ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ)

Home/Birthday/ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ)
Loading Events

೦೬.೦೬.೧೯೦೬ ೨೨.೦೪.೧೯೭೭ ಸಾಹಿತ್ಯ,  ಸಂಗೀತ ಪ್ರೇಮಿ, ಕಾದಂಬರಿಕಾರ, ಪತ್ರಿಕೋದ್ಯಮಿ ಮ.ನ. ಮೂರ್ತಿಯವರು ಹುಟ್ಟಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿ ಎಂಬಲ್ಲಿ. ತಂದೆ ಮಧ್ವರಾವ್, ತಾಯಿ ಭೀಮಕ್ಕ. ಪ್ರೌಢಶಾಲೆಯವರೆಗೆ ಓದಿದ್ದು ತುಮಕೂರಿನಲ್ಲಿ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ್ದರಿಂದ ಮುಂದಿನ ಓದಿಗೆ ಬಂದುದು ಬೆಂಗಳೂರಿಗೆ. ಐಚ್ಛಿಕ ವಿಷಯಗಳಾದ ವಿಜ್ಞಾನ ಹಾಗೂ ಗಣಿತದಲ್ಲಿ ೯೦ ಕ್ಕಿಂತ ಹೆಚ್ಚು ಅಂಕಗಳಿಸಿದ್ದರು. ಆಗೆಲ್ಲಾ ಅಂಕಗಳ ಆಧಾರದ ಮೇಲೆ ವಿಜ್ಞಾನ ಅಥವಾ ಕಲೆ ವಿಭಾಗಕ್ಕೆ ಸೇರಲು ಶಿಕ್ಷಣ ಇಲಾಖೆಯೇ ನಿರ್ಧರಿಸುತ್ತಿದ್ದು ವಿಜ್ಞಾನದಲ್ಲಿ ಹೆಚ್ಚಿನ ಅಂಕಗಳಿಸಿದ್ದರಿಂದ ಇವರಿಗೆ ಬಿ.ಎಸ್‌ಸಿ.ಗೆ ಸೇರಲು ಸೆಂಟ್ರಲ್ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಬಿ.ಎಸ್‌ಸಿ. ಗೆ ಸೇರಿದ್ದರೂ ಕನ್ನಡವನ್ನು ಒಂದು ಕಡ್ಡಾಯ ವಿಷಯವಾಗಿ ಕಲಿಯ ಬೇಕಿದ್ದುದರಿಂದ ಕನ್ನಡವನ್ನು ಬೋಧಿಸುತ್ತಿದ್ದವರು ಎ.ಆರ್. ಕೃಷ್ಣಶಾಸ್ತ್ರಿಗಳು ಹಾಗೂ ಟಿ.ಎಸ್. ವೆಂಕಣ್ಣಯ್ಯನವರು. ಒಮ್ಮೆ ಎ.ಆರ್. ಕೃಷ್ಣಶಾಸ್ತ್ರಿಗಳವರು ತರಗತಿಯಲ್ಲಿ ಕಾಳಿದಾಸನ ಕಾವ್ಯದ ಬಗ್ಗೆ ಪ್ರಬಂಧ ಬರೆಯಲು ತಿಳಿಸಿದರು. ಮಾರನೆದಿನ ಎ.ಆರ್.ಕೃಷ್ಣಶಾಸ್ತ್ರಿಗಳವರು ಪ್ರಬಂಧಗಳ ಪರಾಮರ್ಶೆಗೆ ತೊಡಗಿದರು. ಇತರ ಹುಡುಗರ ಪ್ರಬಂಧಗಳ ಬಗ್ಗೆ ಹೇಳತೊಡಗಿದಾಗ ಇವರಿಗೆ ಎದೆ ಢವಢವ. ಇವರ ಪ್ರಬಂಧದ ಬಗ್ಗೆ ಮಾತೇ ಇಲ್ಲ. ಕಡೆಯಲ್ಲಿ, “ಈ ಪ್ರಬಂಧ ರಚನೆಯ ವಿದ್ಯಾರ್ಥಿಯನ್ನು ಮೊಟ್ಟ ಮೊದಲು ಅಭಿನಂದಿಸುತ್ತೇನೆ. ಆತನ ಶೈಲಿ, ನಿರೂಪಣೆ, ಅದ್ಭುತ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗಲೇಬೇಕು. ಬಹುಶ: ತರಗತಿಯಲ್ಲಲ್ಲದೆ ಹೊರಗಡೆ ಪ್ರಬಂಧ ರಚಿಸಿದ್ದರೆ ಅನುಮಾನಿಸುತ್ತಿದ್ದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿ ವಿಜ್ಞಾನಕ್ಕೆ ದೊರೆತಿರುವುದು ಸಂತಸವಾದರೂ ಕನ್ನಡಕ್ಕೆ ದೊಡ್ಡ ನಷ್ಟ. ನಾನು ಪ್ರೀತಿಸಬಹುದಾದ, ಆಶೀರ್ವದಿಸಬಹುದಾದ ಈ ವಿದ್ಯಾರ್ಥಿಯು ವಿಜ್ಞಾನದಲ್ಲಿ ಮಿಂಚಿದರೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಕಡಿಮೆಯಾಗದಿರಲೆಂದು ಹಾರೈಸುತ್ತೇನೆ., ಈ ವಿದ್ಯಾರ್ಥಿಯ ಹೆಸರು ಎಂ. ನರಸಿಂಹಮೂರ್ತಿ”, ಎಂದಾಗ ಕಿವಿಗಡಚಿಕ್ಕುವ ಕರತಾಡನ, ಸ್ನೇಹಿತರಿಂದ ಅಭಿನಂದನ ಸುರಿಮಳೆ. ಎ.ಆರ್. ಕೃಷ್ಣಶಾಸ್ತ್ರಿಗಳ ಮಾತು ನರಸಿಂಹಮೂರ್ತಿಯವರ ಮೇಲೆ ಪರಿಣಾಮ ಬೀರಿತು. ಬಿ.ಎ. ಗೆ ಸೇರಲು ನಿರ್ಧರಿಸಿ ಪ್ರಿನ್ಸಪಾಲರ ಮುಂದೆ ತಮ್ಮ ಅನಿಸಿಕೆಯನ್ನು ಮುಂದಿಟ್ಟರೂ ಫಲಕಾರಿಯಾಗದಿದ್ದಾಗ ಎ.ಆರ್. ಕೃಷ್ಣಶಾಸ್ತ್ರಿಗಳು ಹಾಗೂ ಟಿ.ಎಸ್. ವೆಂಕಣ್ಣಯ್ಯನವರ ಪ್ರಭಾವದಿಂದ ಬಿ.ಎ. ಗೆ ಸೇರಲು ಅವಕಾಶದೊರೆಯಿತು. ಗುರುಗಳ ನಿರೀಕ್ಷೆಯನ್ನು ಹುಸಿಯಾಗಿಸದೆ ಮೊದಲ ದರ್ಜೆಯಲ್ಲಿಯೇ ಉತ್ತೀರ್ಣರಾದರು.   ಬಿ.ಎ. ಪದವಿಯ ನಂತರ ಉದ್ಯೋಗಕ್ಕಾಗಿ ಸೇರಿದ್ದು ದಿವಾನರ ಕಚೇರಿಯಲ್ಲಿ, ಕನ್ನಡ ವಿಭಾಗದ ಭಾಷಾಂತರಕಾರರಾಗಿ. ದಿವಾನ್ ಮಿರ್ಜಾ ಇಸ್ಮಾಯಿಲ್, ಮಾಸ್ತಿ ಮುಂತಾದವರೊಡನೆ ವ್ಯವಹರಿಸುವ ಸುಯೋಗ ಒದಗಿದ್ದರೂ ಸ್ವತಂತ್ರವಾಗಿ ಜೀವಿಸಬೇಕೆಂಬ ಆಸೆಯಿಂದ ಸರಕಾರಿ ಹುದ್ದೆಯನ್ನು ತ್ಯಜಿಸಿದರು. ಮುಂದಿನ ಜೀವನ ಹುಡುಕಿಕೊಂಡು ಸೇರಿದ್ದು ಮೈಸೂರು. ಚಲನಚಿತ್ರ ತಯಾರಿಕೆಯ ಕಡೆ ಮನಸ್ಸು ಹರಿದು ‘ಭಕ್ತ ಕನಕದಾಸ’ ಚಲನಚಿತ್ರದ ತಯಾರಿಕೆ ನಡೆಸಿದರು. ಪ್ರಮುಖ ಪಾತ್ರಧಾರಿ ‘ಉಮರ್ಜಿ’ ಎನ್ನುವವರ ಅಕಾಲ ಮರಣದಿಂದ ಚಿತ್ರನಿರ್ಮಾಣ ಸ್ಥಗಿತಗೊಂಡಿತು. ಜೀವನ ನಿರ್ವಹಣೆಗೆ ದಾರಿಕಾಣದೆ ಸಾಹಿತ್ಯ ರಚನೆಯತ್ತ ಮನಸ್ಸು ಮಾಡಿ ಪುನ: ಮೈಸೂರಿನಿಂದ ಬೆಂಗಳೂರಿಗೆ ಪಯಣ. ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಕಥೆ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು ಇವರು ಬರೆದ ‘ಈ ಸಲದ ದೀಪಾವಳಿ’ ಕಥೆಗೆ ಬೆಳ್ಳಿಯ ಪಾರಿತೋಷಕವನ್ನು ಪಡೆದಿದ್ದರು. ಇವರೊಡನೆ ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಕಥಾರಚನೆಗೆ ತೊಡಗುತ್ತಿದ್ದವರೆಂದರೆ ಅ.ನ.ಕೃ., ಹಾಗೂ ಕೆ. ಗೋಪಾಲಕೃಷ್ಣರಾಯರು. ಉದ್ಯೋಗ ಹಿಡಿಯಲು ವಯಸ್ಸು ದಾಟಿದ್ದು ಜೀವನವನ್ನು ನಿಭಾಯಿಸಲು ಆಯ್ಕೆಮಾಡಿಕೊಂಡಿದ್ದು ಸಾಹಿತ್ಯ ಪ್ರಕಾರ.  ಬರೆದ ಮೊದಲ ಐತಿಹಾಸಿಕ ಕಾದಂಬರಿ ‘ಚಿಕ್ಕದೇವರಾಯ’. ಪ್ರಕಾಶಕರಾರೂ ಮುಂದೆ ಬಾರದಾದಾಗ ಹಳ್ಳಿಯಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನು ಮಾರಿ ತಾವೇ ಪ್ರಕಟಿಸಿದರು. ಅಂದಿನ ವರ್ಣರಂಜಿತ ರಕ್ಷಾಪುಟಗಳ ಕಾದಂಬರಿಗಳ ಜೊತೆ ಸ್ಪರ್ಧಿಸಲಾರದೆ ಅಟ್ಟದ ಮೇಲೆ ಗಟ್ಟಿ ಸಾಹಿತ್ಯವಾಗಿ ಉಳಿಯಿತು. ಅಂದು ನೆರವಿಗೆ ಬಂದವರು ಡಿ.ಡಿ.ಪಿ.ಐ ಆಗಿದ್ದ ಎನ್.ಎಸ್. ಹಿರಣ್ಣಯ್ಯನವರು.. ಕಾದಂಬರಿಯ ಗುಣವನ್ನು ಮೆಚ್ಚಿ ಶಾಲಾ ವಾಚನಾಲಯಗಳಿಗೆ ಖರೀದಿಸುವಂತೆ ಆದೇಶ ಮಾಡಿದ್ದರಿಂದ ಪ್ರತಿಗಳಿಗೆ ಬೇಡಿಕೆ ಬಂತು. ಕೆಲವರ್ಷಗಳ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಪಿ,.ಯು ತರಗತಿಗಳಿಗೆ ಪಠ್ಯವಾಗಿಯೂ ಆಯ್ಕೆಯಾಯಿತು. ನಂತರ ಬರೆದ ಕಾದಂಬರಿ ‘ಟಿಪ್ಪೂ ಸುಲ್ತಾನ್’ (೩ ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ಇದಾದನಂತರ ಬರೆದ ಕಾದಂಬರಿಗಳೆಂದರೆ ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ ಮುಂತಾದವುಗಳು. ಹೀಗೆ ೧೯೫೩-೬೧ ರವರೆಗೆ ಹಲವಾರು ಕಾದಂಬರಿಗಳನ್ನು ಬರೆದರೂ ಪುನ: ಚಲನಚಿತ್ರ ಆಕರ್ಷಣೆಗೊಳಗಾಗಿ ತಮ್ಮದೇ ಕಾದಂಬರಿ ‘ಸುವರ್ಣ ಮುಖಿ’ ಯನ್ನು ತೆರೆಗರ್ಪಿಸಲು ಸಿದ್ಧತೆ ನಡೆಸಿದರು. ಇಲ್ಲೂ ನಾಯಕ ನಟನ ಅನಿರೀಕ್ಷಿತ ಸಾವಿನಿಂದ ಪುನ: ಚಿತ್ರಜಗತ್ತಿನಿಂದ ಕಾದಂಬರಿ ಲೋಕಕ್ಕೆ ಹಿಂದಿರುಗುವಂತಾಯಿತು. ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ಹುದ್ದೆಯೂ ದೊರೆತು ನಿವೃತ್ತಿಯಾಗುವವರೆಗೂ ಪ್ರಜಾಮತ ಪತ್ರಿಕೆಗಾಗಿ ದುಡಿದರು. ಇವರ ಕಾದಂಬರಿಗಳಲ್ಲಿ ‘ದೇವರ ಮಕ್ಕಳು’ (೧೯೭೦), ಮೀನಾ ಕಾದಂಬರಿ ‘ಸ್ವಯಂವರ’ (೧೯೭೩), ಮತ್ತು ‘ಬಿಳಿಯ ಹೆಂಡತಿ’ (೧೯೭೫), ಚಲನಚಿತ್ರಗಳಾಗಿ ಜನಪ್ರಿಯತೆಗಳಿಸಿತು. ಇವಲ್ಲದೆ ಇವರು ರಚಿಸಿದ ಇತರ ಕಾದಂಬರಿಗಳೆಂದರೆ ‘ನವಾಬ ಹೈದರಾಲಿ’, ‘ಬೆಂಗಳೂರು ಕೆಂಪೇಗೌಡ’, ‘ಪುರುಷ ಕಸ್ತೂರಿ’, ‘ಜಯವಂತಿ’, ಮುಂತಾದ ೧೦ ಐತಿಹಾಸಿಕ ಕಾದಂಬರಿಗಳು; ನಮ್ಮ ಪ್ರವಾಸ ಮತ್ತು ನಾವು ಕಂಡ ಬೆಂಗಳೂರು ಎಂಬ ಎರಡು ಪ್ರವಾಸ ಸಾಹಿತ್ಯ ಕೃತಿಗಳು; ಪ್ರೇಮ ಸುಧಾ, ಆರಾಧಿತೆ, ಸಹಧರ್ಮಿಣಿ, ಚಿತ್ರ ನಾಯಕಿ, ಮಾಂಗಲ್ಯ ಭಾಗ್ಯ, ದೇವರ ರಹಸ್ಯ, ವಸುಂಧರ, ಭಕ್ತ ಕನಕದಾಸ, ಅಲಕಾನಂದ, ಸಂಶಯದ ಸುಳಿಯಲ್ಲಿ, ಮುಂತಾಧ ೪೦ ಕಾದಂಬರಿಗಳು; ರತ್ನ ಸಿಂಹಾಸನ, ಬೆಂಗಳೂರು ಕೆಂಪೇಗೌಡ, ಸಂತಾನ ಲಕ್ಷ್ಮೀ (ಕೇಂದ್ರ ಪ್ರಶಸ್ತಿ ಪುರಸ್ಕೃತ ನಾಟಕ) ಮುಂತಾದ ನಾಟಕಗಳೂ ಸೇರಿ ಸುಮಾರು ೬೦ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಕನ್ನಡ ಲಿಪಿ ಸುಧಾರಣೆಗೆ ಪ್ರಯತ್ನಿಸಿದ್ದಲ್ಲದೆ ಕನ್ನಡ ಟೈಪ್‌ರೈಟರ್ ತಯಾರಿಕೆಗೂ ಪ್ರಯತ್ನಿಸಿದರು. ಎರಡನೆಯ ಮಹಾಯುದ್ಧದ ದೆಸೆಯಿಂದ ಈ ಯೋಜನೆ ಕೈಗೂಡಲಿಲ್ಲ. ಇವರ ಮತ್ತೊಂದು ಮಹಾನ್ ಸಾಧನೆಯೆಂದರೆ ಹಲವಾರು ಲೇಖಕ – ಲೇಖಕಿಯರನ್ನು ಹಂಪೆಗೆ ಕರೆದೊಯ್ದಾಗ ಅಲ್ಲಿ ಪುರಂದರ ಮಂಟಪವು ಅಲಕ್ಷ್ಯಕ್ಕೆ ಒಳಗಾಗಿದ್ದುದನ್ನು ಕಂಡು ಮರುಗಿ ಪ್ರತಿವರ್ಷ ಪುರಂದರೋತ್ಸವವನ್ನು ನಡೆಸಲು ತೀರ‍್ಮಾನಿಸಿ ಸಮಿತಿ ರಚಿಸಿದರು. ಜೊತೆಯಲ್ಲಿದ್ದ ಡಾ. ನಿರುಪಮಾರವರು ತಮ್ಮ ‘ಭುವನ ವಿಜಯ’ ಕಾದಂಬರಿಯಿಂದ ಬಂದ ಎರಡು ಸಾವಿರ ರೂ. ಗಳನ್ನು ವಂತಿಗೆಯಾಗಿ ನೀಡಿದರು. ಹೀಗೆ ಪ್ರಾರಂಭವಾದ ಪುರಂದರೋತ್ಸವವು ೧೯೮೪ರವರೆಗೂ ಹಂಪಿಯಲ್ಲಿ ಮಗ ರಾಜಾರಾಯರು ನಡೆಸುತ್ತಿದ್ದು, ಸೌಲಭ್ಯಗಳ ಕೊರತೆಯಿಂದ, ಮುಳಬಾಗಿಲಿನ ವೀರಭದ್ರನಗರದಲ್ಲಿ ಪುರಂದರ ವಿಠ್ಠಲ ವಿಗ್ರಹ ಸ್ಥಾಪಿಸಿ, ಹರಿದಾಸ ಪೀಠದ ಮುಖಾಂತರ ಪ್ರತಿ ವರ್ಷವೂ ಮೂರು ದಿವಸಗಳ ಕಾಲ ಪುರಂದರೋತ್ಸವವನ್ನು ಆಚರಿಸುತ್ತಾ ಬಂದಿದ್ದು ನಾಡಿನ ಹೆಸರಾಂತ ಸಂಗೀತಗಾರರೆಲ್ಲರೂ ಆ ವೇದಿಕೆಯಲ್ಲಿ ಹಾಡಿ ಸಂತೋಷಿಸುತ್ತಿದ್ದಾರೆ. ನಾಡಿನ ಸಂಗೀತಗಾರರ ವಿವರಗಳು ಮಾಸಿ ಹೋಗುವ ಮುನ್ನ ದಾಖಲೆಯಾಗುಳಿಸಲು ‘ಕರ್ನಾಟಕ ಸಂಗೀತ ಕ್ಷೇತ್ರದ ನಾಡ ಕಣ್ಮಣಿಗಳು’ ಎಂಬ ಸುಂದರ ಪುಸ್ತಕವನ್ನು ಪ್ರಕಟಿಸಿದ್ದಾರೆ. ಹೀಗೆ ಕನ್ನಡ ಸೇವೆಗೆ ಕಂಕಣಬದ್ಧರಾಗಿ, ಕನ್ನಡದ ಮೇಲಿನ ಅಭಿಮಾನದಿಂದ ಟೈಪ್ ರೈಟರ್ ತಯಾರಿಕೆಗೆ ಮುಂದಾಗಿ, ಕರ್ನಾಟಕ ಸಂಗೀತಗಾರರಿಗೆ ಮನ್ನಣೆ ದೊರೆಯುತ್ತಿಲ್ಲವೆಂದು ಪುರಂದರ ಸೇವಾ ಸಮಿತಿ ಸ್ಥಾಪಿಸಿ, ರಾಜ್ಯಭಾಷೆ ಕನ್ನಡವಾಗ ಬೇಕೆಂದು ವೇದಿಕೆ ಸಿಕ್ಕಾಗಲೆಲ್ಲಾ ಗರ್ಜಿಸಿ, ಕನ್ನಡ ಸಾಹಿತ್ಯ ಕೃತಿ ರಚನೆಯ ಮೂಲಕ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳಸಿದ ಮ.ನ. ಮೂರ್ತಿಯವರು ಜೀವನರಂಗದಿಂದ ನಿರ್ಗಮಿಸಿದ್ದು ೧೯೭೭ರ ಏಪ್ರಿಲ್ ೨೨ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top