ಮುದೇನೂರು ಸಂಗಣ್ಣ

Home/Birthday/ಮುದೇನೂರು ಸಂಗಣ್ಣ
Loading Events
This event has passed.

೧೭..೧೯೨೭ ೨೬.೧೦.೨೦೦೮ ವಿಶ್ವವಿದ್ಯಾಲಯದಿಂದ ಯಾವ ಪದವಿಯನ್ನು ಪಡೆಯದಿದ್ದರೂ ಹಳ್ಳಿಯ ಜನಮಾನಸದಲ್ಲಿದ್ದ ಜನಪದಗೀತೆಗಳ ಸಂಗ್ರಾಹಕರಾಗಿ, ನಾಟಕಕಾರರಾಗಿ, ರಂಗಭೂಮಿ ತಜ್ಞರಾಗಿ, ಕವಿಯಾಗಿ, ಸಾಹಿತಿಯಾಗಿ, ಭಾಷಾಕೋಶ ರಚನಕಾರರಾಗಿ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿದ್ದ ಮುದೇನೂರು ಸಂಗಣ್ಣನವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಟಗೇರಿ ಎಂಬ ಸಣ್ಣಹಳ್ಳಿಯಲ್ಲಿ ಮಾರ್ಚ್‌ ೧೭ರ ೧೯೨೭ ರಲ್ಲಿ. ತಂದೆ ಕೊಟ್ರಬಸಪ್ಪ. ತಾಯಿ ಸಿದ್ದಮ್ಮ. ಪ್ರಾಥಮಿಕ ಶಾಲಾಭ್ಯಾಸ ಚಿಟಗೇರಿ, ಪ್ರೌಢಶಾಲೆಗೆ ಸೇರಿದ್ದು ಹರಪನಹಳ್ಳಿಯಲ್ಲಿ. ಪ್ರೌಢಶಾಲೆಯಲ್ಲಿದ್ದಾಗಲೇ ಹಿರಿಯ ಕವಿಗಳಾದ ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ಇವರುಗಳ ಪ್ರಭಾವಕ್ಕೊಳಗಾಗಿ ಹಲವಾರು ಕವನಗಳನ್ನು ರಚಿಸಿದ್ದು, ಇವು ಜಯಂತಿ, ಕರ್ಮವೀರ ಪ್ರಜಾಮತ, ಜನಪ್ರಗತಿ, ಜಯಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಎಲ್ಲರ ಗಮನ ಸೆಳೆದವು. ಈ ಸಂದರ್ಭದಲ್ಲಿ ಹೆಸರಾಂತ ಸಾಹಿತಿಗಳಾದ ಬೇಂದ್ರೆ, ಬೆಟಗೇರಿ ಕೃಷ್ಣಕರ್ಮ, ಮಾಸ್ತಿ ಮುಂತಾದವರ ಮುಂದೆ ಕವನ ವಾಚನ ಮಾಡಿ ಪ್ರಶಂಸೆ ಪಡೆದರು. ಹಲವಾರು ಹಿರಿಯ ಸಾಹಿತಿಗಳ ಪರಿಚಯದಿಂದ ಎಲ್ಲರಿಗೂ ಹತ್ತಿರವಾದರು. ಮದನಪಲ್ಲಿಯಲ್ಲಿ ಇಂಟರ್‌ಮೀಡಿಯೆಟ್‌ವರೆಗೆ ಓದಿದ ಸಂಗಣ್ಣನವರು ಸಂಸಾರದ ಜವಾಬ್ದಾರಿ ಹೊರಬೇಕಾದ ಸಂದರ್ಭ ಬಂದಿದ್ದರಿಂದ ಒಕ್ಕಲುತನ ಹಾಗೂ ತಂಬಾಕು ವ್ಯಾಪರದತ್ತ ಗಮನ ಹರಿಸಬೇಕಾಯಿತು. ವ್ಯಾಪಾರದ ವಹಿವಾಟಿಗಾಗಿ ವ್ಯಾಪಾರೀ ಸಂಬಂಧ ಬೆಳೆಸಬೇಕಾಗಿ ನಿಪ್ಪಾಣಿಗೆ ಹೋದಾಗ ಮರಾಠಿ ಭಾಷೆಯನ್ನು, ಆಂಧ್ರ ಪ್ರದೇಶದ ಸಂಪರ್ಕದಿಂದ ತೆಲುಗು ಭಾಷೆಯನ್ನು, ರವೀಂದ್ರನಾಥ ಠ್ಯಾಗೂರರ ಗೀತಾಂಜಲಿಯನ್ನು ಮೂಲದಲ್ಲೇ ಓದಬೇಕೆಂಬ ಹಂಬಲದಿಂದ ಬಂಗಾಳಿಯನ್ನು, ವಿದ್ಯಾಭ್ಯಾಸದ ವೇಳೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತು ತಮ್ಮ ಜ್ಞಾನ ದಾಹವನ್ನು ತೀರಿಸಿಕೊಳ್ಳತೊಡಗಿದರು. ಹಿಂದೆ ಬಂಗಾಳಿ ಕಲಿಯಲು ಸೌಲಭ್ಯಗಳಿಲ್ಲದಿದ್ದ ಸಂದರ್ಭದಲ್ಲೂ ಇಂಗ್ಲಿಷ್-ಬಂಗಾಳಿ ಶಬ್ದಕೋಶ ಹಿಡಿದು ಬಂಗಾಳಿ ಕಲಿತು, ಶುಭೋದ ಘೋಷರ ೧೮ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಮನೆಯೇ ಒಂದು ವಿದ್ಯಾಪೀಠವಾಗಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ, ಬಂಗಾಳಿ ಭಾಷೆಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಹತ್ವದ ಅಪಾರ ಗ್ರಂಥರಾಶಿಯನ್ನೇ ಸಂಗ್ರಹಿಸಿದರು. ಕನ್ನಡದಲ್ಲಿ ಪ್ರಕಟವಾದ ಯಾವುದೇ ಮೌಲಿಕ ಕೃತಿಯಾದರೂ ಅದು ಸಂಗಣ್ಣನವರಿಗೆ ಕೂಡಲೇ ತಲುಪುತ್ತಿತ್ತು. ಹಲಸಂಗಿ ಗೆಳೆಯರ ಗುಂಪಿನ ಮಧುರ ಚೆನ್ನ, ಬೇಂದ್ರೆ, ಸಿಂಪಿ ಲಿಂಗಣ್ಣನವರುಗಳಂತೆ ಜನಪದ ಸಾಹಿತ್ಯದತ್ತ ಒಲವು ಬೆಳೆದು ಸಿಂಪಿ ಲಿಂಗಣ್ಣನವರು ಸಂಪಾದಿಸಿದ ‘ಗರತಿಯ ಹಾಡು’  ಕೃತಿಯಂತೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಲ್ಲೆಲ್ಲಾ ಪ್ರವಾಸ ಕೈಗೊಂಡು ತ್ರಿಪದಿಗಳನ್ನು ಸಂಗ್ರಹಿಸಿದರು. ಈ ಸಂಗ್ರಹವೇ ‘ನವಿಲುಕುಣಿದಾವೆ’ ಕೃತಿಯಾಗಿ ಪ್ರಕಟವಾಯಿತು. ಜಾನಪದ ಹಾಡುಗಳ ಜೊತೆಗೆ ಹಿಂದೂಸ್ತಾನಿ ಸಂಗೀತದ ಬಗ್ಗೆಯೂ ಇದ್ದ ಅಪಾರ ಆಸ್ಥೆಯಿಂದ ಸಂಗ್ರಹಿಸಿದ್ದ ಹಾಡುಗಳೂ ಅಪಾರ. ಸುಮಾರು ೧೦೦ ಗಂಟೆಗಳ ಕಾಲ ಕುಳಿತು ಕೇಳಬಹುದಾದದ್ದು ಹಿಂದೂಸ್ತಾನಿ ಸಂಗೀತದ ರೆಕಾರ್ಡುಗಳ ಸಂಗ್ರಹವೇ ಅವರಲ್ಲಿತ್ತು. ರಂಗ ಭೂಮಿಯ ಬಗ್ಗೆ ಅಪಾರ ಆಸಕ್ತಿಯಿದ್ದು ರಚಿಸಿದ ನಾಟಕಗಳು ಹಲವಾರು. ಜಾನಪದ ಅಧ್ಯಯನ ಹಾಗೂ ಸಂಗ್ರಹಣೆಯ ಸಂದರ್ಭದಲ್ಲಿ ಸಂಪಾದಿಸಿದ್ದು ‘ಚಿತ್ರಪಟ ರಾಮಾಯಣ’ ಎಂಬ ಬಯಲಾಟ. ಕಿನ್ನರಿಮೇಳದ ಜನಪದ ಕಲಾ ಪ್ರಕಾರದ ‘ಲಕ್ಷಾಪತಿ ರಾಜನ ಕಥೆ’ ನಾಟಕವನ್ನು ರಚಿಸಿದರು. ಈ ನಾಟಕವು ರಂಗತಜ್ಞೆ ಬಿ. ಜಯಶ್ರೀಯವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಪಡೆಯಿತು. ಗೊಂದಲಿಗರ ಆಟಕ್ಕೆ ಮನಸೋತು ಗೊಂದಲಿಗರ ಆಟದ ‘ಶೀಲಾವತಿ’ ನಾಟಕವನ್ನು ಬರೆದರು. “ಗೊಂದಲಿಗ ದೇವೇಂದ್ರಪ್ಪನ ಆಟಗಳು”, “ಗೊಂಬಿಗೌಡರ ಸೂತ್ರದ ಗೊಂಬೆ ಆಟಗಳು”, ನವಿಲು ಕುಣಿದಾವ (ತ್ರಿಪದಿಗಳು) ಇವರ ಮಹತ್ವದ ಜಾನಪದ ಕೃತಿಗಳು. ಇವಲ್ಲದೆ ಚೌತಿಯ ಚಂದ್ರ, ಅಂಗುಲಿ ಮಾಲ, ಬಂಗಾರದ ತಟ್ಟೆ, ರಸದಾಳ ರಾಜನಕತೆ, ಸೂಳೆ ಸಂಕವ್ವ, ಬಾಳ ಭಿಕ್ಷುಕ, ಅವ್ವೆಣ್ಣವ್ವ, ಕರುಣೆಯ ಕಂದ, ಜನ ಅರಣ್ಯ, ಮೋತಿ ಮಾವನ ಕತೆ ಮುಂತಾದ ನಾಟಕಗಳ ರಚನೆ. ಚೌತಿಯ ಚಂದ್ರ ಪ್ರಗತಿಪರ ಧೋರಣೆಯನ್ನು ಹೊಂದಿದ್ದು ಹಲವಾರು ಪ್ರದರ್ಶನಗಳನ್ನು ಕಂಡಿದ್ದರೆ ಶೀಲಾವತಿ ನಾಟಕವು ಅರವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಮರಾಠಿಯಿಂದ ಘಾಶೀರಾಮ್ ಕೊತ್ವಾಲ, ವಾಸನಾಕಾಂಡಾ ಹಾಗೂ ಬಂಗಾಳಿಯಿಂದ ಭಾರತ ಪ್ರೇಮಕಥಾ, ನಿಶೀಥ್ ಕಾಲೇ ಏಕದಾ, ಮುರಾರ್‌ರಾವ್, ಕಥಾವೋ ಕಾಹಿಸೆ ಮುಂತಾದ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕನ್ನಡ ರಂಗಭೂಮಿಯ ಪ್ರಸಿದ್ಧ ನಾಟಕವಾಗಿರುವ ಲಕ್ಷಾಪತಿ ರಾಜನ ಕಥೆ ಸಿರಿಸಂಪಿಗೆ, ನಾಗಮಂಡಲ ಈ ನಾಟಕದ ಕರ್ತೃಗಳಾದ ಚಂದ್ರಶೇಖರ ಕಂಬಾರ ಮತ್ತು ಗಿರೀಶ್ ಕಾರ್ನಾಡ್‌ರವರುಗಳಿಗೆ ಮೂಲಸಾಮಗ್ರಿ ಒದಗಿಸಿ ಸಲಹೆ ನೀಡಿದ್ದಾರೆ. ಇವರು ಸಂಗ್ರಹಿಸಿರುವ ಚಿಟಗೇರಿ ಪದಕೋಶವು ಸುಮಾರು ೯೦೦೦ ಪದಗಳಿಂದ ಕೂಡಿದ್ದು, ಆ ಭಾಗದ ಜನರ ಹಾಡುಗಳು, ಮಾತುಗಳು, ಅವುಗಳ ಅರ್ಥವನ್ನು ವಿವರಿಸುವ ನಿಘಂಟೇ ಆಗಿದೆ. ಇವರ ಮತ್ತೊಂದು ಸಂಗ್ರಹಯೋಗ್ಯ ಕೃತಿ ಎಂದರೆ ‘ಕೊಂಡಜ್ಜಿ ಬಸಪ್ಪ ನವರ ಜೀವನ ಚರಿತ್ರೆ’. ಎಳೆವೆಯಿಂದಲೇ ಬರೆದ ಹಲವಾರು ಕವನಗಳು ಪತ್ರಿಕೆಗಳೂ ಪ್ರಕಟವಾಗಿದ್ದರೂ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅಷ್ಟೇನು ಆಸ್ಥೆ ಇರದಿದ್ದರೂ ಗೆಳೆಯರ ಒತ್ತಾಯಕ್ಕೆ ಮಣಿದು ಪ್ರಕಟಿಸಿದ ಕವಿತೆಗಳ ಸಂಗ್ರಹ ‘ಆ ಅಜ್ಜ ಈ ಮೊಮ್ಮಗ’ (೨೦೦೦) ಪ್ರಕಟಗೊಂಡಿದೆ. ಕರ್ನಾಟಕದ ಏಕೀಕರಣದಲ್ಲಿ ತೊಡಗಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ತಾಲೂಕು ಬೋರ್ಡ್‌ ಸದಸ್ಯರಾಗಿ ಆಯ್ಕೆಯಾಗಿ ಸಮಾಜದ ಹಿತಕ್ಕಾಗಿ ದುಡಿದಿದ್ದರಿಂದ ತಂದೆಗೆ ಮಗನನ್ನು ರಾಜಕೀಯ ವ್ಯಕ್ತಿಯನ್ನಾಗಿ ರೂಪಿಸಬೇಕೆನ್ನುವ ಆಶಯದಿಂದ ಪ್ರಜಾ ಸೋಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದಾಗ ೧೯೬೨ ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋತರು. ಹೀಗೆ ಸೋತಿದ್ದರಿಂದ ಜಾನಪದ, ಸಾಹಿತ್ಯ ಕ್ಷೇತ್ರಕ್ಕೊಬ್ಬ ನಿಷ್ಠಾವಂತ ಚಿಂತಕನನ್ನು ಉಳಿಸಿಕೊಟ್ಟಿತು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದ ಸಂಗಣ್ಣನವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಸದಸ್ಯರಾಗಿ, ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಲಹಾ ಮಂಡಲಿಯ ಸದಸ್ಯರಾಗಿ, ಹಂಪಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದುದರ ಜೊತೆಗೆ ನಾಟಕ ಮತ್ತು ಹಬ್ಬಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಅನೇಕ ಬಾರಿ ವಿಚಾರ ಮಂಡಿಸಿದ್ದಾರೆ. ಇವರ ಜಾನಪದ ಸೇವೆಗಾಗಿ ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ‘ಜಾನಪದ ತಜ್ಞ ಪ್ರಶಸ್ತಿ’, ಕು.ಶಿ. ಹರಿದಾಸ ಭಟ್ಟ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ರಾಯಚೂರಿನ ಸಿರಿವಾರ ಉಮಾಪತಿ ಚುಕ್ಕೆ ಪ್ರತಿಷ್ಠಾನ ಪ್ರಶಸ್ತಿ, ಚಿಟಗೇರಿ ಪದಕೋಶಕ್ಕೆ ತಿರುವನಂತಪುರದ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಕನ್ನಡ ಶ್ರೀ ಪ್ರಶಸ್ತಿ, ಏಕೀಕರಣ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ರಂಗ ವಿಹಂಗಮ ಪುರಸ್ಕಾರ ಮುಂತಾದವುಗಳ ಜೊತೆಗೆ ಬಳ್ಳಾರಿ ಜಿಲ್ಲಾ ೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೨೧ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಜಾನಪದ ತಜ್ಞ, ಈ ನೆಲದ ಸಂಸ್ಕೃತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ ಜಾನಪದ ಲೋಕದ ಜಂಗಮ ಸಾಹಿತಿ, ಜಾನಪದ ಲೋಕದಿಂದ ದೂರವಾದದ್ದು ಅಕ್ಟೋಬರ್‌೨೬ರ ೨೦೦೮ರಲ್ಲಿ. ಇದ್ದಾಗ ಸದ್ದು ಗದ್ದಲವಿಲ್ಲದೆ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದ ಸಂಗಣ್ಣನವರು ಮರಣಕ್ಕೆ ಮುಂಚೆಯೇ ಇಚ್ಛಾ ಸಂಸ್ಕಾರ ಪತ್ರ ಬರೆದು ದಾವಣಗೆರೆಯ ಜೆಜೆಎಂ ವೈದ್ಯ ಕಾಲೇಜಿಗೆ ದೇಹದಾನ ನೀಡಿ ಮರಣದ ನಂತರವೂ ವಿಶೇಷತೆಯನ್ನು ತೋರಿದವರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top