೧೯.೦೮.೧೯೫೨ ಮೃದುಮಧುರ ಸ್ವರದ, ಭಾವಗೀತೆಯ ಅರ್ಥವಂತಿಕೆಯ ಗಾಯಕಿ ಎನಿಸಿರುವ ರತ್ನಮಾಲಾರವರು ಹುಟ್ಟಿದ್ದು ಬೆಂಗಳೂರು. ತಂದೆ ಸಂಗೀತ ವಿದ್ವಾಂಸರಾದ ಆರ್. ಕೆ. ಶ್ರೀಕಂಠನ್, ತಾಯಿ ಮೈತ್ರೇಯಿ. ಚಿಕ್ಕಂದಿನಿಂದಲೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠ. ಒಲವು ಬೆಳೆದದ್ದು ಸುಗಮ ಸಂಗೀತ ಕ್ಷೇತ್ರದ ಕಡೆಗೆ. ಸುಗಮ ಸಂಗೀತದ ದಿಗ್ಗಜರುಗಳಾದ ಮೈಸೂರು ಅನಂತ ಸ್ವಾಮಿ, ಸಿ. ಅಶ್ವತ್ಥ್, ಪದ್ಮಚರಣ್, ಎಚ್.ಕೆ. ನಾರಾಯಣ ಮುಂತಾದವರ ನಿರ್ದೇಶನದಲ್ಲಿ ಹಾಡಿದ ಹಾಡುಗಳಿಗೆ ಲೆಕ್ಕವಿಲ್ಲ. ಕೆಂಗುಲಾಬಿ, ಮೈಸೂರುಮಲ್ಲಿಗೆ, ಭಾವಸಂಗಮ, ಡಾ. ರಾಜ್ರೊಡನೆ ಹಾಡಿರುವ ಅನುರಾಗ, ಮಂಕುತಿಮ್ಮನ ಕಗ್ಗ; ಚೈತ್ರ, ರೂಪಸಿ, ಭಾವೋತ್ಸವ, ಕವಿತಾ, ಸ್ಪಂದನ, ನೆನಪಿನಾಳದಲ್ಲಿ, ನೀಲಾಂಬರಿ, ಅಣಿಮುತ್ತುಗಳು ಮುಂತಾದ ಐನೂರಕ್ಕೂ ಹೆಚ್ಚು ಕ್ಯಾಸೆಟ್ ಮತ್ತು ಸಿ.ಡಿ.ಗಳಲ್ಲಿ ಹಾಡಿ ಕನ್ನಡಿಗರ ಮನಗೆದ್ದ ಸಾಧನೆ. ಚಲನಚಿತ್ರ ನಿರ್ದೇಶಕರಾದ ಟಿ.ಜಿ. ಲಿಂಗಪ್ಪ, ಹಂಸಲೇಖ, ರಾಜನ್ ನಾಗೇಂದ್ರ, ವಿಜಯ ಭಾಸ್ಕರ್,ಅಶ್ವತ್ಥ್-ವೈದಿ ಮುಂತಾದವರ ನಿರ್ದೇಶನದಲ್ಲಿ ಹಾಡಿದ ಚಲನಚಿತ್ರ ಗೀತೆಗಳು. ಡಾ. ರಾಜ್ ರೊಡನೆ ಗುರಿ, ಎಸ್.ಪಿ.ಯವರೊಡನೆ ಏಳುಸುತ್ತಿನ ಕೋಟೆ ಚಿತ್ರಗಳಿಗೆ ಹಾಡುಗಾರಿಕೆ. ಸೋವಿಯತ್ ರಷ್ಯಾದಲ್ಲಿ ಭಾರತ ಉತ್ಸವದಲ್ಲಿ ಪಂ. ರವಿಶಂಕರ್ ತಂಡದಲ್ಲಿ ಹಾಡಿದ ಹೆಗ್ಗಳಿಕೆ. ದೇಶವಿದೇಶಗಳಲ್ಲಿ ಹಾಡಿದ ಖ್ಯಾತಿ. ದುಬೈ, ಸಿಂಗಪುರ ಕನ್ನಡ ಸಂಘ, ಶಾರ್ಜ, ಅಬುದಾಬಿಯಲ್ಲಿ ಮೈಸೂರು ಅನಂತಸ್ವಾಮಿಯೊಡನೆ, ಅಮೆರಿಕದ ಫೀನಿಕ್ಸ್, ಹೂಸ್ಟನ್ಗಳಲ್ಲಿ ನೀಡಿದ ಯಶಸ್ವಿ ಕಾರ್ಯಕ್ರಮ. ದೂರದರ್ಶನ ಆಕಾಶವಾಣಿಯಲ್ಲೂ ಕಾರ್ಯಕ್ರಮ ಪ್ರಸಾರ. ರಮಾ ಫೌಂಡೇಶನ್ ಮೂಲಕ ಬಾಲಪ್ರತಿಭೆಗಳಿಗೆ ಉತ್ತೇಜನ. ಕರ್ನಾಟಕ ವೈಜಯಂತಿ ಮೂಲಕ ಕರ್ನಾಟಕದಾದ್ಯಂತ ಹಮ್ಮಿಕೊಂಡಿರುವ ಕಾರ್ಯಕ್ರಮಗಳು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ದುಬೈ, ಸಿಂಗಪುರ ಅಬುದಾಬಿ ಕನ್ನಡ ಸಂಘಗಳಿಂದ ದೊರೆತ ಪ್ರಶಸ್ತಿ ಮುಖ್ಯವಾದುವುಗಳು. ಇದೇ ದಿನ ಹುಟ್ಟಿದ ಕಲಾವಿದ: ಎಂ.ವಿ. ವಾಸುದೇವರಾವ್ – ೧೯೧೯
* * *