ಯಶವಂತ ಹಳಿಬಂಡಿ

Home/Birthday/ಯಶವಂತ ಹಳಿಬಂಡಿ
Loading Events

೨೫.೦೫.೧೯೫೦ ಕರ್ನಾಟಕದ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಂನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಜಾನಪದ, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಹಲವಾರು ಪ್ರಕಾರಗಳ ಯಶಸ್ವಿ ಹಾಡಗಾರರು. ತಂದೆ ಹನುಮಂತಪ್ಪ, ತಾಯಿ ಬಸವೇಶ್ವರಿ. ಅಮ್ಮ ನಿಂದ ಪಡೆದ ಸಂಗೀತ ಸಂಸ್ಕಾರ. ಅಮ್ಮ ಹೇಳಿಕೊಳ್ಳುತ್ತಿದ್ದ ಪದಗಳನ್ನು ಕೇಳಿ ಕೇಳಿ ಬಾಲಕನ ಮನಸ್ಸಿನಲ್ಲಿ ಹಾಡುಗಾರನಾಗಬೇಕೆಂಬ ಬಯಕೆ. ಧಾರವಾಡದ ಆಕಾಶವಾಣಿ ಮಕ್ಕಳ ಕಾರ್ಯಕ್ರಮ ’ಗಿಳಿವಿಂಡು’ ವಿನಲ್ಲಿ ಹಾಡಿ ಸೈ ಎನ್ನಿಸಿಕೊಂಡ ಹುಡುಗ. ಹುಡುಗನ ಕಂಡಶ್ರೀಯನ್ನ ಮೆಚ್ಚಿದ ಗುರುಗಳಿಂದ ಲಕ್ಷ್ಮಣರಾವ್ ದೇವಾಂಗ ಮಠ ನಂತರ ನಾರಾಯಣರಾವ್ ಮಜುಮದಾರರಿಂದ ಕಲಿತ ಸಂಗೀತ ಶಿಕ್ಷಣ, ಹಿಂದೂಸ್ತಾನಿ, ಸುಗಮ ಸಂಗೀತ, ಜಾನಪದ ಇವರ ಪ್ರೀತಿಯ ಹಾಡುಗಾರಿಕೆಯ ಪ್ರಕಾರಗಳು. ಓದಿದ್ದು ಪಿ.ಯು. ವರೆಗೆ, ಡ್ರಾಯಿಂಗ್‌ ಟೀಚರ‍್ಸ್‌ ಕೋರ‍್ಸ್ ಮುಗಿಸಿ ಟ್ರೀಸರ್‌ ಆಗಿ ಸೇರಿದ್ದು ಕರ್ನಾಟಕ ಪವರ್‌ ಕಾರ್ಪೋರೇಶನ್, ಧಾರವಾಡದಲ್ಲಿ. ವಿವಿಧ ಹಂತಗಳಲ್ಲಿ ೩೬ ವರ್ಷ ಸುದೀರ್ಘಸೇವೆ. ಹಾಡುಗಾರಿಕೆಯ ಜೊತೆಗೆ ಕಟ್ಟಡಗಳ ಮಾದರಿ ವಿನ್ಯಾಸ (ಮಿನಿಯೇಚರ್‌ ಮಾಡಲಿಂಗ್) ರಚನೆ ಮತ್ತೊಂದು ಪ್ರಮುಖ ಹವ್ಯಾಸ. ಇವರು ರಚಿಸಿದ ಮಾದರಿಯಲ್ಲೇ ಹಲವಾರು ಕಟ್ಟಡಗಳ ನಿರ್ಮಾಣ. ಕರ್ನಾಟಕ ಪತ್ರಕರ್ತರ ಸಹಕಾರಿ ಸಂಘದ ಸುವರ್ಣಭವನ ಇವರ ಮಿನಿಯೇಚರ ಮೇಲೆ ರಚಿಸಿದ ಕಟ್ಟಡ. ೧೯೭೧ ರಿಂದ ಧಾರವಾಡದ ಆಕಾಶವಾಣಿಯ ಅನುಮೋದಿತ ಗಾಯಕರಾಗಿ ನೇಮಕಗೊಂಡ ನಂತರ ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಕೇಶವ ಗುರವ್, ವಸಂತ ಕನಕಾಪುರ್‌ ರವರಲ್ಲಿ ಕಲಿತದ್ದು ಅಪಾರ. ಧಾರವಾಡದ ಆಕಾಶವಾಣಿಯಿಂದ ಬೇಂದ್ರೆಯವರ ಕವನ ಮೂಡಲ ಮನೆಯ…. ಹಾಡಿದಾಗ, ತಾವರೆಗೇರಿ ಆಸ್ಪತ್ರೆಯಲ್ಲಿದ್ದ ಬೇಂದ್ರೆಯವರು ರೇಡಿಯೋ  ಮೂಲಕ ಹಾಡುಕೇಳಿ, ಬರಮಾಡಿಕೊಂಡು “ಏನಹಾಡಿದ್ಯೋ ಮುಂಜಾನಿ ಹುಚ್ಚು ಹಿಡಿಸಿದಿ ನನಗ….” ಎಂದಾಗ ಹುಡುಗ ಹಳಿಬಂಡಿಗೆ ಮಾತೇ ಹೊರಡದಾಯಿತಂತೆ. ನಾಡಿನ ಪ್ರಸಿದ್ಧ ಕವಿಯೊಬ್ಬರಿಂದ ಪ್ರಶಂಸೆ, ಯಾವ ಪ್ರಶಸ್ತಿಯೂ ಸರಿಗಟ್ಟಲಾಗದ್ದು. ಮುಂದೆ ಬೇಂದ್ರೆ ಕಾವ್ಯವಾಣಿ ಎಂಬ ವಿಶೇಷ ಸಂಗೀತ ರೂಪಕ ರಚನೆ. ನಾಡಿನಾದ್ಯಂತ ನಡೆಸಿಕೊಟ್ಟ ಕಾರ್ಯಕ್ರಮ. ಕೊನೆಯವರೆಗೂ ಬೇಂದ್ರೆಯವರಲ್ಲಿಗೆ ಹೋಗಿ ಹಾಡಿ ಸಂತೋಷ ಪಡಿಸಿದ ಗಾಯಕ. ಭಾವಗೀತೆ, ಭಕ್ತಿಗೀತೆ, ಜಾನಪದ, ವಚನ ಮುಂತಾದ ೨೫೦ಕ್ಕೂ ಹೆಚ್ಚು ಧ್ವನಿ ಸುರುಳಿಗಳ ಹಾಡುಗಾರರು. ಹಲವಾರು ಚಲನಚಿತ್ರಗಳಿಗೂ ಗಾಯನ, ಕರ್ನಾಟಕ ಸರಕಾರದ ಹಂಪಿ ಉತ್ಸವ, ಕದಂಬ ಉತ್ಸವ, ಕಿತ್ತೂರು ಉತ್ಸವ, ಕರಾವಳಿ ಉತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವಗಳಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಭಾಗಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ರಾಜ್ಯಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ಸುಗಮ ಸಂಗೀತ ಸಾರ್ವಭೌಮ, ಬೆಂಗಳೂರು ರತ್ನ ಮುಂತಾದ ಬಿರುದುಗಳು.   ಇದೇ ದಿನ ಹುಟ್ಟಿದ ಕಲಾವಿದರು ನೀಲಾ ರಾಮ್‌ಗೋಪಾಲ್ – ೧೯೩೫ ಸುರೇಶ ವೆಂಕಟೇಶ ಕುಲಕರ್ಣಿ – ೧೯೪೮.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top