೨೮.೦೧.೧೯೪೫ ರಂಗಭೂಮಿಯ ಪ್ರತಿಭಾನ್ವಿತ ನಟ, ಸಂಘಟಕ ರಾಜಶೇಖರ ಕದಂಬರವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಗೆ ಸೇರಿದ ಗೊಟ್ಟಗೆರೆ. ತಂದೆ ಕದಂಬರ ದಾಸಪ್ಪ, ತಾಯಿ ವೆಂಕಟಮ್ಮ. ಪಡೆದದ್ದು ಆಟೋಮೊಬೈಲ್ ತಾಂತ್ರಿಕ ಶಿಕ್ಷಣ. ವೃತ್ತಿ ಮದ್ಯ ವ್ಯಾಪಾರ, ಪ್ರವೃತ್ತಿಗಾಗಿ ಆಯ್ದುಕೊಂಡದ್ದು ರಂಗಭೂಮಿ. ಕದಂಬ ರಂಗವೇದಿಕೆ ಸ್ಥಾಪಿಸಿ ನಾಲ್ಕು ದಶಕಕ್ಕು ಮೀರಿದ ನಟನೆ, ನಿರ್ದೇಶನದ ಅನುಭವ. ಅಭಿನಯಿಸಿದ ನಾಟಕಗಳು ದುರ್ಗಾಸ್ತಮಾನ, ಹೆಜ್ಜಾಲ, ಗಾಂಧಿನಗರ, ರಕ್ತಕಣಗಿಲೆ, ಎಚ್ಚಮನಾಯಕ, ಹಿಟ್ಟಿನ ಹುಂಜ, ಪರಿಮಳದವರು, ರಣಧೀರ ಕಂಠೀರವ, ಕವಿಭಿಕ್ಷೆ, ಸಂದಿಗ್ಧ, ಶಾಪ, ನರಗುಂದದ ಬಂಡಾಯಿ, ಕೃಷ್ಣದೇವರಾಯ, ಕೆಂಪೇಗೌಡ, ತುಘಲಕ್ ಮುಂತಾದ ಹಲವಾರು ನಾಟಕಗಳು. ನಿರ್ದೇಶನದ ಹೊಣೆಹೊತ್ತ ನಾಟಕಗಳು – ವಿಗಡ ವಿಕ್ರಮರಾಯ, ರಣಧೀರ ಕಂಠೀರವ, ನರಗುಂದದ ಬಂಡಾಯ, ಪುರೂರವ, ವಿಷಜ್ವಾಲೆ, ರಣಪ್ರಚಂಡ ಮುಂತಾದ ನಾಟಕಗಳು ಹಲವಾರು ನಾಟಕೋತ್ಸವಗಳಲ್ಲಿ ಭಾಗಿ. ೨೦೦೩ರ ಹಂಪಿ ಉತ್ಸವದಲ್ಲಿ ಕೃಷ್ಣದೇವರಾಯ, ೨೦೦೧ರ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹದ್ದು ಮೀರಿದ ಹಾದಿ, ೨೦೦೧ರ ರಾಷ್ಟ್ರೀಯ (ರಂಗಾಯಣ) ಅಕ್ಕ ಮಹಿಳಾ ನಾಟಕೋತ್ಸವದಲ್ಲಿ ನರ್ತಕಿಯ ಪೂಜೆ, ೧೯೯೯ರ ದಸರ ಮಹೋತ್ಸವದಲ್ಲಿ ಹಿಟ್ಟಿನ ಹುಂಜ, ೧೯೯೮ರ ಮುಂಬೈ ರಾಷ್ಟ್ರೀಯ ನಾಟಕೋತ್ಸವದಲ್ಲಿ ಇಲಿ-ಬೋನು ಮುಂತಾದ ನಾಟಕಗಳ ಪ್ರದರ್ಶನ. ರಾಜ್ಯದ ಹಲವಾರು ನಾಟಕೋತ್ಸವಗಳಲ್ಲೂ ಭಾಗಿ. ಸಹ್ಯಾದ್ರಿ ಉತ್ಸವ, ದಸರ ಉತ್ಸವ, ದುರ್ಗೋತ್ಸವ, ಕುವೆಂಪು ನಾಟಕೋತ್ಸವ, ಗ್ರೀಷ್ಮ ರಂಗೋತ್ಸವ ಮುಂತಾದುವು. ಎ.ಎನ್. ಶೇಷಾಚಾರ್ರವರ ಶೇಷಕಲಾ ನಾಟಕ ಮಂಡಲಿ, ರಾಜಾನಂದ್ರವರ ರಂಗ ವೈಭವ ನಾಟಕ ಕಂಪನಿಗಳಲ್ಲಿ ನಟರಾಗಿ ಸಲ್ಲಿಸಿದ ಸೇವೆ. ಹಲವಾರು ಚಲನಚಿತ್ರಗಳಲ್ಲೂ ನಟನೆ. ಚಂದನಗೊಂಬೆ, ಪೋಸ್ಟ್ಮಾಸ್ಟರ್, ಕಿಲಾಡಿ ಕಿಟ್ಟು, ಅಶ್ವಮೇಧ, ಅಂಗೈಲಿ ಅಪ್ಸರೆ, ಮೊದಲಾದ ೪೦ಕ್ಕೂ ಹೆಚ್ಚು ಚಿತ್ರಗಳು. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ (೨೦೦೭) ಚಿತ್ರದುರ್ಗದ ಮುರುಘ ಮಠದ ಕಲಾರತ್ನ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ರೋಟರಿ ಲಯನ್ಸ್ ಕ್ಲಬ್ನಿಂದ ಸನ್ಮಾನ, ‘ಬಣ್ಣದ ಮುಖಗಳು’, ‘ಬಣ್ಣದ ಬಣ’ ರಚಿಸಿದ ಕೃತಿಗಳು. ೨೦೦೫ರಲ್ಲಿ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ರಂಗ ಕದಂಬ’. ಇದೇ ದಿನ ಹುಟ್ಟಿದ ಕಲಾವಿದರು : ರುದ್ರಪ್ಪ ಕೆ. – ೧೯೨೩ ಬೀನಾಬಾಯಿ – ೧೯೫೭ ಉಪಾಸನಾ ಮೋಹನ್ – ೧೯೬೭
* * *