೨೬.೦೨.೧೯೭೪ ಸಂಗೀತ ಪರಂಪರೆಯ ಹಿನ್ನೆಲೆಯಲ್ಲಿ ಬಂದ ಮಹೇಶ್ ನಾ ಕುಲಕರ್ಣಿ ಯವರು ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ನಾರಾಯಣ ಕೆ. ಕುಲಕರ್ಣಿ, ಹೆಸರಾಂತ ಭರತನಾಟ್ಯ ಹಾಗೂ ಗಾಯನದಲ್ಲಿ ಪ್ರಸಿದ್ಧರು, ತಾಯಿ ಲಕ್ಷ್ಮೀ ಎನ್. ಕುಲಕರ್ಣಿ. ಪ್ರಾರಂಭಿಕ ಶಿಕ್ಷಣ ತಂದೆ ನಾರಾಯಣ ಕುಲಕರ್ಣಿಯವರಲ್ಲಿ. ನಂತರ ಕಲಿತದ್ದು ಪಂಡಿತ್ ಬಿ.ವಿ. ಕಡಲಾಸ್ಕರರ ಬಳಿ ಪಡೆದ ಹೆಚ್ಚಿನ ಸಂಗೀತ ಶಿಕ್ಷಣ. ಕರ್ನಾಟಕ ಸರಕಾರ ನಡೆಸುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ವತ್ ಪರೀಕ್ಷೆ ಮತ್ತು ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದಿಂದ ಪಡೆದ ಸಂಗೀತ ಅಲಂಕಾರ್ ಪದವಿ, ಸಂಗೀತದ ಜೊತೆಗೆ ಭಜನೆ, ಟುಮ್ರಿ, ಗಜಲ್ಗಳಲ್ಲೂ ಪಡೆದ ಪ್ರಾವೀಣ್ಯತೆ. ಇವರ ಹಾಡುಗಾರಿಕೆಯ ವಿಶೇಷವೆಂದರೆ ಭಕ್ತಿಗೀತೆಗಳು, ನಾಟ್ಯಗೀತೆ, ಭಾವಗೀತೆಯ ಹಾಡುಗಾರಿಕೆಗೆ ಇವರು ನೀಡುವ ಮೊದಲ ಪ್ರಾಶಸ್ತ್ಯ. ಧಾರವಾಡದ ಆಕಾಶವಾಣಿಯ ‘ಬಿ’ ಶ್ರೇಣಿ ಕಲಾವಿದರಾಗಿ ಕಲಾಸೇವೆ ಪ್ರಾರಂಭ. ಮಕ್ಕಳ ನಾಟಕೋತ್ಸವ, ಮೈಸೂರಿನಲ್ಲಿ ಸಂಗೀತ ಕಾರ್ಯಕ್ರಮ, ಬೆಂಗಳೂರಿನ ಗುರುರಾವ್ ದೇಶಪಾಂಡೆ ಸಂಗೀತೋತ್ಸವ, ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ ಸಂದರ್ಭದ ಸಂಗೀತೋತ್ಸವ ಮತ್ತು ನಾಗಪುರ, ಗೋವಾ, ಹೈದರಾಬಾದ್, ಮುಂಬಯಿಗಳಲ್ಲಿ ನಡೆಸಿಕೊಟ್ಟ ಪ್ರಮುಖ ಸಂಗೀತೋತ್ಸವ ಕಾರ್ಯಕ್ರಮಗಳು. ಸಂದ ಪ್ರಶಸ್ತಿಗಳು ಹಲವಾರು, ವಿದ್ಯಾರ್ಥಿ ದೆಸೆಯಲ್ಲಿ ಹಲವಾರು ಬಹುಮಾನಗಳು, ವಿದ್ಯಾರ್ಥಿ ವೇತನ, ಮುಂಬಯಿಯ ಸೂರ್ ಸಿಂಗಾರ್ ಸಮದ್ ನಿಂದ ಪ್ರತಿಭಾನ್ವಿತ ವಿದ್ಯಾರ್ಥಿವೇತನ, ರಾಷ್ಟ್ರೀಯ ಮಟ್ಟದ ಗಾಯನ ಮತ್ತು ಟುಮ್ರಿ ಗಾಯನಕ್ಕಾಗಿ ರಾಷ್ಟ್ರೀಯ ಪುರಸ್ಕಾರ, ಭಾರತದ ಮಾನವ ಸಂಪನ್ಮೂಲ ಇಲಾಖೆಯ ಫೆಲೊಷಿಪ್, ಗಂಧರ್ವ ಮಹಾವಿದ್ಯಾಲಯದ ಪ್ರಶಸ್ತಿ, ವಿಷ್ಣು ದಿಗಂಬರ ಫಲುಸ್ಕರ್ ಪ್ರಶಸ್ತಿ, ಯುವ ಜನೋತ್ಸವ ಪ್ರಶಸ್ತಿ ಮುಂತಾದುವು. ಇದೀಗ ಮುಂಬಯಿಯಲ್ಲಿ ಹಿಂದೂಸ್ತಾನಿ ಸಂಗೀತ ಅಕಾಡಮಿ ತೆರೆದು ದೊಂಬಿವಿಲಿಯಲ್ಲಿ ಹಲವಾರು ಶಿಷ್ಯರಿಗೆ ಹಿಂದೂಸ್ತಾನಿ ಸಂಗೀತ ತರಬೇತಿ. ಇದೇ ದಿನ ಹುಟ್ಟಿದ ಕಲಾವಿದರು : ನಾರಾಯಣ ದಾಸ್ ಎಂ. – ೧೯೪೩ ಬರ್ಟಿ ಒಲಿವೆರಾ – ೧೯೬೮
* * *