Loading Events

« All Events

  • This event has passed.

ಮಂಗಳವೇಢೆ ಶ್ರೀನಿವಾಸರಾಯರು

November 11, 2023

೧೧.೧೧.೧೮೯೫ .೧೨.೧೯೮೦ ಕನ್ನಡ ಸಾಹಿತ್ಯವನ್ನು ರಚಿಸಿ, ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದಷ್ಟೇ, ಸಾಹಿತ್ಯ ಕ್ಷೇತ್ರದ ಬೆನ್ನೆಲುಬಾಗಿ ನಿಂತು, ಕನ್ನಡದ ಉಳಿವಿಗಾಗಿ ಮುಂದಾಳತ್ವ ವಹಿಸಿ ಹೋರಾಟ ಮಾಡಿದ ಮಂಗಳವೇಢೆ ಶ್ರೀನಿವಾಸರಾಯರು ಹುಟ್ಟಿದ್ದು ಸವಣೂರು. ತಂದೆ ರಾಜೇರಾಯರು ಸವಣೂರು ಸಂಸ್ಥಾನದಲ್ಲಿ ದಿವಾನರಾಗಿದ್ದರು. ಆದರೆ ಅಂತಹ ಮನೆತನದಲ್ಲಿ ಹುಟ್ಟಿದರೂ ಐಶಾರಾಮಿ ಜೀವನವನ್ನು ತ್ಯಜಿಸಿ ನಾಡಿನ ಏಳಿಗೆಗಾಗಿ, ಕನ್ನಡದ ಏಳಿಗೆಗಾಗಿ ಹೋರಾಟವನ್ನು ಪ್ರಾರಂಭಿಸಿದರು. ಇವರ ಗುರುಗಳೇ ಆಲೂರು ವೆಂಕಟರಾಯರು. ೧೯೨೦ ರಲ್ಲಿನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿ ಬಂದ ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ನಂತರ ಕರ್ನಾಟಕ ಏಕೀಕರಣಕ್ಕಾಗಿ ದುಡಿಯಲು ನಿರ್ಧರಿಸಿದರು. ಸ್ವಾತಂತ್ರ್ಯದ ಬಗ್ಗೆ, ಸ್ವಾತಂತ್ರ್ಯ ಚಳವಳಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ೧೯೨೧ರಲ್ಲಿ ‘ಕನ್ನಡ ನವಜೀವನ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಗುಜರಾತಿ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಗಾಂಧೀಜಿಯವರ ‘ನವ ಜೀವನ್’ ಪತ್ರಿಕೆಯ ಕನ್ನಡದ ಅವತರಣಿಕೆಯಾಗಿತ್ತು. ಕನ್ನಡದ ಬಗ್ಗೆ ಜನರಲ್ಲಿ ಆಸಕ್ತಿ ಇರದಿದ್ದ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಕಲ್ಪನೆಯೇ ಇಲ್ಲದಿದ್ದ ಸಂದರ್ಭದಲ್ಲಿ ಕನ್ನಡ ಹಿರಿಮೆ – ಗರಿಮೆಗಳನ್ನು ಪ್ರತಿಪಾದಿಸಿ, ಕನ್ನಡಿಗರನ್ನು ಬಡಿದೆಬ್ಬಿಸುವ ಕೈಂಕರ್ಯಕ್ಕೆ ತೊಡಗಿಸಿಕೊಂಡರು. ಇದಕ್ಕಾಗಿ ‘ಕನ್ನಡಿಗ’ ಎಂಬ ಪತ್ರಿಕೆಯನ್ನು ೧೯೨೫ರಲ್ಲಿ ಬಾಗಲಕೋಟೆಯಲ್ಲಿದ್ದಾಗ ಪ್ರಾರಂಭಿಸಿದರು. ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿದ್ದಾಗ ಬಲವಂತ ರಾವ್ ಮಜುಂದಾರ್ ಎಂಬ ವಕೀಲರಿಗೆ ಪತ್ರಿಕೆ ನಡೆಸಲು ಒಪ್ಪಿಸಿದ್ದರು. ಆದರೆ ಸರಕಾರವು ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡು ಪತ್ರಿಕೆಯು ನಿಂತು ಹೋಯಿತು. ಇವರು ಜೈಲಿನಿಂದ ಹೊರಬಂದ ನಂತರ ಕನ್ನಡಿಗ ಪತ್ರಿಕೆಯನ್ನು ಧಾರವಾಡದಿಂದ ಪ್ರಕಟಿಸತೊಡಗಿದರು. ಆಲೂರು ವೆಂಕಟರಾಯರು ಅದರ ಸಂಪಾದಕರಾದರು. ರಂ.ಶ್ರೀ. ಮುಗಳಿ, ಸ.ಸ.ಮಾಳವಾಡ, ಕೃಷ್ಣಮೂರ್ತಿ ಪುರಾಣಿಕ ಮುಂತಾದವರುಗಳ ಚೊಚ್ಚಲ ಬರಹಗಳು ಬೆಳಕು ಕಂಡಿದ್ದು ‘ಕನ್ನಡಿಗ’ ಪತ್ರಿಕೆಯಲ್ಲಿಯೇ. ಶಂ.ಬಾ. ಜೋಶಿಯವರ ‘ಮಹಾರಾಷ್ಟ್ರಕ್ಕೆ ಕನ್ನಡಿಗರ ಕೊಡುಗೆ’ ಎಂಬ ಲೇಖನ ಪ್ರಕಟಗೊಂಡಿದ್ದು ಕನ್ನಡಿಗ ಪತ್ರಿಕೆಯಲ್ಲೆ. ಮುಂದೆ ಇದು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವಿಲೀನವಾಯಿತು. ಕನ್ನಡದ ಹಿತ ಕಾಯ್ದಷ್ಟೆ ವಾಣಿಜ್ಯ ಉದ್ದಿಮೆಗಳ ಹಿತಕಾಯಲು ಪ್ರಾರಂಭವಾಗಿದ್ದ ವರ್ತಕರ ಸಂಘದ (ಚೆಂಬರ್ ಆಫ್ ಕಾಮರ್ಸ್) ಗೌರವ ಸದಸ್ಯರಾಗಿಯೂ ದುಡಿದರು. ಅಂದು ಎಲ್ಲೆಡೆ ಇಂಗ್ಲಿಷ್ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಮನಿಯಾರ್ಡರ್ ಫಾರ್ಮ್, ರೈಲು ಫ್ಲಾಟ್ ಫಾರಂ ಟಿಕೆಟ್ ಮುದ್ರಣ, ರೈಲ್ವೆ ವೇಳಾ ಪಟ್ಟಿ ಮುಂತಾದವುಗಳು ಕೂಡಾ ಕನ್ನಡದಲ್ಲಿ ಮುದ್ರಿತವಾಗುವಂತೆ ಆಗ್ರಹಪಡಿಸಿದರು. ಕನ್ನಡದ ರೈಲ್ವೆ ವೇಳಾ ಪಟ್ಟಿಯನ್ನು ಯಾರು ಕೊಳ್ಳುತ್ತಾರೆಂದು ನಿರಾಶಾವಾದದ ಉತ್ತರ ಹೇಳತೊಡಗಿದಾಗ ನೂರಾರು ಕನ್ನಡದ ಪ್ರತಿಗಳನ್ನು ಖರೀದಿಸಿ ಸ್ನೇಹಿತರಿಗೆಲ್ಲಾ ಹಂಚಿದರು. ಅಪರೂಪಕ್ಕೆ ಬಾಗಲಕೋಟೆಗೆ ಬರುತ್ತಿದ್ದ ಕನ್ನಡ ಚಲನಚಿತ್ರಗಳನ್ನು ಕನ್ನಡದವರೇ ಅಸಡ್ಡೆಯಿಂದ ನೋಡತೊಡಗಿದಾಗ, ತಾವೇ ಹಣ ತೆತ್ತು ಟಿಕೇಟು ಖರೀದಿಸಿ ನೆರೆಹೊರೆಯವರನ್ನೆಲ್ಲಾ ಕರೆದೊಯ್ದು ಕನ್ನಡದ ಪ್ರೇಮ ಬೆಳೆಯುವಂತೆ ಮಾಡಿದರು. ಸಾಹಿತಿ ಕೆರೂರು ವಾಸುದೇವಾಚಾರ್ಯರ ನೆನಪಿನಲ್ಲಿ ಸ್ಥಾಪಿತವಾಗಿದ್ದ ‘ವಾಸುದೇವ ವಿನೋದಿನಿ ನಾಟ್ಯ ಸಭಾ’ ಎಂಬ ಸಂಸ್ಥೆಯಲ್ಲಿ ಸ್ತ್ರೀ ಪಾತ್ರಗಳನ್ನು ವಹಿಸಿದ್ದೇ ಅಲ್ಲದೇ ಮೂವತ್ತು ವರ್ಷಕಾಲ ಸಂಸ್ಥೆಯ ಒಡನಾಟವನ್ನು ಹೊಂದಿದ್ದರು. ೧೯೭೩ರ ನವಂಬರ್‌೧ ರಿಂದ ವಿಶಾಲ ಮೈಸೂರು ರಾಜ್ಯವು ಕರ್ನಾಟಕವೆಂದು ಪುನರ್‌ನಾಮಕರಣಗೊಂಡ ನಂತರವೂ ಕರ್ನಾಟಕದ ಸಮೃದ್ಧ ಯೋಜನೆಯನ್ನು ಕಾರ್ಯಗತಗೊಳಿಸಲು ‘ಕರ್ನಾಟಕ ಸಮೃದ್ಧಿ ಸಂಯೋಜನಾ ಪರಿಷತ್ತು’ ಎಂಬ ಸಂಸ್ಥೆ ಕಟ್ಟಿ ಹಲವಾರು ಬುದ್ಧಿಜೀವಿಗಳನ್ನು ಒಂದೇ ವೇದಿಕೆಗೆ ತಂದರು. ಆದರೆ ಸಂಸ್ಥೆಗೆ ಪೂರ್ಣಾವಧಿ ಗಮನ ಕೊಡುವ ಸದಸ್ಯರ ಕೊರತೆಯಿಂದ ಸಂಸ್ಥೆ ನಿರೀಕ್ಷಿಸಿದ ಕಾರ್ಯಗಳನ್ನು ಕೈಗೊಳ್ಳಲಾಗಲ್ಲಿಲ್ಲ. ಸದಾ ಕನ್ನಡದ, ಕರ್ನಾಟಕದ ಹಿತರಕ್ಷಣೆಯ ಬಗ್ಗೆಯೇ ಚಿಂತಿಸುತ್ತಿದ್ದ ಶ್ರೀನಿವಾಸರಾಯರು ತೀವ್ರ ಅನಾರೋಗ್ಯದಿಂದ ೪.೧೨.೧೯೮೦ರಲ್ಲಿ ನಿಧನರಾದರು.

Details

Date:
November 11, 2023
Event Category: