ರಾಳ್ಳಪಳ್ಳಿ ಅನಂತ ಕೃಷ್ಣಶರ್ಮ

Home/Birthday/ರಾಳ್ಳಪಳ್ಳಿ ಅನಂತ ಕೃಷ್ಣಶರ್ಮ
Loading Events
This event has passed.

೨೩-೧-೧೮೯೩ ಸಂಸ್ಕೃತ, ಕನ್ನಡ, ತೆಲುಗು ಭಾಷಾ ಪಂಡಿತರು, ಸಂಗೀತಜ್ಞರು ಆದ ರಾಳ್ಳಪಳ್ಳಿಯವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ರಾಳ್ಳಪಳ್ಳಿಯಲ್ಲಿ. ತಂದೆ ಕೃಷ್ಣಮಾಚಾರ‍್ಯರು. ಪ್ರಕಾಂಡ ಸಂಸ್ಕೃತ ಪಂಡಿತರು. ಪ್ರಾರಂಭದ ವಿದ್ಯಾಭ್ಯಾಸ ತಂದೆಯವರ ಬಳಿ. ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆ ಮತ್ತು ಪರಕಾಲ ಮಠದ ಶ್ರೀಕೃಷ್ಣ ಬ್ರಹ್ಮ ತಂತ್ರಿ ಯತೀಂದ್ರರಲ್ಲಿ ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರ ವಿಶೇಷ ವ್ಯಾಸಂಗ. ಸಂಗೀತ ಕಲಿತದ್ದು ಕರಿಗಿರಿರಾಯರು, ಚಿಕ್ಕರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪನವರಲ್ಲಿ. ಪಿಟೀಲು ವಾದನ, ಹಾಡುಗಾರಿಕೆ ಎರಡೂ ಸಿದ್ಧಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ೧೯೧೨ರಲ್ಲಿ ತೆಲಗು ಅಧ್ಯಾಪಕರಾಗಿ ವೃತ್ತಿ ಆರಂಭ. ೧೯೪೯ರಲ್ಲಿ ನಿವೃತ್ತಿ. ತಿರುಪತಿ ಪ್ರಾಚ್ಯ ಸಂಶೋಧನಾಲಯದಲ್ಲಿ ರೀಡರ್ ಹುದ್ದೆ. ತಾಳ್ಳಪಾಕ ಕವಿಗಳ ಗೇಯ ರಚನೆಗಳ ಸಂಶೋಧನೆ. ತಾಳ್ಳಪಾಕ ಪಾಟಲು ಗ್ರಂಥ ಪ್ರಕಟನೆ. ಕವಿ ವೇಮನ ಕುರಿತು ಸಂಶೋಧನೆ. ಆಂಧ್ರ ವಿಶ್ವಕಲಾ ಪರಿಷತ್ತಿನಲ್ಲಿ ಉಪನ್ಯಾಸ. ಶ್ರೀಕೃಷ್ಣದೇವರಾಯ ವರ್ಧಂತಿ-ಸಮಾರಂಭದ ಭಾಷಣ. ಪ್ರಸಿದ್ಧ ವಾಗ್ಗೇಯಕಾರರು ಹಾಗೂ ಗಾನಕಲೆ ಕುರಿತು ಬರೆಹ-ಭಾಷಣಗಳು. ಗಾನಕಲೆ (೧೯೫೨), ಸಾಹಿತ್ಯ ಮತ್ತು ಜೀವನ ಕಲೆ (೧೯೫೪) ಎಂಬ ಕನ್ನಡ ಗ್ರಂಥ ಪ್ರಕಟಣೆ. ವೇಮನಸಾರ ಸ್ವತೋಪನ್ಯಾಸಮುಲು (೧೯೩೫) ತೆಲುಗು ಗ್ರಂಥ ರಚನೆ. ಆಂಧ್ರ ಸಾಹಿತ್ಯ ಅಕಾಡಮಿ, ಸಂಗೀತ ಅಕಾಡಮಿ ಕಾರ‍್ಯಗಳಲ್ಲಿ ಭಾಗಿ. ಶಂಕರಾಭರಣ, ಕಾನಡ ರಾಗಗಳ ಸ್ವರಜತಿ ಮತ್ತು ೨೫ ಕೀರ್ತನೆಗಳ ರಚನೆ. ನೆಲ್ಲೂರಿನ ಆಂಧ್ರಕಲಾ ನಾಟಕ ಪರಿಷತ್ತು, ಕಾಕಿನಾಡದ ಸರಸ್ವತಿ ಗಾನಸಭೆ, ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಸೀತಾರಾಮ ಮಂದಿರದ ಚತುರ್ಥ ಸಂಗೀತ ಸಮ್ಮೇಳನ, ಬೆಂಗಳೂರಿನ ಗಾಯನ ಸಮಾಜದ ದ್ವಿತೀಯ ಸಂಗೀತ ಸಮ್ಮೇಳನ, ಮದರಾಸಿನ ಸಂಗೀತ ಅಕಾಡಮಿ ೪೮ನೆಯ ವಾರ್ಷಿಕ ಅವೇಶನಗಳ ಅಧ್ಯಕ್ಷತೆಯ ಯೋಗ. ಸಂದ ಪ್ರಶಸ್ತಿಗಳು ಹಲವಾರು. ರಾಜ್ಯ ಸಂಗೀತ ನಾಟಕ ಅಕಾಡಮಿ ವಿಶೇಷ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಗೌರವ ಸದಸ್ಯತ್ವ, ತಿರುಪತಿ ವೆಂಕಟೇಶ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಗಾನಕಲಾ ಪ್ರಪೂರ್ಣ, ಗಾನಕಲಾ ಸಿಂಧು ಗೌರವ ಬಿರುದುಗಳು. ಇವರಿಗೆ ಅರ್ಪಿಸಿದ ಗೌರವ ಗ್ರಂಥ ‘ಅನಂತರಾಗಂ.’ ದೇಶ ಬಲಿಷ್ಠವಾಗಬೇಕಾದರೆ ‘ನಡೆಯುವ ನಡೆ, ನುಡಿಯುವ ಮಾತು, ನೀತಿವಂತ ಬದುಕು, ಒಟ್ಟಂದದ ಸಂಸ್ಕೃತಿಯ ಕುರುಹು, ಸರಸ್ವತಿ ದೇವಿಯ ಆರಾಧನೆ’ ಇದು ಅವರ ಧ್ಯೇಯವಾಕ್ಯ. ನಿಧನರಾದದ್ದು ೧೦.೩.೧೯೭೯ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top