ರಾಘವೇಂದ್ರ ಇಟಗಿ

Home/Birthday/ರಾಘವೇಂದ್ರ ಇಟಗಿ
Loading Events
This event has passed.

೦೬.೦೪.೧೯೨೬ ೦೮.೧೨.೧೯೯೭ ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ ಒಂದು ಕಾಲದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಕೇಳಿ ಬರುತ್ತಿದ್ದ ಈ ಕವನವನ್ನು ಕೇಳದವರೇ ಇಲ್ಲವೆನ್ನಬಹುದು. ಇಂತಹ ಸುಮಧುರ ಭಾವಗೀತೆ, ಹಲವಾರು ದೇಶ ಭಕ್ತಿಗೀತೆಗಳನ್ನು ರಚಿಸಿದ ಕವಿ ರಾಘವೇಂದ್ರ ಇಟಗಿಯವರು ಹುಟ್ಟಿದ್ದು ಇಂದಿನ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿಯಲ್ಲಿ. ೧೯೨೬ರ ಏಪ್ರಿಲ್ ೬ ರಂದು. ತಂದೆ ಪ್ರಹ್ಲಾದಾಚಾರ್ಯ, ತಾಯಿ ಸೀತಮ್ಮ. ಎಂಟನೆಯ ವಯಸ್ಸಿನಲ್ಲಿಯೇ ಹುಟ್ಟಿದೂರು ತೊರೆದು ಕೊಪ್ಪಳದ ಶಾಲೆಯಲ್ಲಿ ವಿದ್ಯಾರ್ಜನೆ. ಹಲವಾರು ಕಷ್ಟಗಳನ್ನು ಅನುಭವಿಸಿದ ನಂತರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಮಾನ್ವಿ ನರಸಿಂಗರಾಯರ (೧೯೧೧-೧೯೬೯) ಪ್ರಭಾವಿ ವಲಯದಲ್ಲಿ ಬೆಳೆದರು. ೧೯೫೦ರ ಸುಮಾರಿನಲ್ಲಿ ಹೈದರಾಬಾದ್ ಸಂಸ್ಥಾನದಲ್ಲಿ ಅಸಿಸ್ಟೆಂಟ್ ರೆವಿನ್ಯೂ ಸೆಕ್ರಟರಿಯಾಗಿದ್ದ ಸಿದ್ಧಯ್ಯ ಪುರಾಣಿಕರ (ಕಾವ್ಯಾನಂದ) ಜೊತೆ ಜೊತೆಯಾಗಿಯೇ ಕಾವ್ಯಕೃಷಿಯನ್ನಾರಂಭಿಸಿದರು. ಉದ್ಯೋಗಕ್ಕಾಗಿ ಸೇರಿದ್ದು ಹೈದರಾಬಾದ್ ಆಕಾಶವಾಣಿಯಲ್ಲಿ. ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊತ್ತರು. ಖಾಸಗಿಯಾಗಿ ಕುಳಿತು ಮಾನ್ವಿ ನರಸಿಂಗರಾಯರ ಸಹಾಯದಿಂದ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ ಎಂ.ಎ. (ಕನ್ನಡ) ಪದವಿಗಳನ್ನು ಪಡೆದರು. ಇವರಿಗೆ ಗುರುಗಳಾಗಿ ದೊರೆತಿದ್ದವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಿ.ಕೆ. ಭೀಮಸೇನರಾಯರು (೧೯೦೪-೧೯೬೯). ಹೈದರಾಬಾದಿನಲ್ಲಿದ್ದಾಗ ಉರ್ದುಭಾಷೆಯನ್ನು ಕಲಿತು, ಉರ್ದು ಕಾವ್ಯದ ಸೊಗಡನ್ನು ಅರ್ಥಮಾಡಿಕೊಂಡಿದ್ದರಿಂದ ಕನ್ನಡ ಕಾವ್ಯರಚನೆಗೆ ಬಹಳಷ್ಟು ಸಹಕಾರಿಯಾಯಿತು. ಹೈದರಾಬಾದ್ ಆಕಾಶವಾಣಿಯಲ್ಲದೆ ಮೈಸೂರು, ಬೆಂಗಳೂರು, ಧಾರವಾಡ, ಗುಲಬರ್ಗಾ ಆಕಾಶವಾಣಿ ಮತ್ತು ಪಣಜಿ, ಶ್ರೀನಗರ ಕೇಂದ್ರಗಳಲ್ಲಿಯೂ ಸೇವೆ ಸಲ್ಲಿಸಿದರು. ಶ್ರೀನಗರ ಆಕಾಶವಾಣಿಯಲ್ಲಿದ್ದರೂ ಕನ್ನಡದ ಕಂಪನ್ನು ಪಸರಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. “ಕನ್ನಡದ ಶ್ರೀಗಂಧದಲ್ಲಿ ಕಾಶ್ಮೀರದ ಕೇಸರಿಯನ್ನು ಬೆರೆಸಿದರೆ ಭಾರತದ ಪರಿಮಳ ಕಾಂತಿ ಪ್ರಜ್ವಲಿಸುವುದು”. ಇದು ಇಟಗಿಯವರು ಹೊರನಾಡಿನಲ್ಲಿದ್ದರೂ ಕನ್ನಡದ ಬಗ್ಗೆ ಆಗಾಗ್ಗೆ ಹೇಳುತ್ತಿದ್ದ ಮಾತುಗಳು. ಬೆಂಗಳೂರು ಆಕಾಶವಾಣಿಯಲ್ಲಿ ‘ನವಸುಮ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿ ಹಲವಾರು ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದರು. ಈ ಕಾರ್ಯಕ್ರಮಕ್ಕಾಗಿ ಇವರು ಬರೆದ ಮೊದಲ ಗೀತೆ “ನುಡಿಸು ವೀಣೆಯ ವೈಣಿಕ-ನಾದಸುಖಕರ ಪ್ರಿಯಸಖ” ಈ ಹಾಡಿಗೆ ಪ್ರಖ್ಯಾತ ವೀಣಾ ವಿದ್ವಾಂಸರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ಯರೇ ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಬೇರೆ ಕವಿಗಳ ಹಾಡುಗಳನ್ನೂ ಅಳವಡಿಸಿಕೊಳ್ಳುವುದರ ಜೊತೆ ಇವರೇ ಬರೆದ ಹಲವಾರು ಹಾಡುಗಳು ರಾಗ ಸಂಯೋಜನೆಗೊಂಡು ಪ್ರಸಾರವಾಗತೊಡಗಿದವು. ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡಿಕೊ ಒಳಗೆ ಇದು, ಅಂದು ಪ್ರಸಾರವಾಗುತ್ತಿದ್ದ ಹಾಡುಗಳಲ್ಲೆಲ್ಲ ಅತ್ಯಂತ ಪ್ರಸಿದ್ಧ ಗೀತೆಯಾಗಿತ್ತು. ಈ ಸಂದರ್ಭದಲ್ಲಿ ಪ್ರಕಟಗೊಂಡ ಇವರ ‘ವಸುಂಧರ ಗೀತೆಗಳು’ (ಮಕ್ಕಳ ಪದ್ಯಗಳು), ಕ್ಷಿತಿಜಕೋದಂಡ (೧೯೬೧ – ಹಿನ್ನುಡಿ ಕಾವ್ಯಾನಂದ), ದೇಶಭಕ್ತಿ ಗೀತೆಗಳ ಸಂಕಲನ ‘ಸನ್ನದ್ಧ ಭಾರತ’ (೧೯೬೩ – ಎನ್. ಎಸ್. ಹರ್ಡೀಕರರ ಆಶೀರ್ವಾದ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸದಾಶಿವ ವಡೆಯರ ಮುನ್ನುಡಿ), ಕರುಳಿನ ಕಥೆ (೧೯೭೯ – ದೇಜಗೌ ಮುನ್ನುಡಿ) ಮತ್ತು ೧೯೮೬ರಲ್ಲಿ ಕಾವ್ಯಾನಂದರ ಮುನ್ನುಡಿಯೊಡನೆ ಅರವತ್ತನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಂಡ ಕವನ ಸಂಕಲನ ‘ಆಗಸತೊಳೆದ ಹೂಗಳು’. ಇದಲ್ಲದೆ ‘ಬೆಳಕು ತುಂಬಿದ ಬಲ್ಬು’, ‘ಬಸವಗೀತೆ’ಯ ಸಂಕಲನಗಳು, ಎರಡು ಕಥನ ಕವನಗಳಾದ ‘ನುಡಿಗೊಂಬೆ’ ಮತ್ತು ‘ಅಂಗುಲಿಮಾಲ’ ಕೂಡ ಪ್ರಕಟವಾಗಿದೆ. ಇವರು ಹೈದರಾಬಾದಿನಲ್ಲಿದ್ದ ಸಂದರ್ಭದಲ್ಲಿ ಕಲಿತ ಉರ್ದು ಭಾಷೆಯಿಂದ ರಚಿಸಿದ್ದ ಹಲವಾರು ಕನ್ನಡದ ಗಜಲ್ಸ್‌ಗಳಲ್ಲದೆ ಚೀನಾ-ಭಾರತ ಯದ್ಧದ ಸಮಯದಲ್ಲಿ ಹಿಂದಿಕವಿ ಪ್ರದೀಪರವರು ಬರೆದ ‘ಎ ಮೇರೆ ವತನಕೆ ಲೋಗೋ ಜರಾ ಆಂಖ ಮೆ ಭರಲೋ ಪಾನಿ’ ದೇಶಭಕ್ತಿ ಗೀತೆಯನ್ನು ಲತಾಮಂಗೇಶ್ಕರ್‌ರವರು ಹಾಡಿದ್ದು, “ಓ ನನ್ನ ದೇಶ ಬಾಂಧವರೇ…. ಕಣ್ಣೀರ ಹನಿಗಳ ಚಿಮ್ಮಿ….” ಎಂದು ಕನ್ನಡಕ್ಕೆ ಇವರು ಅನುವಾದಿಸಿದ್ದನ್ನು ಅನುರಾಧಾ ಧಾರೇಶ್ವರ್‌ರವರು ಹಾಡಿದ್ದು, ಧಾರವಾಡದ ಆಕಾಶವಾಣಿ ಕೇಂದ್ರದಿಂದ ಮೊಟ್ಟ ಮೊದಲ ಬಾರಿಗೆ ಪ್ರಸಾರವಾದಾಗ ಶೋತೃಗಳ ಮೆಚ್ಚುಗೆ ಪಡೆದ ಗೀತೆಯಾಗಿತ್ತು. ಇವರು ಬರೆದ ಹಲವಾರು ರೇಡಿಯೋ ನಾಟಕಗಳು ಪ್ರಸಾರಗೊಂಡಿವೆ. ಅವುಗಳಲ್ಲಿ ಬಿಳಿಯ ಗಡ್ಡ ಕೆಂಪಾಯಿತು, ವಾಲ್ಮೀಕಿ, ಜಟಕಾ ಸಾಬಿ ಮತ್ತು ಇತರ ಹರಟೆಗಳು, ಬ್ರೆಯನ್ ಎಕ್ಸ್‌ಚೇಂಜ್ (ಮಕ್ಕಳ ನಾಟಕ) ಮುಖ್ಯವಾದವುಗಳು. ಇವರ ಕಾವ್ಯಪ್ರಕಾರದ ಮತ್ತೊಂದು ಸಾಧನೆ ಎಂದರೆ ಹನಿಗವನಗಳ ರಚನೆ. ‘ಮಿನಿಮಿಂಚು’ ಎನ್ನುವ ಹಲವಾರು ಹನಿಗವಿತೆಗಳನ್ನು ಬರೆದಿದ್ದು ‘ಬೆನ್ನ ಹಿಂದಿನ ಬೆಳಕು’ ಎಂಬ ಸಂಗ್ರಹದಲ್ಲಿ ಪ್ರಕಟವಾಗಿವೆ. ರವೀಂದ್ರರ ಬದುಕನ್ನು ಮನೋಜ್ಞವಾಗಿ ಚಿತ್ರಿಸಿರುವ ‘ಕವೀಂದ್ರ-ರವೀಂದ್ರ’ ಇವರು ರಚಿಸಿದ ಜೀವನ ಚರಿತ್ರೆ. ಇದಲ್ಲದೆ ಕಾವ್ಯಾನಂದರೊಡನೆ ‘ಶ್ರೀಕಾರ’ ಮತ್ತು ‘ಪ್ರಬಂಧ ಮಾಲೆ’ಯ ಸಂಪಾದಕರಾಗಿದ್ದರೆ, ಚನ್ನವೀರ ಕಣವಿಯವರೊಡನೆ ಸಂಪಾದಿಸಿದ್ದು ‘ನಮ್ಮೆಲ್ಲರ ನೆಹರು’ ಕವನ ಸಂಕಲನ. ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯಕ್ಷೇತ್ರದಿಂದ ದೂರವಾದದ್ದು ೧೯೯೭ರ ಡಿಸೆಂಬರ್ ೮ರಂದು. ಇವರು ತೀರಿಕೊಂಡ ನಂತರ ಇಟಗಿಯವರ ಜ್ಞಾಪಕಾರ್ಥವಾಗಿ ಇಟಗಿಯವರು ಬರೆದ ೧೩ ಪ್ರಖ್ಯಾತ ಹಾಡುಗಳನ್ನು ಜಿ.ವಿ. ಅತ್ರಿ, ಪುತ್ತೂರು ನರಸಿಂಹ ನಾಯಕ್, ಬಿ. ಆರ್. ಛಾಯಾ, ಮಾಲತಿ ಶರ್ಮಾರವರು ಹಾಡಿದ ‘ಕಳೆದಿಲ್ಲ ನಿಮ್ಮ ಹಾಡು’ ಸಿಡಿ ೧೯೯೮ರಲ್ಲಿ ಬಿಡುಗಡೆಹೊಂಡಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top