ಮಾಸ್ಟರ್ ಹಿರಣ್ಣಯ್ಯ

Home/Birthday/ಮಾಸ್ಟರ್ ಹಿರಣ್ಣಯ್ಯ
Loading Events
This event has passed.

೧೫.೦೨.೧೯೩೪ ಮಾತಿನಲ್ಲೇ ಮೋಡಿ ಮಾಡುವ ಮಾಸ್ಟರ್ ಹಿರಣ್ಣಯ್ಯನವರು ಹುಟ್ಟಿದ್ದು ಮೈಸೂರು. ತಂದೆ ನಟ, ಕಲ್ಚರ್ಡ್ ಕಮೆಡಿಯನ್ ಎನಿಸಿದ್ದ ಕೆ. ಹಿರಣ್ಣಯ್ಯ, ತಾಯಿ ಶಾರದಮ್ಮ. ತಂದೆಯೊಡನೆ ಮದರಾಸಿಗೆ ಪಯಣ. ಶಾಲೆಗೆ ಸೇರಿ ಕಲಿತದ್ದು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳು. ಕನ್ನಡದ ಬಾಯಿಪಾಠ. ಸ್ತೋತ್ರ ಪಾಠಗಳು ತಂದೆಯಿಂದ. ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ಓದುತ್ತಲೇ ಹಿಡಿದ ಸಂಪಾದನೆಯ ದಾರಿ. ಸಾಧ್ವಿ, ಮೈಸೂರು ಪತ್ರಿಕೆಯ ಮಾರಾಟದ ಹಣದಿಂದ ಫೀಸಿಗೆ ದಾರಿ. ಮುಂದೆ ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜಿಗಾಗಿ ಶಾರದಾವಿಲಾಸ ಕಾಲೇಜು. ತಂದೆ ಕೆ. ಹಿರಣ್ಣಯ್ಯನವರು ೧೯೪೦ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಬಾಲನಟನಾಗಿ ಪಾದಾರ್ಪಣ. ೧೯೪೮ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತದ್ದು. ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ಪ್ರದರ್ಶಿಸಿದ್ದು ‘ಆಗ್ರಹ’ ನಾಟಕ. ಅದ್ಭುತ ಅಭಿನಯದ ನಾಟಕ ಗೆದ್ದರೂ ಅಭಿನಯಿಸಿದವರೆಲ್ಲರೂ ತರಗತಿಯಲ್ಲಿ ನಪಾಸು. ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ಸ್ಥಾಪಿಸಿದ ನಾಟಕ ಕಂಪನಿ. ಅನುಭವಿಸಿದ ನಷ್ಟ. ಪುನಃ ಆರಂಭಿಸಿದ್ದು ಹಿರಣ್ಣಯ್ಯ ಮಿತ್ರ ಮಂಡಲಿ. ಲಂಚಾವತಾರ ರಚಿಸಿ ಪ್ರಯೋಗ ಪ್ರಾರಂಭ (ಶಿವಮೊಗ್ಗ). ೧೯೬೨ರಲ್ಲಿ ಮೈಸೂರು ಮಹಾರಾಜರಿಂದ ಸನ್ಮಾನ. ನಟರತ್ನಾಕರ ಬಿರುದು. ಜಯಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಜಗನ್ಮೋಹಿನ ಅರಮನೆಯಲ್ಲಿ ನಾಟಕ. ನಂತರ ನಡುಬೀದಿ ನಾರಾಯಣದಲ್ಲಿ ತೀರ್ಥರೂಪುವಾಗಿ, ಭ್ರಷ್ಟಾಚಾರದಲ್ಲಿ ಧಫೇದಾರ್ ಮುರಾರಿಯಾಗಿ, ಸದಾರಮೆಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ಕಪಿಮುಷ್ಠಿಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ಮಕ್ಮಲ್ ಟೋಪಿಯಲ್ಲಿ ನಾಣಿಯಾಗಿ, ಹೀಗೆ ಹಲವಾರು ನಾಟಕಗಳನ್ನು ರಂಗಕ್ಕೆ ತಂದು ಗಳಿಸಿದ ಕೀರ್ತಿ. ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ಬರೆದು ಪ್ರದರ್ಶಿಸಿ ಬಾರಿಸಿದ ಜಯಭೇರಿ. ಸಮಾಜದ ಓರೆಕೋರೆಗಳನ್ನು ತಿದ್ದುವುದೇ ಪ್ರತಿ ನಾಟಕದ ಪ್ರಮುಖ ವಸ್ತು. ಹಲವಾರು ಬಾರಿ ವಿದೇಶದಲ್ಲೂ ನಾಟಕಗಳ ಪ್ರದರ್ಶನ. ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ-ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಸಂದ ಸನ್ಮಾನ, ನವರತ್ನಾರಾಂ ಪ್ರಶಸ್ತಿ, ಮದರಾಸು, ಹೈದರಾಬಾದು ಕನ್ನಡ ಸಂಘಗಳಿಂದ ಸನ್ಮಾನ, ಲಂಚಾವತಾರ ನಾಟಕವನ್ನು ೧೦,೦೦೦ ಪ್ರದರ್ಶನವಿತ್ತು ಮಾಡಿದ ವಿಶ್ವದಾಖಲೆ.   ಇದೇ ದಿನ ಹುಟ್ಟಿದ ಕಲಾವಿದರು : ಆರ್. ಶಂಕರ ನಾರಾಯಣ – ೧೯೩೧ ಕೆ. ಶಾಮಾಚಾರ್ – ೧೯೨೬ ಗುರುಮೂರ್ತಿ ವರದಮೂಲ – ೧೯೫೫ ಜಯಂತ್ ಬಿ. ಹುಬ್ಲಿ – ೧೯೬೭ ಸೋರಟ್ ಅಶ್ವತ್ಥ್ – ೧೯೧೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top