Loading Events

« All Events

  • This event has passed.

ಮಾವಿನ ಕೆರೆ ರಂಗನಾಥನ್

December 21, 2023

೨೧.೧೨.೧೯೪೩ ಸಾಹಿತಿ, ಪ್ರಕಾಶಕ, ಚಲನಚಿತ್ರ ನಿರ್ಮಾಪಕ, ನಿರ್ದೇಶಕರಾದ ರಂಗನಾಥನ್ ರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ತಾ. ೨೧ರ ಡಿಸೆಂಬರ್ ೧೯೪೩ರಲ್ಲಿ. ತಂದೆ ಎಚ್.ಆರ್.ಶಿಂಗೈಯ್ಯಂಗಾರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮತ್ತೆ ಪದವಿಗಾಗಿ ಬೆಂಗಳೂರಿಗೆ. ಸೆಂಟ್ರಲ್ ಕಾಲೇಜಿನಿಂದ ಎಂ.ಎ. (ಇಕನಾಮಿಕ್ಸ್) ಮತ್ತು ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಆದರೆ ಎರಡು ಪರೀಕ್ಷೆಗಳಿಗೂ ಹಾಜರಾಗದಂತಹ ಅನಿರೀಕ್ಷಿತ ಸಂದರ್ಭಗಳಾದರೂ ಸಾಹಿತ್ಯದ ಕಡೆ ಒಲವು ಬೆಳೆದು ಬರೆದದ್ದು ಹಲವಾರು ಸಣ್ಣ ಕಥೆಗಳು. ತಮಿಳು, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಇವರು ಬರೆದ ‘ಉತ್ತರಾಯಣಿ ಕಥೆಯು ಕೇಂದ್ರ ಸಾಹಿತ್ಯ ಅಕಾಡಮಿಯು ಹೊರತಂದಿರುವ ‘ಇಂಡಿಯನ್ ಲಿಟರೇಚರ್‌’ನಲ್ಲಿ ಸೇರ್ಪಡೆಯಾಗಿದ್ದರೆ, ಮಿಥುನ ಕಥೆಯನ್ನು ಕವಿ ಗೋಪಾಲಕೃಷ್ಣ ಅಡಿಗರು ಇಂಗ್ಲಿಷ್‌ಗೆ ಅನುವಾದಿಸಿದ್ದು, ಮದರಾಸಿನ ಸ್ಕಾಲರ ಬುಕ್ ಹೌಸ್ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಇವರ ಕಥೆಗಳು ರುಕ್ಮಿಣಿ, ಚಂಕ್ರಬಂಧ್ರನ, ಉತ್ತರಾಯಣ, ಪರ್ಜನ್ಯ, ಮಿಥುನ, ಉಳಿದದ್ದು ಆಕಾಶ, ಮಾವಿನ ಕೆರೆ ಆಯ್ದ ಕಥೆಗಳು, ಶಂಭು ಲಿಂಗ ಮತ್ತು ಮೂವತ್ತು ಕಥೆಗಳು ಮೊದಲಾದ ಕಥಾ ಸಂಕಲನಗಳಲ್ಲಿ ಸೇರಿವೆ. ’ಏಳುಸುತ್ತಿನ ಕೋಟೆ’ ಮತ್ತು ‘ಜಲತರಂಗ’ ಎರಡು ಕಾದಂಬರಿಗಳು ಸುಧಾ ಮತ್ತು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನಂತರ ಪುಸ್ತಕ ರೂಪದಲ್ಲಿ ಹೊರಬಂದಿವೆ. ವಿಮರ್ಶಾ ಕೃತಿಗಳು – ಸಂಕ್ಷಿಪ್ತ, ನಮ್ಮ ಮಾಸ್ತಿ ಮತ್ತು ಮಾಸ್ತಿ ಕನ್ನಡದ ಆಸ್ತಿ. ಇವರು ಸಂಪಾದಿಸಿರುವ ಕೃತಿಗಳು – ದಿಗಂತ, ಶ್ರೀನಿವಾಸ, ಶಿಕ್ಷಣ-ಸಂಸ್ಕೃತಿ, ಕಥಾಸಂಪದ, ಮಾಸ್ತಿ ಸಮಗ್ರ ಕಥೆಗಳು ಭಾಗ ೧ ಮತ್ತು ೨, ಚಿತ್ರಮಯ ಜ್ಞಾನ ಕೋಶ, ನೊಬೆಲ್ ಪ್ರಶಸ್ತಿ ಕಥಾ ಜಗತ್ತು, ನೊಬೆಲ್ ಪ್ರಶಸ್ತಿ ಕಾವ್ಯ ಜಗತ್ತು, ನೊಬೆಲ್ ಪ್ರಶಸ್ತಿ ಕಾದಂಬರಿ ಜಗತ್ತು (ನೊಬೆಲ್ ಮಾಲೆ ಗೋಪಾಲಕೃಷ್ಣ ಅಡಿಗರೊಡನೆ) ಮಾಸ್ತಿ ಪ್ರಶಸ್ತಿ ಮಹನೀಯರು, ಎಲ್.ಎಸ್.ಶೇಷಗಿರಿರಾವ್ ಬದುಕು ಬರೆಹ ಮತ್ತು ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಸಂಪುಟಗಳು ಭಾಗ ೧ ಮತ್ತು ೨ ಸೇರಿ ಸುಮಾರು ೩೦ ಕೃತಿಗಳು ಪ್ರಕಟಿತ. ಇದಲ್ಲದೆ ಉದಯೋನ್ಮುಖ ಮತ್ತು ಪ್ರಖ್ಯಾತರ ಕೃತಿಗಳ ಪ್ರಕಟಣೆಗಾಗಿ ‘ಪುರೋಗಾಮಿ ಸಾಹಿತ್ಯ ಸಂಘ’ ಸ್ಥಾಪಿಸಿ ಹೊರತಂದದ್ದು ಸುಮಾರು ೩೦೦ ಕೃತಿಗಳು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಮಿತಿ ಸದಸ್ಯರಾಗಿ, ಮಾಸ್ತಿ ಪ್ರಶಸ್ತಿ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಮತ್ತು ಕನಾಟಕ ಸರಕಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷರಾಗಿ ಹೊತ್ತ ಜವಾಬ್ದಾರಿಯುತ ಸ್ಥಾನಗಳು. ಕರ್ನಾಟಕ ಚಲನ ಚಿತ್ರಮಂಡಲಿಯಲ್ಲಿ ಕೆಲವು ಗೌರವ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರ ಜೊತೆಗೆ ಚಿತ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ ‘ಸಂಘರ್ಷ’ ಮತ್ತು ‘ಮಿಥುನ’ ಚಲನಚಿತ್ರಗಳನ್ನು ಬೆಳ್ಳಿತೆರೆಗೆ ಅರ್ಪಿಸಿದ್ದಾರೆ. ಎರಡು ಬಾರಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು (೧೯೭೨, ೧೯೮೪) ‘ಪರ್ಜನ್ಯ’ ಮತ್ತು ‘ಉಳಿದದ್ದು ಆಕಾಶ’ ಕಥಾ ಸಂಕಲನಗಳಿಗೆ ಪಡೆದರೆ ‘ಉತ್ತರಾಯಣ’ ಕಥಾ ಸಂಕಲನಕ್ಕೆ ಕೇಂದ್ರ ಸರಕಾರದ ಪುರಸ್ಕಾರ, ಮತ್ತು ‘ಜಲತರಂಗ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿಯು ದೊರೆತಿದೆ.

Details

Date:
December 21, 2023
Event Category: