೯-೩-೧೯೧೦ ೫-೨-೨೦೦೨ ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಹುಟ್ಟಿದ್ದು ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿ. ತಂದೆ ಶ್ರೀನಿವಾಸ ಅಯ್ಯಂಗಾರ್ಯರು (ಇಬ್ಬರದೂ ಒಂದೇ ಹೆಸರು) ತಾಯಿ ಲಕ್ಷ್ಮಮ್ಮ. ಮೂರು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರು. ಶಾಲೆಯ ಕಲಿಕೆಯ ಜೊತೆಗೆ ತಿಟ್ಟಿಕೃಷ್ಣ ಅಯ್ಯಂಗಾರ್ಯರಲ್ಲಿ ಸಂಗೀತ ಪಾಠ. ತಂದೆಯ ಜೊತೆಯಲ್ಲಿ ಸಹ ಗಾಯಕರಾಗಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು. ಮದರಾಸು ವಿಶ್ವವಿದ್ಯಾಲಯದ ಸಂಗೀತದ ಡಿಪ್ಲೋಮ (೧೯೩೧-೩೨) ಸಂಜೆ ತರಗತಿಯ ಪಾಠ. ಟೈಗರ್ ವರದಾಚಾರ್ಯರು ಪ್ರಾಂಶುಪಾಲರಾಗಿದ್ದ ಕಾಲ. ಬೆಳಗಿನ ವೇಳೆ ಮದರಾಸು ಮ್ಯೂಸಿಕ್ ಅಕಾಡಮಿಯಲ್ಲಿ ಪಾಠ. ಪ್ರಾಂಶುಪಾಲರು ಮುತ್ತಯ್ಯ ಭಾಗವತರು. ಎರಡುವೇಳೆ ಸಂಗೀತ ಕಲಿಕೆ, ಇತರರ ಸಂಗೀತ ಕಚೇರಿಯಲ್ಲಿ ಆಲಿಕೆ. ಗುರುಗಳೊಂದಿಗೆ ಚರ್ಚೆ, ಕಲಿಕೆ. ಮೈಸೂರಿಗೆ ಹಿಂದಿರುಗಿದ ನಂತರ ಕಲಿತದ್ದು ಪಾಶ್ಚಾತ್ಯ ಸಂಗೀತ. ೧೯೩೯ರಲ್ಲಿ ಲಂಡನ್ನಿನ ಟ್ರಿನಿಟಿ ಕಾಲೇಜಿನ ಸಂಗೀತದ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಪಡೆದ ಮೊದಲ ಶ್ರೇಣಿ, ಬೆಂಗಳೂರಿನ ವಾಣಿವಿಲಾಸ ಇನ್ಸ್ಟಿಟ್ಯೂಟಿನಲ್ಲಿ ಸಂಗೀತದ ಅಧ್ಯಾಪಕರಾಗಿ ನೇಮಕ. ಕೆಲಕಾಲ ಮೈಸೂರಿನ ಸರಕಾರಿ ಟ್ರೈನಿಂಗ್ ಕಾಲೇಜಿನಲ್ಲಿ ಸಲ್ಲಿಸಿದ ಸೇವೆ. ಜಯಚಾಮರಾಜ ಒಡೆಯರಿಂದ ಆಸ್ಥಾನ ವಿದ್ವಾಂಸರಾಗಿ ನೇಮಕ, ಸಾಹಿತ್ಯ ರಚನೆಯಲ್ಲೂ ತೊಡಗಿ ಮಹಾ ವೈದ್ಯನಾಥ ಅಯ್ಯರ್, ಮುತ್ತಯ್ಯ ಭಾಗವತರ್, ಟೈಗರ್ ವರದಾಚಾರ್ ಮುಂತಾದವರ ಬಗ್ಗೆ ಬರೆದ ಜೀವನ ಚರಿತ್ರೆಗಳು. ಕೆಲಕಾಲ ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿ, ಆಕಾಶವಾಣಿ ಆಡಿಶನ್ ಮಂಡಳಿಯ ತೀರ್ಪುಗಾರರ ಜವಾಬ್ದಾರಿ. ೧೯೨೮ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಓರಿಯಂಟರ್ ಕಾನ್ಫರೆನ್ಸ್ ಕಚೇರಿಯಲ್ಲಿ ಪ್ರಶಸ್ತಿ, ೧೯೮೦ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ ಸಂಗೀತ ಸಮ್ಮೇಳನದ ಅಧ್ಯಕ್ಷತೆ-ಗಾನಕಲಾ ಭೂಷಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ, ಕರ್ನಾಟಕ ಕಲಾ ತಿಲಕ ಬಿರುದು, ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನಸಭಾ, ನಂದಿನಿ ರಸಿಕ ಸಭಾ ಮುಂತಾದ ಸಂಸ್ಥೆಗಳಿಂದ ಗೌರವ, ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದರು : ಎಚ್.ಪಿ. ರಾಮಾಚಾರ್ – ೧೯೩೩ ಎಂ.ಟಿ. ರಾಜಕೇಸರಿ – ೧೯೫೨
* * *