Loading Events

« All Events

  • This event has passed.

ಬೆ. ಗೋ. ರಮೇಶ್

August 22, 2023

೨೨-೮-೧೯೪೫ ಯಂತ್ರದಿಂದ ತಂತ್ರಜ್ಞಾನದವರೆಗೆ, ಕೂದಲಿನಿಂದ ಕೋವಿಯವರೆಗೆ ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ನಾನಾ ಪ್ರಕಾರಗಳಲ್ಲಿ ಸುಮಾರು ೪೨೫ಕ್ಕೂ ಹೆಚ್ಚು ಸಣ್ಣ ಸಣ್ಣ ಕೃತಿ ರಚಿಸಿರುವ ಬೆ.ಗೋ. ರಮೇಶ್ ಹುಟ್ಟಿದ್ದು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ. ತಂದೆ ಗೊವಿಂದರಾಜು, ತಾಯಿ ರಾಧಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಮಲ್ಲೇಶ್ವರಂ ಶಾಲೆ. ಇಂಟರ್‌ಮೀಡಿಯೆಟ್-ಸರಕಾರಿ ಕಾಲೇಜು. ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ. ನಂತರ ಸೇರಿದ್ದು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ವೃತ್ತಿಯಲ್ಲಿ ಎಂಜನಿಯರಾದರೂ ಪ್ರವೃತ್ತಿಯಲ್ಲಿ ಸಾಹಿತಿ. ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ ಬರೆಯದ ವಿಷಯಗಳೇ ಇಲ್ಲ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವೆನಿಸುವ ಕೃತಿಗಳ ರಚನೆಯಲ್ಲಿ ಸಿದ್ಧಹಸ್ತರು. ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಿತರು. ಮಕ್ಕಳ ಸಾಹಿತ್ಯ-ವಿಜ್ಞಾನಿಗಳು, ಸ್ವಾತಂತ್ರ್ಯಯೋಧರು, ದೇಶಭಕ್ತರು, ಕವಿಗಳು, ಕಲಾವಿದರು, ದಾರ್ಶನಿಕರು, ಸಮಾಜ ಸುಧಾರಕರು ಮುಂತಾದವರ ಬಗ್ಗೆ ಕೃತಿಗಳು. ಕಥಾ ಸಂಕಲನಗಳು, ನಾಟಕಗಳು ಹಲವಾರು ಕೃತಿಗಳು. ಹಿಪೊಕ್ರೆಟಿಸ್, ಗ್ಯಾಲನ್, ಜಗದೀಶ ಚಂದ್ರಬೋಸ್, ಯೂಕ್ಲಿಡ್, ಮಹೇಂದ್ರಲಾಲ್ ಸರ್ಕಾರ್, ಭಾರತೀಯ ವಿಜ್ಞಾನಿಗಳು, ಪಾಶ್ಚಾತ್ಯ ವಿಜ್ಞಾನಿಗಳು, ಸರ್ದಾರ್ ವಲ್ಲಭಾಯ್ ಪಟೇಲ್, ಸರೋಜಿನಿ ನಾಯಿಡು, ಸ್ವಾತಂತ್ರ್ಯದ ಕಿಡಿಗಳು, ಮುಂತಾದ ೧೦೦ಕ್ಕೂ ಹೆಚ್ಚು ಮಕ್ಕಳ ಕೃತಿಗಳು. ಪ್ರೌಢರಿಗಾಗಿ-ಸೂಕ್ತಿಗಳು, ಶುಭಾಷಿತಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಬಂಧಗಳು, ನಿಘಂಟುಗಳು, ನಮ್ಮ ದೇವಾಲಯಗಳು, ಕರ್ನಾಟಕದ ವಾಸ್ತುಶಿಲ್ಪ, ಭಾರತದ ನದಿಗಳು, ಭೌಗೋಳಿಕದರ್ಶನ, ವಿಜ್ಞಾನ ಕೃತಿಗಳು, ಆರೋಗ್ಯ ಭಾಗ್ಯದ ಕೃತಿಗಳು, ಔಷಯ ಪುಸ್ತಿಕೆಗಳು, ವ್ಯಕ್ತಿ ಪರಿಚಯ ಕೃತಿಗಳು ಸೇರಿ ೪೨೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಕೃತಿಗಳು ೧೦೦ಕ್ಕೂ ಹೆಚ್ಚು. ಹಲವಾರು ಭಾಷೆಗಳಿಗೆ ಅನುವಾದ. ಇತರೆ ಭಾಷೆಯಿಂದ ಕನ್ನಡಕ್ಕೆ. ಹಲವಾರು ಕಮ್ಮಟ, ಸಂಕಿರಣ, ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಭಾಷಣ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಸರ್. ಎಂ.ವಿ., ನವರತ್ನ ಪ್ರಶಸ್ತಿ, ಸುವರ್ಣ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಗೌರವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಕವಿರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚುಟುಕುರತ್ನ ಪ್ರಶಸ್ತಿ, ಜಯಪ್ರಕಾಶ ನಾರಾಯಣ ಗೌರವ ಪ್ರಶಸ್ತಿ ಮುಂತಾದುವು.

Details

Date:
August 22, 2023
Event Category: