ರಘುಸುತ

Home/Birthday/ರಘುಸುತ
Loading Events
This event has passed.

೦೮..೧೯೨೯ ೨೩..೨೦೦೩ ಪತ್ರಿಕೋದ್ಯಮಿ, ಸಾಹಿತಿ, ಭೂಗೋಳ ಶಾಸ್ತ್ರಜ್ಞರಾದ ರಘುಸತ ಕಾವ್ಯನಾಮದ ಕೆ.ಆರ್. ರಂಗಾಚಾರ್ ರವರು ಹುಟ್ಟಿದ್ದು ಚಿಕ್ಕಬಳ್ಳಾಪುರದ ಬಳಿಯ ನೊಳಕುಂಟೆ ಹೊಸೂರಿನಲ್ಲಿ ೧೯೨೯ ರ ಮೇ ೮ ರಂದು. ತಂದೆ ರಘುನಾಥಾಚಾರ್, ತಾಯಿ ಇಂದಿರಮ್ಮ. ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರ ಮೈಸೂರಿನ ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಕುವೆಂಪು, ಡಿ.ಎಲ್‌.ಎನ್‌., ತೀ.ನಂಶ್ರೀ., ಎಸ್‌.ವಿ.ಪಿ., ಮುಂತಾದ ಪ್ರಾಧ್ಯಾಪರುಗಳ ಪ್ರಭಾವಕ್ಕೊಳಗಾದವರು. ಟಿ.ವಿ. ವೆಂಕಟಾಚಲಶಾಸ್ತ್ರಿ, ಯು.ಆರ್. ಅನಂತಮೂರ್ತಿ, ಸಿಂಧುವಳ್ಳಿ ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ ಮುಂತಾದವರ ಸ್ನೇಹವರ್ಗ. ಟೀಚರ್ಸ್ ಕಾಲೇಜಿನಿಂದ ಬಿ.ಎಡ್‌ ಪದವಿ ಪಡೆದನಂತರ ಉಪಾಧ್ಯಾಯರಾಗಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ, ಮಿರ್ಲೆ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಕಾಲೇಜು ದಿನಗಳಿಂದಲೇ ಸಾಹಿತಿಗಳ ಪ್ರಭಾವಕ್ಕೊಳಗಾಗಿ ಕತೆ, ಕವನಗಳ ರಚನೆಯನ್ನು ೧೯೪೮ರಲ್ಲಿಯೇ ಪ್ರಾರಂಭಿಸಿ ನಾಡಿನ ಹಲವಾರು ಪತ್ರಿಕೆಗಳಿಗೆ ಬರೆದರು. ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಕಾದಂಬರಿ (ಐತಿಹಾಸಿಕ, ಪತ್ತೇದಾರಿ, ವೈಜ್ಞಾನಿಕ) ಕಥಾ ಸಂಕಲನಗಳು, ಕವನ ಸಂಕಲನಗಳು, ಪ್ರಬಂಧ ಸಂಕಲನಗಳು, ಶಿಶುಸಾಹಿತ್ಯ, ಜೀವನಚರಿತ್ರೆಗಳು, ನಾಟಕಗಳು, ಪ್ರವಾಸ ಸಾಹಿತ್ಯ, ಭೂಗೋಳ ಮತ್ತು ಸಮಾಜ ವಿಜ್ಞಾನ – ಹೀಗೆ ವೈವಿದ್ಯಮಯ ಕೃತಿಗಳು ಏರಿವೆ. ಇವರ ಮೊದಲ ಕಾದಂಬರಿ ಆಶಾನಿರಾಶ ೧೯೫೪ರಲ್ಲಿ ಪ್ರಕಟಗೊಂಡಿತು. ನಂತರ ಪೊಯ್‌ಸಳ, ಮೀರ್ ಸಾದಿಕ್‌, ಸುಳಿಗಾಳಿ ಮುಂತಾದವುಗಳನ್ನು ಪ್ರಕಟಿಸಿದರು. ‘ಗಗನ ಕುಸುಮ’ ಎಂಬ ವೈಜ್ಞಾನಿಕ ಕಾದಂಬರಿಯನ್ನು  ರಚಿಸಿದ್ದು ಬಹುಶಃ ಕನ್ನಡ ಸಾಹಿತ್ಯದ ಪ್ರಥಮ  ವೈಜ್ಞಾನಿಕ ಕಾದಂಬರಿ ಎನಿಸಿದೆ. ‘ಮೇಸ್ಟ್ರಚೀಲ’ ಎಂಬ ನಗೆಕಾದಂಬರಿಯನ್ನು ರಚಿಸಿದ್ದು ಇದು ಕೂಡಾ ಪ್ರಪ್ರಥಮಧಾರಾವಾಹಿಯಾಗಿ ಪ್ರಕಟಗೊಂಡ ನಗೆಕಾದಂಬರಿ. ಮಿನಿಕಾದಂಬರಿಗಳ ರಚನೆಯಲ್ಲಿಯೂ ಪ್ರಥಮವನ್ನೇ ಸಾಧಿಸಿದ್ದು ನಂತರ ಹಲವಾರು ಮಿನಿಕಾದಂಬರಿಗಳನ್ನು ಬರೆದರು. ಒಂದು ಕಾಲದಲ್ಲಿ ಪತ್ತೇದಾರಿ ಕಾದಂಬರಿಗಳಿಗೆ ಒಳ್ಳೆಯ ಬೇಡಿಕೆ ಇದ್ದು ಎನ್‌. ನರಸಿಂಹಯ್ಯನವರಂತೆ ಹಲವಾರು ಪತ್ತೇದಾರಿ ಕಾದಂಬರಿಗಳನ್ನು ‘ಪತ್ತೇದಾರ’ ಎಂಬ ಕಾವ್ಯನಾಮದಲ್ಲಿ ರಚಿಸಿದ್ದು ಅದರಲ್ಲೂ ಅಂಗೈ ಅಗಲದ ಜೇಬಿನಲ್ಲಿಡಬಹುದಾದ ಸುಮಾರು ಇಪ್ಪತ್ತೈದು ಕಾದಂಬರಿಗಳನ್ನು ರಚಿಸಿದ್ದು ಮಿನಿಪತ್ತೇದಾರಿ ಕಾದಂಬರಿ ರಚನೆಯಲ್ಲಿಯೂ ಪ್ರಥಮರೆನಿಸಿದರು. ಕಳೆದ ಶತಮಾನದ ನಲವತ್ತರ ದಶಕದಲ್ಲಿ ಕಂಪನಿ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಹೀಗೆ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಎಚ್‌.ಎಲ್‌.ಎನ್‌. ಸಿಂಹರವರ ನಾಟಕದಲ್ಲಿ ಬಾಲ ಪಾತ್ರಗಳಿಗೆ ಆಯ್ಕೆಯಾಗಿದ್ದರು. ಅನೇಕ ನಾಟಕಗಳಿಗೆ ಅಭಿನಯಿಸಿದರು. ಕಾಲೇಜಿನಲ್ಲಿದ್ದಾಗಲೂ ಕುವೆಂಪುರವರೇ ನಿರ್ದೇಶಿಸಿದ ರಕ್ತಾಕ್ಷಿ ನಾಟಕದಲ್ಲಿ ಅಭಿನಯ. ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಅನಂತರಂಗಾಚಾರ್, ಎಚ್‌.ಎಂ. ಶಂಕರನಾರಾಯಣರಾವ್‌ ಮುಂತಾದವರುಗಳು ಅಭಿನಯಿಸುತ್ತಿದ್ದ ನಾಟಕಗಳ ಸಹನಟ. ಹೀಗೆ ನಾಟಕಾಭಿನಯದ ಅನುಭವದಿಂದ ರಚಿಸಿದ್ದು ಹಲವಾರು ನಾಟಕಗಳು. ಲಾಯರ್ ರಾದ್ಧಾಂತ, ರಿಹರ್ಸಲ್‌ ಗಡಿಬಿಡಿ, ಅಲಾಲ್‌ಟೋಪಿ, ತಿಪ್ಪರಲಾಗ, ಎಡಬಿಡಂಗಿ, ಪ್ರಾಕ್ಟೀಶ್‌ ಪರದಾಟ ಮುಂತಾದ ನಾಟಕಗಳನ್ನು ರಚಿಸಿದ್ದು, ಸ್ಕೂಲುಕಾಲೇಜುಗಳಲ್ಲಿ ಅಭಿಯನಿಸಲ್ಪಡುತ್ತಿದ್ದ ನಾಟಕಗಳಾಗಿದ್ದವು. ಇವಲ್ಲದೆ ಚೀಟಿಕಾಟ, ಹನಿಮೂನ್‌, ಭಂಡರಬೇಸ್ರು, ಗಣೇಶಮಹಿಮೆ, ಗಲಾಟೆಮದುವೆ ಮುಂತಾದ ೩೦ ಕ್ಕೂ ಹೆಚ್ಚು ನಾಟಕಗಳ ರಚನೆ. ಹವ್ಯಾಸಿ ನಾಟಕ ಸಂಸ್ಥೆಗಳ ಹುಟ್ಟು, ಪೂರ್ವೋತ್ತರಗಳನ್ನು ಸಂಗ್ರಹಿಸಿ ‘ನಮ್ಮ ಕಲಾವಿಲಾಸಿ ನಾಟಕ ಸಂಸ್ಥೆಗಳು’ ಎಂಬ ಶೀರ್ಷಿಕೆಯಿಂದ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿತ. ನಾಟಕಗಳನ್ನು ಬರೆದು ನಿರ್ದೇಶಿಸಿದ್ದಲ್ಲದೆ ಹಲವಾರು ನಾಟಕ ಸ್ಪರ್ಧೆಗಳನ್ನು ನಡೆಸಿದ್ದಾರೆ. ಶಿಕ್ಷಕರ ನಾಟಕ ತರಬೇತಿ ಶಿಬಿರಗಳಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಂಡಿದಲ್ಲದೆ ಶಿಬಿರದ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ. ಬಿ.ಎ., ಬಿ.ಎಡ್‌., ಪದವಿಗಳಲ್ಲಿ ಭೂಗೋಳ ವಿಜ್ಞಾನವು ವಿಶೇಷಾಧ್ಯಯನವಾಗಿದ್ದರಿಂದ ಅಲಿಗಲ್‌ ಮುಸ್ಲಿಂ ವಿಶ್ವವಿದ್ಯಾಲಯದಿಂದ ಭೂಗೋಳ ವಿಜ್ಞಾನದಲ್ಲಿ ಪಡೆದ ಎಂ.ಎ. ಪದವಿ. ‘ವಿಜಯನಗರ ಸಾಮ್ರಾಜ್ಯದ ಭೂಗೋಳ ವಿಜ್ಞಾನ’ ಎಂಬ ವಿಷಯದಲ್ಲಿ ಬಾ.ರಾ. ಗೋಪಾಲ್‌ರ ಮಾರ್ಗದರ್ಶನದಲ್ಲಿ ಡಾಕ್ಟರೇಟ್‌ಗಾಗಿ ಪ್ರಬಂಧ ಮಂಡನೆ. ಪ್ರಾಥಮಿಕ ವಿದ್ಯಾಭ್ಯಾಸದ ತರಗತಿಗಳಿಗಾಗಿ ಸುಲಭವಾಗಿ ಅರ್ಥವಾಗುವ ರೀತಿ ‘ಸುಲಭಭೂಗೋಳ’, ‘ಸಮಾಜ ದರ್ಶನ’ ಮುಂತಾದ ಕೃತಿಗಳ ರಚನೆ. ಭೂಗೋಳಶಾಸ್ತ್ರದಲ್ಲಿ ಮೈಸೂರು ವಿ.ವಿ.ದಲ್ಲಿ ಪ್ರಚಾರೋಪನ್ಯಾಸ ಮಾಲೆಯಲ್ಲಿ ಉಪನ್ಯಾಸ ಮಾಡಿದ ಮೊದಲಿಗರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬಿಡುವಿನ ವೇಳೆಯಲ್ಲಿ ‘ಮೈಸೂರು’ ವೈಶ್ಯ ಪತ್ರಿಕೆ’ಯ ಸಹಸಂಪಾದಕರಾಗಿ, ೧೯೫೪-೫೬ ರವರೆಗೆ ತಾಯಿನಾಡು, ಜನವಾಣಿ ಮುಂತಾದ ಪತ್ರಿಕೆಗಳ ಸಿನಿಮಾ ಸುದ್ದಿ ಸಂಗ್ರಾಹಕರಾಗಿ, ೧೯೫೬-೫೭ರಲ್ಲಿ ಚಿತ್ರಗುಪ್ತ ಪತ್ರಿಕೆಯ ಸಿನಿಮಾ ವಿಭಾಗದ ಉಪಸಂಪಾದಕರಾಗಿ, ಪ್ರಜಾಮತ, ಜನಪ್ರಗತಿ, ಕೈಲಾಸ, ಗೋಕುಲ, ಪ್ರಜಾವಾಣಿ ಮುಂತಾದ ಪತ್ರಿಕೆಗಳಿಗೆ ಹಿರಿಯ ಸಾಹಿತಿಗಳ, ಚಲನಚಿತ್ರ ಕಲಾವಿದರ ವ್ಯಕ್ತಿ ಚಿತ್ರಗಳ ಲೇಖಕರಾಗಿಯೂ ಪತ್ರಿಕೋದ್ಯಮದಲ್ಲಿ ದುಡಿದಿದ್ದಾರೆ. ಚಲನಚಿತ್ರರಂಗದೊಡನೆ ನಿಕಟ ಸಂಪರ್ಕ ಹೊಂದಿದ್ದ ರಘುಸುತರವರು ಚಲನಚಿತ್ರಗಳಲ್ಲೂ ಸಣ್ಣ ಪುಟ್ಟ ಪಾತ್ರಾಭಿನಯಗಳ ಜೊತೆಗೆ ಎಚ್‌.ಎಲ್‌.ಎನ್‌. ಸಿಂಹರವರ ‘ಅಬ್ಬಾ ಆ ಹುಡುಗಿ’ ಚಲನಚಿತ್ರಸಾಹಿತಿಯಾಗಿ, ‘ಗೌರಿ ಮಹಾತ್ಮೆ’ ಚಿತ್ರದ ಸಂಭಾಷಣಕಾರರಾಗಿಯೂ ದುಡಿದಿದ್ದಾರೆ. ಉಪಾಧ್ಯಾಯರಾಗಿದ್ದರಿಂದ ಸಹಜವಾಗಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿ ಇದ್ದು ಪಠ್ಯಪುಸ್ತಕ ರಚನಾಸಮಿತಿ, ಪಾಠಕ್ರಮ ವಿಷಯಗಳ ಪುನರ್ರ‍ಚನೆ, ಪಠ್ಯಪುಸ್ತಕ ಪುನರ್ ವಿಮರ್ಶಾಸಮಿತಿ, ಎನ್‌.ಸಿ.ಇ. ಆರ್.ಟಿ ಮತ್ತು ಡಿ.ಎಸ್‌.ಇ.ಆರ್.ಟಿ ಗಳ ಪಠ್ಯಕ್ರಮ ಕಾರ್ಯಾಗಾರಗಳಲ್ಲಿ ಭಾಗಿಯಾಗಿ, ಸಲಹೆಗಾರರಾಗಿಯೂ ಸೇವೆಸಲ್ಲಿಸಿದ್ದಾರೆ. ದಾವಣಗೆರೆ (೧೯೬೧), ಶಿವಮೊಗ್ಗ (೧೯೬೪), ಕೆ.ಆರ್. ನಗರ (೧೯೭೪). ಮುಂತಾದೆಡೆ ನಡೆದ ಶಿಕ್ಷಕರ ಸಮ್ಮೇಳನಗಳಲ್ಲಿ ಪಡೆದ ‘ಉತ್ತಮ ಉಪಾಧ್ಯಾಯ ಪ್ರಶಸ್ತಿ’ ಹೀಗೆ ಶಿಕ್ಷಣ, ಚಲನಚಿತ್ರ, ರಂಗಭೂಮಿ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ದುಡಿದ ರಘುಸುತರವರು ೨೫ ಕಾದಂಬರಿಗಳು, ೩೩ ನಾಟಕಗಳು, ೨೧ ಭೂಗೋಳ ಮತ್ತು ಸಮಾಜ ವಿಜ್ಞಾನ ಕೃತಿಗಳು, ೩ ಕವನ ಸಂಕಲನಗಳು, ೭ ಶಿಶು ಸಾಹಿತ್ಯ, ೪ ಜೀವನ ಚರಿತ್ರೆಗಳು ಮತ್ತು ಪ್ರಬಂಧ, ಕಥಾ ಸಂಕಲನಗಳು, ಸಂಪಾದಿತ ಕೃತಿಗಳೂ ಸೇರಿ ಒಟ್ಟು ನೂರಕ್ಕೂ ಹೆಚ್ಚು ಕೃತಿ ರಚಿಸಿದ್ದ ರಘುಸುತರವರು ತೀರಿಕೊಂಡದ್ದು ೨೦೦೩ ರ ಜನವರಿ ೨೩ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top