Loading Events

« All Events

  • This event has passed.

ಮಿರ್ಜಿ ಅಣ್ಣಾರಾಯ

August 25, 2023

೨೫-೮-೧೯೧೮ ೨೩-೧೨-೧೯೭೫ ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ತಂದೆ ಅಪ್ಪಣ್ಣ, ತಾಯಿ ಚಂದ್ರವ್ವ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ನಂತರ ಖಾಸಗಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ ಪರೀಕ್ಷೆಯಲ್ಲಿ ತೇರ್ಗಡೆ. ಶೇಡಬಾಳ ಸಮೀಪದ ಉಗಾರದಲ್ಲಿ ಶಾಲಾ ಶಿಕ್ಷಕರಾಗಿ ನೇಮಕ. ಅಧ್ಯಾಪನದ ಜೊತೆಗೆ ಅಧ್ಯಯನ. ಮೆಟ್ರಿಕ್ ಪರೀಕ್ಷೆ ತೇರ್ಗಡೆ. ಧಾರವಾಡದ ಶಿಕ್ಷಕರ ಟ್ರೈನಿಂಗ್ ಕಾಲೇಜಿನಿಂದ ಶಿಕ್ಷಣ ತರಬೇತಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಗಳಿಸಿದ ಪ್ರಭುತ್ವ. ಆ.ನೇ. ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿ ಪರಿಶ್ರಮ. ಕನ್ನಡ ಸಾಹಿತ್ಯದಿಂದ ಆಕರ್ಷಿತರಾಗಿ ರೂಢಿಸಿಕೊಂಡದ್ದು ಬರವಣಿಗೆ. ಸನ್ಮತಿ, ವಿವೇಕಾಭ್ಯುದಯ, ಗುರುದೇವ, ಪ್ರಬುದ್ಧ ಕರ್ನಾಟಕ, ಜೀವನ-ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು. ಬರೆದ ಮೊದಲ ಕಾದಂಬರಿ ನಿಸರ್ಗ (೧೯೪೫), ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ರಾಷ್ಟ್ರಪುರುಷ, ರಾಮಣ್ಣ ಮಾಸ್ತರ, ಶ್ರೇಯಾಂಸ, ಪ್ರತಿ ಸರಕಾರ, ಅಶೋಕ ಚಕ್ರ, ಎರಡು ಹೆಜ್ಜೆ, ಹದಗೆಟ್ಟಹಳ್ಳಿ ಮುಂತಾದ ಸಾಮಾಜಿಕ ಕಾದಂಬರಿಗಳು. ಚಾರಿತ್ರಿಕ ಕಾದಂಬರಿ-ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು. ಸಂಪಾದಿತ ಕೃತಿಗಳು-ಕಲ್ಯಾಣ ಕೀರ್ತಿಯ ಚಿನ್ಮಯ, ಚಿಂತಾಮಣಿ, ಭರತೇಶ ವೈಭವದ ಶೋಭನ ಸಂಗಳು. ಜೀವನ ಚರಿತ್ರೆ-ಪ್ರಿಯದರ್ಶಿ, ಭಾರತದ ಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ಧನ ಕಥೆ, ಮಹಮದ್ ಪೈಗಂಬರ್, ಶ್ರೀ ಶಾಂತಿಸಾಗರರು, ತೀರ್ಥಂಕರ ಮಹಾವೀರ, ಮಹಾಪುರುಷ ಸೇರಿ ಸುಮಾರು ೩೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಶೇಡಬಾಳದಲ್ಲಿ ‘ಶಾಂತಿ ಸೇವಾ ಸದನ’ ತೆರೆದು ಯುವ ಬರಹಗಾರರ ೪೫ ಕೃತಿ ಪ್ರಕಟಿತ. ಜ್ಞಾನವಿಕಾಸ ಮಂದಿರ ಮತ್ತೊಂದು ಸಾಂಸ್ಕೃತಿಕ ಸಂಸ್ಥೆಯ ಆರಂಭ. ಕ.ಸಾ.ಪ.ದೊಡನೆ ನಿಕಟ ಸಂಪರ್ಕ. ರಾಜ್ಯ ಸರಕಾರದ ಪಠ್ಯ ಪುಸ್ತಕ ಸಮಿತಿ ಸದಸ್ಯತ್ವ. ನಿಸರ್ಗ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ದೇವರಾಜ ಬಹದ್ದೂರ್‌ಪ್ರಶಸ್ತಿ, ರಾಜ್ಯ ಸರಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ಮಿರ್ಜಿ ಅಣ್ಣಾರಾಯ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಸುಬೋಧ ರಾಮರಾವ್ – ೧೮೯೦-೧೪.೩.೧೯೭೦ ಶ್ರೀಧರ ರಾಯಸಂ – ೧೯೪೭

Details

Date:
August 25, 2023
Event Category: