೨೧-೧೨-೧೯೩೨ ನವ್ಯ ಸಾಹಿತ್ಯವನ್ನು ಬೆಳೆಸಿದವರಲ್ಲಿ ಪ್ರಮುಖರಾದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ತಂದೆ ರಾಜಗೋಪಾಲಾಚಾರ್ಯ, ತಾಯಿ ಸತ್ಯಭಾಮ. ಪ್ರಾರಂಭಿಕ ಶಿಕ್ಷಣ ಸಾಂಪ್ರದಾಯಿಕ ಪಾಠಶಾಲೆಯಲ್ಲಿ ಸಂಸ್ಕೃತ ಮತ್ತು ತೀರ್ಥಹಳ್ಳಿ ಶಾಲೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), ಕಾಮನ್ ವೆಲ್ತ್ ವಿದ್ಯಾರ್ಥಿವೇತನ ಪಡೆದು ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಪ್ರಾಧ್ಯಾಪಕರ ಹುದ್ದೆ. ಸಂದರ್ಶಕ ಪ್ರಾಧ್ಯಾಪಕರಾಗಿ ಯು.ಎಸ್.ಎ.ದ ಅಯೋವ, ಟಿಪ್ಟ್ಸ್ ವಿಶ್ವವಿದ್ಯಾಲಯ, ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಕೇರಳದ ಕೊಟ್ಟಾಯಂನ ಮಹಾತ್ಮಗಾಂ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಸಲ್ಲಿಸಿದ ಸೇವೆ. ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ನ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ, ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಗೌರವ ನಿರ್ದೇಶಕರಾಗಿ, ಸೋಷಿಯಲ್ ಸೈನ್ಸ್ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯಗಳು. ಪ್ರಕಟಿಸಿದ ಕೃತಿಗಳು ಹಲವಾರು. ಕಾದಂಬರಿ-ಸಂಸ್ಕಾರ (ಹೊಸ ಅಲೆಯನ್ನು ಸೃಷ್ಟಿಸಿದ ಕೃತಿ), ಭಾರತೀಪುರ, ಅವಸ್ಥೆ, ಭವ, ದಿವ್ಯ. ಕವನ ಸಂಕಲನಗಳು-ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ. ಕಥಾಸಂಕಲನ-ಎಂದೆಂದಿಗೂ ಮುಗಿಯದ ಕಥೆ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಐದು ದಶಕದ ಕಥೆಗಳು. ವಿಮರ್ಶೆ-ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ ಸೇರಿ ೨೫ ಕೃತಿ ಪ್ರಕಟಿತ. ಚಲನಚಿತ್ರವಾದ ಕಾದಂಬರಿ, ಕಥೆಗಳು-ಸಂಸ್ಕಾರ, ಘಟಶ್ರಾದ್ಧ, ಬರ, ಅವಸ್ಥೆ. ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿವೆ. ಸಂಸ್ಕಾರ ಕಾದಂಬರಿ ಇಂಗ್ಲಿಷ್, ರಶಿಯನ್, ಫ್ರೆಂಚ್, ಹಂಗೇರಿಯನ್, ಜರ್ಮನ್ ಭಾಷೆಗಳಿಗೆ ಭಾಷಾಂತರ. ಸಂದ ಪ್ರಶಸ್ತಿ ಗೌರವಗಳು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸರಕಾರದ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಗೊರೂರು ಪ್ರಶಸ್ತಿ, ಹೈದರಾಬಾದಿನ ಸಾಹಿತ್ಯ ಪುರಸ್ಕರ, ಗೌರವ ಡಿ.ಲಿಟ್ ಪದವಿಗಳು, ಜ್ಞಾನಪೀಠ ಪ್ರಶಸ್ತಿ, ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಕೃಷ್ಣಕುಮಾರ ಕಲ್ಲೂರ – ೧೯೦೯ ಮಾವಿನಕೆರೆ ರಂಗನಾಥನ್ – ೧೯೪೩ ಪ್ರಭಾಕರ ಶಿಶಿಲ – ೧೯೫೩ ಮಮ್ತಾಜ ಬೇಗಂ – ೧೯೫೮

