ಮಹದೇವ ಬಣಕಾರ

Home/Birthday/ಮಹದೇವ ಬಣಕಾರ
Loading Events

.೧೦.೧೯೩೨ ೧೭.೧೧.೨೦೦೧ ನಾಡು – ನುಡಿಯ ಹೋರಾಟಗಾರ, ಕವಿ, ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿಯಾದ ಮಹದೇವ ಬಣಕಾರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆ ಬೆನ್ನೂರಿನಲ್ಲಿ (ಈಗ ಹಾವೇರಿ ಜಿಲ್ಲೆ) ೧೯೩೨ ರ ಅಕ್ಟೋಬರ್ ೩ ರಂದು. ತಂದೆ ಗದಿಗೆಪ್ಪ, ತಾಯಿ ಸಿದ್ದಮ್ಮ. ಮೋಟೆಬೆನ್ನೂರಿನ ವಿಶೇಷತೆ ಎಂದರೆ ಸ್ವಾತಂತ್ರಯೋಧ, ಕ್ರಾಂತಿಕಾರಿ ಮೈಲಾರಮಹದೇವ ಹಾಗೂ ಮಹದೇವ ಬಣಕಾರರಿಗೆ ಜನ್ಮಕೊಟ್ಟ ಸ್ಥಳ. ಕಿತ್ತು ತಿನ್ನುವ ಬಡತನ, ಓದಬೇಕೆಂದರೂ ಸೌಲಭ್ಯದ ಕೊರತೆಯಿಂದ ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಶಿಕ್ಷಣವನ್ನು ಮುಂದುವರೆಸಲಾಗದೆ ತಂದೆ ತಾಯಿಗಳಿಗೆ ಸಹಾಯಕನಾಗಿ ಗೃಹಕೃತ್ಯದಲ್ಲಿ ಭಾಗಿಯಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಎಮ್ಮೆ ಕಾಯುವ ಕೆಲಸ. ಎಮ್ಮೆಯ ಮೇಲೆಯೇ ಕುಳಿತು ಲಹರಿ ಬಂದು ಕಟ್ಟಿದ ಹಾಡು ಕವನ ರೂಪದಲ್ಲಿ, ವಚನರೂಪದಲ್ಲಿ ಹೊರಹೊಮ್ಮಿದಾಗ ೧೮ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲನ ‘ಕಾವ್ಯೋದಯ’ ಈ ಸಂಕಲನಕ್ಕೆ ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದು ಹಾರೈಸಿದ್ದಾರೆ. ಹೀಗೆ ಇವರು ಬರೆದ ಹಾಡು, ಕವನಗಳಿಗೆ ಸ್ಫೂರ್ತಿದಾಯಕರೆಂದರೆ ಗುರುಗಳಾಗಿದ್ದ ಸಾಲಿ ರಾಮಚಂದ್ರರಾಯರು ಹಾಗೂ ಕುವೆಂಪುರವರು. ಇವರ ಕಾವ್ಯಕೃಷಿಗೆ ನೀರೆರೆದು ಬೆಳೆಸಿದ ಮತ್ತೊಬ್ಬರೆಂದರೆ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ‘ನನ್ನ ಸಂಕಲ್ಪಶಕ್ತಿ, ರಚನಾಶಕ್ತಿ, ಕಾವ್ಯಶಕ್ತಿಗಳಿಗೆಲ್ಲ ಸ್ವಾಮಿಗಳ ಆಶೀರ್ವಾದವೇ ಶ್ರೀರಕ್ಷೆ’ ಎಂದು ನಮ್ರವಾಗಿ ನುಡಿಯುವ ಬಣಕಾರರು ‘ಕಾಡುಗಲ್ಲಿಗೆ ಉಳಿ ಏಟು ನೀಡಿ ಕಡೆದು ವಿಗ್ರಹ ಮಾಡಿದ ಆರಾಧ್ಯಮೂರ್ತಿ’ ಎಂದು ಸ್ಮರಿಸಿಕೊಂಡಿದ್ದಾರೆ. ಬಣಕಾರರು ಪತ್ರಿಕೋದ್ಯಮಿಯಾಗಿಯೂ ಆರಂಭದಲ್ಲಿ ನವಯುಗ, ಜಯಕರ್ನಾಟಕ, ಪ್ರಜಾವಾಣಿ, ಕರ್ನಾಟಕ ಬಂಧು, ಕನ್ನಡಿಗ, ಜಯಂತಿ, ಅಂಕುಶ ಮುಂತಾದ ಪತ್ರಿಕೆಗಳ ಸಹ ಸಂಪಾದಕರಾಗಿಯೂ ದುಡಿದು ವಿಫುಲ ಅನುಭವ ಪಡೆದರು. ದಾವಣಗೆರೆಗೆ ಬಂದು ‘ಜಾಗೃತಿ’ ಎಂಬ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಅದಕ್ಕೆ ನಿರೀಕ್ಷಿಸಿದ ಉತ್ತೇಜನ ದೊರೆಯದೆ ನಿಲ್ಲಿಸಬೇಕಾಯಿತು. ಬಣಕಾರರು ಸೃಜನಶೀಲ ಸಾಹಿತಿ, ಕವಿ ಹಾಗೂ ನಾಟಕಕಾರರು. ಕಾವ್ಯೋದಯವಲ್ಲದೆ ಬಣ್ಣದ ಕಾರಂಜಿ, ಅಪರಂಜಿ, ಹೊಸಹುಟ್ಟು ಮುಂತಾದ ೪ ಕಾವ್ಯ ಕೃತಿಗಳು ಗರತಿಯ ಗೋಳು, ಕಲ್ಯಾಣಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲುದಾಟಿದ ಹೆಣ್ಣು, ದುಡ್ಡೇ ದೇವರು ಮೊದಲಾದ ನಾಟಕಗಳು; ಲೋಕದ ಕಣ್ಣು, ಮಾದನ ಮಗ ಮತ್ತು ಇತರ ಕಥೆಗಳು ಮುಂತಾದ ಕಥಾ ಸಂಕಲನಗಳು; ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ – ಮಹಾರಾಷ್ಟ್ರ ಮಹಾಜನ್‌ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ (ಇಂಗ್ಲಿಷನಲ್ಲೂ ಕೂಡಾ) ಕರ್ನಾಟಕ ಉಜ್ವಲ ಪರಂಪರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಮೇರು ಕೃತಿ ಎಂದರೆ ೧೧೦೮ ವಚನಗಳ ‘ಮಹದೇವ ಬಣಕಾರರ ವಚನಗಳು’, ‘ವಿಶ್ವಬಂಧು ಮರುಳ ಸಿದ್ಧ’ ಮತ್ತು ‘ಶ್ರೀ ಶಿವಕುಮಾರ ಚರಿತೆ’. ೧೨ನೆಯ ಶತಮಾನದ ಬಸವಾದಿ ಶಿವಶರಣರ ವಚನಗಳಿಗೆ ಸರಿಸಾಟಿಯಾಗಿದ್ದು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಶ್ರೀಮರುಳ ಸಿದ್ಧ ಕಾವ್ಯವು ಈ ಶತಮಾನದ ಮಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ. ಇವರ ಅದ್ಭುತ ಪ್ರತಿಭೆ ಮತ್ತು ಸಾಹಿತ್ಯ ಪ್ರವೃತ್ತಿಗೆ ಸಾಕ್ಷಿಯಾಗಿರುವ ಮತ್ತೊಂದು ಮಹೋನ್ನತ ಕೃತಿ ಎಂದರೆ ೭೦೦ ಪುಟಗಳ ಬೃಹತ್‌ ಗ್ರಂಥ ‘ಆಂಗ್ಲರ ಆಡಳಿತದಲ್ಲಿ ಕನ್ನಡ’. ಯಾವೊಂದು ಸಂಸ್ಥೆ, ವಿಶ್ವವಿದ್ಯಾಲಯದ ಸಹಾಯವೂ ಇಲ್ಲದೆ, ಇಚ್ಛಾಶಕ್ತಿಯಿದ್ದಲ್ಲಿ ಯಾವ ಅಡತಡೆಯೂ ಬಾರದೆನ್ನುವಂತೆ ಏಕಾಂಗಿಯಾಗಿ ಸಾಧಿಸಬಹುದೆನ್ನುವುದನ್ನು ನಿರೂಪಿಸಿರುವ ಕೃತಿ. ಈ ಸಂಶೋಧನ ಕೃತಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು ಎಂದು ಸಂಶೋಧಕರಾದ ಶಂಬಾ ಜೋಶಿ ಮತ್ತು ಅಂಕಣಕಾರರಾದ ಹಾ.ಮಾ. ನಾಯಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುಮಾರು ೪೦ಕ್ಕೂ ಹೆಚ್ಚು ಕೃತಿ ರಚಿಸಿರುವ ಬಣಕಾರರ ಕೆಲ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯವಾಗಿಯೂ ಆಯ್ಕೆಯಾಗಿವೆ. ಸಾಹಿತ್ಯ ಕೃತಿಗಳ ರಚನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಬಣಕಾರರು ಕರ್ನಾಟಕದ ಏಕೀಕರಣಕ್ಕಾಗಿ ೧೪ – ೧೫ ನೆಯ ವಯಸ್ಸಿನಲ್ಲಿಯೇ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕನ್ನಡ ನಾಡು – ನುಡಿ, ಗಡಿ – ನೆಲ – ಜಲ ಸಂರಕ್ಷಣೆಯ ವಿಷಯ ಬಂದಾಗಲ್ಲೆಲ್ಲ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದಲ್ಲದೆ ಬೆಳಗಾವಿ, ಕಾಸರಗೋಡು, ತಾಳವಾಡಿ ಫಿರ್ಕಾ, ಪಾವಗಡ, ಮಧುಗಿರಿ ನಿಪ್ಪಾಣಿ ಮುಂತಾದ ಗಡಿ ಭಾಗಗಳಲ್ಲೆಲ್ಲಾ ಸಂಚರಿಸಿ ಗಡಿಭಾಗದ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಕನ್ನಡದ ನೆಲದ ಸಂರಕ್ಷಣೆಗಾಗಿ ಸತತ ಹೋರಾಟ ನಡೆಸಿದ್ದಾರೆ. ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅದ್ಭುತ ವಾಕ್‌ಪಟುತ್ವ, ಶ್ರೇಷ್ಠವಾಗ್ಮಿಗಳಾಗಿದ್ದ ಬಣಕಾರರು ಪಂಡಿತ – ಪಾಮರರಿಬ್ಬರಿಗೂ ರುಚಿಸುವಂತೆ ಸಂದರ್ಭೋಚಿತವಾಗಿ, ಲೀಲಾಜಾಲವಾಗಿ ತಮ್ಮ ಮಾತಿನ ಮೋಡಿಯಿಂದ ಕೇಳುಗರನ್ನು ಸೆರೆಹಿಡಿಯಬಲ್ಲ ಚತುರತೆಯನ್ನು ಹೊಂದಿದ್ದರು. ಸಾಹಿತ್ಯಸೃಷ್ಟಿ, ಮಾತುಗಾರಿಕೆ ಎರಡೂ ಇವರಿಗೆ ದೈವದತ್ತವಾಗಿ ಸಿದ್ಧಿಸಿದ ಕಲೆಯಾಗಿತ್ತು. ಬರವಣಿಗೆಯಲ್ಲಿ ಉಪಯೋಗಿಸುತ್ತಿದ್ದ ಲಾಲಿತ್ಯದ ಗುಣಗಳನ್ನೇ ಮಾತುಗಾರಿಕೆಯಲ್ಲಿ ತರುವುದರಲ್ಲಿಯೂ ನಿಸ್ಸೀಮರಾಗಿದ್ದರು. ಇವರ ಈ ಮಾತುಗಾರಿಕೆಯೇ ರಾಜಕೀಯ ರಂಗಕ್ಕೂ ಎಳೆದು ತಂದಿತ್ತು. ಸಿರಿಗೆರೆಯ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳು ಅಧ್ಯಾತ್ಮಗುರುಗಳಾದರೆ, ರಾಜಕೀಯ ಗುರುಗಳು ಪಾಟೀಲ ಪುಟ್ಟಪ್ಪನವರು. ನಾಡು – ನುಡಿ ರಕ್ಷಣೆ, ಗಡಿಸಮಸ್ಯೆ, ಭಾಷಾಸಮಸ್ಯೆ ಮುಂತಾದವುಗಳ ಬಗ್ಗೆ ತಮ್ಮ ವಾದವನ್ನು ಮಂಡಿಸಲು ರಾಜಕೀಯ ಕ್ಷೇತ್ರವನ್ನು ಆರಿಸಿಕೊಂಡು ೧೯೬೭ರಲ್ಲಿ ಧಾರವಾಡದ ಬ್ಯಾಡಗಿ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿ ಬಂದುದಲ್ಲದೆ ೧೯೯೫ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಬ್ಯಾಡಗಿ ಮೆಣಸಿನ ಖಾರದಂತೆ ಬಣಕಾರರ ಖಾರದ ಮಾತೆಂದರೆ ಅದೊಂದು ತೀರ್ಮಾನಿಸಿದ ವಾಕ್ಯದಂತೆ. ಸಾಹಿತ್ಯ, ರಾಜಕೀಯ, ದೇಶ – ಭಾಷೆಗಳ ಕಾಳಜಿ ಹೊಂದಿದ ಬಣಕಾರರಿಗೆ ಚೊಚ್ಚಿಲ ಕೃತಿಯಾದ ಕಾವ್ಯೋದಯಕ್ಕೆ ಮುಂಬಯಿ ಸರಕಾರದ ಬಹುಮಾನ, ತಮ್ಮಣ್ಣರಾವ ಅಮ್ಮಿನಭಾವಿ ಸ್ಮಾರಕಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೬), ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ (೧೯೯೬) ಮುಂತಾದ ಪ್ರಶಸ್ತಿಗಳು ಲಭಿಸಿದ್ದು ಹೋರಾಟದ ಬದುಕಿನಿಂದ ದೂರವಾದದ್ದು ೨೦೦೧ ರ ರಾಜ್ಯೋತ್ಸವ ತಿಂಗಳಿನ ೧೭ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top