ಮಾ.ನಾ. ಚೌಡಪ್ಪ

Home/Birthday/ಮಾ.ನಾ. ಚೌಡಪ್ಪ
Loading Events

೨೯.೦೭.೧೯೦೯ ೨೦.೦೨ ೧೯೮೫ ಸಾಹಸಿ ಪತ್ರಕರ್ತ, ದೇಶಾಭಿಮಾನಿ, ಕನ್ನಡಪರ ಹೋರಾಟಗಾರಾಗಿದ್ದ ಚೌಡಪ್ಪನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರಿವೇಕರೆ ತಾಲ್ಲೂಕಿನ ಮಾಯಸಂದ್ರದಲ್ಲಿ. ತಂದೆ ಶಾನುಭೋಗ ವೃತ್ತಿಯಲ್ಲಿದ್ದ ನಾರಸೀದೇವಯ್ಯ, ತಾಯಿ ಲಕ್ಷ್ಮೀದೇವಮ್ಮ. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ನಣ  ಪಡೆದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದ್ದು ಮೈಸೂರಿಗೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಓದುತ್ತಿದ್ದಾಗ ಇತಿಹಾಸದ ವಿಷಯವನ್ನು ಬೋಧಿಸುತ್ತಿದ್ದವರು ಖ್ಯಾತ ಹಾಸ್ಯ ಸಾಹಿತಿ, ನಾಟಕಕಾರರಾದ ನಾ. ಕಸ್ತೂರಿಯವರು. ಕನ್ನಡ ಬೋಧಿಸುತ್ತಿದ್ದವರು ತೀ.ನಂ.ಶ್ರೀ ಯವರು. ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ವಾಸ್ತವ್ಯ ಹೂಡಿದಾಗ ಇವರಿಗೆ ಜೊತೆಯಾಗಿ ದೊರೆತಿದ್ದವರು ಕುವೆಂಪುರವರು.  ಆಗಲೇ ಕುವೆಂಪುರವರು ಕೆಲವು ಇಂಗ್ಲಿಷ್ ಪದ್ಯಗಳನ್ನು ಬರೆದು ಪ್ರಸಿದ್ಧರಾಗಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ೧೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು (೧೯೩೦) ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಹಲವಾರು ಸಾಹಿತಿಗಳು ಆಗಮಿಸಿದ್ದರು. ಅ.ನ.ಕೃ.ರವರೂ ಸಮ್ಮೇಳನದಲ್ಲಿ ತಾವು ಹೊರತರಲಿರುವ ‘ಕಥಾಂಜಲಿ’ ಪತ್ರಿಕೆಗೆ ಸಾಹಿತಿ ಮಿತ್ರರ ಬೆಂಬಲಗಳಿಸುವ ಉದ್ಧೇಶದಿಂದ ಬಂದಿದ್ದು ಯುವ ಬರಹಗಾರರಿಗೆ ಆಕರ್ಷಣೆಯ ಕೇಂದ್ರವಾಗಿದ್ದರು. ಕಿವಿಯಿಂದ ಕೆಳಭಾಗದವರೆಗೆ ಇಳಿದ ನೀಳಕೂದಲು ಕ್ರಾಪಿನ, ಜುಬ್ಬ ಪಾಯಿಜಾಮದ ಎದ್ದು ಕಾಣುವ ವ್ಯಕ್ತಿತ್ವವಾಗಿತ್ತು.  ಅರಸು ಬೋರ್ಡಿಂಗ್ ಶಾಲೆಯಲ್ಲಿ ಏರ‍್ಪಾಟಾಗಿದ್ದ ಭೋಜನ ಶಾಲೆಯಲ್ಲಿ ಅ.ನ.ಕೃರವರು ಕಥಾಂಜಲಿ ಪತ್ರಿಕೆ ಕುರಿತ ಕರಪತ್ರ ಹಂಚಿದರು. ಚೌಡಪ್ಪನವರು ಅ.ನ.ಕೃರವರ ವ್ಯಕ್ತಿತ್ವಕ್ಕೆ ಮಾರುಹೋದರು. ನಾ. ಕಸ್ತೂರಿ, ಕುವೆಂಪು, ತೀ.ನಂ.ಶ್ರೀ, ಅ,ನ,ಕೃ, ಇವರೆಲ್ಲರ ಮಿಶ್ರಣದ ಸಾಹಿತ್ಯದ ಪ್ರಭಾವದಿಂದ ಬರವಣಿಗೆಯ ಹುಚ್ಚು ಹಚ್ಚಿಸಿಕೊಂಡ ಚೌಡಪ್ಪನವರು ತಾವು ಬರೆದ ಕಥೆಯೊಂದನ್ನು ತಂದು ಅ.ನ.ಕೃ ರವರಿಗೆ ತಲುಪಿಸಿದರು. ಕಥೆಯ ಬಗ್ಗೆ ಅ.ನ.ಕೃ ರವರನ್ನು ವಿಚಾರಿಸಲು ಮತ್ತೆ ಹೋದಾಗ ಮುಂದಿನ ವಾರ ನಿಮ್ಮ ಕಥೆ ಪ್ರಕಟವಾಗುತ್ತದೆಂದು ಹೇಳಿದಾಗ ಇವರಿಗಾದ ಹಿಗ್ಗು ಹೇಳತೀರದಾಗಿತ್ತು. ಅ.ನ.ಕೃ ರವರು ಮೇಜಿನಮೇಲಿದ್ದ ದಾಸ್ತೋ ವಸ್ಕಿಯವರ ಇಂಗ್ಲಿಷ್ ಲೇಖನವೊಂದನ್ನು ನೀಡಿ ಭಾಷಾಂತರಿಸಿ ತರುವಂತೆ ಹೇಳಿದರು. ಇವರಿಗೆ ಭಾಷಾಂತರ ಹೊಸದಾದರೂ ಭಾಷಾಂತರಿಸಿ ತೆಗೆದುಕೊಂಡು ಹೋಗಿ ಕೊಟ್ಟಾಗ, ಓದಿದ ಅ.ನ.ಕೃ ರವರು “ನಿಮ್ಮ ಶೈಲಿ ಫಿಕ್ಷನ್‌ಗಿಂತ ಸೀರಿಯಸ್ ರೈಟಿಂಗ್‌ಗೆ ಚೆನ್ನಾಗಿ ಹೊಂದುತ್ತೆ” ಎಂದು ಶುಭ ಹಾರೈಸಿದರು. ಕಥಾಂಜಲಿಯಲ್ಲಿ ಈ ಲೇಖನ ಪ್ರಕಟಗೊಂಡಾಗ ಓದಿದ ತಿ.ತಾ.ಶರ್ಮರವರು ಮೆಚ್ಚಿ ವಿಶ್ವಕರ್ನಾಟಕ ಪತ್ರಿಕೆಯಲ್ಲೂ ಪುನರ್ ಪ್ರಕಟಿಸಿದರು. ಹೀಗೆ ಬರಹದ ಜಾಡು ಹಿಡಿದ ಚೌಡಪ್ಪನವರು ಕೆಲವರ್ಷಗಳಲ್ಲಿಯೇ ಕಥಾಂಜಲಿಯ ಸಂಪಾದಕತ್ವವನ್ನು ವಹಿಸಿಕೊಳ್ಳಬೇಕಾಗಿ ಬಂತು. ನಂತರ ಪ್ರಜಾಮತ ವಾರಪತ್ರಿಕೆಯಲ್ಲಿ ೧೦ವರ್ಷ ದುಡಿದರು. ಆಗ ದೇಶದಲ್ಲೆಲ್ಲಾ ಸ್ವಾತಂತ್ರ‍್ಯ ಹೋರಾಟದ ಚಳವಳಿ ಬಲವಾಗಿ ಬೀಸತೊಡಗಿತ್ತು. ಚೌಡಪ್ಪನವರು ಮಹಾತ್ಮಗಾಂಧಿಯವರ ‘ಯಂಗ್ ಇಂಡಿಯಾ’ ಮತ್ತು ‘ಹರಿಜನ’ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಜಾಮತದಲ್ಲಿ ಪ್ರಕಟಿಸತೊಡಗಿಸಿದಾಗ ಮೈಸೂರು ಸರಕಾರ ಪ್ರಕಟಣೆಯ ಮೇಲೆ ನಿಷೇಧ ಹೇರಿದಾಗ, ಧೃತಿಗೆಡದ ಚೌಡಪ್ಪನವರು ಮುಂಬೈ ಪ್ರಾಂತಕ್ಕೆ ಸೇರಿದ್ದ ಹುಬ್ಬಳ್ಳಿಯಿಂದ ಪತ್ರಿಕೆಯನ್ನು ಪ್ರಕಟಿಸಿ ರಾತ್ರಿವೇಳೆಯಲ್ಲಿ ಬೆಂಗಳೂರಿಗೆ ರವಾನಿಸತೊಡಗಿದರು. ಈ ರೀತಿಯ ಸಾಹಸ ಪ್ರವೃತ್ತಿಯ ಚೌಡಪ್ಪನವರು ಚಲನಚಿತ್ರ ಪತ್ರಿಕೋದ್ಯಮದ ‘ವಾಕ್ಚಿತ್ರ’ದ ಸಂಪಾದಕರಾಗಿಯೂ ಒಂದು ದಶಕದ ಕಾಲ ಕಾರ‍್ಯ ನಿರ್ವಹಿಸಿದರು. ಚಿತ್ರ ನಿರ್ಮಾಣ, ನಿರ್ವಹಣೆ, ನಿರ್ದೇಶನಗಳ ಬಗ್ಗೆ  ವಿಚಾರಪೂರಿತ ಲೇಖನಗಳನ್ನು ಬರೆದು ಚಲನಚಿತ್ರ ರಂಗಕ್ಕೆ ದಾರಿದೀಪವಾದರು.  ಇವರ ಈ ರೀತಿಯ ಸೇವೆಗಾಗಿ ಕನ್ನಡ ಚಲನಚಿತ್ರ ರಂಗ ಹಾಗೂ ಭಾರತೀಯ ಚಲನಚಿತ್ರ ರಂಗದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರು ಬರೆದ ‘ಕುಂತಿ’, ‘ಚಂದ್ರಗುಪ್ತ” ಪೌರಾಣಿಕ ನಾಟಕಗಳಾದರೆ, ‘ಶ್ರೀ ಕೃಷ್ಣ ಭೂಪಾಲ’ ಐತಿಹಾಸಿಕ ನಾಟಕವು ಬಹು ಜನಪ್ರಿಯ ನಾಟಕಗಳಾಗಿದ್ದುವು. ೧೯೫೦ರ ದಶಕದಲ್ಲಿ ‘ಕುಂತಿ’ ನಾಟಕವು ೯ನೆಯ ತರಗತಿಗೆ ಮೂರುವರ್ಷಗಳ ಕಾಲ ನಾನ್‌ಡಿಟೇಲ್‌ ಪಠ್ಯವಾಗಿ ಆಯ್ಕೆಯಾಗಿತ್ತು. ‘ಶ್ರೀ ಕೃಷ್ಣ ಭೂಪಾಲ’ ನಾಟಕವು ೧೯೫೮ರಲ್ಲಿ ಮೈಸೂರು ರಾಜ್ಯ ಸರಕಾರದ ಪ್ರಶಸ್ತಿ ಪಡೆಯಿತು. ಇವರ ನಿಷ್ಠೆಯ ದುಡಿಮೆಯನ್ನು ಗುರುತಿಸಿದ ಮೈಸೂರು ಸರಕಾರವು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಿಸುವ ಆಮಿಷ ತೋರಿಸಿದಾಗ, ನಯವಾಗಿ ನಿರಾಕರಿಸಿದ ನಿಷ್ಕಾಮಕರ್ಮಿ ಚೌಡಪ್ಪನವರು ನಿಧನರಾದುದು ೧೯೮೫ರ ಫೆಬ್ರವರಿ ೨೦ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top