ರಾಮಚಂದ್ರ ಭಾವೆ

Home/Birthday/ರಾಮಚಂದ್ರ ಭಾವೆ
Loading Events
This event has passed.

೧೨..೧೯೪೯ ವಿಶಿಷ್ಟ ಕತೆಗಾರರಾದ ರಾಮಚಂದ್ರಭಾವೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ೧೯೪೯ರ ಮಾರ್ಚ್ ೧೨ ರಂದು. ತಂದೆ ಶಿರಸ್ತೆದಾರರಾಗಿದ್ದ ಸೂರ್ಯನಾರಾಯಣ ಭಾವೆ, ತಾಯಿ ಅನ್ನಪೂರ್ಣಬಾಯಿ. ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ. ಶಿರಸ್ತೆದಾರರಾಗಿದ್ದ ತಂದೆಯವರಿಗೆ ಸಾರ್ವಜನಿಕ ಸಂಪರ್ಕ ಹೆಚ್ಚಾಗಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಮನೆಯಲ್ಲಿಯೇ ಒಂದು ವಾಚನಾಲಯವನ್ನು ತೆರೆದು ಸಂಯುಕ್ತ ಕರ್ನಾಟಕ, ಜನಪ್ರಗತಿ, ಮಲ್ಲಿಗೆ, ಕಿಡಿ, ಚಂದಮಾಮ ಮುಂತಾದ ಪತ್ರಿಕೆಗಳನ್ನು ತರಿಸಿ ಹಳ್ಳಿಗರ ಜ್ಞಾನಾರ್ಜನೆಗೆ ದಾರಿಮಾಡಿಕೊಟ್ಟಿದ್ದಲ್ಲದೆ ತಾವು ಸಂಗ್ರಹಿಸಿದ್ದ ಸುಮಾರು ಆರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಾರ್ವಜನಿಕರು ಓದಲು ಅನುಕೂಲ ಕಲ್ಪಿಸಿದ್ದರು. ಅಧ್ಯಾತ್ಮಿಕ ಹಾಗೂ ದಾಸ ಸಾಹಿತ್ಯದಲ್ಲಿ ಒಲವಿದ್ದ ತಂದೆಯವರು ಬರೆದ ಹಲವಾರು ಭಕ್ತಿಗೀತೆಗಳು, ಜೀವನಚರಿತ್ರೆಗಳು ಸದ್ಭೋದ ಚಂದ್ರಿಕಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇವರ ಸೋದರತ್ತೆಯವರು ಸೊಗಸಾಗಿ ಕಥೆ ಹೇಳುವ ಕಲೆಯನ್ನು ಸಾಧಿಸಿದ್ದು ಅವರಿಂದಲೂ ಹಲವಾರು ಕಥೆಗಳನ್ನು ಕೇಳತೊಡಗಿದ್ದರು. ಎಸ್.ಎಸ್.ಎಲ್.ಸಿ. ಯ ನಂತರ ಉದ್ಯೋಗಕ್ಕೆ ಸೇರಿದ್ದು ಗದುಗಿನ ಅಂಚೆ ಕಚೇರಿಯಲ್ಲಿ (ರೈಲ್ವೆ ಮೆಯಿಲ್ ಸರ್ವೀಸ್). ಬಾಲ್ಯದಲ್ಲಿ ಸೋದರತ್ತೆ ಹೇಳುತ್ತಿದ್ದ ಕಥೆಗಳಿಂದ, ಮನೆಯಲ್ಲಿದ್ದ ಸಾಹಿತ್ಯ ವಾತಾವರಣದಿಂದ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಬರೆಯತೊಡಗಿದ್ದು ಸಣ್ಣಕಥೆಗಳು. ಡಾ. ಶಾಮಸುಂದರ ಬಿದಿರಕುಂದಿ, ಗಣಪ್ಪನವರ, ಎಂ.ದಸ್ತಗೀರ್, ಬಡಿಗೇರ್ ಮುಂತಾದವರುಗಳು ನೀರೆರೆದು ಬೆಳೆಸಿದರು. ಹೀಗೆ ಬರೆದ ಮೊದಲ ಕಥೆ ‘ಗಿಳಿಯು ಪಂಜರದೊಳಿಲ್ಲ’. ಬೆಂಗಳೂರಿನ ತ್ರಿವೇಣಿ ಕಥಾ ಸ್ಪರ್ಧೆಯಲ್ಲಿ ದೊರೆತ ಪ್ರಥಮ ಬಹುಮಾನ (೧೯೬೯). ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಎನ್ಕೆಯವರ ನಾಟಕಗಳನ್ನು ಕೇಳಿ ಪ್ರೇರಿತರಾಗಿ ಬರೆದದ್ದು ಹಲವಾರು ನಾಟಕಗಳು ಧಾರವಾಡದ ಆಕಾಶವಾಣಿಯಿಂದ ಪ್ರಸಾರಗೊಂಡವು. ಕಥಾ ಪ್ರಕಾರದಲ್ಲಿ ಒಲವು ಬೆಳೆದು ಬರೆದ ಹಲವಾರು ಕಥೆಗಳು ಸುಧಾ, ಪ್ರಜಾವಾಣಿ, ಕಸ್ತೂರಿ, ತರಂಗ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಕಾದಂಬರಿ ಕ್ಷೇತ್ರದಿಂದಲೂ ಆಕರ್ಷಿತರಾಗಿ ಬರೆದ ಮೊದಲ ಕಾದಂಬರಿ ‘ಅಜ್ಞಾತ’. ಇದಕ್ಕೆ ಅಭಿಮಾನಿ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ (೧೯೮೫) ತೃತೀಯ ಬಹುಮಾನ ಪಡೆಯಿತು. ನಂತರ ಬರೆದದ್ದು ಹಲವಾರು ಸಣ್ಣಕಥೆಗಳು ಹಾಗೂ ಕಾದಂಬರಿಗಳು. ಸಂಯುಕ್ತ ಕರ್ನಾಟಕ ಪತ್ರಿಕೆಯು ಏರ‍್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ (೨೦೦೧) ‘ತೆರೆದಬಾಗಿಲು’ ಕಥೆಗೆ ಪ್ರಥಮ ಬಹುಮಾನ; ಮುಂಬಯಿಯ ಸ್ನೇಹ ಸಂಬಂಧ ಪತ್ರಿಕೆಯವರು ಏರ‍್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ‘ಎರಡು ತಲೆಯ ರಾಜ ಕುಮಾರ’ ನಾಟಕಕ್ಕೆ (೨೦೦೩) ದ್ವಿತೀಯ ಬಹುಮಾನ; ಉತ್ಥಾನ ಕಥಾ ಸ್ಪರ್ಧೆಯಲ್ಲಿ ‘ಅಸ್ತಿತ್ವ’ ಕಥೆಗೆ (೨೦೦೬) ತೃತೀಯ ಬಹುಮಾನ, ಸುಧಾ ಪತ್ರಿಕೆಯವರು ಏರ‍್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ‘ದೇವರ ಕೂಸು’ ನಾಟಕಕ್ಕೆ (೨೦೦೬) ದ್ವಿತೀಯ ಬಹುಮಾನ – ಹೀಗೆ ಇವರ ಕಥೆ,ನಾಟಕಗಳು ಹಲವಾರು ಬಹುಮಾನಗಳನ್ನು ಪಡೆದಿವೆ. ಬರೆಯುವ ತುಡಿತ ಹೆಚ್ಚಾದಂತೆಲ್ಲ ನಿವೃತ್ತಿ ವಯಸ್ಸಿಗಿಂತ ಐದು ವರ್ಷಗಳ ಮೊದಲೇ ಸ್ವಯಂ ನಿವೃತ್ತಿ ಪಡೆದು ಸಂಪೂರ್ಣ ಬರವಣಿಗೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಆಧ್ಯಾತ್ಮಿಕ, ಪುರಾಣ, ಇತಿಹಾಸಗಳ ಓದಿನತ್ತ ತೊಡಗಿಸಿಕೊಂಡು ರಚಿಸಿದ್ದು ಹಲವಾರು ಕೃತಿಗಳು. ಮಹಾಭಾರತದ ಅಂಧ ಧೃತರಾಷ್ಟ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸಿರುವ ಕೃತಿ ‘ಅಂಧಪರ್ವ’. ಅಶ್ವಮೇಧ, ದೇವಯಾನಿ, ವಿಶ್ವಾಮಿತ್ರ, ಶ್ರೀ ರಾಮಾಯಣ ಪಾತ್ರಾವಲೋಕನ, ಮಹಾಭಾರತದ ಮರೆಯ ಬಾರದ ಪಾತ್ರಗಳು, ಮಹಾಭಾರತದ ಉಪಕಥೆಗಳು, ಭಾಗವತದ ಕಥೆಗಳು ಮುಂತಾದವುಗಳು ಪುರಾಣಗಳನ್ನು ಆಧರಿಸಿ ರಚಿಸಿದ ಇತರ ಕೃತಿಗಳು. ಸಾಮಾಜಿಕ ಕಾದಂಬರಿಗಳಾದ ಭಾಗ್ಯಲಕ್ಷ್ಮೀ, ಪರಿಧಿ, ಅನಾವರಣ, ನಿಕ್ಷೇಪ, ಅನ್ವೇಷಣೆ, ಗರ್ಭ, ಸಮಾನಾಂತರ ರೇಖೆಗಳು ಇವುಗಳ ಜೊತೆಗೆ ಕಥಾ ಸಂಕಲನಗಳಾದ ‘ಮಿಡಿನಾಗರ’, ‘ಪ್ರಮೋಷನ್’, ‘ತಲೆಗಳು’ ಮುಂತಾದವುಗಳು ಪ್ರಕಟಗೊಂಡಿವೆ. ಹಲವಾರು ಸಣ್ಣಕಥೆಗಳು ತೆಲುಗು, ಮಲಯಾಳಂ, ಗುಜರಾತಿ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಂಡಿವೆ. ನರೇಗಲ್ ಬಾಳಕೃಷ್ಣ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ರಾಮಚಂದ್ರಭಾವೆಯವರು ಕೃಷ್ಣನ ಬದುಕನ್ನು ಹೊಸ ದೃಷ್ಟಿಕೋನದಲ್ಲಿ ವಿವೇಚಿಸಿ ಬರೆದಿರುವ ‘ಸಂಭವಾಮಿ ಯುಗೇ ಯುಗೇ’ ಮತ್ತು ಭಗೀರಥನು ಗಂಗೆಯನ್ನು ಭೂಮಿಗೆ ಹರಿಸಿದ್ದು ಬರೇ ಪುರಾಣ ಕಥೆಯಲ್ಲದೆ ಐತಿಹಾಸಿಕ ಸತ್ಯವೂ ಹೌದು ಎಂಬುದನ್ನು ನಿರೂಪಿಸುವ ‘ಗಂಗಾವತರಣ’ ಇವರೆರಡೂ ಮಹತ್ವದ ಕಾದಂಬರಿಗಳಾಗಿದ್ದು ಸದ್ಯದಲ್ಲೇ ಹೊರಬರಲಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top