ಭುವನೇಶ್ವರಿ ಹೆಗಡೆ

Home/Birthday/ಭುವನೇಶ್ವರಿ ಹೆಗಡೆ
Loading Events
This event has passed.

೦೬..೧೯೫೬ ಹಾಸ್ಯಬರಹಗಾರ್ತಿ, ಭಾಷಣಕಾರ್ತಿ, ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲದಲ್ಲಿ. ತಂದೆ ಗಣಪತಿ ಹೆಗಡೆ, ತಾಯಿ ಗೌರಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಅರ್ಥಶಾಸ್ತ್ರ) ಪದವಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ಪ್ರಾರಂಭ. ಅರ್ಥಶಾಸ್ತ್ರದ ಉಪನ್ಯಾಸಕಿಯಾದರೂ ತಮ್ಮ ಹುಟ್ಟಿನ – ಪ್ರಕೃತಿಯ ಪರಿಸರದಿಂದ ನಗೆಯನ್ನು ಹಂಚಿಕೊಳ್ಳುವ ಮನೋಧರ್ಮವನ್ನು ರೂಢಿಸಿಕೊಂಡಿದ್ದು, ಇದಕ್ಕಾಗಿ ಕಂಡುಕೊಂಡ ಅಭಿವ್ಯಕ್ತಿ ಮಾರ್ಗವೆಂದರೆ ಹಾಸ್ಯ ಬರಹಗಳು. ಯಾವುದೇ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯನ್ನೂ ಹೊಂದಿಸಿಕೊಳ್ಳುವಲ್ಲಿ ಪದಗಳನ್ನು ತಿರುಚಿಯೋ, ಹೊಸಪದಗಳನ್ನು  ಸೃಷ್ಟಿಸಿಯೋ ನಗೆ ಉಕ್ಕಿಸುವುದರಲ್ಲಿ ನಿಷ್ಣಾತರು. ಸಾಮಾನ್ಯವೆಂದು ಕೊಳ್ಳುವ ಅನೇಕ ಸನ್ನಿವೇಶಗಳನ್ನು ಭುವನೇಶ್ವರಿ ಹೆಗಡೆಯವರು ತಮ್ಮ ಹಾಸ್ಯ ದಂಡದಿಂದ ನಗೆ ಕೊನರುವಮತೆ ಮಾಡಿ ಓದುಗರನ್ನು ಆಕರ್ಷಿಸಬಲ್ಲರು. ಸುಮಾರು ಮೂರು ದಶಕಗಳಿಂದಲೂ ನಗೆಬರಹಗಳನ್ನು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಿಗೆ ಬರೆಯುತ್ತಾ ಬಂದಿದ್ದು, ಇದುವರೆವಿಗೂ ೩೫೦ ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡ ಇದ್ದು, ಹಾಸ್ಯಪ್ರಬಂಧಗಳು, ನಗೆಬರಹಗಳು ಇತ್ಯಾದಿ ಶೀರ್ಷಿಕೆಯಡಿಯಲ್ಲಿ ಸಂಕಲನಗಳನ್ನೂ ಪ್ರಕಟಿಸುತ್ತಾ ಬಂದಿದ್ದು, ೧೦ ಸಂಕಲನಗಳನ್ನೂ ಹೊರತಂದಿದ್ದಾರೆ. ‘ಎಂಥದು ಮಾರಾಯ್ರೆ….’ ದಕ್ಷಿಣ ಕನ್ನಡದ ವಿಶಿಷ್ಟ ಸಂಭಾಷಣಾಪದ. ಇದು ಎಲ್ಲರ ಬದುಕಿನಲ್ಲೂ ಪ್ರಶಂಸಿಸಲು, ದೂಷಿಸಲು, ತಾತ್ಸಾರಭಾವ ತಳೆಯಲು, ಗೌರವಿಸಲು, ತಿರಸ್ಕಾರ-ಮೆಚ್ಚುಗೆ, ಉದಾಸೀನ-ಆಸಕ್ತಿ, ಜಿಗುಪ್ಸೆ-ಪ್ರೀತಿ, ಸ್ನೇಹ-ವೈಮನಸ್ಯೆ ಹೀಗೆ ಎಲ್ಲ ಕಾಲದಲ್ಲೂ ಪ್ರಯೋಗಿಸುವ ಪದವನ್ನೂ ಹೇಗೆ ಉಪಯೋಗಿಸಬಹುದು, ಹೇಗೆ ಉಪಯೋಗಿಸುತ್ತಾರೆನ್ನುವುದಕ್ಕೆ ಸೋದಾಹರಣ ನೀಡಿ ಅದಕ್ಕೊಂದು ಸಂಶೋಧಾನಾತ್ಮಕ ಪದ ಎನ್ನುವವರೆಗೆ ಹಾಸ್ಯದ ಮೂಲಕ ಓದುಗರ ಮುಂದಿಡುತ್ತಾರೆ. ‘ಮುಗಳು’ ಇವರ ಮೊಟ್ಟಮೊದಲ ಹಾಸ್ಯಪ್ರಬಂಧಗಳ ಸಂಕಲನ ೧೯೮೬ರಲ್ಲಿ ಪ್ರಕಟಗೊಂಡದ್ದು ೧೯೯೬ರಲ್ಲಿ ಮರುಮುದ್ರಣಗೊಂಡಿದೆ. ಇದರಲ್ಲಿ ೧೨ ಹಾಸ್ಯಲೇಖನಗಳಿವೆ. ನಂತರ ಬಂದ ಹಾಸ್ಯ ಸಂಕಲನ ‘ನಕ್ಕು ಹಗುರಾಗಿ’ (೧೯೯೮, ೧೯೯೬), ಎಂಥದು ಮಾರಾಯ್ರೆ (೧೯೯೬, ೧೯೯೯), ವಲಲ ಪ್ರತಾಪ (೧೯೯೭), ‘ಹಾಸ-ಭಾಸ’ (೨೦೦೦), ಮೃಗಯಾವಿನೋದ (೨೦೦೧), ‘ಬೆಟ್ಟದ ಭಾಗೀರಥಿ’ (೨೦೦೪) ಮತ್ತು ೨೦೦೮ರಲ್ಲಿ ‘ಬೆಸ್ಟ್‌ ಆಫ್‌ ಭುವನೇಶ್ವರಿ ಹೆಗಡೆ’ (ಆಯ್ದ ಬರಹಗಳ ಸಂಕಲನ) ಕೃಯನ್ನು ಜಿ.ಎನ್‌.ರಂಗನಾಥರಾವ್‌ರವರು ‘ಅಂಕಿತಪುಸ್ತಕ’ ಪ್ರಕಾಶನಕ್ಕಾಗಿ ಸಂಪಾದಿಸಿದ್ದಾರೆ. ಹಾಸ್ಯಲೇಖನಗಳ ಜೊತೆಗೆ ಕೆಲ ಪತ್ರಿಕೆಗಳಿಗೆ ಅಂಕಣಬರಹಗಳನ್ನೂ ನಿರ್ವಹಿಸಿದ್ದಾರೆ. ಲಂಕೇಶ್‌ ಪತ್ರಿಕೆಗಾಗಿ ‘ಮಂಗಳೂರು ಮುಗುಳ್ನಗೆ’, ಉದಯವಾಣಿ ಪತ್ರಿಕೆಗಾಗಿ ‘ಲಘು-ಬಗೆ’, ಕರ್ಮವೀರ ಪತ್ರಿಕೆಗಾಗಿ ‘ಎಂಥದು ಮರಾಯ್ರೆ’ ಮುಂತಾದ ಅಂಕಣಗಳನ್ನು ಬರೆದು ಪ್ರಖ್ಯಾತರಾಗಿದ್ದಾರೆ. ಆಕಾವಾಣಿಯಲ್ಲಿಯೂ ಹಾಸ್ಯಭಾಷಣ, ರೂಪಕ, ಚಿಂತನ, ಹಾಗೂ ಪ್ರಹಸನಗಳು ಪ್ರಕಟಗೊಂಡಿವೆ. ನಗೆನಾಟಕಗಳು ಎಲ್ಲ ಬಾನುಲಿ ಕೇಂದ್ರಗಳು ಹಾಗೂ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗಿವೆ. ದೂರದರ್ಶನದಲ್ಲಿ ಹರಟೆ, ಚರ್ಚೆ, ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಹಾಸ್ಯ ಸಮ್ಮೇಳನಗಳಲ್ಲಿ ಭಾಷಣ, ಪ್ರಬಂಧ ಮಂಡನೆ ಮಾಡಿದ್ದಾರೆ. ೧೯೮೮ರಲ್ಲಿ ತಂಜಾವೂರಿನಲ್ಲಿ ನಡೆದ ಚತುರ್ದ್ರಾವಿಡ ಭಾಷಾ ಸಮ್ಮೇಳನದಲ್ಲಿ ಲಮತ್ತು ೧೯೮೯ರಲ್ಲಿ ನಡೆದ ದೆಹಲಿಯ ಬರಹಗಾರರ ಒಕ್ಕೂಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಪ್ರಥಮ ಪಿ.ಯು. ಕನ್ನಡ ಪಠ್ಯಪುಸ್ತಕದಲ್ಲಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇವರ ಪ್ರಬಂಧಗಳು ಸೇರ್ಪಡೆಯಾಗಿವೆ. ೧೯೮೩, ೮೪, ೮೫ರಲ್ಲಿ ಸತತವಾಗಿ ಮೂರುಬಾರಿ ಬೀಜಿ ಹಾಸ್ಯ ಪ್ರಶಸ್ತಿ ಪಡೆದು ಹ್ಯಾಟ್ರಿಕ್‌ ಸಾಧಿಸಿದವರು. ‘ಮುಗುಳು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಪ್ರಶಸ್ತಿ; ‘ನಕ್ಕು ಹಗುರಾಗಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ; ಎಂಥದು ಮಾರಾಯ್ರೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ ಮತ್ತು ಹಾಸ-ಭಾಸಷ ಕೃತಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನ ಕುಂಬಾಸ ಪ್ರಶಸ್ತಿ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ಕರಾವಳಿಯ ಲೇಖಕಿಯರ ಸಂಘ, ಮಂಗಳೂರಿನ ಕೆನರಾ ಬ್ಯಾಂಕ್‌, ಶಿವಮೊಗ್ಗ ಕರ್ನಾಟಕ ಸಂಗ, ವಿಜಾಪುರ ಕರ್ನಾಟಕ ಸಂಘ ಮುಂತಾದವುಗಳಿಂದಲೂ ಗೌರವಕ್ಕೆ ಪಾತ್ರರಾಗಿರುವುದರ ಜೊತೆಗೆ ಏಷಿಯಾದ ಅಂತಾರಾಷ್ಟ್ರೀಯ ಸಾಧನಶೀಲ ಮಹಿಳೆಯರ ಕುರಿತಾದ ಪುಸ್ತಕ ‘ರೆಫರೆನ್ಸ್‌ ಏಷಿಯಾ’ದಲ್ಲಿ ಹೆಸರು ಸೇರ್ಪಡೆಯಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top