ಯಶವಂತ ಸರದೇಶಪಾಂಡೆ

Home/Birthday/ಯಶವಂತ ಸರದೇಶಪಾಂಡೆ
Loading Events
This event has passed.

೧೩.೦೬.೧೯೬೫ ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಎಂಬ ಹಳ್ಳಿಯಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ. ಚಿಕ್ಕಂದಿನಿಂದಲೂ ನಾಟಕದಲ್ಲಿ ಬೆಳೆದ ಆಸಕ್ತಿ. ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೊಮ. ನ್ಯೂಯಾರ್ಕ್‌ವಿಶ್ವವಿದ್ಯಾಯದಿಂದ ಪಡೆದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ. ರಾಜ್ಯಾದ್ಯಂತ ಹಲವಾರು ನಾಟಕಗಳ ನಿರ್ದೇಶನ. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ. ರಂಗವರ್ತುಲ, ಬೇಂದ್ರೆ  ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ. ರೇಡಿಯೋ, ದೂರದರ್ಶನಗಳಿಗಾಗಿ ಹಲವಾರು ಕಾರ್ಯಕ್ರಮಗಳು. ಗುರು ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ನಗೆ ನಾಟಕಗಳನ್ನು ತಿಳಿ ಹಾಸ್ಯದ ಜೊತೆಗೆ ರುಚಿಕರವಾದ ಸವಿಯಾದ ಊಟವನ್ನೂ ಎಂ.ಟಿ.ಆರ್‌. ಸಹ ಯೋಗದೊಡನೆ ಯೋಚಿಸಿ ರಂಗ ಸಂಭ್ರಮದಡಿ ನೀಡಿದ ಕಾರ್ಯಕ್ರಮಗಳು, ರಾಜ್ಯದೆಲ್ಲೆಡೆ ಪಡೆದ ಪ್ರಶಂಸೆ. ’ರಾಶಿ ಚಕ್ರ’ ನಗೆ ನಾಟಕದಲ್ಲಿ ಸುಮಾರು ೨ ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ. ದೃಶ್ಯರೂಪದಲ್ಲಿ ವಿಡಿಯೋ ಪ್ರದರ್ಶನಗಳ ಮೂಲಕ ಮಾಡಿದ ರಂಗ ಕ್ರಾಂತಿ. ತರಗತಿಯಲ್ಲಿ ಪಾಠ ಕೇಳುವುದರ ಬದಲು ದ್ವಿತೀಯ ಪಿ.ಯು. ಪಠ್ಯಪುಸ್ತಕ ಡಾ. ಸಿದ್ದಲಿಂಗಯ್ಯನವರ ‘ಏಕಲವ್ಯ’ ನಾಟಕವನ್ನು ಅಭಿನಯಿಸಿ ’ನೋಡೋ ನೋಟ್ಸ್‌’ ಆಗಿ ಪರಿವರ್ತಿಸಿ ಒಂದು ಗಂಟೆ ಐವತ್ತು ನಿಮಿಷ, ರಂಗದ ಮೇಲೆ ಪಾಠದ ಅಭಿನಯ. ರಾಜ್ಯಾದ್ಯಂತ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಳ್ಳಲು ಮಾಡಿದ ಸಹಾಯ. ಸಿನೇ ನಾಟ್ಯನವಮಿ ಯೋಜನೆಯಡಿ ೯ ದಿನಗಳು, ಪ್ರಖ್ಯಾತ ನಾಟಕಕಾರರೂ ಸಂಗೀತಗಾರರಿಂದೊಡಗೂಡಿದ ಚಲನ ಚಿತ್ರರಂಗೋತ್ಸವ ಕಾರ್ಯಕ್ರಮ. ಈಡಿಪಸ್, ಕಿಂಗ್ ಲಿಯರ್‌, ಚಿದಂಬರ ರಹಸ್ಯ, ಚಾಣಕ್ಯ ಪ್ರಪಂಚ, ಬಾಡಿಗೆ ಮನೆ, ಸಾಯೋ ಆಟ, ಭಾರತ ನನ್ನ ಮನೆ ಮುಂತಾದವುಗಳೊಡನೆ ಹಲವಾರು ಹಿಂದಿ ಭಾಷೆಯ ನಾಟಕಗಳ ಪ್ರಮುಖ ನಟ. ಟಿ.ವಿ.ಗಾಗಿ ಇಪ್ಪತ್ತರ ನೋಟು, ಬಕುಳಾಬಾಯಿ ವಠಾರದಲ್ಲಿ ಒಂದು ಹೆಣ, ಮಿಸ್ ಪಾಯಿಂಟ್ ಮುಂತಾದವುಗಳ ನಿರ್ದೇಶನ. ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯ. ಉತ್ತಮ ಸಂಭಾಷಣೆ ರಚನೆಗಾಗಿ ಸನ್‌ಫೀಸ್ಟ್ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇದಿನಹುಟ್ಟಿದಕಲಾವಿದರು ಕಮಲಾಕ್ಷಿ ಎಂ.ಜಿ.- ೧೯೪೩ ಆರ್‌.ಕೆ.ಪದ್ಮನಾಭ- ೧೯೫೯ ಶಿವಕುಮಾರ ಆರಾಧ್ಯ – ೧೯೬೦ ಗುರುರಾಜ ಎಂ. – ೧೯೬೩.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top