
ಮೈಸೂರು ಸೀತಾರಾಮಶಾಸ್ತ್ರೀ
October 26
೨೬-೧೦-೧೮೬೮ ೨೦-೧೨-೧೯೩೩ ಕನ್ನಡ ಹಾಗೂ ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಸೀತಾರಾಮಶಾಸ್ತ್ರಿಗಳು ಹುಟ್ಟಿದ್ದು ಮೈಸೂರಿನ ಹಳ್ಳದ ಕೇರಿಯಲ್ಲಿ. ತಂದೆ ಗುಂಡಾವಧಾನಿಗಳು, ತಾಯಿ ಪಾರ್ವತಮ್ಮ. ಹಳ್ಳದ ಕೇರಿ ಸೀತಾರಾಮಶಾಸ್ತ್ರಿಗಳೆಂದೇ ಪ್ರಸಿದ್ಧರು. ಕತ್ತವಾಡಿಪುರ ಅಗ್ರಹಾರದ ಪಂಡಿತ ಚಂದ್ರಶೇಖರ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡಾಭ್ಯಾಸ. ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಉಪಾಧ್ಯಾಯರಾಗಿ ವೃತ್ತಿಜೀವನ ಪ್ರಾರಂಭ. ಕೆಲಕಾಲ ಗೌರ‍್ನಮೆಂಟ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಚನ್ನಪಟ್ಟಣ, ಕೋಲಾರ, ಮೈಸೂರು ಮುಂತಾದೆಡೆ ಸಲ್ಲಿಸಿದ ಸೇವೆ. ಕೊನೆಗೆ ಟ್ರೈನಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ ವರ್ಗಾಯಿಸಲ್ಪಟ್ಟು ೧೯೨೯ರವರೆಗೆ ಅಲ್ಲೆ ಸೇವೆ ಸಲ್ಲಿಸಿ ನಿವೃತ್ತಿ. ಅಂದಿನ ಕಾಲದಲ್ಲೇ ಸಂಸ್ಕೃತದಿಂದ ಹಲವಾರು ಗ್ರಂಥಗಳನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆ. ಭಾಸನ ಪ್ರತಿಮಾ ನಾಟಕ ಇವರ ಮೊದಲ ಅನುವಾದಿತ ಕೃತಿ. ಈಗಲೂ ಪಂಡಿತರಿಂದ ಪ್ರಶಂಸಿಸಲ್ಪಟ್ಟದ್ದು. ಹೃದ್ಯವಾದ ಕಂದ ವೃತ್ತಗಳಿಂದ ಕೂಡಿರುವ ಕೃತಿ. ವೇಣಿಸಂಹಾರ ನಾಟಕವನ್ನು ಪೂರ್ಣವಾಗಿ ಹಳಗನ್ನಡ ಗದ್ಯಪದ್ಯಗಳಲ್ಲಿ ಕನ್ನಡಿಸಿದ ಕೀರ್ತಿ. ಹಳೆಗನ್ನಡ ಛಂದೋಬಂಧ, ಭಾಷಾ ಪ್ರಯೋಗದ ಮೇಲೆ ಇವರಿಗಿದ್ದ ಪ್ರಭುತ್ವಕ್ಕೆ ಸಾಕ್ಷಿಯಾದ ಭಾಷಾಂತರ ಕೃತಿ. ರಚಿಸಿದ ನಾಟಕಗಳು-ಇಂದ್ರಕೀಲ ವಿಜಯ, ಪ್ರಶ್ನೋತ್ತರ ಭಗವದ್ಗೀತಾ, ಪಾರ್ವತಿ ಪರಿಣಯ ಮುಂತಾದುವು. ಕಾವ್ಯ-ಕರ್ನಾಟಕ ಮಹೀಶೂರದೇಶಾಭ್ಯುದಯ, ಕರ್ಣಾಟ ಸ್ನುಷಾವಿಜಯ, ಕರ್ಣಾಟ ವಿಕ್ರಮಾರ್ಕ ಚರಿತಂ, ಕುಚೇಲೋಪಾಖ್ಯಾನ, ಕೃಷ್ಣಸಂಧಾನ, ಕೃಷ್ಣರಾಜ ವಂಶಾವಳಿ ವಿಜಯ, ಗೋಪಿಕಾಗೀತೆ, ಗಂಗಾ-ಶಂತನು ವಿಲಾಸ, ಚತುರ್ದಶ ಮಂಜರಿ, ಪದ್ಯ ಕದಂಬ, ಪಂಚತಂತ್ರ, ಪಂಚಲಿಂಗ ಸ್ತುತಿ, ಬಾಲರಾಮಾಯಣ, ಭಕ್ತವಿಜಯ (ಮಹಿಪತಿ ವಿರಚಿತ ಮರಾಠಿ ಗ್ರಂಥದ ಭಾಷಾಂತರ) ಭಜಗೋವಿಂದ ಸ್ತೋತ್ರ, ಭಾರತೋಪಾಖ್ಯಾನ, ಲಲಿತಾ ಸಹಸ್ರನಾಮ ಚಂದ್ರಿಕೆ, ಶಬ್ದ ಬೋನಿ, ಶಿವಾನಂದ ಲಹರಿ, ಸುಧಾಮ ಚರಿತ್ರೆ, ಸೂಕ್ತಿ ಮಂಜರಿ, ಸೂಕ್ತಿಮಾಲೆ, ಸೂಕ್ತಿ ತಾರಾವಳಿ, ಸಂಗೀತ ಸೂಕ್ತಿ ವಿಜಯ, ಹಾಲಾಖ್ಯೆ ಮಹಾತ್ಮ್ಯೆ. ಸಂಗ್ರಹ-ತರಂಗಿಣೀ, ನವರತ್ನ ದರ್ಪಣ, ಸಂಸ್ಕೃತದಲ್ಲಿ-ಕೃಷ್ಣೋವೇದಾಂತ ತರಂಗಿಣೀ, ಕೃಷ್ಣರಾಜ ವಂಶಾವಳಿ ವಿಜಯ, ಮೈಸೂರು ದೇಶಾಭ್ಯುದಯ, ಸೂಕ್ತಿ ಸುಧಾಮಂಜರಿ ಮುಂತಾದುವು. ಮೈಸೂರು ದೇಶಾಭ್ಯುದಯ ಪ್ರಬಂಧಕ್ಕೆ ಮಹಾರಾಜರಿಂದ ಪಡೆದ ಬಹುಮಾನ ಮತ್ತು ಆಸ್ಥಾನ ವಿದ್ವಾನ್ ಪ್ರಶಸ್ತಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಬೈಕಾಡಿ ವೆಂಕಟ ಕೃಷ್ಣರಾಯರು – ೧೯೧೭-೩೦.೧.೧೯೮೭ ತ.ಪು. ವೆಂಕಟರಾಮ್ – ೧೯೩೧ ಶಚಿದೇವಿ. ಟಿ. – ೧೯೪೦ ಶಶಿಕಲಾ ಶಿವಶಂಕರ್ – ೧೯೫೯