ರಾಘವೇಂದ್ರ ಖಾಸನೀಸ

Home/Birthday/ರಾಘವೇಂದ್ರ ಖಾಸನೀಸ
Loading Events
This event has passed.

೦೨..೧೯೩೩ ೧೯..೨೦೦೭ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿದಲ್ಲಿ ೧೯೩೩ರ ಮಾರ್ಚ್ ೨ರಂದು. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಓವರ್‌ಸೀಯರ್ ಆಗಿದ್ದ ತಂದೆಯು ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದುದರಿಂದಲೇ ಒಳಗೊಬ್ಬ ಕಥೆಗಾರ ಇವರಲ್ಲಿ ರೂಪಗೊಳ್ಳತೊಡಗಿದ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದುಕಳುಹಿಸಿದಾಗ ಮಕ್ಕಳ ಕಥಾ ವಿಭಾಗದಲ್ಲಿ ಆ ಕಥೆ ಪ್ರಕಟಗೊಂಡಾಗ ಇವರಿಗಾದ ಆನಂದ ಹೇಳತೀರದ್ದು, ಕಥೆಯನ್ನು ಓದಿದ ಶಾಲೆಯ ಉಪಾಧ್ಯಾಯರುಗಳೂ ಬೆನ್ನು ತಟ್ಟಿದರು. ಕಾಲೇಜಿಗೆ ಸೇರಿದ್ದು ಧಾರವಾಡದಲ್ಲಿ ಪ್ರೊ. ವಿ.ಎಂ. ಇನಾಂದಾರ್‌, ಎಸ್.ಆರ್‌.ಮಳಗಿ, ಸ.ಸ.ಮಾಳವಾಡ ಮುಂತಾದವರುಗಳಲ್ಲಿ ಶಿಷ್ಯತ್ವ. ಇನಾಂದಾರರ ‘ಸ್ವರ್ಗದಬಾಗಿಲು’, ಗೋಕಾಕರ ‘ಸಮರಸವೇ ಜೀವನ’ ಕಾದಂಬರಿಗಳಿಗೆ ಇವರು ವಿಮರ್ಶೆ ಬರೆದಿದ್ದರು. ಜೊತೆಗೆ ಹಲವಾರು ಕಥೆಗಳು ಓಲೇಟಿ ವಿ.ಗುಪ್ತ ಮತ್ತು ಡಿ.ಎಸ್.ರಾಮರಾವ್‌ರವರ ಕಥಾವಳಿ ಪತ್ರಿಕೆ ಮತ್ತು ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗಳಲ್ಲಿ ಪ್ರಕಟವಾಗದವು. ಬಿ.ಎ. ಪವಿಯ ನಂತರ (೧೯೫೪) ಮುಂಬಯಿಯ ಎನ್‌ಫಿನ್ಸ್‌ಟನ್ ಕಾಲೇಜಿನಿಂದ ಪಡೆದ ಎಂ.ಎ. (ಇಂಗ್ಲೀಷ್) ಪದವಿ ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಗಳಿಸಿದ್ದು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮ. ಉದ್ಯೋಗಕ್ಕಾಗಿ ಸೇರಿದ್ದು ಪುಣೆಯ ಎಸ್.ಪಿ. ಕಾಲೇಜಿನಲ್ಲಿ ಗ್ರಂಥಾಲಯದಲ್ಲಿ. ನಂತರ ವಲ್ಲಭ ವಿದ್ಯಾನಗರದ ಬಿರ್ಲಾ ಎಂಜನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ನೇಮಕಗೊಂಡು ೧೯೯೧ರಲ್ಲಿ ನಿವೃತ್ತರಾದರು. ಪುಣೆಯ ಎಸ್.ಪಿ.ಕಾಲೇಜಿನಲ್ಲಿ ಗ್ರಂಥಾಲಯದಲ್ಲಿದ್ದಾಗಲೇ ಮರಾಠಿ ಭಾಷೆ ಹಾಗೂ ಸಾಹಿತ್ಯವನ್ನು ಓದಿ, ಅನೇಕ ಬಂಗಾಳಿಕಥೆಗಳನ್ನು ಮರಾಠಿಯಿಂದ ಕನ್ನಡಕ್ಕೆ ತಂದರು. ಖಾಸನೀಸರ ಮೊದಲ ಕಥಾಸಂಕಲ ಖಾಸನೀಸರ ಕಥೆಗಳು ೧೯೮೪ರಲ್ಲಿ ಪ್ರಕಟವಾಯಿತು. ಕೇವಲ ಐದು ಕಥೆಗಳಿದ್ದು ಆ ಸಂಕಲನ ಕಥಾಸಕ್ತರ ಗಮನ ಸೆಳೆಯಿತು. ಅದೇ ವರ್ಷವೇ ಕರ್ನಾಟಕ ಸಾಹಿತ್ಯ ಅಕಾಡಮಿಯು ‘ಖಾಸನೀಸರ ಕಥೆಗಳು’ ಅತ್ಯುತ್ತಮ ಸೃಜನ ಶೀಲ ಕೃತಿ ಎಂದು ಪ್ರಶಸ್ತಿ ನೀಡಿ ಪುರಸ್ಕರಿಸಿತು. ಎರಡನೆಯ ಕಥಾ ಸಂಕಲನ ‘ಬೇಡಿಕೊಂಡವರು’ ೧೯೮೯ರಲ್ಲ ಪ್ರಕಟವಾಯಿತು. ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು. ಪ್ರಿಸಮ್‌ಬುಕ್ಸ್ ಪ್ರೈ.ಲಿ. ಬೆಂಗಳೂರು ಇವರು ೨೦೦೬ರಲ್ಲಿ ‘ಖಾಸನೀಸರ ಸಮಗ್ರಕಥೆಗಳು’ ಎಂದು ಪ್ರಕಟವಾಗಿರುವುದರಲ್ಲಿ ಕೇವಲ ಒಂಬತ್ತೇ ಕಥೆಗಳಿವೆ. ೨೦೧೧ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ. ಖಾಸನೀಸರ ಅನೇಕ ಕಥೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿದೆ. ಅವುಗಳಲ್ಲಿ ‘ತಬ್ಬಲಿಗಳು’ ಎಂಬ ಕಥೆಯು ORPHANS ಎಂಬ ಹೆಸರಿನಿಂದ ಡಾ. ವಿಕ್ರಮರಾಜ ಅರಸ್ ರವರು ಸಂಪಾದಿಸಿರುವ ‘AN ANTHOLOGY OF KANNADA SHORT STORIES’  ಸಂಕಲನದಲ್ಲಿ ಸೇರಿದೆ……. ಈ ಕಥೆಯು ಎಸ್.ದಿವಾಕರ್‌ ರವರು ಸಂಪಾದಿಸಿರುವ ಶತಮಾನದ ಸಣ್ಣಕಥೆಗಳು ಸಂಗ್ರಹದಲ್ಲಿಯೂ ಸೇರಿದೆ. ‘ಹೀಗೂ ಇರಬಹುದು!’ ಎಂಬ ಕಥೆಯು ದೂರದರ್ಶನದ ಕಥೆಗಾರ ಮಾಲಿಕೆಯಲ್ಲಿ ಪ್ರಸಾರಗೊಂಡಿದೆ. ಇದಲ್ಲದೆ ಗ್ರಂಥಾಲಯಕ್ಕೆ ಸಂಬಂಧಿಸಿದ ಅನೇಕ ಬಿಡಿ ಬರಹಗಳೂ ಪ್ರಕಟವಾಗಿವೆ. “ಈ ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳೆಲ್ಲವೂ ಪೂರ್ವ ನಿಯೋಜಿತವಾದದ್ದು, ಮನುಷ್ಯನ ಇಷ್ಟಾನಿಷ್ಟಗಳಿಗೆ ಇಲ್ಲಿ ಬೆಲೆಯೂ ಇಲ್ಲ. ನಡೆಯುದ ಘಟನೆಗಳಿಗೆ ಮೂಕ ಪ್ರೇಕ್ಷಕನಾಗಿ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೇ ವಿನಃ ಅನ್ಯಮಾರ್ಗವಿಲ್ಲ” ಎಂಬುದು ಹಲವಾರು ಕಥೆಗಳಲ್ಲಿ ಕಾಣಬರುವ ಅಂಶ. ಹೀಗೆ ಅತ್ಯಂತ ಯಶಸ್ವಿ ಕಥೆಗಳನ್ನು ಕನ್ನಡದ ಕಥಾಲೋಕಕ್ಕೆ ನೀಡಿದ ರಾಘವೇಂದ್ರ ಖಾಸನೀಸರಿಗೆ ನಿವೃತ್ತಿಯಾದ ಮರುವರ್ಷದಿಂದಲೇ ಪಾರ್ಕಿನ್‌ಸನ್ ಖಾಯಿಲೆಯು ಕಾಡತೊಡಗಿ, ಚೇತರಿಸಿಕೊಳ್ಳಲಾಗಿದೆ ಕಥಾಲೋಕವನ್ನು ತೊರೆದದ್ದು ೨೦೦೭ರ ಮಾರ್ಚ್ ೧೯ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top