ಮಲ್ಲಿಕಾ ಕಡಿದಾಳ್‌ ಮಂಜಪ್ಪ

Home/Birthday/ಮಲ್ಲಿಕಾ ಕಡಿದಾಳ್‌ ಮಂಜಪ್ಪ
Loading Events
This event has passed.

೧೫..೧೯೨೦ ‘ಶ್ರೀವಿವೇಕಾನಂದವಿಜಯಂ’ ಎಂಬ ಮಹಾಕಾವ್ಯ ರಚಿಸಿ, ಲೇಖಕಿಯರಲ್ಲಿ ಪ್ರಪ್ರಥಮರಾಗಿ ಮಹಾಕಾವ್ಯ ರಚಿಸಿದ ಖ್ಯಾತಿಗೆ ಪಾತ್ರರಾಗಿರುವ ಮಲ್ಲಿಕಾ ಕಡಿದಾಳ್‌ ಮಂಜಪ್ಪನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕನಾಲೆ ಹಳ್ಳಿಯ ‘ಬಾಗಮನೆ’ ಮನೆತನದಲ್ಲಿ ೧೯೨೦ರ ಜೂನ್‌ ೧೫ರಂದು. ತಂದೆ ಚನ್ನೇಗೌಡ ಬಾಗಮನೆ, ತಾಯಿ ಪಾರ್ವತಮ್ಮನವರ ಎಂಟು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳಲ್ಲಿ ನಾಲ್ಕನೆಯವರು. ಅತ್ತಿಗೊಂಡ ಎಸ್ಟೇಟಿನ ಅರಮನೆಯಂತಹ ಮನೆಯಲ್ಲಿ ರಾಜಕುಮಾರಿಯಂತೆ ಬೆಳೆದ ಲಕ್ಷ್ಮೀದೇವಿ (ಮಲ್ಲಿಕಾರವರು) ಯವರಿಗೆ ಅಗಾಧವಾದ ಪ್ರಕೃತಿ ಸೌಂದರ್ಯದ ನಡುವೆ, ಕಾಡುಮೇಡು, ಬೆಟ್ಟಗುಡ್ಡ, ಇಳಿಜಾರು ಕಣಿವೆಗಳು, ಹಚ್ಚ ಹಸಿರಿನ ಕಾಫಿ ತೋಟದಲ್ಲಿ ಸದಾ ಆಟ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅಷ್ಟಾಗಿ ಗಮನ ಕೊಡದಿದ್ದುದರಿಂದ ವ್ಯವಸ್ಥಿತವಾದ ಶಾಲಾ ಶಿಕ್ಷಣಕ್ಕೆ ಧಕ್ಕೆ. ಓದಿನ ಬಗ್ಗೆ ಆಸೆಯಿರದ ಲಕ್ಷ್ಮೀದೇವಿಗೆ ತಾನು ಓದುಬರಹ ಕಲಿಯಬೇಕೆನಿಸತೊಡಗಿದಾಗ ಮನೆಯಲ್ಲಿಯೇ ಅಕ್ಷರಾಭ್ಯಾಸ. ಎಸ್ಟೇಟಿನಲ್ಲಿ ದುಡಿಯುತ್ತಿದ್ದವರೆಲ್ಲರೂ ಅನಕ್ಷರಸ್ಥರೆ. ಅಂಥವರ ಮಧ್ಯೆ ಅಕ್ಷರಸ್ಥ ಮೇಸ್ತ್ರಿಯೊಬ್ಬರು ಬಂದು, ಮಕ್ಕಳಿಗೆ ಪ್ರೈಮರಿಶಾಲೆಯಲ್ಲಿ ಕಲಿಸುವುದನ್ನೆಲ್ಲಾ ಕಲಿಸತೊಡಗಿದರು. ಸರಿಯಾದ ರಸ್ತೆಗಳೇ ಇರದಿದ್ದ ಕಾಲದಲ್ಲಿ ಚಿಕ್ಕಮಗಳೂರಿಗೆ ಬೆಂಗಳೂರು ಬಹುದೂರ. ಚನ್ನೇಗೌಡರು ಬ್ರಿಗೇಡ್‌ ರಸ್ತೆಯಲ್ಲಿದ್ದ ಮೂರ್ನಾಲ್ಕು ಎಕರೆ ವಿಸ್ತೀರ್ಣದ ಮೋಟಾರು ರಿಪೇರಿ, ಮಾರಾಟದ ಕಂಪನಿಯನ್ನು ಖರೀದಿಸಿ ಇಡೀ ಸಂಸಾರ ಬೆಂಗಳೂರಿಗೆ ಬಂದು, ಹುಡುಗರನ್ನೂ ಸೇಂಟ್‌ ಜೋಸೆಫ್‌ ಶಾಲೆಗೆ ಸೇರಿಸಿದರು. ಆಗ ಮಲ್ಲಿಕಾರವರಿಗೆ ೯ ವರ್ಷ. ಶಾಲೆಯಲ್ಲಿ ಕನ್ನಡ ಪಠ್ಯವಿಲ್ಲದಿದ್ದುದರಿಂದ ಮನೆಯಲ್ಲಿ ಪ್ರಾರಂಭಿಸಿದ ಕನ್ನಡದ ಪಾಠ. ಹುಡುಗರ ಜೊತೆ ಉಳಿದ ಹುಡುಗಿಯರಿಗೂ ಸುಂದರಯ್ಯ ಮಾಸ್ತರಿಂದ ಕನ್ನಡ ಕಲಿಕೆ. ಹೀಗೆ ಮಲ್ಲಿಕಾರವರು ಓದಿದ್ದು ಏಳನೆಯ ತರಗತಿಯವರೆಗೆ. ಸ್ವಯಂ ಶಿಕ್ಷಣಾರ್ಥಿಯಾಗಿ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪಡೆದ ಪರಿಣತಿ. ಇವರ ಜೊತೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೂ ಕರಕುಶಲ ಕಲೆಯಲ್ಲಿ ಪ್ರಖ್ಯಾತರೆ. ಮನೆಯಲ್ಲಿ ಕುಳಿತಿದ್ದರೂ ಟೈಲರಿಂಗ್‌, ಕಸೂತಿ, ಸ್ವೆಟರ್ ಹೆಣಿಕೆ, ಎಂಬ್ರಾಯಿಡರಿ, ಬಳೆಯಲ್ಲಿ ಬುಟ್ಟಿ ತಯಾರಿಕೆ, ಕೈಚೀಲಗಳು, ದಿಂಬಿನ ಚೀಲಗಳಿಗೆ ದಾರದ ಕಸೂತಿ ಕೆಲಸ ಮುಂತಾದವುಗಳಲ್ಲಿ ಕುಶಲತೆ ಉಳ್ಳವರು. ವಿಶಾಲವಾದ ಸ್ಥಳದ ಮಧ್ಯೆ ಬಂಗಲೆಯಿದ್ದು ಕಾರು ಗ್ಯಾರೇಜ್‌ ಕೂಡಾ ಪಕ್ಕದಲ್ಲೇ ಇದ್ದು ರಿಪೇರಿಗಾಗಿ ಲೇತುಗಳ ವಿಭಾಗ, ಮರಗೆಲಸ, ಪೇಯಿಂಟಿಂಗ್‌ ವಿಭಾಗ, ಬ್ಯಾಟರಿ ವಿಭಾಗ ಹೀಗೆ ಎಲ್ಲದರಲ್ಲೂ ಹಲವಾರು ಜನ ಕೆಲಸಗಾರರು ಹಗಲಿರುಳು ದುಡಿಯುತ್ತಿದ್ದು, ಸದಾ ಒತ್ತಡದ ಸ್ಥಿತಿಯಲ್ಲೇ ಕೆಲಸ ನಡೆಯುತ್ತಿದ್ದ ಗ್ಯಾರೇಜ್‌ಗೆ ಎರಡನೆಯ ಮಹಾಯುದ್ಧದ ಬಿಸಿತಟ್ಟಿ, ಬಿಡಿಭಾಗಗಳನ್ನು ಆಮದುಮಾಡಿಕೊಳ್ಳುವಲ್ಲಿ ತೊಂದರೆ ಉಂಟಾಗಿ ಕಡೆಗೆ ಗ್ಯಾರೇಜನ್ನೂ ಮುಚ್ಚುವ ಸ್ಥಿತಿ ಬಂದು ಇಡೀ ಸಂಸಾರ ಹಿಂದಿರುಗಿದ್ದು ಅತ್ತಿಗೊಂಡ ಎಸ್ಟೇಟಿಗೆ. ಅಷ್ಟರಲ್ಲಾಗಲೇ ದಾಯಾದಿಗಳು ತೋಟದ ಕೆಲ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದು, ಉಳಿದದ್ದಷ್ಟೇ ಇವರ ಪಾಲಿಗೆ ಬಂದುದು. ತಾಯಿಗೆ ಪುರಾಣ ಪುಣ್ಯ ಕಥೆಗಳಲ್ಲಿ ಆಸಕ್ತಿಯಿದ್ದು ಹೆಣ್ಣುಮಕ್ಕಳಿಂದ ಓದಿಸಿ ಕೇಳುತ್ತಿದ್ದ ರಾಮಾಯಣ, ಮಹಾಭಾರತ, ಭಾಗವತ ಕಥೆಗಳನ್ನು ಇವರೂ ಕೇಳತೊಡಗಿದರು.  ಜೊತೆಗೆ ಬೆಂಗಳೂರಿನಲ್ಲಿದ್ದಾಗ ಮನೆಕೆಲಸದವಳು ಹೇಳುತ್ತಿದ್ದ ರಂಜನೀಯವಾದ ಕಥೆಗಳಿಗೂ ಮಾರು ಹೋಗಿದ್ದರು. ಅತ್ತಿಗೊಂಡ ಎಸ್ಟೇಟಿಗೆ ಹಿಂದಿರುಗಿ ಬಂದನಂತರ ಕೆಲಸದವರು ಹೇಳುತ್ತಿದ್ದ ಜನಪದಕಥೆಗಳು, ಹಾಡುಗಳನ್ನು ಕೇಳಿ ಪ್ರಭಾವಿತರಾದರು. ಆಲೋಚನಾಶಕ್ತಿ, ವಿಚಾರಶಕ್ತಿ ಬೆಳೆಯುತ್ತಾ ಬಂದಂತೆಲ್ಲ ಸಾಹಿತ್ಯದ ಕಡೆ ಅಭಿರುಚಿ ಬೆಳೆಯತೊಡಗಿ ತಾವೂ ಏಕೆ ಬರೆಯ ಬಾರದು ಎನಿಸಿದಾಗ ಬರೆದ ಮೊದಲ ಕತೆ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಇವರಿಗಾದ ಆನಂದ ಅಷ್ಟಿಷ್ಟಲ್ಲ. ಸರಸ್ವತಿಯ ಕೃಪೆ ಒಲಿದು ಬಂದಿದೆ ಎಂದು ತಿಳಿದು ಬರೆದದ್ದನ್ನೆಲ್ಲಾ ಇತರ ಪತ್ರಿಕೆಗಳಿಗೂ ಕಳುಹಿಸತೊಡಗಿದರು. ಕೆಲ ಪದ್ಯಗಳೂ ಪ್ರಕಟಗೊಂಡವು. ಈಗ ಮನಸ್ಸಿನಲ್ಲಿ ಸಂಪೂರ್ಣವಾಗಿ ಸಾಹಿತ್ಯವೇ ತುಂಬಿಕೊಂಡು ನಿಂತರೆ ಕುಳಿತರೆ, ಎಸ್ಟೇಟಿನಲ್ಲಿ ಓಡಾಡುತ್ತಿದ್ದರೆ ಸಾಹಿತ್ಯದ ಆಲೋಚನೆಯೆ. ಆದರೆ ತಾಯಿಗೆ ಮಗಳ ಮದುವೆಯ ಯೋಚನೆ. ಕಡಿದಾಳ್‌ ಮಂಜಪ್ಪನವರೊಡನೆ ಮದುವೆ ನಡೆದು ಗಂಡನ ಮನೆ ತಲುಪಿದರು. ಅಲ್ಲೋಬಿಡುವಿಲ್ಲದ ಕೆಲಸ ರಾಜಕೀಯ ವ್ಯಕ್ತಿಯಾದ್ದರಿಂದ ಸದಾ ರಾಜಕೀಯ ಗೆಳೆಯರ, ವಾರಾನ್ನದ ವಿದ್ಯಾರ್ಥಿಗಳ, ಇಲ್ಲೇ ವಸತಿ ಹೂಡಿರುವ ವಿದ್ಯಾರ್ಥಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಳ್ಳಿಯಿಂದ ಬಂದವರ, ಬಂಧುಗಳಿಂದ ಮನೆಯಲ್ಲಿ ಸದಾ ಗಜಿಬಿಜಿ. ಅರ್ಧ ಆಯುಸ್ಸು ಹೀಗೇ ಕಳೆದು ಹೋದರೂ ಬತ್ತದ ಸಾಹಿತ್ಯದ ಸೆಲೆ ಚಿಗುರೊಡೆದಿದ್ದು ನಲವತ್ತರ ನಂತರವೇ. ಎಂ.ಕೆ. ಇಂದಿರಾರವರಂತೆ ಮಧ್ಯ ವಯಸ್ಸು ದಾಟಿನ ನಂತರವೇ ಬರೆದ ಮೊದಲ ಕಾದಮಬರಿ ‘ಜೀವನ ಗಂಗಾ’. ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಬಂದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಆಶಯದಿಂದ ಬೆಳಗಿನ ಜಾವಕ್ಕೆ ಎದ್ದು ವ್ರತದಂಥೆ, ಸಾಂಸಾರಿಕ ಜಂಜಡಗಳ ನಡುವೆಯೂ ಹಗಲು-ರಾತ್ರಿ ಬರೆಯತೊಡಗಿದರು. ಹೀಗೆ ಸಾಹಿತ್ಯ ಯಾತ್ರೆಯನ್ನು ಸಾಹಸಯಾತ್ರೆಯಾಗಿ ಸ್ವೀಕರಿಸಿ ಬರೆದ ಕಾದಂಬರಿಗಳು ಡಾ. ಅಘೋರ, ಡಾ. ಕಮಲೇಶ್‌, ವಂದೇಮಾತರಂ (ರಾಜಕೀಯ ವಸ್ತುವಾಗುಳ್ಳ ಕಾದಂಬರಿ), ಅನಂತಾನಂತದೆಡೆಗೆ, ಮನೋನ್ಮಣಿ, ಮುಂತಾದ ಹನ್ನೊಂದು ಕಾದಂಬರಿಗಳು- ಬಹುರತ್ನಾ ವಸುಂಧರಾ, ರತ್ನಗರ್ಭವಸುಂಧರಾ, ಸುಧಾಮಣಿ, ರಮಣೀಮಣಿ, ಲಿಯೋನ, ಶ್ರೀಮುಖ ಮೊದಲಾದ ಹನ್ನೊಂದು ಕಥಾಸಂಕಲನಗಳು- ಪೂಜಾವಸಾನ ಸಮಯೆ!, ಧ್ಯಾನಾವಸಾನಸಮಯೋ!, ಗಗನಕುಸುಮ, ಜೀವನಕುಸುಮ ಮೊದಲಾದ ೧೫ ಕವಿತಾ ಸಂಕಲನಗಳು- ಮಂಗಳಭಾರತ, ಕಲ್ಯಾಣಭಾರತಿ, ಉತ್ತರೋತ್ತರಣ’, ರಾಗಾನುರಾಗಿಣಿ, ಪ್ರಪುಲ್ಲಭಾರತ ಮೊದಲಾದ ೫ ಸಂಜೀವನ ಕಾವ್ಯಗಳು- ಪುಣ್ಯಾಭಿಸಾರ, ಪುಣ್ಯ ಪಯೋನಿಧಿ ಮೊದಲಾದ ಎರಡು ಪೌರಾಣಿಕ ನಾಟಕಗಳು; ತರಂಗಿಣಿ-ಸಾನೆಟ್‌ಗಳು; ಐಂದ್ರಕೀರ್ತಿ ಕೇತನಂ ಎಂಬ ಗದ್ಯ ಕಾವ್ಯವಲ್ಲದೆ ಶಿಶುಸಾಹಿತ್ಯಕ್ಕೂ ಇವರ ಕೊಡುಗೆ ದೊಡ್ಡದೆ. ದೂರದೇಶದಲ್ಲಿ, ಬೆಳದಿಂಗಳ ರಾತ್ರಿ, ರಂಗಸಾಹಸ, ಓಹಿಯೋಜ ಸರೋವರ ಮೊದಲಾದ ೭ ಶಿಶು ಸಾಹಿತ್ಯ ಕೃತಿಗಳಲ್ಲದೆ ಇವರು ರಚಿಸಿದ ಮಹಾಕಾವ್ಯ ‘ಶ್ರೀ ವಿವೇಕಾನಂದ ವಿಜಯಂ’. ಹೀಗೆ ಲೇಖಕಿಯರಲ್ಲಿ ಮಹಾಕಾವ್ಯ ರಚಿಸಿದವರಲ್ಲಿ ಮೊದಲನೆಯವರು ಜಯದೇವಿ ತಾಯಿ ಲಿಗಾಡೆ ಎರಡನೆಯವರು. ತಮ್ಮ ೭೩ ರ ಹರೆಯದಲ್ಲಿ ತಪಸ್ಸಿನಂತೆ ಕುಳಿತು ರಚಿಸಿದ ಕೃತಿ ಯಲ್ಲಿ ೪೨ ಆಶ್ವಾಸಗಳ ೨೭೩೨೦ ಸಾಲುಗಳ, ೧೨೭೫ ಪುಟಗಳ ಮಹಾಕಾವ್ಯವನ್ನು ರಚಿಸಲು ಐದು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇದು ಪ್ರಕಟವಾದುದು ೧೯೯೮ ರಲ್ಲಿ ಹೀಗೆ ಇವರು ರಚಿಸಿದ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ೫೫. ಲಕ್ಷ್ಮೀ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನೂ ಹುಟ್ಟುಹಾಕಿ ಪ್ರಕಟಣಾ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿದ ಲೇಖಕಿ. ಮುಖ್ಯಮಂತ್ರಿಗಳ ಮಡದಿಯಾಗಿ ಸಾಂಸಾರಿಕ ಜೀವನದಲ್ಲಿ ಕಳೆದುಹೋಗಿ ಬಿಡಬಹುದಾಗಿದ್ದ ಮಲ್ಲಿಕಾರವರಲ್ಲಿ ಸಾಹಿತ್ಯದ ಸೆಲೆ ಚಿಗುರೊಡೆದು ಮಧ್ಯವಯಸ್ಸು ದಾಟಿದ ನಂತರ ಸಾಹಿತ್ಯ ಸೇವೆಯನ್ನು ಕೈಗೊಂಡು ಅಗಾಧ ಸಾಧನೆಮಾಡಿದ ಮಲ್ಲಿಕಾರವರಿಗೆ ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆಪ್ರಶಸ್ತಿ (೧೯೯೯), ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ (೧೯೯೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭) ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top