ಬೆಳಗೆರೆ ಕೃಷ್ಣಶಾಸ್ತ್ರಿ

Home/Birthday/ಬೆಳಗೆರೆ ಕೃಷ್ಣಶಾಸ್ತ್ರಿ
Loading Events

೨೨-೫-೧೯೨೦ ಸಾಹಿತಿ, ಸಮಾಜ ಸೇವಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಲ್ಲಿ. ತಂದೆ ಆಶುಕವಿ ಚಂದ್ರಶೇಖರ ಶಾಸ್ತ್ರಿಗಳು, ತಾಯಿ ಮೋಕ್ಷಗುಂಡಂ ಅನ್ನಪೂರ್ಣಮ್ಮ. ಇವರ ಜೊತೆಯಲ್ಲಿ ಹುಟ್ಟಿದವರೆಲ್ಲರೂ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಇವರಲ್ಲಿ ಅಣ್ಣ ಕ್ಷೀರಸಾಗರರು ಹಲವಾರು ನಾಟಕ, ಕಾದಂಬರಿ ಬರೆದು ಪ್ರಖ್ಯಾತರು (ನೋಡಿ ಏಪ್ರಿಲ್ ೩೦) ಅಕ್ಕ ಬೆಳಗೆರೆ ಜಾನಕಮ್ಮ  ಕವಯಿತ್ರಿ. ತಂಗಿ ಬೆಳಗೆರೆ ಪಾರ್ವತಮ್ಮ  ಸಂಗೀತ, ಗಮಕ ಕಲಾವಿದೆ. ಪ್ರಾಥಮಿಕ ವಿದ್ಯಾಭ್ಯಾಸ ಹಳ್ಳಿಯಲ್ಲಿಯೇ. ಎಸ್.ಎಸ್.ಎಲ್.ಸಿ. ಪಾಸಾದ ನಂತರ ಕೆಲಕಾಲ ಶಾನುಭೋಗರಾಗಿದ್ದು ನಂತರ ಸೇರಿದ್ದು  ಅಧ್ಯಾಪಕ ವೃತ್ತಿಗೆ. ಚಳ್ಳೇಕೆರೆಯಲ್ಲಿ ಬದಲಿ ಇಂಗ್ಲಿಷ್ ಶಿಕ್ಷಕರಾಗಿ ನೌಕರಿ ಹಿಡಿದದ್ದು  ಇವರ ಜೀವನದ ಗತಿಯನ್ನೇ ಬದಲಿಸಿತು. ಆದರೆ ಇದ್ದಕ್ಕಿದ್ದಂತೆ ಒಂದೇ ದಿನ ಇಬ್ಬರು ಮಕ್ಕಳು, ಹೆಂಡತಿಯನ್ನು ಕಳೆದುಕೊಂಡ ಮನೆಯಲ್ಲಿ ಸ್ಮಶಾನ ಮೌನ. ಸ್ಕೂಲಿಗೆ ರಜೆ ಹಾಕದೆ, ಮನೆಗೆ ಬೀಗ ಹಾಕದೆ ಹಿಮಾಲಯದತ್ತ ಪಯಣ. ದಕ್ಷಿಣೇಶ್ವರ, ತಿರುವಣ್ಣಾಮಲೆ ಸುತ್ತಿ ಕಡೆಗೆ ಗಾಂಜಿಯವರ ಭೇಟಿ. “ಮೇಸ್ಟ್ರಾಗಿ ಮಕ್ಕಳಿಗೆ ನಾಲ್ಕಕ್ಷರ ಕಲಿಸು, ಜೀವನ ಸಾರ್ಥಕ ಮಾಡಿಕೋ” ಎಂದಾಗ ಮತ್ತೆ ಹಳ್ಳಿಗೆ. ಮೀರಾಸಾಬಿ ಹಳ್ಳಿ, ಹೆಗ್ಗೆರೆಯಂತಹ ಹಳ್ಳಿಯಲ್ಲಿ, ಜನರನ್ನು ಪ್ರಚೋದಿಸಿ ಪಾಠಶಾಲೆ, ಆಸ್ಪತ್ರೆ ತೆರೆದರು. ಸರ್ಕಾರದ ಸಹಾಯವಿಲ್ಲದೆ ಶಿಕ್ಷಕರ ವಸತಿ ಸಮುಚ್ಚಯ ನಿರ್ಮಿಸಿದರು. ಸಾಹಿತ್ಯ, ಸಂಸ್ಕೃತಿ ಆಸಕ್ತ ಕ್ಷೇತ್ರ. ಹಳ್ಳಿ ಚಿತ್ರ, ಹಳ್ಳಿ ಮೇಸ್ಟ್ರು, ಆಕಸ್ಮಿಕ ಮುಂತಾದ ಹತ್ತಕ್ಕೂ ಹೆಚ್ಚು ನಾಟಕ. ‘ತುಂಬಿ’ ಕವನ ಸಂಕಲನ. ಬೇಂದ್ರೆ, ಡಿವಿಜಿ, ವಿಸೀ ಮುಂತಾದ ದಿಗ್ಗಜರ ಒಡನಾಟದ ‘ಸಾಹಿತಿಗಳ ಸ್ಮೃತಿ’, ‘ಮರೆಯಲಾದೀತೇ ?’ ಮುಕುಂದೂರು ಸ್ವಾಮಿಗಳ ಅನುಭವದ ‘ಯೇಗ್ದಾಗೆಲ್ಲಾ ಐತೆ ’ (ಐದು ಮುದ್ರಣ-ನಾಲ್ಕು ಭಾಷೆಗೆ ಅನುವಾದ) ಅಪರೂಪದ ಕೃತಿಗಳ ರಚನೆ. ಕ್ಷೀರಸಾಗರರ ಹೆಸರಿನಲ್ಲಿ ಬೆಳಗೆರೆಯಲ್ಲಿ ಶಾಲೆ. ತಮ್ಮ ಜಮೀನಿನ ಫಸಲಿನಿಂದ ೨೦೦ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ. ಇಂಥವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು-ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ, ಹಳ್ಳಿ ಚಿತ್ರನಾಟಕಕ್ಕೆ ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿ, ಆಕಾಶವಾಣಿ ಪುರಸ್ಕಾರ, ಅಳಸಿಂಗಾಚಾರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ದೇವಕಿ ಮೂರ್ತಿ – ೧೯೩೧ ವಿದ್ಯುಲ್ಲತಾ – ೧೯೫೦ ವೀರಭದ್ರಕೌದಿ – ೧೯೫೫ ವಿದ್ಯಾಗಣೇಶ್ – ೧೯೫೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top