ ಮುಂತಾದ ಗ್ರಂಥಗಳು ಪ್ರಕಟಗೊಂಡಿದ್ದರೂ ಹಣಕಾಸಿನ ತೊಂದರೆಯಿಂದ ಸ್ಥಗಿತವಾಯಿತು. ಇದನ್ನೆಲ್ಲಾ ವಿವೇಚನೆಗೆ ತೆಗೆದುಕೊಂಡು ಶಂಬಾ ಜೋಶಿ ಮತ್ತು ಬೆಟಗೇರಿಯವರೊಡನೆ ಚರ್ಚಿಸಿ ವಿದ್ಯುನ್ಮಾಲ ಎಂಬ ಹೆಸರಿನಿಂದ ಪ್ರಕಾಶನ ಸಂಸ್ಥೆಯನ್ನೂ ೧೯೩೧ರ ಆಗಸ್ಟ್‌ ೧೫ರಂದು ಪ್ರಾರಂಭಿಸುವುದೆಂದು ನಿರ್ಧರಿಸಿದರು. ಜಗತ್ತಿನಲ್ಲಿ ನಡೆಯುವ ವಿಕಾಸದ ಅರಿವು, ಹೊಸವಿಚಾರಗಳ ಬೆಳಕು ಕನ್ನಡಿಗರಿಗಾಗಬೇಕು. ಇದಕ್ಕಾಗಿ ವಿದ್ಯುನ್ಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆಂದು ಕರಡು ಪ್ರತಿಯನ್ನು ಸಿದ್ಧಪಡಿಸಿದಾಗ ಸಾಲಿ ರಾಮಚಂದ್ರರಾಯರು ‘ಮಿಂಚಿನಬಳ್ಳಿ’ಎಂಬ ಆಕರ್ಷಕ ಹೆಸರನ್ನು ಸೂಚಿಸಿದಾಗ ಎಲ್ಲರಿಗೂ ಒಪ್ಪಿತವಾಗಿ ಇದೇ ಹೆಸರಿನಿಂದ ಪ್ರಾರಂಭಿಸಿದರು. ಕರ್ನಾಟಕದ ವಿವಿಧ ಮುಖಗಳನ್ನು ಪರಿಚಯಿಸಲು ವಿವಿಧ ಲೇಖಕರಿಂದ ಬರೆಸಿದ ಲೇಖನಗಳ ಸಂಕಲನದ ‘ಕರ್ನಾಟಕ ದರ್ಶನ’ ಎಂಬ ಗ್ರಂಥವನ್ನು ಪ್ರಕಟಿಸುವುದೆಂದು ನಿರ್ಧರಿಸಿದಾಗ ಸಾಲರೂಪದಲ್ಲಿ ಮುದ್ರಿಸಿಕೊಡಲು ಮುಂದೆ ಬಂದವರು ಶೇ.ಗೋ. ಕುಲಕರ್ಣಿಯವರು. ಹೀಗೆ ಪ್ರಕಟಗೊಂಡ ಮೊದಲ ಗ್ರಂಥವು ವಿದ್ಯುಕ್ತವಾಗಿ ಜಮಖಂಡಿಯಲ್ಲಿ ೧೯೩೭ ರಲ್ಲಿ ನಡೆದ ೨೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಬೆಳ್ಳಾರೆ ವೆಂಕಟನಾರಾಣಪ್ಪನವರು ಬಿಡುಗಡೆ ಮಾಡಿದರೆ ಬಿ.ಎಂ.ಶ್ರೀ. ಯವರು ಮಿಂಚಿನ ಬಳ್ಳಿ ಪ್ರಕಾಶನವು ‘ಬಾಳಿ ಬದುಕಿ ನಾಡಿಗೆ ಬೆಳಕನ್ನೀಯಲಿ’ ಎಂದು ಹರಸಿದರು. ನಂತರ ಬಂದ ಪುಸ್ತಕ ‘ವಿಲಾಸಿ’ ಕಾವ್ಯನಾಮದ (ಶ್ರೀರಂಗರ) ‘ಕಮಾಲಪಾಶ ಅಥವಾ ತರುಣ ತುರ್ಕಸ್ತಾನ’, ಡಾ.ಪಿ.ಬಿ. ದೇಸಾಯಿಯವರ ‘ಮಿಂಚಿದ ಮಹಿಳೆಯರು’, ಬುರ್ಲಿಯವರ ‘ಸಾಮ್ಯವಾದ’ ಹೀಗೆ ಹಲವಾರು ಗ್ರಂಥಗಳು ಹೊರಬಂದರೂ ೩೦೦ ಸದಸ್ಯರನ್ನೂ ಕೂಡಿಸುವಲ್ಲಿ ಹೈರಾಣರಾದರು. ಹೀಗೆ ಪ್ರಾರಂಭವಾದ ಮಿಂಚಿನಬಳ್ಳಿ ಗ್ರಂಥಗಳಲ್ಲಿ ಕತೆ,  ಕಾವ್ಯ, ಕಾದಂಬರಿಗಳನ್ನೂ ಪ್ರಕಟಿಸದೆ ವಿಚಾರ ಜಾಗೃತಿಗಾಗಿ ಸತ್ವಶಾಲಿ ರಶಿಯ, ಮುಂದುವರೆದ ಜಪಾನ, ಜಾಗೃತ ಚೀನ, ಮೊದಲಾದ ಗ್ರಂಥಗಳು; ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ಗಾಂಧಿವಾದ, ಸಾಮ್ಯವಾದ, ಮಾರ್ಕ್ಸ್‌ವಾದ ಮುಂತಾದ ಕೃತಿಗಳು; ೧೮೫೭ ರ ಬಂಡಾಯದ ಇತಿಹಾಸ, ಸ್ವಾತಂತ್ರ್ಯದ ಹೆಜ್ಜೆಗಳು, ಲೋಕಮಾನ್ಯ ಗಂಗಾಧರ ತಿಲಕರು, ರಾಷ್ಟ್ರಪತಿಗಳು ಮುಂತಾದ ವೈಚಾರಿಕ ಗ್ರಂಥಗಳು ಸ್ವಾತಂತ್ರ್ಯ ಭಾರತದ ವಿಚಾರದ ಬೆಳಕನ್ನೂ ನೀಡಿವೆ. ಬರೇ ಪ್ರಕಾಶಕರಾಗಿದಷ್ಟೇ ಅಲ್ಲದೆ ಲೇಖಕರಾಗಿಯೂ ಬುರ್ಲಿಯವರು ಸಾಮ್ಯವಾದ, ಸ್ವಾತಂತ್ರ್ಯದ ಹೆಜ್ಜೆಗಳು, ಭಾರತದ ರಾಜಕೀಯ ಸಮಸ್ಯೆ, ರಾಷ್ಟ್ರೀಯ ಪಂಚಾಯತಿ, ರಾಷ್ಟ್ರಪತಿಗಳು, ಸಾನೇಗುರೂಜಿ ಹಾಗೂ ಅವರ ಕೃತಿಗಳು, ಬಾಲಗಂಧರ್ವ, ತಿಲಕ್‌, ಯಂತ್ರಯೋಗಿ ಲಕ್ಷ್ಮಣರಾವ್‌ ಕಿರ್ಲೋಸ್ಕರ್, ಆಸ್ತಿಕ, ಅಪುರ್ವತ್ಯಾಗ, ಶ್ರೀ ಶಿವರಾಯ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ಮಾಲೆಗಾಗಿ ಪುಸ್ತಕಗಳನ್ನೂ ಬರೆದುಕೊಟ್ಟ ಲೇಖಕರಿಗೆ ಗೌರವ ಧನವಾಗಿ ಪುಸ್ತಕದ ಮುಖ ಬೆಲೆಯ ಶೇ. ೧೦. ನ್ನು ಕೊಡುವ ಸಂಪ್ರದಾಯವನ್ನಿಟ್ಟುಕೊಂಡು (ಆ ಕಾಲದಲ್ಲೇ!-ಇಂದು ಕೂಡಾ ಕೆಲಪ್ರಕಾಶಕರು ಕೊಡುವುದು ಶೇ ೫.) ಆದರಂತೆ ಲೇಖಕ ರೊಪ್ಪಿದರೆ ಭಾಗಶಃ ಹಣ, ಭಾಗಶಃ ಹಣಕ್ಕೆ ಪುಸ್ತಕಗಳನ್ನು ಕೊಟ್ಟು ಗೌರವಿಸಿದ್ದಾರೆ. ಚಂದಾದಾರರ ಸಂಖ್ಯೆಯೂ ೮೦೦-೧೦೦೦ ಕ್ಕೇರಿದ್ದು ೧೯೪೪ ರ ನಂತರ ಇಳಿಮುಖವಾಗ ತೊಡಗಿತು. ಬುರ್ಲಿಯವರು ‘ಸಾಮ್ಯವಾದ’ ಎಂಬ ಪುಸ್ತಕವನ್ನೂ ಪ್ರಕಟಿಸಿದಾಗ ೧೫೦ ಜನ ಶ್ರೀಮಂತ ಚಂದದಾರರು ಕೆರಳಿ ಮಾಲೆಯಿಂದ ದೂರ ಸರಿದರಂತೆ. ಹೀಗೆ ಚಂದಾದಾರರ ಸಂಖ್ಯೆ ಇಳಿಮುಖವಾಯಿತು. ಮಿಂಚಿನ ಬಳ್ಳಿಯ ಪ್ರಕಟಣೆಗಳು ಉಪನ್ಯಾಸಕ್ಕೆ, ಕೆಲವಂತು ಆಧಾರ ಗ್ರಂಥಗಳಾಗಿ ಉಪಯುಕ್ತವಾಗಿವೆ ಎಂದು ಹಾಡಿ ಹೊಗಳಿದರೂ ಚಂದಾದಾರರ ಸಂಖ್ಯೆಯಂತೂ ಏರಲೇ ಇಲ್ಲ. ಬೇಂದ್ರೆಯವರ ವಿಚಾರ ಮಂಜರಿ, ಎನ್ಕೆಯವರ ಸಾಹಿತ್ಯ ವಾಹಿನಿ, ಬೆಟಗೇರಿಯವರ ಸಾಹಿತ್ಯವು ಸಾಗಿರುವ ದಾರಿ, ಗೌರೀಶ ಕಾಯ್ಕಿಣಿಯವರ ಮನೋವಿಜ್ಞಾನದ ರೂಪರೇಷೆ, ಸಿದ್ಧವನಹಳ್ಳಿ ಕೃಷ್ಣಶರ್ಮರ ದೀಪಮಾಲೆ, ವಿವಿಧ ಲೇಖಕರ ಸಾಹಿತ್ಯ ಹಾಗೂ ವಿಮರ್ಶೆ, ನಾಲ್ಕು ನೂರು ಪುಟಗಳ ಡೆಮಿ ಆಕಾರದ ಬೆಳ್ಳಿಹಬ್ಬದ ಸಂಚಿಕೆಯಾದ ಕನ್ನಡದ ಕಾಲು ಶತಮಾನ ಮುಂತಾದ ಕೃತಿಗಳು ಬಹು ಮಹತ್ವದ ಕೃತಿಗಳಾಗಿದ್ದು ಒಟ್ಟು ೧೧೪ ಗ್ರಂಥಗಳನ್ನೂ ಪ್ರಕಟಿಸಿತು.  ಬುರ್ಲಿಯವರ ಅನುಪಸ್ಥಿತಿಯಲ್ಲಿಯೂ ಕುಲಕರ್ಣಿದತ್ತ, ಚುಳಕಿ ಗೋವಿಂದರಾಯರು ಮುನ್ನಡೆಸಿದರೂ ಸಾಧ್ಯವಾಗದೆ ಕನ್ನಡಿಗರ ನಿರುತ್ಸಾಹದಿಂದ ೧೯೬೫ ರಲ್ಲಿ ಪ್ರಕಟಣೆಯನ್ನೂ ನಿಲ್ಲಿಸಬೇಕಾಯಿತು. ಇವರ ನಂತರ ಮುಂಬಯಿಯ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಾಪಕರಾಗಿದ್ದ ಚಿದಂಬರ ಮಾರ್ತಾಂಡರಾವ ಕುಲಕರ್ಣಿಯರು ಮಿಂಚಿನ ಬಳ್ಳಿಯನ್ನೂ ವಹಿಸಿಕೊಂಡು ದ್ವೈಪಾಯನ ಟ್ರಸ್ಟ್‌’ ಮೂಲಕ ಡಾ. ಶ್ರೀನಿವಾಸ ಹಾವನೂರರ ಸಂಪಾದಕತ್ವದಲ್ಲಿ ೧೦ ಕೃತಿಗಳನ್ನೂ ಹೊರ ತಂದರು. ಕುಲಕರ್ಣಿಯವರು ತೀರಿಕೊಂಡ ನಂತರ ಅದೂ ನಿಂತು ಹೋಯಿತು. ನಂತರ ‘ಬಿಂದು ಮಾಧವ ಸ್ಮಾರಕ ಪ್ರತಿಷ್ಠಾನ’ದ ಮೂಲಕ ಹುಬ್ಬಳ್ಳಿಯಲ್ಲಿ ಡಾ.ಎಂ.ಎಂ. ಜೋಶಿ, ಅನಂತ ತಡಸ, ಸುರೇಂದ್ರದಾನಿಯವರು ಸೇರಿಕೊಂಡು ಟ್ರಸ್ಟ್‌ ಸ್ಥಾಪಿಸಿದರು. ಈ ಟ್ರಸ್ಟ್‌ ಮಿಂಚಿನ ಬಳ್ಳಿಯ ಪ್ರಕಟಣೆಗಳನ್ನೂ ಮುಂದುವರೆಸಿ ಹದಿನಾಲ್ಕು ಪುಸ್ತಕಗಳನ್ನೂ ಹೊರತಂದಿತು. ೧೯೯೧ ರ ಅಕ್ಟೋಬರ್ ನಲ್ಲಿ ಚಿನ್ನದ ಹಬ್ಬವನ್ನಾಚರಿಸಿ ಮಾಲೆಯ ೧೩೯ನೆಯ ಗ್ರಂಥ ‘ಕನ್ನಡ ಮನಸ್ಸು’ ಕೃತಿಯನ್ನು ಬಿಡುಗಡೆ ಮಾಡಿತು. ಕೆಲ ಕಾಲಾನಂತರ ಇದೂ ಸ್ಥಗಿತವಾಯಿತು. ಖಾದಿಧಾರಿಯಾಗಿ, ಸೇವಾದಳ ಕಾರ್ಯಕರ್ತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿದ್ದಕ್ಕಿಂತ ಸಾಹಿತ್ಯ ಪರಿಚಾರಕರಾಗಿ ಅತಿ ಸುಲಭ ಬೆಲೆಗೆ ವಿಚಾರ ಪ್ರಚೋದಕ ಕೃತಿಗಳನ್ನೂ ಕನ್ನಡಿಗರಿಗೆ ನೀಡಿದ ಬುರ್ಲಿಯವರನ್ನು ಸನ್ಮಾನಿಸಿ ೬.೯.೧೯೮೧ ರಂದು ‘ಸಮರ್ಪಣ’  ಎಂಬ ಗ್ರಂಥವನ್ನು ಸ್ನೇಹಿತರು ಸಾಹಿತ್ಯಾಭಿಮಾನಿಗಳು, ಹಿತೈಷಿಗಳು ಅರ್ಪಿಸಿ, ಅವರ ಶತಮಾನೋತ್ಸವವನ್ನು ನಾಡಿನ ಜನತೆ ಅದ್ದೂರಿಯಾಗಿ ಆಚರಿಸುವಂತಹ ಭಾಗ್ಯವನ್ನೂ ಭಗವಂತನು ಕರುಣಿಸಲೆಂದು ಪ್ರಾರ್ಥಿಸಿದರೂ ಹಿತೈಷಿಗಳ ಬೇಡಿಕೆ ಈಡೇರದೆ ಬುರ್ಲಿಯವರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೧೯೮೧ ರ ಅಕ್ಟೋಬರ್ ೨೭ ರಂದು.

Details

Date:
August 18, 2023
Event Category: