೦೬.೦೩.೧೯೨೦ ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕುಟುಂಬದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಹುಟ್ಟಿದ್ದು. ತಂದೆ ಈರಯ್ಯ, ಉತ್ತಮ ಕರಕುಶಲ ಕಲಾವಿದರು, ತಾಯಿ ಕಾಮಾಕ್ಷಿ ಶೆಟ್ಟಿ. ತಂದೆ ತಾಯಿಗಳು ಪ್ಲೇಗ್ ರೋಗಕ್ಕೆ ತುತ್ತಾದಾಗ ನಾಲ್ಕು ತಿಂಗಳ ಮಗು. ಸೋದರಮಾವನ ಮನೆಯಲ್ಲಿ ಆಶ್ರಯ. ಐದನೆಯ ತರಗತಿವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೇ ಕಲೆಯ ಬಗ್ಗೆ ವಿಶೇಷ ಆಸಕ್ತಿ. ಕಟ್ಟಿಗೆ, ಕಲ್ಲು, ಮಣ್ಣು, ಆನೆದಂತ ಮುಂತಾದುವುಗಳಲ್ಲಿ ಆಕೃತಿ ರಚನೆ. ಅಲಂಕಾರಿಕ ವಸ್ತುಗಳು, ಚಿತ್ರಕಲಾ ಸಂಪುಟ ರಚನೆಯಲ್ಲಿ ಪಡೆದ ಪರಿಣತಿ. ಮುಂಬಯಿಯ ಜೆ.ಜೆ. ಕಲಾಶಾಲೆಗೆ ಸೇರಿ ಕಲಿತದ್ದು, ಮರದ ಕೆತ್ತನೆಯ ಕೆಲಸದಲ್ಲಿ ಡಿಪ್ಲೋಮ, ಎರಡು ವರ್ಷದ ವಿಶೇಷಾಧ್ಯಯನ. ನೈಪುಣ್ಯತಾ ಪ್ರದರ್ಶನದಿಂದ ದೊರೆತ ಶಿಷ್ಯವೇತನ. ಸ್ವಂತ ಅನುಭವದಿಂದ ಕಲಿತದ್ದು ಅಪಾರ. ಪ್ರಥಮ ದರ್ಜೆಯಲ್ಲಿ ಪಡೆದ ಡಿಪ್ಲೊಮ. ಹೊನ್ನಾವರಕ್ಕೆ ಬಂದಾಗ ಶ್ರೀಗಂಧದ ಕೋ ಆಪರೇಟಿವ್ಸ್ ಸೊಸೈಟಿಯಲ್ಲಿ ದೊರೆತ ಉದ್ಯೋಗ. ರಾಧಾಕೃಷ್ಣ, ಗೀತೋಪದೇಶ ಕೃತಿಗಳಲ್ಲಿ ಸನ್ನಿವೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಕೆತ್ತನೆಯ ಕೆಲಸದಲ್ಲಿ ತೋರಿದ ಅಸಾಧಾರಣ ಪ್ರತಿಭೆ. ಪುನಃ ಮುಂಬಯಿಗೆ ತೆರಳಿ ಮಾಡೆಲ್ ಇಂಡಸ್ಟ್ರಿಯಲ್ ಇನ್ಸ್ಟಿಟ್ಯೂಟಿನಲ್ಲಿ ಕುಶಲ ಕಲೆಗಳ ಮುಂದುವರೆದ ಅಧ್ಯಯನ. ಒಂದು ವರ್ಷದ ಕಲಿಕೆಯ ನಂತರ ಮತ್ತೆ ಹೊನ್ನಾವರಕ್ಕೆ. ಶ್ರೀಗಂಧ, ಕಲ್ಲಿನ ಮೂರ್ತಿ ಕೆತ್ತನೆಯ ಕೆಲಸದಲ್ಲಿ ಪಡೆದ ಜನ ಮೆಚ್ಚುಗೆ. ಧಾರವಾಡದಲ್ಲಿ ಏರ್ಪಡಿಸಿದ ಕೆತ್ತನೆಯ ಕೆಲಸದ ಪ್ರದರ್ಶನ. ಜನತಾ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಹುಕ್ಕೇರಿ ರಾಮರಾಯರ ಗಮನಕ್ಕೆ ಬಂದ ಕಲಾಕೃತಿಗಳು. ತಮ್ಮ ವೃತ್ತಿ ಶಿಕ್ಷಣ ಕಲಾಶಾಲೆಯಲ್ಲಿ ಶಿಕ್ಷಕರಾಗಿ ನೇಮಕ. ಹುಬ್ಬಳ್ಳಿಗೆ ಬಂದ ನೆಹರೂರವರಿಗೆ ಅರ್ಪಿಸಿದ ಗೀತೋಪದೇಶದ ಕಲಾಕೃತಿ, ರಾಧಾಕೃಷ್ಣ, ನಟರಾಜ, ಶಿವ ಪಾರ್ವತಿ, ನಾಟ್ಯ ಗಣಪತಿ ಮುಂತಾದುವುಗಳನ್ನು ಕಂಡು ವಿಸ್ಮಿತರಾದ ನೆಹರೂ ರವರಿಂದ ದೊರೆತ ಪ್ರಶಂಸೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ. ರಾಜ್ಯದ ಹಲವಾರು ಪ್ರತಿಷ್ಠಿತ ಸ್ಥಳಗಳಲ್ಲಿ ಶಿಲ್ಪ ಕಲಾಕೃತಿಗಳು ಸಂಗ್ರಹೀತ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಶಿಲ್ಪಕಲಾ ಅಕಾಡಮಿಯಿಂದ ದೊರೆತ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು : ವೆಂಕಟರಾವ್ ಎಂ.ಪಿ. – ೧೯೪೧ ಕೃಷ್ಣೇಗೌಡ ಬಿ.ಎಂ. – ೧೯೪೧ ಜಗದೀಶ್ ಎಚ್.ಎನ್. – ೧೯೪೫ ಉಪಾಧ್ಯಾಯ ಡಿ.ಎ. – ೧೯೫೨ ನರಸಿಂಹಮೂರ್ತಿ ಸಿ.ಎಂ. – ೧೯೭೦
* * *