೨೪.೦೬.೧೯೨೪ ಕರ್ನಾಟಕದಲ್ಲಿ ನಶಿಸಿ ಹೋಗುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬದವರಲ್ಲೊಬ್ಬರಾದ ಪರಮೇಶ್ವರಾಚಾರ್ಯರು ಹುಟ್ಟಿದ್ದು ಹೊಳಲ್ಕೆರೆ ತಾಲ್ಲೂಕಿನ ನೂಲೇನೂರು. ತಂದೆ ಮಾನಾಚಾರ್ಯರು, ತಾಯಿ ವೀರಮ್ಮ. ಬಾಲ್ಯದಲ್ಲಿಯೇ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾಗಿ ಬೆಳೆದದ್ದು ಸೋದರ ಮಾವಂದಿರಾದ ಕೆಂಚವೀರಾಚಾರ್ಯ, ಕಾಳಾಚಾರ್ಯರ ಪೋಷಣೆಯಲ್ಲಿ. ಚಿಕ್ಕಂದಿನಿಂದಲೂ ಮರಗೆಲಸದೊಡನೆ ಪ್ರಾರಂಭವಾದ ಬದುಕು. ರೇಖಾಚಿತ್ರಗಳ ರಚನೆ, ವಿಗ್ರಹ ಕೆತ್ತನೆ ಕೆಲಸದ ಅಭ್ಯಾಸ. ಸೋದರ ಮಾವನ ಮಗ ಮೌನಾಚಾರ್ಯರೊಡನೆ ಹೊಸದುರ್ಗದ ಬಳಿಯ ನೀರಗುಂದದ ಭೈರವೇಶ್ವರ ರಥದ ನಿರ್ಮಾಣ. ಕಲಾತ್ಮಕವಾಗಿ ರಥ ನಿರ್ಮಿಸಿ ಪಡೆದ ಖ್ಯಾತಿ. ಅಜ್ಜ ಹಳ್ಳಿಯ ಶಿಲ್ಪಶಾಸ್ತ್ರ ಪ್ರವೀಣರಾದ ನಾಗೇಂದ್ರಾಚಾರ್ಯರಲ್ಲಿ ಉನ್ನತ ಮಟ್ಟದ ಶಿಲ್ಪ ರಚನೆಯ ಶಿಕ್ಷಣ. ಕುಸುರಿ ಕೆಲಸದಲ್ಲಿ ಪಡೆದ ಪ್ರಾವೀಣ್ಯತೆ. ಮಾವಂದಿರಾದ ಕೆಂಚವೀರಾಚಾರ್ಯರಿಂದ ಶಿಲೆ, ಚಿನ್ನಬೆಳ್ಳಿ ಮತ್ತು ಎರಕದ ಕೆಲಸದಲ್ಲಿ ದೊರೆತ ಶಿಕ್ಷಣ. ಸವಾಲಾಗಿ ಸ್ವೀಕರಿಸಿ ರಚಿಸಿಕೊಟ್ಟ ಮೈಸೂರಿನ ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥ. ೨೨ ೧/೨ ಅಡಿ ಎತ್ತರದ ರಥದ ಸುತ್ತಲೂ ಕುಸುರಿ ಕೆತ್ತನೆಯಿಂದ ಜೀವ ತುಂಬಿದ ಮೂರ್ತಿಗಳು. ಹಲವಾರು ದೇವತಾ ಮೂರ್ತಿಗಳ ರಚನೆ. ಚಳ್ಳಕೆರೆ ಕುಮಾರಸ್ವಾಮಿ, ವಿನಾಯಕ, ಶಿವಮೊಗ್ಗಕ್ಕೆ ಅಂಬಾ ಭವಾನಿ, ಬಳ್ಳಾರಿಯ ವೇಣುಗೋಪಾಲ, ಹೊಳಲೂರಿನ ವೀರಭದ್ರ ಮುಂತಾದ ಶಿಲಾ ಮೂರ್ತಿಗಳ ರಚನೆ. ದೇವಾ ಹಳ್ಳಿಯ ರಂಗನಾಥ ಸ್ವಾಮಿ, ಚಿತ್ರದುರ್ಗ ಜಿಲ್ಲೆಗೆ ಬೆಳ್ಳಿಯ ವೀರಭದ್ರಸ್ವಾಮಿ, ತರಿಕೆರೆಗೆ ಪಂಚಲೋಹದ ಬನಶಂಕರಿ, ಮಳವಳ್ಳಿಯ ಆಂಜನೇಯ ಸ್ವಾಮಿಗೆ ಪ್ರಭಾವಳಿ ರಚನೆ. ಸಿದ್ಧರೂಢ ಸ್ವಾಮಿಗಳು, ಹರ್ಡೇಕರ್ ಮಂಜಪ್ಪ, ಮಹಾತ್ಮಗಾಂಧಿ ಮರುಳು ಸಿದ್ದೇಶ್ವರ ಸ್ವಾಮಿ, ಬಾಬಾಸಾಹೇಬ್ ಅಂಬೇಡ್ಕರ್, ಗಂಜಿ ವೀರಪ್ಪ ಮುಂತಾದವರ ವ್ಯಕ್ತಿ ಶಿಲ್ಪರಚನೆ. ಯಗಚಿಯ ಮಲ್ಲಿಕಾರ್ಜುನ ಸ್ವಾಮಿ ರಥ, ಬಿಂಡಿಗನವಿಲೆ ಚೆನ್ನಕೇಶವ ಸ್ವಾಮಿರಥ. ಹಂಪೆ ವಿರೂಪಾಕ್ಷ ಸ್ವಾಮಿ ರಥ, ನಾಯ್ಕರ ಹಟ್ಟಿಯ ತಿಪ್ಪೆರುದ್ರ ಸ್ವಾಮಿ ರಥ ಮುಂತಾದ ರಥಗಳ ನಿರ್ಮಾಣ. ೧೯೯೫ ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ – ೧೯೩೫ ಚಂದ್ರಕುಮಾರ ಸಿಂಗ್- ೧೯೪೯ ಲಕ್ಷಣ ಸುವರ್ಣ- ೧೯೫೭. ಪ್ರಕಾಶ್. ಕೆ. ನಾಯ್ಡು – ೧೯೬೬.
* * *