೯-೨-೧೯೩೩ ರಾಮಚಂದ್ರರು ಹುಟ್ಟಿದ್ದು ಯರ್ಮುಂಜ ಗ್ರಾಮ. ತಂದೆ ಜನಾರ್ಧನ ಜೋಯಿಸರು, ತಾಯಿ ದೇವಕಿ ಅಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕಬಕದ ಕೊವೆತ್ತಿಲ ಎಂಬ ಗ್ರಾಮದಲ್ಲಿ. ಮಾಧ್ಯಮಿಕ ಶಿಕ್ಷಣ ಪುತ್ತೂರಿನ ಬೊರ್ಡ್ ಹೈಸ್ಕೂಲಿನಲ್ಲಿ. ಹೈಸ್ಕೂಲಿನಲ್ಲಿ ದ್ದಾಗಲೇ ಬರಹವನ್ನು ರೂಢಿಸಿಕೊಂಡು ಪ್ರಾರಂಭಿಸಿದ ಹಸ್ತ ಪತ್ರಿಕೆ ‘ಬಾಲವಿಕಟ.’ ಮೊದಲ ಕವನ ‘ಬಾಪೂಜಿಗೆ ಬಾಷ್ಪಾಂಜಲಿ’ ಬರೆದದ್ದು ೧೯೪೮ರಲ್ಲಿ. ಮೊದಲ ಕಥೆ ‘ಆರಿದ ಹಂಬಲ’ದ ರಚನೆ. ಕವಿ-ಕಥೆಗಾರ ಬರೆದದ್ದು ಕಡಿಮೆ, ಬಾಳಿದ್ದು ಕಡಿಮೆಯೆ. ಇಪ್ಪತ್ತೆರಡನೇ ವಯಸ್ಸಿಗೆ ೧೦.೧.೧೯೫೫ರಲ್ಲಿ ತೀರಿಕೊಂಡರು. ಮೊದಲ ಕತೆ ‘ಆರಿದ ಹಂಬಲ’, ಅರುಣ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎರಡನೆಯ ಕಥೆ ‘ಸ್ನೇಹಿತರು’, ಬೆಟಗೇರಿ ಕೃಷ್ಣಶರ್ಮರು ನಡೆಸುತ್ತಿದ್ದ ‘ಜಯಂತಿ’ ಪತ್ರಿಕೆಯಲ್ಲಿ ಮೊದಲ ಬಹುಮಾನ ಪಡೆಯಿತು. ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹೊತ್ತಿಗೆ ‘ಪಾಂಚಜನ್ಯ’ ಹಸ್ತಪತ್ರಿಕೆ ಪ್ರಾರಂಭ. ಚಾಣಾಕ್ಷನ ಬಾಣಗಳು, ವಿಚಿತ್ರ ವಿಭಾಗ, ‘ಪ್ರಶ್ನೋತ್ತರ ಮಾಲಿಕೆ’ ಲೆಕ್ಕದ ಬುಕ್ಕು-ಅಣಕುವಾಡುಗಳು, ಗತಕಾಲದ ಟಗರುಗಳು-ವಿಡಂಬನೆ ಇದರ ಸ್ಥಿರ ಶೀರ್ಷಿಕೆಗಳು. ಪಾಂಚಜನ್ಯದ ವಿಶೇಷಾಂಕಕ್ಕೆ ಗೋವಿಂದ ಪೈ, ಕಾರಂತರು, ಸೇಡಿಯಾಪು ಕೃಷ್ಣಭಟ್ಟರು, ಗೋಪಾಲಕೃಷ್ಣ ಅಡಿಗರು ಮುಂತಾದವರೆಲ್ಲರ ಬರೆಹಗಳಿರುತ್ತಿದ್ದುವು. ಕೆಲಕಾಲ ಅಂಚೆಕಚೇರಿ ಕೆಲಸ, ಏಕೋಪಾಧ್ಯಾಯ ಶಾಲೆಯಲ್ಲಿ ಉಪಾಧ್ಯಾಯರಾಗಿ, ತಾಲ್ಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿ ದುಡಿತ. ನಂತರ ‘ನವಭಾರತ’ ಪತ್ರಿಕೆಯಲ್ಲಿ ಉಪ ಸಂಪಾದಕರ ಹುದ್ದೆ. ಕಾಡಿದ ಉದರ ವ್ಯಾ. ಮಂಗಳೂರಿಗೆ ಆಗಮನ. ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರಮತ’ ಪತ್ರಿಕೆಯಲ್ಲಿ ಸಹ ಸಂಪಾದಕ. ಬಿಡುವಿಲ್ಲದ ದುಡಿತ. ಅನಾರೋಗ್ಯದ ಬದುಕು. ತೀವ್ರ ಕರುಳು ಬೇನೆಯಿಂದ ಮಂಗಳೂರು ತೊರೆದು ಮನೆಗೆ. ಅನಾರೋಗ್ಯದ ಸ್ಥಿತಿಯಲ್ಲೂ ‘ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’ ಕಥಾಸಂಕಲನ ಪ್ರಕಟಣೆ. ಕರುಳು ನಿಷ್ಕ್ರಿಯತೆಯಿಂದ ವ್ಯಾ ಉಲ್ಬಣ. ೧೦.೧.೧೯೫೫ರಲ್ಲಿ ನಿಧನ. ಹದಿನೈದನೇ ವಯಸ್ಸಿಗೇ ಸಾಹಿತ್ಯ ಕೃಷಿ ಪ್ರಾರಂಭಿಸಿ ಇಪ್ಪತ್ತೆರಡರ ಒಳಗೆ ರಚಿಸಿದ ಕಥೆ, ಕಾವ್ಯಗಳೆರಡೂ ಪ್ರಬುದ್ಧವಾದುವು. ವಯಸ್ಸಿಗೆ ಮೀರಿದ ಸಾಧನೆ. ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ಕವಿತೆಗಳು. ಇವರ ಮರಣಾನಂತರ ‘ವಿದಾಯ’ ಕವನ ಸಂಕಲನ ಪ್ರಕಟ. ಹೊತ್ತಿ ಬೆಳಕು ಬೀರುವ ಮುನ್ನವೇ ಬತ್ತಿಹೋಯಿತು ಯರ್ಮುಂಜ ರಾಮಚಂದ್ರರ ಬದುಕು. ಇದೇ ದಿನ ಹುಟ್ಟಿದ ಸಾಹಿತಿಗಳು : ಹುಣಸೂರು ಕೃಷ್ಣಮೂರ್ತಿ – ೧೯೧೪ ಎಸ್.ಎನ್. ಶಿವಸ್ವಾಮಿ – ೧೯೨೦ ಎಸ್.ಕೆ. ರಾಮಚಂದ್ರರಾವ್ – ೧೯೨೬-೨.೨.೦೬

