ಮ.ರಾಮಮೂರ್ತಿ

Home/Birthday/ಮ.ರಾಮಮೂರ್ತಿ
Loading Events
This event has passed.

೧೧..೧೯೧೮ ೨೫.೧೨.೧೯೬೭ ೧೯೬೦ ರ ದಶಕದಲ್ಲಿ ಅನ್ಯಭಾಷಿಕರ ಅದರಲ್ಲೂ ತಮಿಳು ಭಾಷೆಯವರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ, ರಾಮಮೂರ್ತಿಯವರು ಹುಟ್ಟಿದ್ದು ೧೯೧೮ರ ಮಾಚ್‌೧೧ರಂದು ನಂಜನಗೂಡಿನಲ್ಲಿ. ತಂದೆ ವೀರಕೇಸರಿ ಸೀತಾರಾಮಶಾಸ್ತ್ರಿ. ತಾಯಿ ಸುಬ್ಬಮ್ಮ. ವೈದಿಕ ಮನೆತನದಲ್ಲಿ ಹುಟ್ಟಿದ ರಾಮಮೂರ್ತಿಯವರಿಗೆ ಸಂಸ್ಕೃತ ಕಡ್ಡಾಯವಾಗಿದ್ದು ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು. ಪ್ರಾಥಮಿಕ ಶಾಲೆಗೆ ಸೇರಿದ್ದರೂ ಪಾಠಕ್ಕಿಂತ ಆಟದ ಕಡೆಯೇ ಗಮನಜಾಸ್ತಿ. ಕುಮಾರವ್ಯಾಸ, ರಾಘವಾಂಕ, ಹರಿಹರ ಮೊದಲಾದವರ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದವರು ಶಾಲಾ ಮಾಸ್ತರಾಗಿದ್ದ ಸುಬ್ರಹ್ಮಣ್ಯ ಅಯ್ಯರ್‌ರವರು. ತಂದೆ ಸೀತಾರಾಮಶಾಸ್ತ್ರಿಗಳು ಗಾಂಧೀಜಿಯವರ ವಿಚಾರಧಾರೆಗಳಿಗೆ ಮನಸೋತು ಹಿಡಿದದ್ದು ಚಳವಳಿ ಹಾದಿ. ಚಳವಳಿ ಪ್ರಚಾರಕ್ಕಾಗಿ ಬೆಂಗಳೂರನ್ನು ಕೇಂದ್ರವಾಗಿರಿಸಿ ಕೊಂಡು ಪ್ರಾರಂಭಿಸಿದ ಪತ್ರಿಕೆ ‘ವೀರಕೇಸರಿ’. ಚಳವಳಿಯಿಂದ ಕಾರಾಗೃಹವಾಸವನ್ನನುಭವಿಸಬೇಕಾಗಿ ಬಂದರೂ ಧೃತಿಗೆಡಲಿಲ್ಲ. ಮಾಧ್ಯಮಿಕ ಶಾಲೆಯ ನಂತರ ರಾಮಮೂರ್ತಿಯವರೂ ಕೂಡಾ ಬಂದು ಸೇರಿದ್ದು ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆ. ಮುಖ್ಯೋಪಾಧ್ಯಾಯರಾಗಿದ್ದ ದೇವುಡುರವರು ಇವರ ಕಾಳಜಿ ವಹಿಸಿಕೊಂಡರು. ಸಾಹಿತ್ಯ ವಾತಾವರಣದಿಂದ ಪ್ರೇರಿತರಾಗಿ ಇವರು ಬರೆದ ಮೊದಲ ಕಥೆ ‘ಗುರುದಕ್ಷಿಣಿ’. ಮಕ್ಕಳಿಗಾಗಿಯೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ಥನಾರಾಯಣ ರಾಯರು ತಮ್ಮ ‘ಮಕ್ಕಳಪುಸ್ತಕ’ದಲ್ಲಿ ಪ್ರಕಟಿಸಿದರು. ಅಶ್ವತ್ಥ ನಾರಾಯಣ ರಾಯರ ಬಳಿ ಇದ್ದ ಅನೇಕ ಪುಸ್ತಕಗಳನ್ನು ಪಡೆದು ಓದಿ ಮುಗಿಸಿದರು. ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಗೆ ಕೈಜೋಡಿಸಿದರು. ಇದಕ್ಕಾಗಿ ಇಂಗ್ಲಿಷ್ ಭಾಷೆಯನ್ನು ನಾರಾಯಣಸ್ವಾಮಿ ಅಯ್ಯರ್‌ರವರಿಂದ ಕಲಿತು, ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿ ಸಂಗ್ರಹಗಳನ್ನು ಪತ್ರಿಕೆಗಾಗಿ ಅನುವಾದಿಸತೊಡಗಿದರು. ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು. ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ತುಂಬಲು ‘ಕಾಮಕಲಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ, ಸ್ವಾತಂತ್ರ್ಯ ಪೂರ್ವದ ಬಿಗಿ ನೀತಿಯ ಪತ್ರಿಕಾ ಕಾನೂನಿನಿಂದ ಕೋರ್ಟು ಮೆಟ್ಟಿಲು ಹತ್ತಬೇಕಾಗಿಬಂದರೂ ಧೈರ್ಯಗೆಡದೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಗೆದ್ದು ಬಂದರು. ಲೈಂಗಿಕ ವಿಜ್ಞಾನದ ಹೆಸರಿನಿಂದ ಇದೇ ಮಾದರಿಯ ಅನೇಕ ಅಶ್ಲೀಲ ಪತ್ರಿಕೆಗಳು ಹುಟ್ಟಿಕೊಂಡಿದ್ದರಿಂದ ತಮ್ಮ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಕನ್ನಡದ ವಾತಾವರಣವನ್ನು ಮೂಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಮೋತ್ಸವ ಮುಂತಾದವುಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ಸಿಗುವಂತೆ ಮಾಡಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಥಿಯೇಟರುಗಳು ದೊರೆಯುವಂತೆ ಮಾಡಲು, ಚಲನಚಿತ್ರ ನಿರ್ಮಾಣದಲ್ಲಿ ಕನ್ನಡಗರಿಗೆ ಆದ್ಯತೆ ದೊರೆಯುವಂತಾಗಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ದೊರೆಯುವಂತಾಗಲು ‘ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅ.ನ.ಕೃ. ರವರು ಅಧ್ಯಕ್ಷರಾಗಿ ಇವರು ಕಾರ್ಯಯದರ್ಶಿಗಳಾಗಬೇಕಾಯಿತು. ಇದರ ಮುಖವಾಣಿಯಾಗಿ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬೆಂಗಳೂರಿನ ಸುತ್ತಮುತ್ತ ಕನ್ನಡೇತರರ ಹಾವಳಿ ಜಾಸ್ತಿಯಾದಾಗ, ಜನ ಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲ ಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಬಗೆದು ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. ೧೯೫೦-೬೦ರ ದಶಕದಲ್ಲಿ ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ಇವರು ಬರೆದ ಪತ್ತೇದಾರಿ ಕಾದಂಬರಿಗಳಲ್ಲಿ ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಮುಂತಾದ ೧೫೦ ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದರು. ಪತ್ತೇದಾರಿ ಕಾದಂಬರಿಗಳ ಜೊತೆಗೆ ಹಲವಾರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದು ಸಾವನದುರ್ಗದ (ಮಾಗಡಿ ಸಮೀಪ) ರಸವತ್ತಾದ ವರ್ಣನೆಯ ‘ಭಾಗ್ಯದ ಮದುವೆ’; ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯ ‘ಪ್ರೇಮಮಂದಿರ’; ಇವಲ್ಲದೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳಲ್ಲಿ ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ ‘ರಾಜದಂಡ’ ಚಾರಿತ್ರಿಕವಾದ ಅದ್ವಿತೀಯ ಕಾದಂಬರಿ ಎನಿಸಿದೆ. ಆರಡಿ ಎತ್ತರದ ಆಜಾನುಬಾಹು. ದೃಷ್ಟಿನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆ ಹಿಡಿದುಬಿಡುವ ಬೊಗಸೆ ಕಂಗಳು, ಕಂಚಿನ ಕಂಠ ಇವು ಬಾಹ್ಯ ರೂಪಗಳಾದರೆ, ವೇದಿಕೆ ಹತ್ತಿ ನಿಂತರೆ ಸಾಕು ಆವೇಶಭರಿತರಾಗಿ, ನಿರರ್ಗಗಳವಾಗಿ ಮಾಡುತ್ತಿದ್ದ ಭಾಷಣದಿಂದ ಕನ್ನಡಿಗರ ನರನಾಡಿಗಳನ್ನು ಉದ್ರೇಕಿಸುವಂತಹ ಧ್ವನಿ. ಹೀಗೆ ಪರಮಸಾಹಸಿಯಾದ ರಾಮಮೂರ್ತಿಯವರು ಕೃಷಿಜೀವನವನ್ನು ನಡೆಸಲು ಬಯಸಿ ಬೆಂಗಳೂರು – ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದಾಗ, ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಅದ್ವಿತೀಯ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಎಂಬ ಕನ್ನಡದ ದೀಪ ನಂದಿ ಹೋದದ್ದು ಡಿಸೆಂಬರ್ ೨೫ರ ೧೯೬೭ರಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top