೬.೩.೧೯೦೬ ೧೧.೯.೧೯೭೫ ಮೂಕ ಕವಿ ಎಂದೇ ಕರೆಯಲ್ಪಡುತ್ತಿದ್ದ ಮಿತ ಭಾಷಿ ಮೇವುಂಡಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೇವುಂಡಿ ಗ್ರಾಮದಲ್ಲಿ. ತಂದೆ ನೀಲಕಂಠ ಭಟ್ಟರು, ತಾಯಿ ಲಕ್ಷ್ಮೀಬಾಯಿ. ತಂದೆ ತಾಯಿಗಳಿಬ್ಬರನ್ನೂ ಬಾಲ್ಯದಲ್ಲೇ ಕಳೆದುಕೊಂಡದ್ದರಿಂದ ವಿದ್ಯಾರ್ಜನೆಗೆ ಧಕ್ಕೆ. ಆದರೂ ಸ್ವ-ಶ್ರಮದಿಂದ ಕಲಿತದ್ದು ಸಂಸ್ಕೃತ, ಹಿಂದಿ, ಬಂಗಾಳಿ ಭಾಷೆಗಳಲ್ಲಿ ಸಂಪಾದಿಸಿದ ಪಾಂಡಿತ್ಯ. ವಿದ್ಯಾರ್ಥಿ ದೆಸೆಯಲ್ಲಿ ಶ್ರೀ ದಿವಾಕರ್, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಹೊಸಕೆರೆ ಚಿದಂಬರಯ್ಯ ಮುಂತಾದ ಶಿಕ್ಷಕರ ಸಂಪರ್ಕ. ಸಾಹಿತ್ಯದತ್ತ ಒಲವು. ವಿದ್ಯಾರ್ಥಿಯಾಗಿದ್ದಾಗಲೇ ಪ್ರಾರಂಭಿಸಿದ ಕೈ ಬರಹದ ಮಾಸಪತ್ರಿಕೆ ‘ಕರ್ನಾಟಕ ದೇವಿ’ ಆರಂಭಿಸಿದ ಹೆಗ್ಗಳಿಕೆ. ಇದರ ಅನುಭವದಿಂದ ಮುಂದೆ ಜಯಕರ್ನಾಟಕ, ಕರ್ನಾಟಕ ವೃತ್ತ, ಕನ್ನಡ ಕಂದ ಮುಂತಾದ ಪತ್ರಿಕೆಗಳ ಸಂಪಾದಕತ್ವ. ಮಕ್ಕಳ ಕವಿ ಎಂದೇ ಪ್ರಸಿದ್ಧಿ ಪಡೆದು ಬರೆದದ್ದು ಎರಡು ವಿಧ. ಆರರಿಂದ ಹತ್ತು ವರ್ಷದ ಮಕ್ಕಳಿಗೆ ಬರೆದದ್ದು ಪದ್ಯಗಳು-ಪೆದ್ದನ ಪುರಿ, ಕಳೆದ ಕಡಲೆ, ಕತ್ತೆಗಳ ಮೇಳ, ಬೆಕ್ಕಿನ ಅಂಗಡಿ, ಧ್ರುವನ ದೋಸ್ತ್, ಹೊಟ್ಟೆ ಡುಮ್ಮ, ಕೆಂಪು ಮೂತಿಯ ಹಂಪಣ್ಣ, ಜಾಣಗುಬ್ಬಿ, ನರಿಗಳ ತಂತ್ರ, ಓತಿಕ್ಯಾತನ ತಂಗಿ, ಮಡ್ಡಮ್ಮನ ಸಂಸಾರ, ಗಾಳಿಯ ಹಾವಳಿ, ಗೆಳೆಯ, ತಿರುವು ಮುರುವು, ಮೂವರು ಕುಳ್ಳರು, ಸೇರಿಗೆ ಸವ್ವಾಸೇರು, ಮಂಗ ಎಂದರೆ ಮಂಗ, ಬಂಗಾರದ ಕೂದಲಿನ ರಾಕ್ಷಸ, ಕುರಿಮರಿ ಬೇಕೆ, ಕಿಡಿಗೇಡಿ ಕಿಟ್ಟ, ಅವಿವೇಕಿ ಅರಸು, ಜಾಕ್ ಮತ್ತು ಟೇಲ್, ಗುಬ್ಬಚ್ಚಿ ಗೂಡು ಮುಂತಾದ ಲಯಬದ್ಧವಾದ ೩೫ಕ್ಕೂ ಮಿಕ್ಕು ಶಿಶುಗೀತೆಗಳು. ಹತ್ತು ವರುಷ ಮೀರಿದ ಮಕ್ಕಳಿಗಾಗಿ ಬರೆದ ಕಥೆಗಳು ಹಲವಾರು-ದಾರಿಯ ಬುತ್ತಿ, ಠಕ್ಕರ ಗುರು, ಜನಪದ ಕಥೆಗಳು, ಆದರ್ಶದ ಕಥೆಗಳು, ಪಂಚ ಶೀಲದ ಪ್ರತಿನಿಗಳು, ಮಕ್ಕಳ ರಾಮಾಯಣ, ಬಾಲ ಮಹಾಭಾರತ ಮುಂತಾದ ೪೦ಕ್ಕೂ ಮಿಕ್ಕ ಕಥೆಗಳು. ‘ಕನ್ನಡ ನಾಡಿನ ಕೆಲವು ಶಾಸನಗಳು’ ಇವರ ಸಂಶೋಧನ ಕೃತಿ. ಶಿಲಾಶಾಸನ ಹಾಗೂ ತಾಳೇ ಗರಿ ಗ್ರಂಥವನ್ನೋದುವುದರಲ್ಲಿ ಪಡೆದ ನಿಪುಣತೆ. ‘ಬಿರುದಿನ ಕುದುರೆಯ ಹಿಂದೆ’ ಲಕ್ಷ್ಮೀಶನ ಜೈಮಿನಿ ಭಾರತವನ್ನು ಅನುಸರಿಸಿ ಬರೆದ ಕೃತಿ. ಶಂಕರಾಚಾರ್ಯರ ಸೌಂದರ್ಯ ಲಹರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಶರಶ್ಚಂದ್ರರ ಹಲವಾರು ಬಂಗಾಳಿ ಕಾದಂಬರಿಯನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಎಪ್ಪತ್ತು ವಸಂತಗಳನ್ನು ಕಳೆದು ಪಾರ್ಶ್ವವಾಯುವಿಗೆ ತುತ್ತಾಗಿ ಇಹಲೋಕ ತ್ಯಜಿಸಿದರು. ಇದೇ ದಿನ ಹುಟ್ಟಿದ ಸಾಹಿತಿಗಳು : ಎ.ಎಸ್. ನಟರಾಜ್ – ೧೯೪೧ ಎಸ್. ರಾಮಪ್ರಸಾದ್ – ೧೯೪೩ ಕಲಾಶ್ರೀ – ೧೯೪೭ ಲಿಂಗದೇವರು ಹಳೇಮನೆ – ೧೯೪೯ ಗಿರಿಜಾರಾಜಾ ಎಲ್. – ೧೯೫೭

