Loading Events

« All Events

  • This event has passed.

ಮತ್ತೂರು ಕೃಷ್ಣಮೂರ್ತಿ

August 8, 2023

೦೮..೧೯೨೯ ೦೬.೧೦.೨೦೧೧ ವೇದ, ಶಾಸ್ತ್ರ, ಸಂಸ್ಕೃತಿಗಳ ದೀರ್ಘ ಅಧ್ಯಯನ ನಡೆಸಿ ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿದ್ದಲ್ಲದೆ, ಕುಮಾರ ವ್ಯಾಸಭಾರತದ ಗಮಕವಾಚನ-ವ್ಯಾಖ್ಯಾನಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರವನ್ನೂ ಸಮೃದ್ಧಗೊಳಿಸಿದ ಕೃಷ್ಣಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಮತ್ತೂರಿನಲ್ಲಿ ೧೯೨೯ ರ ಆಗಸ್ಟ್‌ ೮ ರಂದು. ತಂದೆ ರಾಮಕೃಷ್ಣಯ್ಯ. ತಾಯಿ ನಂಜಮ್ಮನವರ ೮ನೆಯ ಮಗುವಾಗಿ. ಕಡುಬಡತನದ ಬದುಕಾದರೂ ಸಂಸ್ಕೃತ ಗ್ರಾಮದ ವೇದ ಮಂತ್ರ ಪಠಣ, ಗಮಕವಾಚನ-ವ್ಯಾಖ್ಯಾನಗಳನ್ನು ಕೇಳುತ್ತಾ ಸಾಂಸ್ಕೃತಿಕ ಸಿರಿವಂತಿಕೆಯಿಂದ ಬೆಳೆದವರು. ಪ್ರಾಥಮಿಕ ಶಿಕ್ಷಣ ಮತ್ತೂರಿನಲ್ಲಿ. ಮದರಾಸಿನಲ್ಲಿದ್ದ ಅಣ್ಣನ ಮನೆಯಲ್ಲಿದ್ದುಕೊಂಡು ಹೈಸ್ಕೂಲಿಗೆ ಸೇರಿ ಎಸ್.ಎಸ್‌.ಎಲ್‌.ಸಿ. ಯಲ್ಲಿ ಉತ್ತೀರ್ಣರಾದದ್ದು ಕ್ರಿಶ್ಚಿಯನ್‌ ಕಾಲೇಜಿನಿಂದ (೧೯೪೮). ತುತ್ತಿನ ಬಾಯಿ ತುಂಬಿಕೊಳ್ಳಲು ಉದ್ಯೋಗ ಅನಿವಾರ್ಯವೆನಿಸಿ ವಿದ್ಯೆಯ ಕಲಿಕೆಗೆ ವಿದಾಯ. ಬಿ.ಟಿ.ಎಸ್‌ ಬಸ್‌ ಕಂಡಕ್ಟರಾಗಿ ಸೇರಿ, ಪ್ರಾಮಾಣಿಕ ವರ್ತನೆಯಿಂದ ಇನ್‌ಸ್ಪೆಕ್ಟರ್ ಹುದ್ದೆಗೆ ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೆ ಭಡ್ತಿ. ಇದೂ ಸರಿಹೊಂದದೆ ರಾಜಾಮಿಲ್‌ನಲ್ಲಿ ಗುಮಾಸ್ತೆ ಹುದ್ದೆ ಕೆಲಕಾಲ. ೧೯೪೪ ರಲ್ಲಿ ಮದರಾಸಿನಲ್ಲಿದ್ದಾಗ, ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಗಾಂಧೀಜಿಯವರನ್ನು ಕಾಣಲು ಸ್ವಯಂ ಸೇವಕರಾಗಲು ಹೋದರು. ಆದರೆ ಹಿಂದಿ ಭಾಷೆ ಬಾರದಿದ್ದುದರಿಂದ ಹಿಂದಕ್ಕೆ ಕಳುಹಿಸಿದ್ದನ್ನು ಒಂದು ಸವಾಲಾಗಿ ಸ್ವೀಕರಿಸಿ ಮೂರು ದಿವಸದಲ್ಲಿ ಹಿಂದಿ ಕಲಿತು (ಸಂಭಾಷಿಸುವಷ್ಟು) ಗಾಂಧೀಜಿಯವರು ತಂಗುವ ಕೊಠಡಿಯ ಸ್ವಯಂ ಸೇವಕರಾಗಲು ಆಯ್ಕೆಯಾದರು. ತಮಿಳು ಭಾಷೆಯನ್ನೂ ಬಿಡದೆ ಕಲಿತು ಕಲ್ಕಿಕೃಷ್ಣಮೂರ್ತಿಯವರ ತಮಿಳು ಕಾದಂಬರಿ ‘ಅಲೈಓಸೈ’ನ್ನು ಅಲೆಯೊಸಗೆ’ ಎಂದು ಕನ್ನಡಕ್ಕೆ ಅನುವಾದಿಸಿದರು. ಇದು ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಯಿತು. ಬೆಂಗಳೂರಿಗೆ ಬಂದಾಗ ಸಾಹಿತ್ಯ ದಿಗ್ಗಜರುಗಳಾದ ಸಿದ್ಧವನಹಳ್ಳಿ ಕೃಷ್ಣಶರ್ಮ, ಡಿ.ವಿ.ಜಿ., ಕಾರಂತ, ಮಾಸ್ತಿ ಇವರೆಲ್ಲರ ಸಂಪರ್ಕಕ್ಕೆ ಬಂದ ನಂತರ ಇವರ ಯೋಚನಾಲಹರಿಯೇ ಬದಲಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ಸೇರುವಂತೆ ಮಾಡಿತು. ಕಾವ್ಯವಾಚನ-ಪ್ರವಚನಗಳಲ್ಲೂ ಆಸ್ಥೆವಹಿಸಿ ರಾಜಾಜಿನಗರದಲ್ಲಿ ನಡೆಸಲು ಪ್ರಾರಂಭಿಸಿದ ಕುಮಾರ ವ್ಯಾಸ ಭಾರತ ವಾಚನ-ವ್ಯಾಖ್ಯಾನ ಕಾರ್ಯಕ್ರಮದಿಂದ ರಾಜಕಾರಣಿಗಳನ್ನೂ ಆಕರ್ಷಿಸಿದರು. ಇವರ ಅಪೇಕ್ಷೆಯಂತೆ ಗಾಂಧೀಜಿಯವರ ಬಗ್ಗೆ ಗಾಂಧಿ ಶತಾಬ್ದಿಗಾಗಿ ಬೀರೂರು ಚಿದಂಬರ ಜೋಯಿಸರು ‘ಮೋಹನ ತರಂಗಿಣಿ’ ಎಂಬ ಹೆಸರಿನಿಂದ ರಚಿಸಿದ ಗಾಂಧಿ ಕಾವ್ಯ (ಗಾಂಧೀಜಿಯವರ ಜೀವನ, ಸಾಧನೆ, ತತ್ತ್ವ, ಧ್ಯೇಯಗಳ) ವಾಚನ ಕಾರ್ಯ ಕ್ರಮವನ್ನೂ ರಾಜ್ಯಾದ್ಯಂತ ೧೯೬೯ರ ನವಂಬರ್ ೨ ರಿಂದ ಒಂದು ವರ್ಷಕಾಲ ನಡೆಸಿದರು. ಆಕಾಶವಾಣಿಯಲ್ಲಿಯೂ ಡಾ.ಎಚ್‌.ಕೆ. ರಂಗನಾಥರ ಸಹಾಯದಿಂದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ. ಬೆಂಗಳೂರಿನ ಭಾರತೀಯ ವಿದ್ಯಾಭವನ ಕೇಂದ್ರದ ರಿಜಿಸ್ಟ್ರಾರ್ ಆಗಿ ಸೇರ್ಪಡೆ. (೧೯೭೦). ನಂತರ ೧೯೭೨ ರಲ್ಲಿ ಲಂಡನ್ನಿಗೆ ಪ್ರಯಾಣ. ಭಾರತೀಯ ವಿದ್ಯಾಭವನವನ್ನೂ ಲಂಡನ್ನಿನಲ್ಲಿ ಕಟ್ಟಿ ಬೆಳೆಸುವಲ್ಲಿ ಪಟ್ಟ ಅಗಾಧ ಶ್ರಮ. ದಿನದ ೨೪ ಗಂಟೆಯೂ ಭವನದ ಕೆಲಸಕ್ಕಾಗಿ ಮೀಸಲಿಟ್ಟು ಕಚೇರಿಯಲ್ಲಿ ರಿಜಿಸ್ಟ್ರಾರ್ ಎಂದು ಭಾವಿಸದೆ ಪರಿಚಾರಕರಂತೆ ದುಡಿದರು. ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ಕೆ.ಎಂ. ಮುನ್ಷಿಯವರಿಂದ ೧೯೩೯ ರಲ್ಲಿ ಸ್ಥಾಪಿಸಲ್ಪಟ್ಟಿದ್ದ ಈ ಸಾಂಸ್ಕೃತಿಕ ಸಂಸ್ಥೆಯು ವಿಶ್ವವ್ಯಾಪಿಯಾಗಿದ್ದು ಇಂಗ್ಲೆಂಡ್‌, ಅಮೆರಿಕಾ, ಯುರೋಪ್‌, ಆಸ್ಟ್ರೇಲಿಯ ಆ ಮುಂತಾದೆಡೆಗಳಲ್ಲೆಲ್ಲಾ ತನ್ನ ಶಾಖೆಗಳನ್ನು  ಹೊಂದಿರುವಂತೆ ಭಾರತದಲ್ಲಿಯೂ ಅನೇಕ ಕಡೆ ಹೊಂದಿದ್ದು ಕರ್ನಾಟಕ ರಾಜ್ಯದಲ್ಲಿ ಮೈಸೂರು, ಮಂಗಳೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿದೆ. ಭಾರತದ ಕಲೆ, ಸಾಹಿತ್ಯ, ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವುದರಲ್ಲಿ ಸಫಲರಾಗಿರುವುದರಲ್ಲಿ ಮತ್ತೂರರಂತಹವರ ಅಗಾಧ ಶ್ರಮ ಅಡಗಿದೆ. ಲಂಡನ್ನಿನಲ್ಲಿ ಪ್ರಾರಂಭಿಸಿದಾಗ ೧೦ x ೧೦ ಅಡಿ ಅಳತೆಯ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಭವನವು ಪ್ರಾರಂಭದ ದಿನಗಳಲ್ಲಿ ಭ್ರಮನಿರಸನ, ನಿರಾಸೆಗಳಿಂದ ಕೂಡಿದ್ದರೂ ಛಲಬಿಡದೆ ‘ಹೇಗಾದರೂ ಮಾಡಿ ಲಂಡನ್ನಿನಲ್ಲಿ ಭವನವನ್ನೂ ನಿರ್ಮಿಸಿಯೇ ಭಾರತಕ್ಕೆ ಹೊರಡುವೆ’ ಎಂದು ಶಪಥ ಮಾಡಿದಂತೆ ಕಾರ್ಯರೂಪಕ್ಕೆ ತಂದ ಚಾಣಾಕ್ಷರು. ಈ ರೀತಿ ದುಡಿದ ಇವರ ಕೈಗಳ ಹಿಂದೆ ಹಲವಾರು ಮಂದಿ ದಾನಿಗಳ ಬಹುದೊಡ್ಡ ನೆರವೂ ಸೇರಿದ್ದು ಈಗ ಕ್ಯಾಸಲ್‌ಟೌನ್‌ ರಸ್ತೆಯಲ್ಲಿರುವ ಚರ್ಚ್‌ನಲ್ಲಿ ೧೪೮೦೦ ಚದರ ಅಡಿ ಸ್ವಂತ ಕಟ್ಟಡ ಹೊಂದಿದೆ. ಇದಕ್ಕೆಲ್ಲಿ ಮುಖ್ಯಕಾರಣರೆಂದರೆ ಮತ್ತೂರು ಕೃಷ್ಣಮೂರ್ತಿಯವರೆ. ಲಂಡನ್ನಿನ ಭವನವು ವ್ಯವಸ್ಥೆಮಾಡುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನೇಕ ಕಲಾವಿದರು ಪಾಲ್ಗೊಂಡಿದ್ದಾರೆ. ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ, ಯೋಗಾಚಾರ್ಯ ಬಿ.ಕೆ.ಎಸ್‌. ಅಯ್ಯಂಗಾರ್, ಸಿತಾರ್ ಪಟು ಪಂಡಿತ್‌ ರವಿಶಂಕರ್, ಭೀಮಸೇನಜೋಶಿ, ಡಾ.ಬಾಲಮುರಳಿಕೃಷ್ಣ, ಸುಬ್ಬುಲಕ್ಷ್ಮಿ, ಯಹೂದಿ ಮೆನ್ಯುಹಿನ್‌-ಹೀಗೆ ಭೇಟಿ ನೀಡಿ ಕಾರ್ಯಕ್ರಮ ನೀಡಿದ ಕಲಾವಿದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಾಮಾಯಣ, ಮಹಾಭಾರತ, ಗೀತೆ, ಉಪನಿಷತ್ತುಗಳ ಮೇಲೆ ಪ್ರವಚನಗಳನ್ನೂ ಪ್ರಾರಂಭಿಸಿದಾಗ ಅನೇಕ ಇಂಗ್ಲಿಷ್‌ ಗಣ್ಯರೂ ಬಂದು ಕುಳಿತು ಕೇಳತೊಡಗಿದರು. ಈ ರೀತಿ ಭವನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಗಣ್ಯರಲ್ಲಿ ಲಾರ್ಡ್ ಥಾಮ್ಸನ್‌ ಆಫ್‌ ಪ್ಲೀಟ್‌, ಮೌಂಟ್‌ ಬ್ಯಾಟನ್‌, ಬ್ರಿಟನ್ನಿನ ಪ್ರಧಾನಿಯಾಗಿದ್ದ ಜೇಮ್ಸ್‌ ಕ್ಯಾಲಹನ್‌, ಲಾರ್ಡ್ ಫೆನ್ನರ್, ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್‌ಚಾರ್ಲ್ಸ್, ಮಾರ್ಗರೇಟ್‌ ಥ್ಯಾಚರ್, ಸರ್ ರಿಚರ್ಡ್ ಅಟೆನ್‌ಬರೋ ಮುಂತಾದವರಿದ್ದಾರೆ. ೧೯೭೫ರಲ್ಲಿ ಆಮ್‌ಸ್ಟರ್ಡ್ಯಾಮ್‌ನಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನ, ಪ್ಯಾರಿಸ್‌ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನಗಳಲ್ಲಿ ಪಾಲ್ಗೊಂಡು ಸನಾತನ ಹಿಂದು ಧರ್ಮದ ಬಗ್ಗೆ ಮಾಡಿದ ಇವರ ಭಾಷಣ ದಾಖಲೆಯನ್ನೇ ನಿರ್ಮಿಸಿದುವು. ೧೯೮೪ರಲ್ಲಿ ಬಿಬಿಸಿ ಡೈಮಂಡ್‌ ಜ್ಯೂಬಿಲಿಯ ಸಂದರ್ಭದಲ್ಲಿ ಇವರಿಗೆ ಪ್ರಾರ್ಥನೆ ಹೇಳುವ ಅವಕಾಶ ದೊರೆತಿದ್ದು, ಇವರ ಪ್ರಾರ್ಥನೆಯು ವಿಶಿಷ್ಟವಾಗಿದ್ದು ಪ್ರಪಂಚದ ಅರ್ವಾಚೀನ ಧರ್ಮದಿಂದ ಹಿಡಿದು ಪ್ರಾಚೀನ ಧರ್ಮವಾದ ಹಿಂದು ಧರ್ಮದವರೆಗೆ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದಷ್ಟೇ ಅಲ್ಲದೆ ಬ್ರಿಟನ್ನಿನ ಮಹಾರಾಣಿಯವರ ಮೆಚ್ಚುಗೆಗೂ ಪಾತ್ರವಾಗಿ, ಇದರಿಂದ ಆದ ಪರಿಚಯದಿಂದ ಭವನ ಬೆಳೆಯಲು ಸಹಾಯಕವಾಯಿತು. ಲಂಡನ್ನಿನ ಥೇಮ್ಸ್‌ ಟಿವಿಯ ಮೂಲಕ ಪಾಶ್ಚಾತ್ಯರಿಗೆ ಭಾರತೀಯ ಹಬ್ಬಗಳು ಮುಂತಾದ ಸಾಂಸ್ಕೃತಿಯ ವಿಷಯಗಳು, ಗಾಂಧೀಜಿ, ಗೌತಮಬುದ್ಧ ಮೊದಲಾದ ಐತಿಹಾಸಿಕ ವ್ಯಕ್ತಿಗಳು ಮೊದಲಾದವುಗಳನ್ನು ಪರಿಚಯಿಸತೊಡಗಿದಾಗ ಇವರ ಸಹಾಯಕ್ಕೆ ಬಂದುದು ಬೆಂಗಳೂರಿನ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಎಚ್‌.ಕೆ. ರಂಗನಾಥರೊಡನೆ ಸೇರಿ ಮಕ್ಕಳ ನಾಟಕ, ಜವಹರಲಾಲ್‌ರವರ ಅಸ್ಥಿ ಸಂಚಯ, ದಸರಾ ಮಹೋತ್ಸವ, ಗೋಮಟೇಶ್ವರ ಮಹಾಮಸ್ತಕಾಭಿಷೇಕ ಮುಂತಾದವುಗಳ ನೇರ ಪ್ರಸಾರದಲ್ಲಿ ಪಾಲ್ಗೊಂಡದ್ದರಿಂದ ಬಿಬಿಸಿ ಯಲ್ಲಿ ಕಾರ್ಯಕ್ರಮ ನಡೆಸಲು ನೆರವಿಗೆ ಬಂದವು. ಹೀಗೆ ೨೩ ವರ್ಷಗಳ ಕಾಲ ಲಂಡನ್ನಿನ ವಿದ್ಯಾಭವನದ ಸೇವೆಯ ನಂತರ ೧೯೯೫ ರಲ್ಲಿ ಬೆಂಗಳೂರಿಗೆ ಬಂದು ಇಲ್ಲಿನ ವಿದ್ಯಾಭವನದ ಅಭಿವೃದ್ಧಿಗೂ ಕಾರಣರಾದರು. ಲಂಡನ್ನಿನಲ್ಲಿ ಪಡೆದ ಅನುಭವದಿಂದ ಬೆಂಗಳೂರು ಕೇಂದ್ರದಲ್ಲಿಯೂ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ, ವಾದ್ಯಸಂಗೀತ, ವೇದಪಾಠ ಇತ್ಯಾದಿ ತರಗತಿಗಳ ಜೊತೆಗೆ ಪತ್ರಿಕೋದ್ಯಮ, ಎಂ.ಬಿ.ಎ. ಕಮ್ಯುನಿಕೇಷನ್‌ ತರಗತಿಗಳನ್ನೂ ಪ್ರಾರಂಭಿಸಿದರು. ಲಂಡನ್ನಿನ ಭವನಕ್ಕೆ ಹೋಗುವ ಮೊದಲು ರೂಢಿಸಿಕೊಂಡಿದ್ದ ಗಮಕವಾಚನವನ್ನು ಪುನಃ ಹೊಸಹಳ್ಳಿ ಕೇಶಮೂರ್ತಿಯವರೊಡನೆ ಪ್ರಾರಂಭಿಸಿದ್ದಲ್ಲದೆ ಉದಯ ಟಿವಿ ವಾಹಿನಿಗಾಗಿ ಕುಮಾರವ್ಯಾಸ ಭಾರತ ಪ್ರವಚನವನ್ನೂ ಮೂರುವರೆ ವರ್ಷಕಾಲ ನಿರ್ವಹಿಸಿದರು. ಹೊಸಹಳ್ಳಿ ಕೇಶವಮೂರ್ತಿಯವರೊಡನೆ ವ್ಯಾಖ್ಯಾನ ಮಾಡತೊಡಗಿದರೆ ಇಬ್ಬರದೂ ಸೇರಿ ಹಾಲು-ಜೇನಿನಂತಾಗಿರುತ್ತಿತ್ತು. ಕರ್ನಾಟಕ ಭಾರತ ಕಥಾಮಂಜರಿಯ ಹತ್ತು ಪರ್ವಗಳನ್ನೂ ಸುಮಾರು ೨೦೦ ಕ್ಯಾಸೆಟ್ಟುಗಳಲ್ಲಿ ಅಳವಡಿಸಿದ ಸಾಹಸ ಭಾರತೀಯ ವಿದ್ಯಾಭವನದ್ದು, ಇದಕ್ಕೆ ಪೂರಕ ಸಹಾಯ ಒದಗಿಸಿದವರು ಎಚ್‌.ಎಂ.ಟಿ. ಸಂಸ್ಥೆ. ಈ ಕ್ಯಾಸೆಟ್ಟುಗಳಲ್ಲಿ ಕರ್ಣರಸಾಯನವನ್ನೂ ಉಣಬಡಿಸಿದ್ದಾರೆ. ಇವುಗಳನ್ನೂ ಇನ್‌ಫೋಸಿಸ್‌ ಫೌಂಡೇಷನ್‌ ಹಳ್ಳಿ ಹಳ್ಳಿಗೂ ತಲುಪಿಸಲು ಸಹಾಯ ಹಸ್ತ ನೀಡಿದೆ. ಬರಹಗಾರರಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ಮತ್ತೂರರು ಗಳಿಸಿಕೊಂಡಿರುವ ಸ್ಥಾನವೂ ವಿಶಿಷ್ಟವಾದುದು. ದಕ್ಷಿಣ ಭಾರತದ ಪ್ರಸಿದ್ಧ ಸಂಗೀತಗಾರರು (ಸ್ವತಂತ್ರಕೃತಿ). ಅಲೆಯೊಸಗೆ, ಬಾಳಿನ ಹಾದಿ, ಭಾನು, ದೀಪಧಾರಿಣಿ, ಡಾ. ಅಖಿಲಾ ಮುಂತಾದ ತಮಿಳು ಕಾದಂಬರಿಗಳ ಅನುವಾದ; ಮಹಾತ್ಮಗಾಂಧಿ, ರಾಜೇಂದ್ರ ಪ್ರಸಾದ್‌, ಹಿಮಾಲಯವೀರರು, ಗೋತ್ರ ಋಷಿಗಳು, ಕೆನಡಿ ಜೀವನ ಸಾಧನೆ, ವೀರಸಾವರ್ ಕರ್ ಜಾಕೀರ್ ಹುಸೇನ್‌ ಮುಂತಾದವರ ವ್ಯಕ್ತಿ ಚಿತ್ರಕೃತಿಗಳು; ಆಂಡವನ್‌ ರಾಮಾಯಣ ಪ್ರವಚನ ಸಾರವನ್ನು ಎರಡು ಸಂಪುಟಗಳಲ್ಲಿ, ಗೀತೋಪದೇಶದ ಯೋಗಕ್ಷೇಮವಲ್‌ವಹಾಮ್ಯಹಂ, ಹತ್ತು ಸಂಪುಟಗಳಲ್ಲಿ ಗಾಂಧಿಉಪನಿಷತ್‌ ಮುಂತಾದವುಗಳಲ್ಲದೆ ಪ್ರಧಾನಿಗಳಾಗಿದ್ದ ಪಿ.ವಿ. ನರಸಿಂಹರಾವ್‌ ರವರ ಆತ್ಮಕಥೆ ದಿ  ಇನ್‌ ಸೈಡರ್ ಕೃತಿಯ ಕನ್ನಡ ಅನುವಾದ ಅಂತರ್ದೃಷ್ಟಿ, ಆಧ್ಯಾತ್ಮಿಕ ಕೃತಿಗಳಾದ ಮಹಾಭಾರತ ಪಂಚಕ ಉಪಖ್ಯಾನ, ಧರ್ಮರಾಜ ಯುಧಿಷ್ಠಿರ, ಶ್ರೀರಾಮಕಥಾಸಾರ ಮುಂತಾದವುಗಳ ಜೊತೆಗೆ ಇಂಗ್ಲಿಷ್‌ನಲ್ಲಿ ಸಂಧ್ಯಾವಂದನೆ, ಇಂದ್ರಾಕ್ಷಿ ಸ್ತೋತ್ರ, ಪೂಜಾವಿಧಿ, ಹವನವಿಧಿ, ಪಾಣಿಗ್ರಹಣ ಮುಂತಾದವುಗಳು ಸೇರಿ ಸುಮರು ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ವಿಶ್ವವನ್ನೇ ವಿಶ್ವವಿದ್ಯಾಲಯವಾಗಿಸಿಕೊಂಡು ಪತ್ರಕರ್ತ, ಪ್ರವಚನಕಾರ, ನಿರೂಪಕ, ಸಂಯೋಜಕ, ಸಾಹಿತಿ, ಗಮಕಿಯಾಗಿದ್ದ ಮತ್ತೂರರಿಗೆ ಬಂದ ಪ್ರಶಸ್ತಿಗಳಿಗೂ ಲೆಕ್ಕವಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಗಾಯನ ಸಮಾಜದಿಂದ ವರ್ಷದ ಕಲಾವಿದ ಗೌರವ, ಭಾರತ ಸರಕಾರದ ಪದ್ಮಶ್ರೀ, ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್‌ ಮುಂತಾದವುಗಳು. ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಮತ್ತೂರ್ ಜೀ’ ಮತ್ತು ‘ಮತ್ತೂರ್ ಜೀ ಜೀವನಗಾಥೆ’. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡಲು ಪಣತೊಟ್ಟು ವಿದ್ಯಾಭವನದ ಧ್ಯೇಯೋದ್ದೇಶಗಳಿಗೆ ತಮ್ಮನ್ನೇ ತೆತ್ತುಕೊಂಡಿದ್ದ ಮತ್ತೂರ್ ಜೀ ಯವರು ಸಾಂಸ್ಕೃತಿಕ ಲೋಕದಿಂದ ದೂರವಾದದ್ದು ೨೦೧೧ರ ಅಕ್ಟೋಬರ್ ೬ ರಂದು.

Details

Date:
August 8, 2023
Event Category: